Tuesday, July 4, 2017


ಈ ಲೇಖನ ಓದುವ ಮೊದಲೊಮ್ಮೆ ನಾವು ಅಂತರಾಷ್ಟ್ರೀಯ ರಾಜಕಾರಣದ ಕೆಲವು ಮಜಲುಗಳನ್ನು ಅರಿತುಕೊಂಡಲ್ಲಿ ಇದ್ದಕ್ಕಿದ್ದಂತೆ ಯಾಕೆ ಚೀನಾ ನಮ್ಮ ಕೈಲಾಸ ಪರ್ವತ ಯಾತ್ರಿಗಳ ಕುತ್ತಿಗೆಯ ಮೇಲೆ ಕೂರುತ್ತಿದೆ ಎಂದು ಗೊತ್ತಾಗುತ್ತದೆ. ಇಂತಹದ್ದಕ್ಕೆಲ್ಲಾ ಚೀನಾದ ಕ್ಯಾತೆ ತೆಗೆಯುವ ಕೆಲಸಕ್ಕೆ ಇಂಬು ನೀಡಿದ್ದು ಒಳಗೊಳಗೆ ಹಿಕಮತ್ತು ನಡೆಸುವ ಪಾಪಿ ಪಾಕಿಸ್ತಾನ ಎಂಬುದೀಗ ರಹಸ್ಯವಾಗುಳಿದಿಲ್ಲ. ಕಾರಣ ಅನಾಮತ್ತಾಗಿ ತಿಂಗ ಳೊಪ್ಪತ್ತಿನಲ್ಲಿ 43 ಉಗ್ರಗಾಮಿಗಳನ್ನು ಹುಡುಹುಡುಕಿ ಕತ್ತರಿಸುತ್ತಿರುವ ಭಾರತೀಯ ಸೈನ್ಯದ ರುಬಾಬಿಗೆ ತೋಪೆದ್ದಿರುವ ಪಾಕಿಸ್ತಾನಕ್ಕೆ ಮತ್ತದೆ ಮುರಾಮೋಸದ ಕಾರಾಸ್ಥಾನಕ್ಕೆ ಸಿಕ್ಕ ನೆಪವೇ ಹಿಂದೂಗಳ ಮೇಲೆ ಆಕ್ರಮಣಕಾರಿ ನೀತಿಯನ್ನನುಸರಿಸುವುದು. ಹಾಗಾಗೇ ಅದು ಚೀನಾದ ಕೀವಿಯೂದಿದೆ. ಇತ್ತ ಅಮರನಾಥ್ ಆರಂಭವಾಗುವ ಹೊತ್ತಿಗೆ ಅತ್ತ ಚೀನಾ ಗಡಿಯನ್ನು ಮುಚ್ಚಿ ಬಿಡಿ. ನಾವು ಇಲ್ಲಿ ದಾಳಿ ಮಾಡಿ ಅಶಾಂತಿ ಹುಟ್ಟಿಸುತ್ತೇವೆ ಅತ್ತ ಕೈಲಾಸ ಪರ್ವತವೂ ಒಬ್ಬರಿಗೂ ದಕ್ಕಬಾರದು ಆಗ ಹಿಂದೂಗಳಲ್ಲೇ ಒಳಗೊಳಗೇ ಹೊಗೆಯಾಡುವ ಕ್ರೋಧ ಅಲ್ಟಿಮೇಟ್ಲಿ ಅದು ಕೇಂದ್ರ ರಾಜಕಾರಣದ ಮೇಲೆ ಪ್ರಭಾವ ಬೀರುತ್ತದೆ. ಹಾಗೆ ಬೀರುವ ಹೊತ್ತಿಗೆ ವಿರೋಧ ಪಕ್ಷ ಇಂತಹ ಭಾವನಾತ್ಮಕ ವಿಷಯವನ್ನು ಹಿಡಿದುಕೊಂಡು ರಸ್ತೆಗಿಳಿಯುತ್ತದೆ. ಸುಲಭಕ್ಕೆ ಆಗದ ಲೆಕ್ಕಾಚಾರ ಎನ್ನಿಸಿದರೂ ಸರಹದ್ದಿನ ರಾಜಕೀಯ ಮತ್ತು ಅಂತರಾಶ್ಟ್ರೀಯ ರಾಜಕೀಯದ ಬಗೆಗೆ ಅವಗಾಹನೆ ಇರುವವರಿಗೆ ಇದು ಸುಲಭಕ್ಕೆ ಅರ್ಥವಾಗುತ್ತದೆ. ಹಾಗೆಂದು ಚೀನಾಕ್ಕೂ ಇದೊಂದು ನೆಪ ಬೇಕೆ ಇತ್ತು. ಭಾರತ ಟಿಬೇಟ್ ಬೆಂಬಲಕ್ಕೆ ನಿಲ್ಲುವುದರೊಂದಿಗೆ, ದಲೈಲಾಮಾರನ್ನು ಸಾಕುತ್ತಿರುವುದು ಇನ್ನಿಲ್ಲದ ಗಾಯವಾಗಿ ಚೀನಾದ ತೆಕ್ಕೆಯೊಳಗೆ ಕಳಿತು ಕೂತಿದೆ. ಯಾವತ್ತಿದ್ದರೂ ದಲೈಲಾಮ ತನ್ನ ವಶಕ್ಕೆ ದಕ್ಕದಂತೆ ಕಯುತ್ತಿರುವುದೇ ಭಾರತ ಎನ್ನುವದರ ಜೊತೆಗೆ ತನ್ನ ವಿವಾದಾತ್ಮಕ ಅಂದರೆ ಟಿಬ್ಬೇಟಿಗೆ ಹತ್ತಿರವಿರುವ ಸ್ವಾಯತ್ತ ಪ್ರದೇಶಗಳಲ್ಲಿ ಲಾಮಾ ಪ್ರವೇಶವನ್ನೂ ಅದು ಸಹಿಸುತ್ತಿಲ್ಲ. 
