ಆವತ್ತು ಸುದ್ದಿ
ತಿಳಿಯುತ್ತಿದಂತೆ ಕೂಡಲೇ ರಥವನ್ನೇರಿ ದುಶ್ಯಾಸನ, ಶಕುನಿಯರೊಡಗೂಡಿ ದುರ್ಯೋಧನ
ಕಾಡಿನತ್ತ ಧಾವಿಸಿದ್ದ. ಅಲ್ಲಿದ್ದ ಅವನು. ನಿಶಾದರಾಜನ ಏಕಮಾತ್ರ ಪುತ್ರ ಏಕಲವ್ಯ. ಅವನ ಮುಖದಲ್ಲಿ
ಅದೇ ದಿವ್ಯ ಕಳೆ. ಅದೇ ಕಡು ಹುಂಬತನ ಮತ್ತು ಅದೇ ಆತ್ಮೀಯ ಸ್ನೇಹಿಮನಸ್ಸು.
"...ರಾಜಕುಮಾರ ನಮಸ್ಕಾರ. ಕರೆ ಕಳುಹಿಸಿದ್ದರೆ ನಾನೇ ಬರುತ್ತಿದ್ದೆನಲ್ಲ...? ಯಾವ ಸೇವೆಯಾಗಬೇಕಿತ್ತು ಕುರು ರಾಜೇಂದ್ರ. ನೀವು ಇಲ್ಲಿ ಈ ಕಾಡಿನವರೆಗೇಕೆ ಪಾದ ಬೆಳೆಸಿದಿರಿ."
ಎಂದ. ಏನೂ ಆಗೇ ಇಲ್ಲವೆನ್ನುವಂತೆ ಎದುರುಗೊಂಡ ಬೇಡರ ಕುವರ ಕೈಮುಗಿದು ನಿಲ್ಲುತ್ತಿದ್ದರೆ ಎದುರಿಗೆ
ಬಲಗೈ ಬೆರಳು ಬಿಗಿದು ಕಟ್ಟಿದ್ದು ಎದ್ದು ಕಾಣಿಸುತ್ತಿತ್ತು. ಅಲ್ಲಿಗೆ ತನಗೆ ಬಂದ ಸುದ್ದಿ ನಿಜ. ದ್ರೋಣ
ದ್ರೋಹ ಬಗೆದುಬಿಟ್ಟಿದ್ದಾರೆ ಅವನ ವಿದ್ಯೆಗೆ. ಬಲಗೈ ಹೆಬ್ಬೆರಳು ಇನ್ನು ಶಾಶ್ವತವಾಗಿ ಮುಗಿದು ಹೋಯಿತು
ಎನ್ನುವಂತೆ ರಕ್ತದ ಕಲೆಗಳಿದ್ದ ಬಟ್ಟೆ ಬಿಗಿಯಲಾಗಿತ್ತು. ಮತ್ತೆ ದುರ್ಯೋಧನನಿಗೆ ವಿವರಿಸುವುದು ಬೇಕಿರಲಿಲ್ಲ.
ಅವನಿಗೆ ಏನಾಗಿರಬಹುದೆಂದು ಅಂದಾಜು ದೊರಕಿಹೋಗಿತ್ತು. ನಡೆದ ಚಿತ್ರ ಕಣ್ಮುಂದೆ ಕದಲುತ್ತಿತ್ತು.
ಏಕಾಗ್ರತೆಯಿಂದ ಯಾವುದೇ
ವಿದ್ಯೆಯಾದರೂ ಸುಲಭಕ್ಕೆ ಒಲಿಯುತ್ತದೆ. ದ್ರೋಣರನ್ನು ಗುರುಗಳಾಗಿ ಸ್ವೀಕರಿಸಿದ್ದ ಏಕಲವ್ಯ ಆವರ ಮಣ್ಣಿನ
ಮೂರ್ತಿಯೆದುರು ಒಂದೇ ಸಮನೆ ಶರ ಸಂಧಾನ ನಡೆಸಿ, ಇನ್ನೂ ಅರ್ಜುನ ಪಕ್ವವಾಗಿಲ್ಲದ ಶಬ್ದವೇದಿಯಂತಹ
ವಿದ್ಯೆಯ ಮೇಲೂ ಅವನು ಹಿಡಿತ ಸಾಧಿಸಿಬಿಟ್ಟಿದ್ದ. ಅದೇ ಅರ್ಜುನನ ಸಮಸ್ಯೆಗೆ ಕಾರಣವಾಗಿತ್ತು. ಅರ್ಜುನ
ಆ ವಿದ್ಯೆಯನ್ನು ಇನ್ನೂ ಅಷ್ಟಾಗಿ ಕಲಿತಿರಲಿಲ್ಲ. ಅದಕ್ಕಿಂತಲೂ ಮ೦ತ್ರ ಶಕ್ತಿಯ ಮುಕ್ತಾ ಆಮುಕ್ತಗಳ
ಅಭ್ಯಾಸದಲ್ಲಿ ನಿರತನಾಗಿದ್ದರಿಂದ ಇತ್ತ ಗಮನ ಹರಿಸಿರಲಿಲ್ಲ. ಆದ್ದರಿಂದಲೇ ಅದಾವುದರ ಲಭ್ಯತೆ ಇಲ್ಲದ
ಏಕಲವ್ಯ ಇದನ್ನು ಸಾಧಿಸಿದ್ದ. ಕಾರಣ ಮುಕ್ತಾ ಆಮುಕ್ತಗಳ ಸಾಧನೆಗೆ ಗುರುಮಂತ್ರದ ಬೆಂಬಲ ಬೇಕು. ಇದಕ್ಕೆ
ಏಕಾಗ್ರತೆಯ ಅಭ್ಯಾಸ ಸಾಕು. ಆ ದಿನ ಅವನ ಶರವಿದ್ಯೆ ನೋಡಿದ ಅರ್ಜುನ ಕೂಡಲೇ ಆಚಾರ್ಯ ದ್ರೋಣರ ಬಳಿಗೆ
ಹೋಗಿ ಅಲವತ್ತುಕೊಂಡಿದ್ದಾನೆ.
" ಗುರುವರ್ಯ.
ಇದೇನಿದು ನೀವು ನನ್ನನ್ನು ಜಗತ್ತಿನಲ್ಲೇ ಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡುತ್ತೇನೆಂದು ಮಾತು ಕೊಟ್ಟಿದ್ದೀರಿ.
ಈಗ ನೋಡಿದರೆ ಆ ಬೇಡರ ಹುಡುಗ ಅತಿಮಾನುಷವಾದ ಶರ ಸಂಧಾನವನ್ನು ಸಾಧಿಸುತ್ತಿದ್ದಾನೆ." ಎಂದು ಬಿಟ್ಟಿದ್ದ.
