ಈಗಿನ ವೃತ್ತಿ ಪ್ರವೃತ್ತಿ ಎರಡೂ ಉಗ್ರವಾದವೇ...
ಇವತ್ತು ಜಗತ್ತಿಗೇ ಗೊತ್ತಿದೆ ಕಾಶ್ಮೀರದಲ್ಲಿ ಅದರಲ್ಲೂ ಶ್ರೀನಗರದಲ್ಲಿ ಮತ್ತೊಮ್ಮೆ ಪ್ರವಾಸೋದ್ಯಮ ಮತ್ತು ಜನಜೀವನಮಟ್ಟ ಇನ್ನಿಲ್ಲದಂತೆ ಹಳ್ಳಹಿಡಿದು ಹೋಗಿದ್ದರೆ ಅದಕ್ಕೆ ಕಾರಣ ಒಂದೆಡೆಯಿಂದ ನುಗ್ಗುತ್ತಿರುವ ಭಯೋತ್ಪಾದಕರು ಮತ್ತು ಅವರನ್ನು ರಕ್ಷಿಸಲು ನಮ್ಮ ಸೈನಿಕರ ಮೇಲೆ ಕಲ್ಲೆಸೆಯುವ ದೇಶದ್ರೋಹಿ ಪುಂಡರುಗಳೇ ಹೊರತು ಇನ್ನೇನಲ್ಲ. ಸೈನಿಕರಂತೂ ಬಿಡಿ, ಯಾತ್ರಿಗಳೂ ಇವತ್ತು ಸೇಫಾಗಿಲ್ಲ. ಇಂತಹ ಮನಸ್ಥಿತಿಯ ಸಮಾಜವನ್ನು ನಂಬಿಕೊಂಡು ಅದಿನ್ಯಾವ ಪ್ರವಾಸಿಗ ಶ್ರೀನಗರಕ್ಕೆ ಕಾಲಿಟ್ಟಾನು..? ಹೀಗೆ ತೀರ ದುಸ್ಥಿತಿಗೆ ಇಳಿದಿದ್ದ ಕಾಶ್ಮೀರಕ್ಕೆ ಹೇಗಾದರೂ ಜನರನ್ನೂ ಪ್ರವಾಸಿಗರನ್ನೂ ಸೆಳೆಯಬೇಕು, ಅಲ್ಲೊಂದ್ನಾಲ್ಕು ಜನ ಭಾರತೀಯರು ಕಾಣಬೇಕು, ಅದನ್ನು ನೋಡಿಯಾದರೂ ಅಲ್ಲೊಬ್ಬ ಇಲ್ಲೊಬ್ಬ ವಿದೇಶಿ ಪ್ರವಾಸಿಗ ಕಾಲಿಡಲಿ ಎಂದು ಆಗಿನ ಕೇಂದ್ರಸರಕಾರ ತನ್ನ ನೌಕರರಿಗೆ ವಿಶೇಷ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ್ದು ತುಂಬ ಹಿಂದೇನಲ್ಲ 2002ರ ಆಸುಪಾಸಿಗೆ. ಅರ್ಹತೆಯಾಚೆಗೂ ವಿಸ್ತರಿಸಿ ರೈಲು, ವಿಮಾನ ಎಲ್ಲಾ ಕೊಟ್ಟಿತ್ತು. ಆದರೂ ಮೊದಲ ವರ್ಷಾವಧಿಯಲ್ಲಿ ಸಂದರ್ಶಿಸಿದ ಪ್ರವಾಸಿಗರ ಸಂಖ್ಯೆ ಸರಿಯಾಗಿ ಸಾವಿರವೂ ದಾಟಲಿಲ್ಲ ಅಂದರೆ ಪರಿಸ್ಥಿಯ ಗಂಭೀರತೆ ಅರಿವಾದೀತು. ಅದೀಗಲೂ ಚಾಲ್ತಿಯಲ್ಲಿದೆ. ಜನ ಮಾತ್ರ ಶ್ರೀನಗರ ಇಳಿದರೂ ದಾಲ್‍ಲೇಕ್ ಸುತ್ತಾಕಿ ಸೀದಾ ಲೇಹ್ ಲಢಾಕಿಗೆ ನಡೆದು ಬಿಡುತ್ತಾರೆ. ಕಾರಣ ಸಿಮ್‍ಕಾರ್ಡ್ ಕೆಲಸ ಮಾಡುವುದಿಲ್ಲ, ಪೆÇೀಸ್ಟ್‍ಪೇಡ್ ಮಾತ್ರ ನಡೆಯುತ್ತೆ ಅದರಲ್ಲೂ 2ಜಿ ಮಾತ್ರ, ನೋ ನೆಟ್‍ವರ್ಕ್, ಎಸ್ಟಿಡಿ ಇದ್ದರೂ ಗುರಾಯಿಸುವ ಮಾಲಿಕರು, ಲಭ್ಯವಾಗದ ಸಹಜ ಮಾರುಕಟ್ಟೆ ಶೈಲಿಯ ಜನಜೀವನ, ಇದೆಲ್ಲಕ್ಕೆ ಕಳಸ ಇಟ್ಟಂತೆ ಸಂಜೆಯ ಹೊತ್ತಿಗೆ ಇದ್ದಕ್ಕಿದ್ದಂತೆ ಪೂರ್ತಿ ಕಾಶ್ಮೀರ ಸ್ಥಬ್ಧವಾಗಿಬಿಡುತ್ತದೆ. ಪಹರೆ ಎನ್ನುವ ಅನಿವಾರ್ಯದ ಬೇಲಿಯೊಳಗೆ ತಲೆ ಹುದುಗಿಸುತ್ತದೆ.
ಅವತ್ತು ನಿಗಿನಿಗಿ ಕೆಂಡದಂತಾಗಿದ್ದ ಶ್ರೀನಗರದೊಳಕ್ಕೆ ಕುಟುಂಬ ಸಮೇತ ನಾನು ಕಾಲಿಟ್ಟಾಗ, ಆಗಿನ ಕಾಲದಲ್ಲಿ ದಿನವೊಂದಕ್ಕೆ ನಾಲ್ಕು ಸಾವಿರ ರೂಪಾಯಿ ಬೆಲೆ ಬಾಳುತ್ತಿದ್ದ ಕೊಠಡಿಗೆ ಸಾವಿರದ ಕಿಮ್ಮತ್ತೂ ಉಳಿದಿರಲಿಲ್ಲ. ಅದಕ್ಕೂ ಅತಿಥಿಗಳು ಬಂದರೆ ಸಾಕೆಂದು ಬಂದವರೆದುರಿಗೆ ದೈನೇಸಿಯಾಗಿ ನಡುಬಾಗಿಸಿ ನಿಲ್ಲುವ ಮಧ್ಯವಯಸ್ಕರು ಕಣಿವೆಯ ಕೊನೆಯ ಭಾರತೀಯ ಪಳೆಯುಳಿಕೆಗಳಂತೆ ಕಾಣಿಸುತ್ತಿದ್ದರು. ನೆನಪಿರಲಿ ಅವನೂ ಶುದ್ಧಾನುಶುದ್ಧ ಮುಸ್ಲಿಂ. ಆದರೆ ಕಲ್ಲು ಹೊಡೆಯುವ, "ನೀವು ಭಾರತೀಯರು" ಎನ್ನುವ ದರ್ದು ಅವನಲ್ಲಿ ನನಗ್ಯಾವತ್ತೂ ಕಂಡಿರಲಿಲ್ಲ. ಜಮ್ಮು ಕಾಶ್ಮೀರ ಟ್ಯಾಕ್ಸಿ ಅಸೊಸಿಯೇಶನ್ ಅಧ್ಯಕ್ಷ ತನ್ನ ಕಚೇರಿ ಬಿಟ್ಟು ಸುಮೊ ವಾಹನವನ್ನು ಪದೆಪದೇ ಒರೆಸುತ್ತಾ ಸ್ವತ: ಡ್ರೈವರಿಕೆಗೆ ಇಳಿದಿದ್ದ ಅಂದರೆ ಅಲ್ಲಿ ಆದಾಯ ಎನ್ನುವುದು ಯಾವ ಲೆವೆಲ್ಲಿಗೆ ಇಳಿದಿತ್ತು ಲೆಕ್ಕ ಹಾಕಿ. ಕಾರಣ ಸರಳವಿತ್ತು. 2002ರ ನವಂಬರ್ 13 ನಾನು ಸೋನ್‍ಮಾರ್ಗ್ ಹೋಗಿ ಸಂಜೆ ವಾಪಸ್ಸಾಗುವ ಹೊತ್ತಿಗೆ ಮುಖ್ಯಮಂತ್ರಿ ಮನೆಯೆದುರು ರಸ್ತೆಯಲ್ಲಿ ಅಂಬ್ಯೂಲೆನ್ಸು ಧಗಧಗನೆ ಉರಿಯುತ್ತಿತ್ತು. ಎಲ್ಲೆಲ್ಲೊ ಟೈಯರುಗಳನ್ನು ಇಟ್ಟು ಬೆಂಕಿ ಹಾಕಿದ್ದು ಅಡರುತ್ತಿದ್ದ ನವಂಬರ್‍ನ ಚಳಿಗೆ ಧುನಿ ಹಾಕಿದ್ದಾರಾ ಎನ್ನುವಂತಿದ್ದವು.