ಇದಕ್ಕೆ ಬರೆ ಎಳೆದಂತೆ ಇತ್ತ ನೇಪಾಳದ ಗಡಿಗೂ ಕಾಯ್ದ ಹೆಂಚಿನಂತಹ ಅರುಣಾಚಲದ ಸರಹದ್ದಿಗೂ  ಲಾಮಾ ಕಾಲಿಟ್ಟುಬಿಟ್ಟರು ನೋಡಿ. ಗಾಯಕ್ಕೆ ಕಡ್ಡಿ ಇಟ್ಟು ತಿರುಪಿದಂತೆ ಚೀನಾ ಎದ್ದು ಕುಳಿತುಬಿಟ್ಟಿದೆ. ಇವತ್ತು ಲಾಮಾ ನಮ್ಮ ಭಾರತದಲ್ಲಿ ರಾಜಕೀಯ ಆಶ್ರಯದಲ್ಲಿದ್ದರೂ ತನ್ನ ಮಾಹಿತಿ ಅಥವಾ ಅನುಮತಿ ಇಲ್ಲದೆ, ತನ್ನ ಇಚ್ಚೆಯಂತೆ ಎಲ್ಲೆಂದರಲ್ಲಿ ತಿರುಗಬಾರದು ಎಂದೇ ಪ್ರತಿಪಾದಿಸುತ್ತಾ ಬಂದಿದೆ ಚೀನಾ. ಹಾಗಿದ್ದಾಗ ಅರುಣಾಚಲದ ಅದೂ ತೀರ ಸರಹದ್ದಿನ ಪ್ರದೇಶಕ್ಕೆ ಭೇಟಿಕೊಟ್ಟು ಸಹಸ್ರಾರು ಟಿಬೇಟಿಯನ್ನರ ಮನದಲ್ಲಿ ಮತ್ತೊಮ್ಮೆ ದೀಪ ಉರಿಸಿಬಿಟ್ಟರಲ್ಲ ಅಗ್ನಿಗೆ ತುಪ್ಪ ಸುರಿದಂತಾಗಿ ಹೋಗಿದೆ. ಹಾಗಾಗಿಯೇ ಅದು ಬೇರೆ ರೀತಿಯಲ್ಲಿ ಭಾರತವನ್ನು ಕೆಣಕಲು ಯತ್ನಿಸುತ್ತಿದೆ. ಈಗಾಗಲೇ ಅರುಣಾಚಲ ಮತ್ತು ತವಾಂಗ್ ಸೆಕ್ಟರ್ ಮೇಲೆ ಡ್ರೊನ್ ಸೇರಿದಂತೆ ಮಿಲಿಟರಿ ಕ್ರಾಫ್ಟರ್ ಹಾರಿಸಿದ್ದೂ ಅಲ್ಲದೆ ಬಹಿರಂಗವಾಗೇ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ ಸರ್ವ ರೀತಿಯ ಕಾರ್ಯಗಳಿಗೂ ನಿರುಮ್ಮಳವಾಗಿ ಬೆಂಬಲ ನೀಡುತ್ತಿದೆ. ಭಾರತದ ಸೈನಿಕರು ಅಗ್ಡಿ ಆಕ್ರಮಿಸಿದ್ದಾರೆಂದು ಕ್ಯಾತೆ ತೆಗೆದು ನಾಥುಲಾ ಪಾಸ್ ಶಾಸ್ವತವಾಗಿ ಬಂದ್ ಮಾಡುವ ಬೆದರಿಕೆ ಒಡ್ಡುತ್ತಿದೆ. ಪ್ರಾಚೀನ ಸಿಲ್ಕ್ ರೂಟ್ ಇದೆಯಲ್ಲ ಅದೇ ಈ ನಾಥುಲಾ ಪಾಸ್ ಅಂದರೆ ಇದರ ಇಂಪಾರ್ಟೆನ್ಸು ಅರ್ಥವಾದೀತು. 