ಕೂಡಲೇ ಶಬ್ದವೇದಿ ಮತ್ತು ಇರುಳ ಸಂಧಾನಗಳನ್ನು ಸರ್ವ ರೀತಿಯಲ್ಲೂ ಕಲಿಸುವುದಾಗಿ ಅರ್ಜುನನಿಗೆ ತಿಳಿಸಿ
ಅವನೊಡನೆ ಕಾಡಿಗೆ ಬಂದಿದ್ದಾರೆ. ವಿದ್ಯಾಭ್ಯಾಸ ಮಾಡುತ್ತಿದ್ದ ಏಕಲವ್ಯನ ಬಳಿ ಸಾರಿ ಗುರುವೆಂದು ಒಪ್ಪಿಕೊಂಡ
ತನಗೆ ಗುರುದಕ್ಷಿಣೆಯಾಗಿ ಅವನ ಹೆಬ್ಬೆರಳನ್ನೆ ಬೇಡಿದ್ದಾರೆ. ಅಲ್ಲಿಗೆ ಅವನ ವಿದ್ಯೇ ನಿಂತುಹೋಗುತ್ತದೆ.
ಅರ್ಜುನ ಮುಂದೊಮ್ಮೆ
ಶಸ್ತ್ರ ಸಂಧಾನದಲ್ಲಿ ಜಗದ್ವಿಖ್ಯಾತನಾದ ಮೇಲೂ ಹೀಗೆ ಬಿಲ್ವಿದ್ಯೆಯಲ್ಲಿ ಅವನನ್ನು ಎದುರಿಸುವವರಾರೂ
ಇರುವುದಿಲ್ಲ. ಅಷ್ಟೆ.. ಏಕಲವ್ಯನ ಅತೀವ ಗುರುಭಕ್ತಿ, ಪರವಶತೆಯ ಉನ್ಮಾದದಲ್ಲಿ ಹಿಂದೆ
ಮುಂದೆ ಯೋಚಿಸದೆ ಹೆಬ್ಬರಳನ್ನು ನೀಡುವಂತೆ ಮಾಡಿವೆ. ಅರ್ಜುನ ಸಂಪ್ರೀತನಾದರೆ ದ್ರೋಣ ಹಸ್ತಿನಾವತಿಯ
ಪಿತಾಮಹ ಭೀಷ್ಮನಿಗೆ ಮತ್ತು ಅರ್ಜುನನಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಹೆಮ್ಮೆಯಲ್ಲಿ ಹಿಂದಿರುಗಿದ್ದಾರೆ.
ಕೂಡಲೇ ದ್ರೋಣರ ಬಳಿ ಸಾರಿದ ದುರ್ಯೋಧನ ಅವರೊಡನೆ ಮಾತಿಗಿಳಿದ. ಅವನು ಬಂದ ರಭಸದಿಂದಲೇ ದ್ರೋಣರು ಊಹಿಸಿದ್ದರು
ಇಂಥದ್ದೇನಾದರೂ ನಡೆದಿರಬಹುದೆಂದು.
" ಗುರುವರ್ಯ.
ನೀವು ಪಿತಾಮಹರಂತೆ ಸರ್ವಶಾಸ್ತ್ರ ಕೋವಿದರು. ಮಿಗಿಲಾಗಿ ಶಸ್ತ್ರಾಸ್ತ್ರಗಳಿಗಿಂತಲೂ ಉತ್ತಮ ಜ್ಞಾನ
ನೀಡುವ ಸಜ್ಜನರು. ಸಾಮಾನ್ಯ ಕ್ಷತ್ರೀಯನಿಗೂ ನಿಮಗೂ ಇರುವ ದೊಡ್ಡ ವ್ಯತ್ಯಾಸವೆಂದರೆ ಅದೇನೆ. ನೀವಾಗಿ
ಇಂಥ ಅಮಾನವೀಯ ಕೆಲಸ ಮಾಡಬಹುದಿತ್ತೆ..? ಅಷ್ಟಕ್ಕೂ ಒಬ್ಬ ಬೇಡರ ಹುಡುಗ ತನ್ನಷ್ಟಕ್ಕೆ
ತಾನು ವಿದ್ಯೆಯನ್ನು ಕಲಿತಿದ್ದರೆ ಅದ್ಯಾವ ರಾಜ್ಯ ಕೊಳ್ಳೆ ಹೋಗುತ್ತಿತ್ತು..? ಅವನಂಥ ನೂರಾರು ಯೋಧರು ಈ ರಾಜ್ಯಕ್ಕೆ ಬೇಕು ಎಂಬುದು ನಿಮಗೂ ಗೊತ್ತಿರುವಂತಹದ್ದೇ. ಸರ್ವ
ಕಾಲಕ್ಕೂ ನಾವೇ ಕುರುವಂಶಜರು ಅಥವಾ ಹಸ್ತಿನಾವತಿಗೆ ನಿಷ್ಠೆಯಾಗಿ ನಿಂತಿರುವ ನಿಮ್ಮಂತವರು ಮಾತ್ರವೇ
ಈ ಹಸ್ತಿನಾವತಿಯನ್ನು ರಕ್ಷಿಸುತ್ತೇವೆ ಎನ್ನುವುದು ಸುಳ್ಳು ಗುರುವರ್ಯಾ.
ಕಾಲಾನಂತರದಲ್ಲಿ
ಈ ಅರಮನೆಯ ಅನ್ನದ ಋಣದಲ್ಲಿರುವ ವಂಶಗಳು ಮಾತ್ರವೇ ಈ ಸಿಂಹಾಸನಕ್ಕೆ ನಿಷ್ಠೆಯನ್ನು ಸಲ್ಲಿಸುತ್ತವೆ.
ಅಂಥವರಲ್ಲಿ ಹಿರಣ್ಯಧನುಷ ಮತ್ತವನ ಮಗ ಕೂಡಾ. ಅವನನ್ನು ನೀವು ಜೀವನ ಪರ್ಯಂತ ಅಂಗವಿಕಲನನ್ನಾಗಿಸಿ ವಿದ್ಯೆ
ಕಲಿಯದಂತೆ ಮಾಡಿ ನಿಲ್ಲಿಸಿದ್ದೀರಲ್ಲ ಅವನ್ಯಾವ ಮನಸ್ಸಿನಿಂದ ಈ ಅರಮನೆಯ ಋಣಕ್ಕೆ ಬಿದ್ದಾನು. ಅಷ್ಟಕ್ಕೂ
ತೀರ ಕುಲ ಗುರುವಾದ ನಿಮಗೆ ಇಷ್ಟು ಕೀಳು ಮಟ್ಟದ ಕೃತ್ಯ ಸಮ್ಮತವೆನ್ನಿಸಿದ್ದು ಯಾವ ರೀತಿಯಲ್ಲೂ ಯಥೋಚಿತವೆನ್ನಿಸುತ್ತಿಲ್ಲ
ನನಗೆ ಛೇ.." ಎಂದು ಕುಸಿದು ಕುಳಿತ.