ಸಂಜೆಯ ಆರರ ಮೇಲೆ ರೂಮಿನಿಂದ ಹೊರಬಾರದಂತೆ ಪ್ರತಿ ಬ್ಯಾರಕ್ಕಿನ ಎದುರಿಗೆ ಸಿಗುವ ಸೈನಿಕ ಚೌಕಿಯ ಪೆÇೀಲಿಸರು ನನ್ನನ್ನು ಎಚ್ಚರಿಸಿ ಮುಂದಕ್ಕೆ ಬಿಡುತ್ತಿದ್ದರು. ಹೋಟೆಲಿನೊಳಗಿದ್ದ ರೆಸ್ಟೋರಾಂಟು ಬಾಗಿಲು ಹಾಕಿ ಯಾವುದೋ ಕಾಲವಾಗಿದ್ದರಿಂದ ಅವರದೇ ಮನೆಯಿಂದ ಪೂರ್ತಿ ಐದೂ ದಿನ ಅಡುಗೆ ಸರಬರಾಜು ಮಾಡಿದ್ದರು ನಮಗೆ. ಸರಿಯಾಗಿ ಕೂತು ಪರೋಟ ತಿಂದಿದ್ದೆಂದರೆ ಗುಲ್‍ಮಾರ್ಗನ ಒಳ ಊರೊಂದರಲ್ಲಿ. ಕಾರಣ ಅದು ತೀರ ಇಂಟಿರೀಯರು ಮತ್ತು ಅಲ್ಲಿಗೆ ಇಂತಹ ಯಾವುದೇ ಅಪಸವ್ಯಗಳು ತಲುಪುವುದೇ ಶಕ್ಯವಿರಲಿಲ್ಲ. ನಾವೆಲ್ಲಾ ಕೊಂಚ ನಿರಾಳವಾಗಿ ಉಸಿರಾಡಿದ್ದರೆ, ಆವತ್ತೇ ಕಾಶ್ಮೀರ ನನ್ನಲ್ಲಿ ಒಳಆಸಕ್ತಿಯೊಂದನ್ನು ಹುಟ್ಟಿಸಿತ್ತು. ಅಲ್ಲಿಂದಿಚೆಗೆ ಸುಮಾರು ಒಂದು ಡಜನ್ನಿಗೂ ಮಿಗಿಲು ಕಾಶ್ಮೀರಕ್ಕೆ ಭೇಟಿ ಇತ್ತಾಗಲೆಲ್ಲಾ ನಾನು ಹೊಸಹೊಸ ಆಯಾಮದ ಮತ್ತು ಹೊಸ ತಲೆಮಾರಿನಲ್ಲಾಗುತ್ತಿರುವ ಮಾನಸಿಕ ಬದಲಾವಣೆಗಳನ್ನು ಗುರುತಿಸಿದ್ದೇನೆ. ಅದರ ಪರಿಣಾಮ ಭೌಗೋಳಿಕವಾಗಿ ನಮ್ಮ ಕೈಲಿದ್ದರೂ ಜನ ಕೈತಪ್ಪುತ್ತಿದ್ದಾರೆ ಹಾಗಂತ ನಾವಂದಕೊಂಡಿದ್ದೇವೆ ಆದರೆ ಅವರನ್ನು ಅದರಲ್ಲೂ ಹೊಸ ಜನರೇಶನ್ ಹುಡುಗರನ್ನು ವ್ಯವಸ್ಥಿತವಾಗಿ ದಾರಿ ತಪ್ಪಿಸಲಾಗುತ್ತಿದೆ.