ಹೀಗೆ ಚೀನಾ ಟಿಬೆಟ್, ತನ್ನ ಭಾಗವೆಂದು ಭಾವಿಸಿರುವ ಅರುಣಾಚಲ ಮತ್ತು ದಲೈಲಾಮ ಎಂಬ ತ್ರಿಕೋನವನ್ನು ಎದುರಿಗಿಟ್ಟುಕೊಂಡು ವಿಶ್ಲೇಶಿಸಿದರೆ ಇತಿಹಾಸದುದ್ದಕ್ಕೂ ಚೀನಾ ಹೀನಾಯ ಹೆಜ್ಜೆಗಳನ್ನೆ ಅನುಸರಿಸಿದ್ದು ಸ್ಪಷ್ಟ. ನೆಹರುವಿನ ಅತೀ ನಂಬಿಕೆಯ ಪಂಚಶೀಲ ತತ್ವಗಳನ್ನು ಮುರಿದು 1962 ರಲ್ಲಿ ಭಾರತದೊಳಕ್ಕೆ ತೀರ ವ್ಯವಸ್ಥಿತವಾಗಿ ತವಾಂಗ್ ಕಡೆಯಿಂದ ನುಗ್ಗಿ ಬಂದ ಚೀನಿಯರು ಅನಾಮತ್ತಾಗಿ ಕೈಲಾಸ ಸೇರಿದಂತೆ ಸಾವಿರಾರು ಕಿ.ಮೀ. ಪ್ರದೇಶ ಅತಿಕ್ರಮಿಸಿದರಲ್ಲ ಅದಾವುದೂ ಇವತ್ತು ಇಲ್ಲಿದ್ದೇ ಬೆಂಬಲಿಸುವ ಕಮ್ಮಿನಿಷ್ಠೆಗಳಿಗೆ ಅರಿವಾಗುತ್ತಲೇ ಇಲ್ಲ. ಆಗಿನ ಸರಕಾರದಲ್ಲಿದ್ದವರು ಸರಿಯಾದ ನಿರ್ಣಯ ತೆಗೆದುಕೊಂಡಿದ್ದರೆ ಇವತ್ತು ಶಿಗಾಟ್ಸೆ ನಮ್ಮ ವಶದಲ್ಲಿರುತ್ತಿತ್ತು ಜೊತೆಗೆ ಮಾನಸ ಸರೋವರ ಮತ್ತು ಕೈಲಾಸ ಪರ್ವತ ಕೂಡಾ ನಮ್ಮದಾಗೇ ಇರುತ್ತಿದ್ದವು. 
ಇತ್ತ ಈಗಲೂ ಭಾರತ ತನ್ನ ಆಡಳಿತ ಭಾಗವಾದ ಅರುಣಾಚಲದಲ್ಲಿ ಅಭಿವೃದ್ಧಿಯ ಕಾರ್ಯ ಆರಂಭಿಸಿದಾಗೆಲ್ಲಾ ಕಾಲು ಕೆದರುತ್ತಲೇ ಇದೆ. ಕಾರಣ ಅದರ ದೃಷ್ಟಿಯಲ್ಲಿ ಚೀನಾದ ಭಾಗ ಅದು. ಅಸಲಿಗೆ ಚೀನಿಯರದ್ದು ಟಿಬೇಟಿನೊಂದಿಗೆ ಆರೇಳು ಶತಮಾನದ ವೈರತ್ವ. ಅದು ಮುಂದುವರೆದ ಭಾಗವಾಗಿ ಚೀನಿಯರನ್ನು ಎದುರಿಸಲಾಗದೆ ಟಿಬೆಟಿಯನ್ನರ ಗುರು "ತುಬ್ಟೆನ್ ಗಾಟ್ಸೊ" ಭಾರತಕ್ಕೆ ಓಡಿ ಬಂದಿದ್ದರು. ಆಗ ಬ್ರಿಟೀಷರ ಒಪ್ಪಂದದ ಪ್ರಕಾರ ತವಾಂಗ್ ಸೆಕ್ಟರ್ ಸೇರಿದಂತೆ ಹತ್ತು ಸಾವಿರ ಚ.ಕಿ.