ಆ ಕ್ಷಣಕ್ಕೆ ಅವನ
ನೋವಿಗೆ ದ್ರೋಣಾಚಾರ್ಯರು ಯಾವುದೇ ಉತ್ತರ ನೀಡಿದರೂ ಅದು ಕ್ಷಮ್ಯವಾಗುತ್ತಿರಲಿಲ್ಲ. ಅದವರಿಗೆ ಗೊತ್ತಿತ್ತು
ಕೂಡಾ. ಕಾರಣ ಎಂತಹದ್ದೇ ಸಮಜಾಯಿಸಿ ಕೊಟ್ಟರೂ ಏಕಲವ್ಯವನ್ನು ಶಾಶ್ವತ ಅಂಗಹೀನನನ್ನಾಗಿಸಿದ್ದು ಸಮರ್ಥಿಸಿಕೊಳ್ಳುವಂತಹ
ವಿಷಯವಾಗಿರಲೇ ಇಲ್ಲ. ಆದರೆ ಅರಮನೆಯ ಅನ್ನದ ಋಣ, ಮಾತಿನ ಋಣ ಕ್ಷಣಕಾಲ ಅವರನ್ನು
ಆವರಿಸಿದ್ದು ಆ ಘಟನೆ ನಡೆದುಹೋಗಿತ್ತು. ಅದಕ್ಕೂ ಮೊದಲು ಅರ್ಜುನ ಮತ್ತು ಇತರರು ಅವರನ್ನು ಕೊಂಚ ಪ್ರಭಾವಿಸಿದ್ದೂ
ಸುಳ್ಳಲ್ಲ. ಕೊಟ್ಟ ಮಾತಿಗೆ ಬಿದ್ದು ಭೀಷ್ಮನೊಡನೆ ಆಡಿದ ಮಾತಿಗೆ ಬದ್ಧರಾಗಿದ್ದ ಗುರುವಾಗಿ ಮಾತ್ರ
ಯೋಚಿಸಿದ್ದರು ಅವರು. ಮಾತಿನ ಭರಕ್ಕೆ ಮಾನವೀಯತೆ ಸತ್ತುಬಿದ್ದಿತ್ತು ಅವರೆದುರಿಗೆ ಅನಾಥ ಶವದಂತೆ.
" ದುರ್ಯೋಧನಾ.
ನಿನ್ನ ಮನಸ್ಥಿತಿ ನನಗರಿವಾಗುತ್ತಿದೆ. ಆದರೆ ನಾನು ಪಿತಾಮಹರಿಗೂ, ಅರ್ಜುನನಿಗೂ
ಮಾತು ಕೊಟ್ಟಿದ್ದೆ. ಈ ಜಗತ್ತಿನಲ್ಲಿ ಅದ್ವಿತೀಯ ಬಿಲ್ಲುಗಾರರನ್ನು ಯುದ್ಧ ಪ್ರವೀಣರನ್ನು ಹಸ್ತಿನವಾತಿಯ
ರಾಜಕುಮಾರರಲ್ಲಿ ತಯಾರಿಸುತ್ತೇನೆ ಎಂದು. ಅದರಲ್ಲೂ ಅರ್ಜುನನಿಗೆ ಬಿಲ್ವಿದ್ಯೆಯಲ್ಲಿರುವ ಆಸಕ್ತಿ ಮತ್ತು
ಏಕಾಗ್ರತೆ ಸಧ್ಯ ಬೇರಾರಲ್ಲೂ ಕಂಡು ಬರುತ್ತಿಲ್ಲ. ಗದೆಯಲ್ಲಿರುವ ನಿನಗಿರುವ ಪ್ರಾವೀಣ್ಯತೆ ಅರ್ಜುನನಿಗೆ
ಬಿಲ್ವಿದ್ಯೆಯಲ್ಲಿ ಸಾಧಿಸುತ್ತಿದೆ. ಇನ್ನೂ ಸಾಧನೆಯಾಗಬೇಕಷ್ಟೆ. ಬಹುಶ: ನನ್ನ ಶಿಷ್ಯ ಕೋಟಿಯಲ್ಲಿ
ಅವನೊಬ್ಬನೆ ಅಂಥ ಸಾಮರ್ಥ್ಯವುಳ್ಳವನು. ಆದರೆ ನೀನು ಊಹಿಸುತ್ತಿರುವಂತೆ ಮುಂದೊಮ್ಮೆ ಅರ್ಜುನನಿಗೆ ಎದುರಾಳಿ
ಇರಲಿ ಎಂದಾಗಿದ್ದರೆ ಅದು ಎಂದಿದ್ದರೂ ಕುರುವಂಶಕ್ಕೂ ಆಪತ್ತೇ ಆಗುವಂಥದಲ್ಲವೇ..?" ಮಾತನ್ನು ಮೂಲದೆಡೆಗೇ ತಿರುಗಿಸಲೆತ್ನಿಸಿದ್ದರು ದ್ರೋಣಾಚಾರ್ಯ. ಹಾಗೆ ಹೇಳುವ ಮೂಲಕ ತನ್ನ
ಕಾರ್ಯವನ್ನು ಸಮರ್ಥಿಕೊಂಡಂತೆಯೂ ಆಗುತ್ತದೆ. ಇತ್ತ ಏಕಲವ್ಯನ ಬೆರಳು ಕತ್ತರಿಸಿದ ಘಾತುಕತನ ತಮ್ಮ ಆತ್ಮವನ್ನೂ
ಸುಡದಂತಿರುತ್ತದೆ. ಹಾಗಾಗಿ ನೀನೆ ಅರ್ಜುನನ ಪ್ರತಿಸ್ಪರ್ಧಿ ಎನ್ನುವ ಮಾತಿನ ಮೂಲಕ ದುರ್ಯೋಧನನ್ನು
ಸುಮ್ಮನಿರಿಸಲು ಪ್ರಯತ್ನಿಸಿದರು. ಎದುರಿಗಿದ್ದ ದುರ್ಯೊಧನನಿಗೆ ಗುರುಗಳ ಒಳಾರ್ಥ ಅರಿವಾಗದಿರಲಿಲ್ಲ.
ಆದರೂ ಸಾವರಿಸಿಕೊಂಡು,
" ಅದನ್ನು
ನಾನೂ ಒಪ್ಪುತ್ತೇನೆ ಗುರುವರ್ಯಾ. ಅದರೆ ಅವನ ವಿರುದ್ಧ ನಿಲ್ಲಲೇಬಾರದು.. "
" ದುರ್ಯೋಧನಾ
ಮಾತಿಗಿದು ಸಮಯವಲ್ಲ. ನಿನ್ನ ದೂರಾಲೋಚನೆಗಳನ್ನು ನಾ ಬಲ್ಲೆ. ಅದಕ್ಕಾಗಿ ನೀನು ಪರಿತಪಿಸುತ್ತಿದ್ದಿ
ಅಂತಾದರೆ ಯೋಚಿಸಬೇಕಿಲ್ಲ... " ಎಂದಿನ್ನೇನು ಹೇಳುತ್ತಿದ್ದರೋ ದುರ್ಯೋಧನ ಸಿಡಿದು ನುಡಿದ.
" ಗುರುವರ್ಯ
ಒಬ್ಬ ರಾಜಕುಮಾರನಾಗಿ ಹಸ್ತಿನಾವತಿಯ ಕುರುವಂಶಜನಾಗಿ ನಾನು ಅವನ ಬಗ್ಗೆ ಅಭಿಮಾನವಿಟ್ಟು, ನನ್ನ ರಾಜ್ಯದ ಪ್ರಜೆಯೊಬ್ಬನ ಪರ ವಹಿಸಿದ್ದೇನೆಯೇ ಹೊರತಾಗಿ ನೀವು ಯೋಚಿಸುತ್ತಿರುವಂತೆ ನನ್ನಲ್ಲಿ
ಯಾವುದೇ ದೂರಾಲೋಚನೆಗಾಗಲಿ, ದುರಾಲೋಚನೆಗಾಗಲಿ ಇರಲೇ ಇಲ್ಲ ಈಗಲೂ ಇಲ್ಲ.