ಕಾರಣ ಪಾನ್ ಇಸ್ಲಾಮಿಸಂ ಅಥವಾ ಮುಸ್ಲಿಂ ಬ್ರದರ್‍ಹುಡ್
2002 ರಲ್ಲಿ ಉಗ್ರವಾದ ಮುಗಿಲು ಮಟ್ಟಿದ್ದಾಗಲೂ ಶ್ರೀನಗರದ ಲಲಿತ್‍ಮಹಲಿನಲ್ಲಿ ಉಳಿದುಕೊಂಡು ಗಂಟೆಗೊಮ್ಮೆ ಅಲ್ಲಿನ ಮುಖ್ಯ ರಸ್ತೆಯ ಸ್ಥಿತಿಗತಿ ಬದಲಾಗುತ್ತಿದ್ದುದಕ್ಕೆ ನಾನೇ ಸಾಕ್ಷಿ. ಆವತ್ತು ಮು.ಮ. ನಿವಾಸದಿಂದ ಕೂಗಳತೆಯ ದೂರದ ಹೋಟೆಲಿನ ಕಿಟಕಿಯಿಂದ ಕಾಣಿಸುತ್ತಿದ್ದ ಅಂಬ್ಯೂಲೆನ್ಸ್ ಹೊತ್ತಿ ಉರಿಯುತ್ತಿದ್ದುದು ನನ್ನ ಕಣ್ಣ ಮುಂದಿದೆ. ಕೊನೆಗೆ ಹೊರಡುವ ಮೊದಲು ನವಂಬರ್‍ನ ಮುಸ್ಲಿಂ ಹಬ್ಬದ ದಿನ ತಮ್ಮ ಮನೆಗೆ ಕರೆದೊಯ್ದಿದ್ದ ಆಗಿನ ಟ್ಯಾಕಿ ಮಾಲಿಕ ಸಂಘದ ಅಧ್ಯಕ್ಷ ಸ್ವತ: ಗಾಡಿ ಚಲಾಯಿಸುತ್ತಿದ್ದ. ಊರೆಲ್ಲಾ ಅವನಿಗೆ ಸಲಾಮು ಹೊಡೆಯುತ್ತಿದ್ದರೆ, ಅವನು ಮಾತ್ರ ನಾವು ಹೊರಡುವ ದಿನ ಮೈಯ್ಯೆಲ್ಲಾ ಹಿಡಿಯಾಗಿಸಿ ನಿಂತುಕೊಂಡು "ನಿಮಗೆ ನಿಜಕ್ಕೂ ನಮ್ಮ ಆತಿಥ್ಯ ಹಿಡಿಸಿದ್ದರೆ ನಿಮ್ ಸ್ನೇಹಿತರಿಗೆ ಹೇಳಿ, ಅತಿಥಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಇಲ್ಲಿರುವಷ್ಟೂ ದಿನವೂ ಜೀವ ಕೊಟ್ಟಾದರೂ ಕಾಯುತ್ತೇವೆ. ಅದರೆ ಪ್ರವಾಸಿಗರು ನಿಮ್ಮ ಕಡೆಯಿಂದ ಬಂದರೆ ನಾವೂ ಕೊಂಚ ಬದುಕುತ್ತೇವೆ. ಬರಲಿರುವ ನಮ್ಮ ಪೀಳಿಗೆಯ ಬದುಕಿನ ಪ್ರಶ್ನೆ ಇದು." ಎಂದವನ ಮಾತು, ಆತಿಥ್ಯ ಮತ್ತು ಕಾಳಜಿ ಜೊತೆಗೆ ಮನೆಯಲ್ಲಿ ಅವನ ಕುಟುಂಬದವರು ಮೈ ತುಂಬ ಸೆರಗು ಹೊದ್ದು ಭಯ್ಯಾ ಎಂದು ಮಾತಾಡಿಸಿ ಪ್ರೀತಿಯಿಂದ ಉಣ್ಣಲು ಬಡಿಸಿದ್ದು ಮರೆತರೆ ಕೃತಘ್ನನಾದೇನು. ಹೌದು. ನನಗೂ ಆಗ ಶ್ರೀನಗರ ಮೊದಲಿನಂತೆ ಮತ್ತೆ ನಳನಳಿಸಬೇಕು ಎನ್ನಿಸಿದ್ದು ಸುಳ್ಳಲ್ಲ. ಆವತ್ತು ಅವನ ಮಾತು, ನಡತೆ ಮೂಡಿಸಿದ್ದ ಭರವಸೆಯನ್ನು ಹೊಸ ತಲೆಮಾರು ಸಂಪೂರ್ಣವಾಗಿ ತಿಂದುಹಾಕಿತ್ತು. ಪಾನ್ ಇಸ್ಲಾಮಿಸಮ್ಮು ರೆಕ್ಕೆ ಪಢಪಢಿಸತೊಡಗಿತ್ತು.