ಮೀ. ಭೂಮಿಯನ್ನು ಅರುಣಾಚಲದ ರಾಜ್ಯಕ್ಕೆ ಸೇರಿಸಿ ಅದನ್ನು ಗಡಿಯಾಗಿಸಲು ಟಿಬೇಟ್ ಬದ್ಧವಾಗುವುದರೊಂದಿಗೆ ಇತಿಹಾಸ ಪ್ರಸಿದ್ಧವಾದ ಮ್ಯಾಕ್‍ಮೋಹನ ಲೈನ್ ಐತಿಹಾಸಿಕ ದ್ವೇಷಕ್ಕೆ ಕಾರಣವಾಯಿತು. ಇದಕ್ಕೆ ಪ್ರತಿಯಾಗಿ ಚೀನಿ ನಾಯಕ 1950 ರ ಸುಮಾರಿಗೆ ಏಕ ಪಕ್ಷೀಯವಾಗಿ ಟಿಬೇಟ್ಟಿಗೆ ನುಗ್ಗಿ ಝೇಡಾಂಗ್‍ನ್ನು ವಶಪಡಿಸಿಕೊಂಡುಬಿಟ್ಟ. ಆಗ ನಡೆದ ದಾಳಿಯ ಭಿಕರತೆಯನ್ನು ಎದುರಿಸಲಾಗದ "ದೇವ ರಾಜ" ದಲೈಲಾಮ ಭಾರತಕ್ಕೆ ತನ್ನ ಬೆಂಬಲಿಗರೊಂದಿಗೆ ರಾಜಕೀಯ ಅಶ್ರಯ ಪಡೆದು ಇಲ್ಲಿಂದಲೇ ರಾಜಕೀಯ ನಿಯಂತ್ರಿಸತೊಡಗಿದ್ದು ಇವತ್ತಿಗೂ ಚೀನಿಯರ ಪಾಲಿಗೆ ಕೆದರುತ್ತಲೇ ಇರುವ ಹುಣ್ಣು. ಅಲ್ಲಿಂದ ಇಲ್ಲಿವರೆಗೆ ಹಲವು ಹೋರಾಟದ ಮಧ್ಯೆ ಪಾಕಿಸ್ತಾನದಲ್ಲಿ ನಿರಂತರವಾಗಿ ಭಾರತೀಯರನ್ನು ಹಣಿದು ದೇಶ ಖಾಲಿ ಮಾಡಿಸಿದಂತೆ, ಟಿಬೇಟಿನಲ್ಲಿ ಸುಮಾರು ಐನೂರು ಚಿಲ್ರೆ ಬೌದ್ಧ ಕೇಂದ್ರಗಳನ್ನು ನಾಶ ಮಾಡಿದ್ದಲ್ಲದೆ ಟಿಬೇಟಿಯನ್ನರನ್ನು ಪರಕೀಯರನ್ನಾಗಿಸಿತು. ವಿಶೇಷ ಪೆÇ್ರೀತ್ಸಾಹದ ಮೂಲಕ ಚೀನಿಯರನ್ನು ಟಿಬೇಟಿನಲ್ಲಿ ನೆಲೆಗೊಳಿಸಿ ಅಲ್ಲೆಲ್ಲಾ ಬಹುಸಂಖ್ಯಾತರನ್ನಾಗಿಸಿದೆ. ಇಷ್ಟೆಲ್ಲಾ ಮಾಡಿ ತನ್ನ ಅನುಕೂಲಕ್ಕೆ ಟಿಬೇಟ್ ಚೀನಿಯರ ಅವಿಭಾಜ್ಯ ಅಂಗ ಎನ್ನುವ ಅದು ಕಾಶ್ಮೀರ ವಿಷಯಕ್ಕೆ ಬಂದಾಗ ಪಾಕಿಗಳ ಪರ ಒಲವು ತೋರಿಸುತ್ತಾ ಇಬ್ಬಂದಿತನ ತೋರುತ್ತದೆ. ಈಗ ಎಲ್ಲಾ ಮುಗಿದು ಯಾವುದಕ್ಕೂ ಮೋದಿ ಸರಕಾರ ಕ್ಯಾರೇ ಅನ್ನದೇ ಅಂತರಾಷ್ಟ್ರೀಯಮಟ್ಟದಲ್ಲಿ ಭಾರತಕ್ಕೊಂದು ಇಮೇಜು ಸೃಷ್ಠಿಸುತ್ತಿದ್ದರೆ ಅದೀಗ ನುಂಗಲಾರದ ತುತ್ತಾಗಿ ನಾಥುಲಾ ಪಾಸ್ ಮುಚ್ಚುವ ಮೂಲಕ ಕಾಲು ಕೆದರಿದೆ. 