ಈ ದಾಯಾದಿಗಳು ಎಂಬ ಭಾವನೆಯನ್ನು ಕೇವಲ ನಿಮ್ಮಂಥವರು ಈ ಅರಮನೆಯಲ್ಲಿ ಹುಟ್ಟು ಹಾಕುತ್ತಿದ್ದೀರಿ ವಿನ:
ನಾನಲ್ಲ. ನನಗೂ ಭೀಮನಿಗೂ ಕಲಿಕೆಯಲ್ಲಿ ಬಲದಲ್ಲಿ, ತಂತ್ರದಲ್ಲಿ ಜಿದ್ದಾಜಿದ್ದು
ಇದ್ದಿರಬಹುದೇ ವಿನ: ಅದರರ್ಥ ನಾವು ಶತ್ರುಗಳೆಂದು ನಾನಿದುವರೆಗೂ ಎಣಿಸಿದ್ದೇ ಇಲ್ಲ. ಕೇವಲ ನಿಮ್ಮ೦ಥ
ಇತರೆ ಜನರೇ ಎಲ್ಲೆಲ್ಲೂ ನಮ್ಮ ಮಧ್ಯೆ ಭೇದ ಎಣಿಸುತ್ತಲೇ ಇದ್ದೀರಿ. ಹಾಗೇನಾದರೂ ಅನ್ನಿಸಿದ್ದಲ್ಲಿ,
ನಾನು ಪ್ರತಿಸ್ಪರ್ಧಿ ಎಂದು ಭಾವಿಸಿ ಅವನೊಡನೆ ಅನುಚಿತವಾಗಿ ನಡೆದುಕೊಂಡ ಒಂದೇ ಒಂದು
ಉದಾಹರಣೆಗಳಿದ್ದರೆ ವಿವರಿಸಿ ನೋಡೊಣ. ಇಲ್ಲಿವರೆಗೂ ಕೌರವ ಸಹೋದರ ಅನುಚಿತ ನಡೆಗಳಿದ್ದರೆ ಬೆರಳೆತ್ತಿ
ತೋರಿಸಿ ನೋಡೋಣ.
ಕ್ಷತ್ರೀಯನಾದವನಿಗೆ, ಸಬಲನಿಗೆ,
ದೂರಾಲೋಚನೆ ಇರುವ ರಾಜಕುಮಾರರಿಗೆ ಸೇರಿದಂತೆ ಎಲ್ಲರಲ್ಲೂ ರಾಜನಾಗುವ ಮತ್ತು ರಾಜ್ಯ
ಪರಿಪಾಲಿಸುವ ಆಸೆ ಸಹಜವಾಗೇ ಇರುತ್ತದೆ. ಅದರಿಂದ ನಾನೂ ಹೊರತಲ್ಲ. ಹಾಗಂದು ಅದಕ್ಕಾಗಿ ನನ್ನ ದಾಯಾದಿ
ಸಹೋದರರಿಂದಲೇ ವೈರತ್ವವನ್ನು ಎದುರು ಹಾಕಿಕೊಳ್ಳುವ ಜಾಯಮಾನವೂ ನನ್ನದಲ್ಲ. ನನ್ನದೇನಿದ್ದರೂ ನೇರಾನೇರ
ನಡೆ. ಅಕಸ್ಮಾತ ಏಕಲವ್ಯನಂಥವನು ಈಗ ಬೆಳೆದೂ ಮುಂದೆ ಹಸ್ತಿನಾವತಿಗೆ ತಿರುಗಿ ಬಿದ್ದಿದ್ದರೆ ಅವನನ್ನು
ನಿವಾರಿಸಿಕೊಳ್ಳುವುದು ಎಷ್ಟರ ಮಾತಾಗಿತ್ತು. ನಾನೊಬ್ಬನೆ ಸಾಕು ಎಂಥಾ ಸೈನ್ಯವನ್ನೂ ಬಡಿದು ಬಿಸಾಡಲು
ಎಂದು ನಿಮಗೂ ಗೊತ್ತಿಲ್ಲದ್ದೇನಲ್ಲವಲ್ಲ.
ಅದರಲ್ಲೂ ನೀವು, ಪಿತಾಮಹ
ಇಬ್ಬರೂ ಈ ಸಿ೦ಹಾಸನ ರಕ್ಷಣೆಗೆ ವಚನ ಬದ್ಧರೂ, ಸಾವನ್ನು ಜಯಿಸಿದವರೂ,
ರಣರಂಗದಲ್ಲಿ ಅತಿರಥಿಗಳೂ, ಸೋಲನ್ನು ಮೀರಿದವರೂ ಆಗಿರುವಾಗ
ನಾನ್ಯಾಕೆ ಹಾಗೆ ಯೋಚಿಸುತ್ತೇನೆ ಗುರುವರ್ಯಾ. ಹಾಗೆ ನೋಡಿದರೆ ಈವರೆಗೂ ನನಗೆ ಸಿಂಹಾಸನದ ಚಿಂತೆ ಬಂದೇ
ಇಲ್ಲ. ಕೇವಲ ಅದ್ಭುತ ಮೇಧಾವಿಯೊಬ್ಬನ ಬದುಕು ಹಾಳು ಮಾಡಿದ ಬಗ್ಗೆ ಖೇದವಿದೆ. ಅದರಲ್ಲೂ ನಿಮ್ಮಂಥ ಎಲ್ಲಾ
ತಿಳಿದವರಿಂದ, ನನಗೇ ಇಲ್ಲದ ದೂರಾಲೋಚನೆ, ದುರಾಲೋಚನೆ
ನಿಮಗೆಲ್ಲರಿಗೂ ಇದ್ದುದು ಅಚ್ಚರಿ ಮೂಡಿಸುತ್ತಿದೆ. ಅಂತಹ ನಿಮ್ಮ ಆಲೋಚನೆಗಳು, ನಿಮ್ಮ ಗುರುಪರಂಪರೆಗಿಂತಲೂ ಮಿಗಿಲಾಗಿ ಪಾಂಡವರ ಅಥವಾ ಅರ್ಜುನ ಪಕ್ಷಪಾತಿಯಾಗಿದ್ದರೂ ನನಗೆ
ಬೇಜಾರಿಲ್ಲ.
ಕಾರಣ ನೀವು ಒಬ್ಬ
ಏಕಲವ್ಯನನ್ನು ಅಂಗಹೀನನನ್ನಾಗಿಸುವುದರ ಮೂಲಕ ಅರ್ಜುನನಿಗೊಬ್ಬ ಪ್ರತಿಸ್ಪರ್ಧಿಯನ್ನು ತಪ್ಪಿಸಿದ್ದರೂ
ಈ ಭೂಮಂಡಲದಲ್ಲಿ ಇನ್ನೆಲ್ಲೋ ಇನ್ನೊಬ್ಬ ವೀರ ಈಗಾಗಲೇ ಬೆಳೆಯುತ್ತಿದ್ದಿರಬಹುದು. ಯಾರಿಗೆ ಗೊತ್ತು.