ಆದರೆ ಕೇವಲ ಒಂದೂವರೆ ದಶಕದಲ್ಲಿ ಜನಜೀವನ ಸಂಪೂರ್ಣ ಬಕ್ಕ ಬಾರಲು ಬಿದ್ದಿದೆ. ಎಲ್ಲವನ್ನೂ, ಎಲ್ಲರನ್ನೂ ಬ್ರದರ್‍ಹುಡ್ ಚಲುವಳಿ ನುಂಗಿ ನೊಣೆದುಬಿಟ್ಟಿದೆ. ಆ ತಲೆಮಾರಿನ ಬದುಕಿನ ಬಗೆಗಿನ ಅವಗಾಹನೆಯನ್ನು ಈಗಿನ ಹುಡುಗರು ಕಲ್ಲೆಸೆಯುವುದೇ ಧರ್ಮವಾಗಿಸಿಕೊಂಡು ಬದಲಾಯಿಸಿಬಿಟ್ಟಿದ್ದಾರೆ. ಅಲ್ಲಿಗೆ ಒಂದು ವಿನಿತತೆ ಮತ್ತು ಬದುಕಿಗಾಗಿ ಜಗತ್ತಿನೊಂದಿಗೆ ಬೆರೆಯುವ ಮಾನಸಿಕ ತಯಾರಿಗೆ ಅವಕಾಶವೇ ಕೊಡದಂತೆ ಮತಾಂಧತೆ ಎಂಬ ಅಫೀಮು ಹೊಸ ಪೀಳಿಗೆಯನ್ನು ಮುಗಿಸಿಹಾಕಿದೆ. ಈಗೇನಿದ್ದರೂ ಕಲಾಶ್ನಿಕೋವ್ ಮತ್ತು ಮೊಬೈಲು. ನೆನಪಿರಲಿ ನೆಟ್‍ವರ್ಕ್ ಸಿಗ್ನಲ್‍ಗಾಗಿ ಕತ್ತು ಕುಯ್ಯುವ ಮಟ್ಟಕ್ಕೆ ಅಲ್ಲಿ ರೊಚ್ಚಿಗೇಳುತ್ತಾರೆ. ಇವತ್ತು ರೂಮರು ಹಬ್ಬುವುದನ್ನು ತಪ್ಪಿಸಲು ಸರಕಾರ ಸಿಗ್ನಲ್ ಬಂದು ಮಾಡುತ್ತದಲ್ಲ ಅದರ ಮೊದಲ ಏಟು ಬೀಳುವುದೇ ಸೈನಿಕರ ಮೇಲೆ. ಕಾರಣ ಸಿಗ್ನಲ್ ಬಂದಾಗುತ್ತಿದ್ದಂತೆ ಅವರೆಲ್ಲಾ ಚಟುವಟಿಕೆ ಮಾತ್ರವಲ್ಲ, ಪೂರ್ತಿ ಕಣಿವೆಯೇ ಸ್ಥಬ್ಧವಾಗಿ ಬಿಡುತ್ತದೆ. ಹತಾಶೆ ಜೊತೆಗೆ ಮೊದಲೇ ಪೂರ್ವಾಗ್ರಹ ಪೀಡಿತವಾಗಿರುವ ಯುವಮನಸ್ಸು ಅದಕ್ಕೆ ಕಾರಣವಾಗಿರುವ ನೌಕರಶಾಹಿಯ ಮೇಲೆರಗುತ್ತದೆ. ಅದರ ಪರಿಣಾಮ ಕಲ್ಲು ಸುರಿಮಳೆಯ ಮೂಲಕ ಸೈನಿಕರ ಮೇಲಾಗುತ್ತದೆ. ನಿಮಗಿದು ಗೊತ್ತಿರಲಿ ಕಳೆದ ವರ್ಷ ಕಲ್ಲೆಸದ ಪ್ರಕರಣಗಳ ಸಂಖ್ಯೆ ಎರಡು ಸಾವಿರ ಹತ್ತಿರ ಹತ್ತಿರ. ಅಂದರೆ ಪ್ರತಿ ದಿನ ಒಂದಲ್ಲ ಒಂದು ಕಡೆ ಕಲ್ಲೇಟು ಪಕ್ಕಾ. ನಡೆದಿರುವ ಉಗ್ರದಾಳಿಯ ಸಂಖ್ಯೆ ಸುಮಾರು 900 ಚಿಲ್ರೆ.