ಅಸಲಿಗೆ ನಾವು ಹೋಗಿ ಬರುವುದರಿಂದ ಚೀನಾಕ್ಕೇನೂ ಯಾವುದೇ ಲುಖ್ಸಾನಾಗಲಿ, ಅನಾವಶ್ಯಕ ರಾಜಕೀಯ ಸಮಸ್ಯೆಯಾಗಲಿ ಯಾವತ್ತೂ ಮಾನಸ ಸರೋವರ ಯಾತ್ರೆಯಿಂದ ಉಧ್ಬವವಾದುದ್ದೇ ಇಲ್ಲ. ಆದರ ಬದಲಾಗಿ ನೀವು ನಂಬುತ್ತೀರೋ ಇಲ್ಲವೋ ಪ್ರತಿ ಯಾತ್ರಿಯ ತಲೆಯ ಮೇಲೂ ಸುಮಾರು ಇಪ್ಪತ್ತು ಸಾವಿರ ಚಿಲ್ರೆ ಟ್ಯಾಕ್ಸ್‍ನ್ನು ವಸೂಲಿ ಮಾಡುವುದರ ಜೊತೆಗೆ ಅಲ್ಲಿನ ಎರಡೂವರೆ ಸಾವಿರಕ್ಕೂ ಮಿಗಿಲು ಕೂಲಿಗಳು ಮತ್ತು ರೆಸ್ಟೋರೆಂಟ್‍ನವರೂ ಸೇರಿದಂತೆ ಪ್ರತಿ ವಿಭಾಗದ ಕೆಲಸಗಾರರು ಒಂದು ಯಾತ್ರೆಯ ಅವಧಿಯಲ್ಲಿ ಅನಾಮತ್ತಾಗಿ ಒಂದು ಲಕ್ಷ ರೂ. ಯನ್ನು ಕೇವಲ ಎರಡು ತಿಂಗಳಲ್ಲಿ ದುಡಿದುಬಿಟ್ಟಿರುತ್ತಾರೆ ಮತ್ತು ಇಂತಹ ಬಂಪರ್ ಲಾಭ ಅವರ ಜೀವಮಾನದಲ್ಲಿ ಯಾವತ್ತೂ ಕೈಲಾಸ ಯಾತ್ರೆಯ ಹೊರತಾಗಿ ಬರುವುದೇ ಇಲ್ಲ. ಅದರೆ ಚೀನಿಯ ರಾಜಕೀಯದೆದುರಿಗೆ ಇದೆಲ್ಲಾ ಗೌಣ. ಗಂಡಾಂಘ್ ಮತ್ತು ಶಿಗಾಟ್ಸೆಯ ಹೋಟೆಲಿನ ಆಮದನಿ ಅದರ ವರ್ಶದ ಬಜೆಟ್ ದಾಟುತ್ತದೆ.( ಇಲ್ಲಿಯವರೆಗೆ ಚೀನ ರೈಲು ನಿಲ್ದಾಣ ದ ಲೈನು ಎಳೆದುಕೊಂಡು ಬಂದಿದೆ. ಈ ನಿಲ್ದಾಣದಲ್ಲಿ ದಿನಕ್ಕೆ ಎರಡು ಮತ್ತೊಂದು ಜನರೂ ಪ್ರಯಾಣಿಸುವುದಿಲ್ಲ ನೆನಪಿರಲಿ ಅದರೆ ತೀರ ಭಾರತದ ತುದಿಗೆ ಸೈನಿಕರು ಮತ್ತು ಸರಕನ್ನು ಸಾಗಿಸಲು ಲಾಸಾದಿಂದ ಇಲ್ಲಿಗೆ ನಾಲ್ಕೇ ಗಂಟೆಯ ದಾರಿ. ಈಗ ಅರ್ಥವಾಯಿತಲ್ಲ ಚೀನಾ ಇಂತಲ್ಲೆಲ್ಲಾ ರಸ್ತೆ, ರೈಲು ಮತ್ತು ಅಂತರಾಷ್ಟ್ರೀಯ ಕಾರಿಡಾರ್ ಹೆಸರಿನಲ್ಲಿ ಅಗಾಧ ಸೈಜಿನ ಹೆದ್ದಾರಿಗಳನ್ನು ನಿರ್ಮಿಸುತ್ತಿದೆ ಎಂದು.) 