ನಾಳೆಯನ್ನು ಯಾರೂ ಬಲ್ಲವರಿಲ್ಲ. ಯೋಜನೆಗಳಷ್ಟೆ ನಮ್ಮವು. ಆದ್ದರಿಂದಲೇ ನಾನು ಯಾವತ್ತೂ ನನ್ನನ್ನು
ನಂಬಿದವರಿಗೋಸ್ಕರ,
ನನ್ನ ಮೇಲೆ ಭರವಸೆಗಳನ್ನಿಟ್ಟವರಿಗೋಸ್ಕರ ಎಲ್ಲಾ ಕಾರ್ಯವನ್ನು ಯೋಜಿಸುತ್ತೇನೆ ವಿನ:
ಅದರಲ್ಲಿ ಯಾವಾಗಲೂ ನನ್ನ ದುರಾಲೋಚನೆಗಳು ಇರುವುದಿಲ್ಲ. ಅಷ್ಟಕ್ಕೂ ಈಗಾಗಲೇ ಅರ್ಜುನನಿಗೊಬ್ಬ ಸ್ಪರ್ಧಿ
ಬೇರೆಲ್ಲಾದರೂ ಅಭ್ಯಸಿಸುತ್ತಾ ಇಲ್ಲವೆಂದು ಅದ್ಹೇಗೆ ನೀವು ವಿಶ್ವಾಸಿಸುತ್ತೀರಿ ಗುರುವರ್ಯ..?
ಹಾಗೆಂದು ನೀವು ಮಾತುಕೊಟ್ಟಿದ್ದೇನೋ
ಸರಿ. ಆದರೆ ಭೂಮಂಡಲವನ್ನೆಲ್ಲಾ ತಡಕಾಡಿ ಧನುರ್ಧಾರಿಗಳನ್ನೆಲ್ಲಾ ಬಡಿಬಡಿದು ಅರ್ಜುನನನ್ನು ರೂಪಿಸಲಿಕ್ಕಾದೀತೆ..? ಅದರ ಬದಲಾಗಿ
ಎಂಥವನೇ ಅತಿರಥ ಬಂದರೂ ಗೆಲ್ಲಬಲ್ಲ ಶಿಷ್ಯನನ್ನು ರೂಪಿಸಿ ಆಗ ನಿಮ್ಮ ಗುರುವಿದ್ಯೆಗೊಂದು ಮಹತ್ವ ಗುರುವರ್ಯಾ.
ಗದೆಯಲ್ಲಿ ಸರ್ವ ಶ್ರೇಷ್ಠನಾಗುವವನು ಎಂಥವನನ್ನೂ ಬಡಿದು ಬಿಸಾಡಬಲ್ಲವನು ಮಾತ್ರ. ಹೊರತು ಅದ್ವಿತೀಯನೆಂದು
ಎಲ್ಲರನ್ನೂ ಕೊಂದು ಶ್ರೇಯಸ್ಸು ಗಳಿಸುವವನಲ್ಲ. ಇಲ್ಲದಿದ್ದರೆ ಹೀಗೆ ಕಂಡವರನ್ನೆಲ್ಲಾ ಬಲಿಕೊಡುತ್ತಾ
ಶಿಷ್ಯರನ್ನು ರೂಪಿಸುತ್ತೀರಂತಾದರೆ ಅದ್ಯಾವ ರೀತಿಯಲ್ಲೂ ಸಮರ್ಥನೆ ಸಿಕ್ಕುವುದಿಲ್ಲ ಮತ್ತದು ಮಾನವೀಯವೂ
ಅಲ್ಲ.
ಈ ಘಟನೆಯಿಂದ ಇತಿಹಾಸ
ಏಕಲವ್ಯನನ್ನೇ ಉತ್ತಮನನ್ನಾಗಿ ಗುರುತಿಸುತ್ತದೆಯೇ ವಿನ: ದ್ರೋಣಾಚಾರ್ಯರು ಅವನ ಗುರುವಾಗಿದ್ದರು ಎಂದು
ನಿಮ್ಮ ಮೂಲಕ ಯಾವತ್ತೂ ಔನತ್ಯಕ್ಕಿಡಾಗುವುದಿಲ್ಲ. ಯಾರೊಬ್ಬನನ್ನೂ ಹೀಗೆ ತಯಾರು ಮಾಡುತ್ತೇನೆನ್ನುವುದು
ನಿಮ್ಮ ಅಪಾರ ಶಕ್ತಿಯ ಸಂಕೇತ ನಿಜವೇ. ಆದರೆ ಅದನ್ನು ಸಾಧಿಸುವ ಬಲದಲ್ಲಿ ಇನ್ನೊಬ್ಬನನ್ನು ತುಳಿಯುವುದಾದರೆ
ನಿಮ್ಮ ಬಲಕ್ಕೆ ಅದು ಕಪ್ಪು ಚುಕ್ಕೆಯೇ ಆಚಾರ್ಯ. ಯಾರನ್ನೋ ಹೀಗೆಯೇ ಆಗಬೇಕೆಂದು ನಿರ್ದೇಶಿಸಲು ನಾವ್ಯಾರು..? ಅದನ್ನೆಲ್ಲಾ
ನೋಡಿಕೊಳ್ಳುವ ಆ ದೇವರು ಇದನ್ನು ನಿರ್ವಹಿಸುತ್ತಾನೆ. ನಾಳಿನ ಬಗ್ಗೆ ಅತೀವ ಚಿಂತೆಗಳಿರುವವ ಮಾತ್ರ
ಹೀಗೆ ತೀರ ಸಂಕೀರ್ಣ ಮನಸ್ಸಿನಿಂದ ಯೋಚಿಸುತ್ತಾನೆ ಅದಕ್ಕೆ ಏಕಲವ್ಯನಂಥವರು ಬಲಿಯಾಗುತ್ತಾರೆ ಅಷ್ಟೆ.
ಆದರೆ ಹೀಗೆ ಬಲಿಯಾದ ಮುಗ್ಧತೆಯ ಜೊತೆಗೆ ಅವನ ಗುರುಭಕ್ತಿಯ ಬಗ್ಗೆ ನನಗೆ ಹೆಮ್ಮೆ ಇದ್ದರೆ ನಿಮ್ಮ ಸಣ್ಣತನ
ನನ್ನನ್ನು ಅಸಹ್ಯಕ್ಕಿಡುಮಾಡುತ್ತಿದೆ ಕ್ಷಮಿಸಿ..." ಎಂದು ಮುಂದೆ ಮಾತಾಡಲಾರದೆ ಎದ್ದು ಬಂದಿದ್ದ.