ಅಷ್ಟಕ್ಕೂ ಹೀಗೆ ಹೊಸ ತಲೆಮಾರಿನ ಕಲ್ಲೆಸೆಯುವ ಹುಡುಗರು ಮತ್ತು ಅಂತಹ ಹುಡುಗರ ವಿದ್ರೋಹಿ ಕೃತ್ಯಕ್ಕೂ ಆಕರ್ಷಿತವಾಗುತ್ತಿರುವ ಹುಡುಗಿಯರ ಮನಸ್ಥಿತಿಯ ಹಿಂದಿರುವ ಪಾನ್ ಇಸ್ಲಾಮಿಸಮ್ಮು ಹೇಳುವುದಾದರೂ ಏನನ್ನು..? ಅದರ ಐತಿಹಾಸಿಕ ಮತ್ತು ಇವತ್ತು ಜಗತ್ತನ್ನೆ ಬೋರಲಾಗಿಸುತ್ತಿರುವ ಕತೆ ಇತ್ತಿಚಿನದ್ದಲ್ಲ. ಕಾರಣ ಪಾನ್ ಇಸ್ಲಾಮಿಸಮ್ಮು ಅಥವಾ ಬ್ರದರ್ ಹುಡ್ ಚಳುವಳಿ ಎನ್ನುವುದು ಒಂದು ಮುಷ್ಠಿ ಪುಟದ ಅಳತೆಗೆ ದಕ್ಕುವು ಕತೆಯೇ ಅಲ್ಲ. ಅದರ ಮೂಲ ಬೇರು ಇರುವುದೇ ಶತಮಾನಗಳ ಹಿಂದಿನ ಇತಿಹಾಸಕ್ಕೆ ಮತ್ತು ಹಾಗೆ ಜಾಗತಿಕವಾಗಿ ಬ್ರದರ್‍ಹುಡ್ ಮೂಲಕ ಶೇ.70ಕ್ಕಿಂತ ಹೆಚ್ಚಿರುವ ಜಗತ್ತಿನ ಸಜ್ಜನ ಮುಸ್ಲಿಂರ ಮನಸ್ಥಿತಿಯನ್ನು ಕ್ರಮೇಣ ಧಾರ್ಮಿಕವಾಗಿ ಹಾಳು ಮಾಡುತ್ತಿರುವುದಕ್ಕೆ. ಅದರ ಕತೆ ಮುಂದಿನ ವಾರಕ್ಕಿರಲಿ. ಅದರೆ ಹಾಗೆ ಬಂದ ಬ್ರದರ್‍ಹುಡ್ ಇವತ್ತು ಕಾಶ್ಮೀರಕ್ಕೆ ತನ್ನದೇ ಕೊಡುಗೆ ನೀಡಿದೆ ಎನ್ನುವುದಂತೂ ಸತ್ಯ. ಕಣಿವೆ ಖಾಲಿ ಆಗದೆ ಏನು ಮಾಡೀತು..?
No comments:
Post a Comment