ಮೊನ್ನೆ ಆರಂಭವಾದ ಮೊದಲ ತಂಡವನ್ನು ರಸ್ತೆಯ ಮೂಲಕ ಪಯಣಿಸುವ ದಾರಿಯಲ್ಲಿ ಚೀನಾ ಇದ್ದಕ್ಕಿದ್ದಂತೆ ಯಾವುದೇ ಮಾಹಿತಿಯೇ ಕೊಡದೆ ತಡೆದು ನಿಲ್ಲಿಸಿತ್ತು. ದಿನಾಂಕ: ಜೂನ್ 19 ರಂದು ನಿಗದಿಯಾದಂತೆ ನಾಥುಲಾಪಾಸ್ ಮೂಲಕ ದಾಟಬೇಕಿದ್ದ ಚೈನಾ ಬಾರ್ಡರ್‍ನಲ್ಲಿ ಇದ್ದಕ್ಕಿದ್ದಂತೆ ಅನುಮತಿಯನ್ನು ನಿರಾಕರಿಸಿ ಯಾತ್ರಿಗಳನ್ನು ಐ.ಟಿ.ಬಿ.ಪಿ. ಕ್ಯಾಂಪಿನಲ್ಲಿ ತಡೆಹಿಡಿಯಲಾಯಿತು. ಆದರೆ ಅದಕ್ಕೆ ಯಾಕೆ ಎನ್ನುವ ಕಾರಣವನ್ನು ತಿಳಿಸಲೇ ಚೀನಾ ಸುಮಾರು 48 ಗಂಟೆ ತಡ ಮಾಡಿದ್ದೂ ಅಲ್ಲದೆ ಭೂ ಕುಸಿತದ ಕಾರಣವನ್ನು ನೀಡಿ ಕೈ ತೊಳೆದುಕೊಂಡಿದೆ. ಅದೆಂಥಾ ಬಂಢತನವೆಂದರೆ ಈ ರಸ್ತೆಗಳು ಭಾರತದ ತವಾಂಗ್ ಸೆಕ್ಟರಿನ ರೀತಿಯಲ್ಲೆ ಇರುವ ಪರ್ವತ ಪ್ರದೇಶದ ಹಾದಿ. ಕಾರಣ ತವಾಂಗ್‍ನ ಪಕ್ಕದಲ್ಲೇ ಇರುವ " ಬಾಬಾ ಮಂದಿರ " ರಸ್ತೆ ಕೂಡಾ ಹೀಗೆ ಇದ್ದು ಎಂಥದ್ದೇ ಭೂಕುಸಿತವಿದ್ದರೂ ಒಂದು ದಿನದಲ್ಲಿ ಇವತ್ತು ರಸ್ತೆ ಸರಿಪಡಿಸುವ ಮಟ್ಟಿಗೆ ಸೇವೆಗೆ ಬಾರ್ಡರ್ ರೋಡ್ ಅರ್ಗನೈಜೆಷನ್ ಕೆಲಸ ಮಾಡುತ್ತಿದೆ ಎನ್ನುವುದನ್ನು ಪ್ರತ್ಯಕ್ಷವಾಗಿ ಕಂಡವನು ನಾನು.
ಆದರೆ ಅದೇ ರೇಂಜಿನಲ್ಲಿರುವ ನಾಥುಲಾ ಬಗ್ಗೆ ಕತೆಹೇಳುತ್ತಿರುವ ಚೀನಿಯರಿಗೆ ಅದರಿಂದ ಯಾವ ವ್ಯತ್ಯಾಸವೂ ಬೀಳುವುದಿಲ್ಲ ಎಂದೂ ಗೊತ್ತಿಲ್ಲದ್ದಿಲ್ಲ. ಕಾರಣ ಇವತ್ತು ಮಾನಸ ಸರೋವರ ನಾಥುಲಾ ಮಾತ್ರವಲ್ಲ ನೇಪಾಳ ಮತ್ತು ದಾರ್ಚುಲ ಕಡೆಯಿಂದ ಲಿಫುಲೇಕ್ ಪಾಸ್‍ನಲ್ಲೂ ಪಯಣಿಸಬಹುದಾಗಿದ್ದು ಇವೆಲ್ಲಾ ಶ್ರಮದಾಯಕವಾದ ದಾರಿಗಳು. ನಾಥುಲಾ ನೇರವಾದ ದಾರಿ ಹೊಂದಿದ ಕಾರಣ ಅದನ್ನು ಬಂದು ಮಾಡುವುದರ ಮೂಲಕ ತುಚ್ಛ ರಾಜಕೀಯ ಮಾಡುತ್ತಿದೆ ಚೀನಾ. 