ಆದರೆ ಅವನ ಮಾತಿನ
ಊಹೆ ಸರಿಯಾಗೇ ಇತ್ತು. ಭೂ ಮಂಡಲದ ಇನ್ನೊಂದು ತುದಿಯಲ್ಲಿ ಮಹೇ೦ದ್ರ ಪರ್ವತದಲ್ಲಿ ಪರುಶುರಾಮರಲ್ಲಿ
ಅವನೊಬ್ಬ ಬಿಲ್ವಿದ್ದೆ ಕಲಿಯಲು ನಿಂತು ಬಿಟ್ಟಿದ್ದ. ಏಕಲವ್ಯನಿಗಿಂತಲೂ ವೇಗವಾಗಿ ಅವನು ಸಿದ್ಧಿಯನ್ನು
ಸಾಧಿಸುತ್ತಲಿದ್ದ. ಹಗಲು ರಾತ್ರಿ ಶರ ಸಂಧಾನ ಮಾಡುತ್ತಾ ತಾನೂ ಬ್ರಾಹ್ಮಣ ಎಂದು ಸುಳ್ಳು ಹೇಳಿ ಶತಾಯು
ಗತಾಯು ಬಿಲ್ವಿದ್ಯೆಯ ರಹಸ್ಯಕ್ಕಾಗಿ ಹಗಲಿರುಳು ಶರಸಂಧಾನ ಮಾಡುತ್ತಾ, ಮುಕ್ತಾ
ಆಮುಕ್ತಗಳನ್ನು ಸಾಧಿಸುತ್ತಾ ನಿಂತು ಬಿಟ್ಟಿದ್ದ. ಅವನನ್ನು ಮುಂದೆ ಅದಿರಥನ ಸಾಕು ಮಗ " ಕರ್ಣ
" ಎಂದು ಇತಿಹಾಸ ಗುರುತಿಸಿತು. ಅಸಲಿಗೆ ಅವನು ಮದುವೆಯ ಮುಂಚೆ ಕುಂತಿಯ ಸೂರ್ಯನೆಂಬ ಮತಸ್ಥ ಪುರುಷನೊಬ್ಬನೊಂದಿಗೆ
ವಯೋಸಹಜ ಕುತೂಹಲಾಪೇಕ್ಷೆಯಿಂದ, ಆತುರತೆಯಿಂದ ನಡೆಸಿದ, ಸಮಾಗಮದ ಪರಿಣಾಮ ಗರ್ಭಿಣಿಯಾಗಿಬಿಟ್ಟಿದ್ದಳು.
ಆದರೆ ಅರಮನೆಯ ಮರ್ಯಾದೆಯ
ಪ್ರಶ್ನೆಯಾಗಿ ಬಂದಾಗ ಅರಣ್ಯ ವಾಸ ಮತ್ತು ವನ ಸಂಚಾರದ ನೆಪದಲ್ಲಿ ಕಾಡಿನಲ್ಲಿ ಕೊನೆಯ ನಾಲ್ಕೈದು ಮಾಸಗಳನ್ನು
ಕಳೆದು ಪರಿಹಾರ ಕಂಡುಕೊಂಡಿದ್ದಳು. ಅದರಂತೆ ಬಸಿರು ಕಳೆಯುತ್ತಿದ್ದಂತೆ ಹುಟ್ಟಿದ ಮಗುವನ್ನು ಒಂದಿಷ್ಟು
ನಗ ನಾಣ್ಯಗಳೊಂದಿಗೆ ಸುರಕ್ಷಿತವಾಗಿ ತೇಲುವ ಬುಟ್ಟಿಯಲ್ಲಿಟ್ಟು ನದಿಗೆಸೆದು ಬಂದಿದ್ದಳು ಕುಂತಿ ಪರಿಚಾರಿಕೆಯ
ಸಹಾಯದೊಂದಿಗೆ. ನದಿಯ ಪಾಲು ಮಾಡಿದ ಆ ಮಗು ಅದಿರಥನೆಂಬ ಸಾರಥಿಯ ಕೈಗೆ ಸಿಕ್ಕು ಅವನ ಸಾಕು ಮಗನಾಗಿ
ಬೆಳೆದಿದ್ದ. ಆದರೆ ರಾಜವಂಶದ ಕ್ಷತ್ರೀಯ ರಕ್ತದ ಫಲವಾಗಿ ಚಾವಟಿ ಬಿಟ್ಟು ಬಿಲ್ವಿದ್ಯೆಗಾಗಿ ಆತ ಪರಶುರಾಮರ
ಬಳಿ ಸೇರಿಕೊಂಡಿದ್ದ.
* * *
ಇಂತಹ ಹಲವು ಹಳವಂಡಗಳ
ವೈರುಧ್ಯಗಳ ಮಧ್ಯೆ ಶಸ್ತ್ರಾಭ್ಯಾಸ ಅನುಚಾನವಾಗಿ ನಡೆದೇ ಇತ್ತು. ಅಲ್ಲಿಯವರೆಗೆ ಎಲ್ಲ ಹೆಚ್ಚು ಕಡಿಮೆ
ಎಲ್ಲ ವಿದ್ಯೆಗಳಲ್ಲಿ ಪರಿಣತಿ ಪಡೆದಿದ್ದಾರೆ ಎನ್ನಿಸುತ್ತಿದ್ದಂತೆ ಧೃತರಾಷ್ಟ್ರರನ್ನು ಭೇಟಿ ಮಾಡಿ
ರಾಜಕುಮಾರರೆಲ್ಲರ ಪ್ರತಿಭಾ ಪ್ರದರ್ಶನವನ್ನು ಏರ್ಪಡಿಸಿದರು ಗುರುವಾದ ದ್ರೋಣರು. ಅರಮನೆಯ ಆವರಣದಾಚೆಗಿನ
ಕ್ರೀಡಾಂಗಣದಲ್ಲಿ ವೇದಿಕೆ ಆಸನಗಳು ಸೇರಿದಂತೆ ಎಲ್ಲಾ ರೀತಿಯ ಮೇಲಾಟಕ್ಕೆ ಕ್ರೀಡಾಂಗಣ ಸಜ್ಜುಗೊಳಿಸಲಾಯಿತು.
ನಿರ್ದಿಷ್ಟ ದಿನದಂದು ರಾಜ ಮನೆತನ ಬಂದು ಅವರವರಿಗಾಗಿ ಮೀಸಲಿರಿಸಿದ್ದ ಆಸನದಲ್ಲಿ ಕುಳಿತುಕೊಂಡರು.
ಎಲ್ಲ ವ್ಯವಸ್ಥೆಯನ್ನೊಮ್ಮೆ
ಪರಿಶೀಲಿಸಿದ ದ್ರೋಣರು ಧೃತರಾಷ್ಟ್ರನ ಅನುಮತಿಯ ಮೇರೆಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟರು.
ಒಬ್ಬರಾದ ಮೇಲೊಬ್ಬರು ಅದ್ಭುತವಾಗಿ ವಿದ್ಯೆಗಳನ್ನು ಪ್ರದರ್ಶಿಸಿದರು. ನಂತರ ನಡೆದದ್ದು ಅಕ್ಷರಶ: ರಣರ೦ಗದಂತಹ
ಕ್ರೀಡೆ. ಭೀಮಾರ್ಜುನ ಅಂಗಳಕ್ಕಿಳಿಯುತ್ತಿದ್ದಂತೆ ಸೇರಿದ್ದ ಜನಸ್ತೋಮ ಇನ್ನಿಲ್ಲದ್ದಂತೆ ಬೊಬ್ಬಿರಿದು
ಅವರನ್ನು ಹುರಿದುಂಬಿಸಿತು. ಮೊದಮೊದಲು ಆರಂಭಿಕ ಸುತ್ತುಗಳ ನಂತರ ವಾತಾವಾರಣ ಕಾವೇರಿತು. ಭೀಮ ದುರ್ಯೋಧನ
ಇಬ್ಬರೂ ಅತ್ಯಂತ ಆಸ್ಥೆಯಿಂದ ಗದಾಯುದ್ಧವನ್ನು ಅಭ್ಯಸಿಸಿದವರು.