ಅಸಲಿಗೆ ಕೈಲಾಸ ಮಾನಸ ಸರೋವರಕ್ಕೆ ಕುಮಾಂವ್ ಮಂಡಲ್ ವಿಕಾಸ ನಿಗಮ ಯಾತ್ರೆ ನಿರ್ವಹಿಸುವ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದು ಇದಕ್ಕೆ ಇಂಡೊ ಟಿಬೇಟಿಯನ್ ಬಾರ್ಡರ್ ಫೆÇೀರ್ಸ್ ಜೊತೆ ಕೊಡುತ್ತದೆ. ಪ್ರತಿ ಕ್ಯಾಂಪುಗಳು ಅವರ ನಿಗರಾಣಿಯಲ್ಲಿರುತ್ತವೆ. ಅವರದ್ದೇ ಸಂವಹನದ ಪದ್ಧತಿಯ ವ್ಯವಸ್ಥೆ ಜೊತೆಗಿರುತದೆ. ಭಾರತದ ದಾರ್ಚುಲಾ ಉತ್ತರಾಖಂಡ ರಾಜ್ಯದ ಕೊನೆಯ ಕ್ಯಾಂಪು. ಅಲ್ಲಿಂದ ತವಾಘಾಟ ಮೂಲಕ ಮೊದಲ ಕ್ಯಾಂಪು " ಶಿರ್ಖಾ " ತಲುಪುವ ದಾರಿಗೆ ಡ್ರಾಪ್ ಮಾಡಲಾಗುತ್ತದೆ. ಇಲ್ಲಿಂದ ನಿರಂತರ ನಡೆಯುವಿಕೆ ಎಂಥವರನ್ನೂ ಹಣ್ಣು ಮಾಡಿಬಿಡುತ್ತದೆ. ಹೆಚ್ಚಿನವರು ಕುದುರೆ ಸೇವೆಯನ್ನು ಪಡೆಯುತ್ತಾರೆ.
ಶಿರ್ಖಾದಿಂದ – ಗಾಲ - ಮಾಲ್ಪ(ಪ್ರತಿಮಾ ಬೇಡಿ ನೃತ್ಯ ಮಾಡುತ್ತಲೇ  ಪರ್ವತ ಕುಸಿತದಲ್ಲಿ ಬಲಿಯಾದ ಕ್ಯಾಂಪು)- ಬುಧಿ – ಗುಂಜಿ – ಕಾಲಾಪನಿ - ನಾಭಿಡಾಂಗ್ – ಓಂ ಪರ್ವತ- ಹೀಗೆ ಸರಾಸರಿ ಹದಿನೈದು ಕಿ.ಮೀ. ಅಂತರದಲ್ಲಿರುವ ಕ್ಯಾಂಪುಗಳು ದಿನಕ್ಕೆ ಎಳೆಂಟು ತಾಸು ನಡೆಯುವುದರ ಮೂಲಕ ಕ್ರಮಿಸಬೇಕಾಗುತ್ತದೆ. ಮುಂದಕ್ಕೆ ಹೋದಂತೆ ಹೆಚ್ಚುವ ಎತ್ತರ ಆಮ್ಲಜನಕದ ಕೊರತೆ ಕಾಡುವ ಖಿನ್ನತೆ ಎಂಥವರನ್ನು ಹಣಿದು ಹಾಕುತ್ತಿದ್ದರೆ, ಅನಿರೀಕ್ಷಿತ ಮಳೆ ಮತ್ತು ಹಿಮಪಾತ ಇನ್ನೊಂದು ಸಮಸ್ಯೆ. ಇಲ್ಲಿಂದ ಮುಂದೆ ಡೆತ್‍ವ್ಯಾಲಿ ಎಂದೇ ಕರೆಯುವ ಲಿಫುಲೇಕ್ ಪಾಸ್ ದಾಟ ಬೇಕಾಗುತ್ತದೆ. 14500 ಅಡಿ ಎತ್ತರ ದಾಟುವಾಗ ದೇಹ ಸ್ಥಿಮಿತತೆ ಕಳೆದುಕೊಳ್ಳುವ ಸಾಧ್ಯತೆ ಜಾಸ್ತಿ. ಅಗಾಗ ಒಂದೆರಡು ಜನ ಜೀವ ಬಿಟ್ಟಿರುವ ಉದಾ. ಬೇಕಾದಷ್ಟಿವೆ. ನಾನಿದ್ದ ತಂಡದಲ್ಲೂ ಓಂ ಪರ್ವತ ದಾಟುವ ಮೊದಲೇ ಐವತೈದು ವರ್ಷದ ವ್ಯಕ್ತಿಯೊಬ್ಬರು ಅಸುನೀಗಿದ್ದರು. ಹೀಗಾದಾಗಲಂತೂ ತಂಡ ಕುಸಿದು ಹೋಗುತ್ತವೆ.  