ಹಾಗಾಗಿ ಪ್ರತಿಯೊಂದು
ಹೊಡೆತ ಗದೆಯ ತಿರುವುವಿಕೆ, ಅವುಗಳಿಗೆ ಪ್ರತಿ ಪ್ರಹಾರ, ಆಗಸಕ್ಕೆ ನೆಗೆದು ಅಲ್ಲಿಂದ ನೆಲಕ್ಕಿಳಿದು ಗಾಳಿಯಲ್ಲೇ ಗದೆಯನ್ನು ತಿರು ತಿರುಗಿಸಿ ಏಟಿಗೆ
ಎದಿರೇಟು ನೀಡುವ ಲಾಘವ ಎಲ್ಲಾ ನಡೆಯುತ್ತಿದ್ದಂತೆ ಭೀಮ ಬಾರಿಸಿದ ಏಟುಗಳು ದುರ್ಯೋಧನನನ್ನು ಯೋಚಿಸುವಂತೆ
ಮಾಡಿದವು. ಅಲ್ಲಿಯವರೆಗೂ ಹಲವು ಸುತ್ತುಗಳ ಕಾದಾಟದಲ್ಲಿ ದುರ್ಯೋಧನ ಭೀಮನನ್ನು ಎದುರಾಳಿ ಎಂದೇ ಭಾವಿಸಿ
ಗದೆ ಬೀಸುತ್ತಿದ್ದನಾದರೂ ಅದನ್ನು ಪ್ರದರ್ಶನ ಎಂದು ಮರೆತಿರಲಿಲ್ಲ. ಹಾಗಾಗಿ ಅವನು ಬಾರಿಸುತ್ತಿದ್ಡ
ಏಟುಗಳು ಭೀಮನ ಮೈಯ್ಯನ್ನು ಸವರುತ್ತಿದ್ದರೂ ಅವು ಏಟಾಗದಂತೆ ಬೀಸಿದ್ದ ಪರಿಯಿಂದಾಗಿ ಇಬ್ಬರಿಗೂ ಏನೆಂದರೆ
ಏನೂ ಆಗುತ್ತಿರಲಿಲ್ಲ. ಅದೊಂದು ವ್ಯವಸ್ಥಿತ ಕಲಿಕೆಯ ಪರಿಣಾಮವಾಗಿ ಪ್ರಹಾರ ನಡೆಸುವ ಪ್ರಾವೀಣ್ಯತೆ.
ಅದು ಇಬ್ಬರಲ್ಲೂ ಇತ್ತು.
ಆದರೆ ಕೊನೆ ಕೊನೆಯಲ್ಲಿ
ನಿಜವಾದ ಏಟುಗಳು ಬೀಳ ತೊಡಗಿದಂತೆ ದುರ್ಯೋಧನ ಒಮ್ಮೆ ಆಚೆ ನಿಂತು ಸುತ್ತ ನೋಡಿದ. ತಾನು ಇಲ್ಲಿಯವರೆಗೂ
ಗಮನಿಸಿಯೇ ಇಲ್ಲ. ಕೇವಲ ಗದೆಯ ಪ್ರಾವೀಣ್ಯತೆಯಲ್ಲಿ ಮೈಮರೆತಿದ್ದೇನೆ. ಇತ್ತ ಜನ ಹುಚ್ಚೆದ್ದು ಭೀಮನನ್ನು
ಹುರಿದುಂಬಿಸುತ್ತಿದ್ದಾರೆ. ಕೂಡಲೇ ವಾಸ್ತವಕ್ಕೆ ಮರಳಿದ ದುರ್ಯೋಧನ ಸರಿಸಾಟಿಯಾಗಿ ನೇರಾ ನೇರ ಯುದ್ಧಕ್ಕಿಳಿದ.
ಭೀಮನನ್ನು ಬಡಿದು ಕೆಡುವತೊಡಗಿದ. ಅಲ್ಲಿಗೆ ಪ್ರದರ್ಶನ ವೇದಿಕೆ ಅಕ್ಷರಶ: ರಣಾಂಗಣದಂತೆ ಭಾಸವಾಯಿತು.
ಕೇವಲ ಗದೆ ಮತ್ತು ಕಿರುಚುತ್ತಾ ಹಾಹಾಕಾರ ಮಾಡುತ್ತಿದ್ದ ಶಬ್ದಗಳ ವಿನ: ಬೇರೇನೂ ಕಂಡು ಬರುತ್ತಿದ್ದಿಲ್ಲ.
ಸುತ್ತ ಮುತ್ತ ಅವರ
ಪಾದಾಘಾತದಿಂದ ಎದ್ದ ಧೂಳಿನಲ್ಲಿ ಗದೆಯ ಕಿಡಿಗಳು ಸೃಷ್ಟಿಸುತ್ತಿದ್ದ ಬೆಳಕಿನ ಪ್ರಭೆಯ ಹೊರತು ಪಡಿಸಿದರೆ
ಸರ್ವ ಪ್ರದೇಶವೂ ಮಸುಮಸುಕು ಧೂಳಿನಿಂದಾವರಿಸಿಬಿಟ್ಟಿತ್ತು.
ದುರ್ಯೋಧನ ಇನ್ನಿಲ್ಲದಂತೆ
ಗದೆ ತಿರುವುತ್ತಾ ಭೀಮನನ್ನು ಬಡಿಯಲಾರಂಭಿಸಿದ್ದರೆ ಸಮಯ ನೋಡಿ ಅವನಿಗಿಂತಲೂ ಎತ್ತರಾದ ಭೀಮ ಮೇಲಿನಿಂದ
ಪ್ರಹಾರಕ್ಕೆ ಆರಂಭಿಸುತ್ತಿದ್ದ. ಆದರೆ ಚತುರತೆಯಲ್ಲಿ ದುರ್ಯೋಧನ ಒಂದು ಕೈ ಮಿಗಿಲೇ ಆಗಿದ್ದರಿಂದ ಅವನು
ಸಮಯ ಸಾಧಿಸಿ ಭೀಮನನ್ನು ದಣಿಸಿ ದಣಿಸಿ ಪ್ರಹಾರ ಮಾಡತೊಡಗಿದ್ದ. ಇದರ ಮುನ್ಸೂಚನೆ ಅರಿತ ದ್ರೋಣ ಕೂಡಲೇ
ಮಗ ಅಶ್ವತ್ಥಾಮನನ್ನು ಕಳುಹಿಸಿ ಅವರನ್ನು ಹಿಂದಕ್ಕೆ ಕರೆಸಿದರು. ಮೊದಲಿನಿಂದಲೂ ಅಶ್ವತ್ಥಾಮನೆಂದರೆ
ಅದೊಂದು ರೀತಿಯ ವಿಶ್ವಾಸ ದುರ್ಯೋಧನನಿಗೆ. ಅಶ್ವತ್ಥಾಮನಿಗೂ ಅಷ್ಟೆ. ಕೌರವನೊಂದಿಗೆ ಅತಿ ವಿಶ್ವಾಸದ
ಗೆಳೆತನ. ಅವನ ಮಾತಿಗೆ ಎದುರಾಡದೆ ಅಂಗಳದಿಂದ ಹಿಂದೆ ಸರಿದ.