ಅಲ್ಲಿಂದ ಮುಂದೆ ಬಾರ್ಡರ್ ಕ್ರಾಸ್ ಮಾಡಿದರೆ ಚೀನಿಯರ ವಶದಲ್ಲಿರುವ ಟಕಲಾಕೋಟ-ಹೊರೆ- ರಾಕ್ಷಸ ಸ್ಥಲ- ಜಡಿ - ಮಾನಸ ಸರೋವರ - ಪರಿಕ್ರಮಕ್ಕಾಗಿ ತಾಲ್ಚೇನ್ ಕ್ಯಾಂಪು – ಕೈಲಾಸ ದರ್ಶನ  ಹೀಗೆ ಮತ್ತೆ ಆರೆಂಟು ದಿನದವರೆಗೆ ನಡೆಯುವ ಯಾತ್ರೆ ಸರಿ ಸುಮಾರು ಇಪ್ಪತ್ತಾರರಿಂದ ಇಪ್ಪತ್ತೆಂಟು ದಿನ ನಡೆಯುತ್ತದೆ. ಕೊನೆಯಲ್ಲಿ ತೀರ ಅಶಕ್ತತೆ, ಖಿನ್ನತೆ ಮತ್ತು ಪರ ದೇಶದ ವಲಯ ನಮ್ಮ ಯಾತ್ರಿಗಳನ್ನು ಇನ್ನಿಲ್ಲದಂತೆ ಘಾಸಿಗೊಳಿಸುತ್ತಲೆ ಇರುತ್ತದೆ. 
ಇದರ ಹೊರತಾಗಿ ನೇರರಸ್ತೆಯ ಸೌಲಭ್ಯದ ನಾಥುಲಾಪಾಸ್ ಮೂಲಕ ಹೊರಾ ವರೆಗೂ ತಲುಪಿ ನಂತರ ನಡೆಯಬಹುದು ಅಥವಾ ನೇಪಾಳದ ಕಟ್ಮಂಡುವಿನ ಮೂಲಕವೂ ಉತ್ತಮ ಸಾರಿಗೆಯಲ್ಲಿ ಕಡೊರಿ ಮಾರ್ಗವಾಗಿ ಸಿಂಕೊಲಾ ಹಳ್ಳಿಗೆ ನೇರವಾಗಿ ತಲುಪಬಹುದಾಗಿದ್ದು, ಅಲ್ಲಿ ಬೋಟಿಕೋಸಿ ನದಿಗೆ ಕಟ್ಟಿರುವ ಫ್ರೆಂಡ್ ಶಿಪ್ ಬ್ರಿಡ್ಜ್ ಮೇಲೆ ಚೀನಿ ವಿದೇಶ ಕಚೇರಿ ತೆರೆದಿದೆ. ಇದು ಚೀನಿ ಅಕ್ರಮಿತ ಟಿಬೆಟ್. ಆರು ತಿಂಗಳು ಮೊದಲೇ ಮುಂಗಡ ಬುಕ್ಕಿಂಗ್ ಹಾಗು ಇತರ ಕಾರ್ಯ ಚಟುವಟಿಕೆ ನಡೆಯುತ್ತದೆ ಯಾವದೇ ದಾರಿಯಾದರೂ.
ಹಿಮಾಲಯ, ಕಾರಕೋರ್‍ಂ ಮತ್ತು ನಾಗಾಪರ್ವತ ಶ್ರೇಣಿಯ ಮಧ್ಯದಲ್ಲಿ ಅಷ್ಟ ದಳಾಕೃತಿಯಲ್ಲಿರುವ ಕೈಲಾಸ-ಮಾನಸ ಸರೋವರ ಭಾರತೀಯರಿಗೆ ಮಾನಸಿಕವಾಗಿ ಮತ್ತು ಜೀವನ ಶೈಲಿಯಲ್ಲೂ ಹಾಸು ಕೊಕ್ಕಾಗಿರುವ ಅತ್ಯಂತ ಪವಿತ್ರ ಕ್ಷೇತ್ರ. ಅಲ್ಲೆ ಕಿರಿಕ್ ಮಾಡುವ ಮೂಲಕ ಒಡಕು ಮೂಡಿಸುವ ಅಂತರಾಷ್ಟ್ರೀಯ ಹುನ್ನಾರ ಇದೀಗ ಬಹಿರಂಗವಾಗಿದೆ. 


No comments:

Post a Comment