ಅಲ್ಲಿಗೆ ದುರ್ಯೋಧನಾದಿಗಳು
ಅತೀವ ಹರ್ಷದಲ್ಲಿ ಸ್ವಸ್ಥಾನಕ್ಕೆ ಹಿಂದಿರುಗಿದರು. ಕಾರಣ ಭೀಮನ ಬಲ ಮಾತ್ರ ದೊಡ್ಡದು. ಅವನ ಏಟಿಗೆ
ಸಿಕ್ಕರೆ ಅಪ್ಪಚ್ಚಿ. ಆದರೆ ಅವನಲ್ಲಿ ಯುದ್ಧ ಚತುರತೆಯಿಲ್ಲ. ಅವನನ್ನು ಬಲಕ್ಕೆ ಬದಲಾಗಿ ಚತುರತೆಯಿಂದ
ಎದುರಿಸಿ ಗೆಲ್ಲಬಹುದು. ಆದ್ದರಿಂದ ಅವನನ್ನು ಎದುರಿಸುವುದು ಸುಲಭ ಎಂದು ಕೌರವನ ಕಡೆಯವರಿಗೆ ಮನವರಿಕೆ ಆಗಿ ಹೋಗಿತ್ತು. ಜೊತೆಗೆ ದುರ್ಯೋಧನ ಗದೆಯ ಹೋಡೆತಕ್ಕೆ
ಇನ್ನು ಭೂಮಂಡಲದಲಿ ಎದುರಿಲ್ಲ ಎನ್ನುವ ಸಂದೇಶ ಸ್ಪಷ್ಟವಾಗಿ ಹೋಗಿತ್ತು. ಜನರೆಲ್ಲಾ ಅದೇ ಗುಂಗಿನಲ್ಲಿ
ಇರುವಾಗಲೇ ಅರ್ಜುನ ರಂಗ ಪ್ರವೇಶಿಸಿ ಮಿಂಚನ್ನು ಎಬ್ಬಿಸಿದ. ಅದೊಂದು ಅಮೋಘ ಪ್ರದರ್ಶನ. ಬಾನಲ್ಲಿ ಶರಗಳ
ಮೇಘ ಮಾಲೆ ಕಟ್ಟಿದಂತೆ ಮಿಂಚು ಗುಡುಗು ಸಿಡಿಲು ಸೇರಿದಂತೆ ಸರ್ವ ರೀತಿಯ ರಣಾಂಗಣ ರಸಗಳನ್ನು ಶರಾಘಾತದಿಂದ
ಹೊರಚೆಲ್ಲಿದ ಅರ್ಜುನ ಸೇರಿದವರಿಗೆಲ್ಲಾ ಭೂಮ೦ಡಲಕ್ಕೊಬ್ಬನೆ ಬಿಲ್ಲುಗಾರನೆಂಬ ಸ೦ದೇಶ ರವಾನಿಸಿದ. ಬಹುಶ:
ವನಿಗಿಂತ ಮಿಗಿಲಾದ ಬಿಲ್ಗಾರ ಇನ್ನು ಬರಲಿಕ್ಕಿಲ್ಲ ಎಂದೇ ನಿರ್ಧರಿಸಿಬಿಡುವಂತಹ ಅಧ್ಬುತ ಕೌಶಲ್ಯ ತೋರಿದ್ದ
ಆತ.
ಜನಸ್ತೋಮ ಅವನ ಶರಸಂಧಾನದ
ಕ್ರಿಯೆಗೆ ಇನ್ನಿಲ್ಲದಂತೆ ಜೈಕಾರ ಹಾಕುತ್ತಾ ಬೊಬ್ಬಿರಿಯುವಾಗ ಕೇಳಿ ಬಂದಿತ್ತು ಆ ಠೇಂಕಾರ. ಕಾರಣ
ಅಲ್ಲಿದ್ದ ಎಲ್ಲಾ ರೀತಿಯ ಸದ್ದಿಗಿಂತಲೂ ಮೇರುವಾಗಿ ಕೇವಲ ಅವನ ಧನುಸ್ಸಿನ ಠೇಂಕಾರ ಮಿಂಚು ಹರಿಸಿತ್ತು.
ವೇದಿಕೆ ಸೇರಿದಂತೆ ಸುತ್ತಮುತ್ತಲೆಲ್ಲ ಒಮ್ಮೆಲೆ ನಿಶಬ್ದ ಆವರಿಸಿತು. ಎತ್ತರವಾದ ಆಳ್ತನ, ಭಾರಿ ಗಾತ್ರದ
ಧನುಸ್ಸು ತೋಳುಗಳಲ್ಲಿ ಇನ್ನಿಲ್ಲದ ಹುರಿಗೊಂಡ ಸ್ನಾಯುಗಳು ಪುಟಿಯುತ್ತಿದ್ದರೆ ಆ ಯುವಕ ಅಪೂರ್ವ ತೇಜಸ್ಸಿನಿಂದ
ಕಂಗೊಳಿಸುತ್ತಾ ವೇದಿಕೆಗೆ ಕಾಲಿರಿಸಿದ್ದ. ಅವನು ರಂಗದ ಮೇಲೆ ನಡೆಯುತ್ತಿದ್ದರೆ ಅವನೆದುರಿಗೆ ರಾಜಕುಮಾರರೆಲ್ಲ
ಚಿಕ್ಕವರಾಗಿ ಕಾಣಿಸುತ್ತಿದ್ದರು. ಅವನ ಎತ್ತರ ಮತ್ತು ಶರಾಘಾತದಿಂದ ಹರವಾದ ಎದೆಯ ಬಿರುಸು ಸುಮ್ಮನೆ
ಒಂದು ಸೈನ್ಯದ ನೆನಪನ್ನು ತರುತ್ತಿತ್ತು.
ನೆರೆದಿದ್ದ ಜನಸ್ತೋಮ
ಅವನಾರು..?
ಯಾವ ರಾಜಕುಮಾರ.. ಅದೇನು ಹುರಿಗೊಂಡ ಸ್ನಾಯುಗಳು ಅಬ್ಬ.. ಅದೆಂಥಾ ಆತ್ಮವಿಶ್ವಾಸ
ರಾಜ ಕುಟುಂಬದಲ್ಲವನಿಗೆ ಇಂತಹದ್ದೊಂದು ಠೀವಿ ಬರಲಿಕ್ಕೆ ಸಾಧ್ಯವಿಲ್ಲ ಎಂದು ಪ್ರತಿಯೊಬ್ಬರೂ ಹುಬ್ಬೇರಿಸುತ್ತಿದ್ದರೆ
ಅವನು ಮಾತ್ರ ಅದೊಂದು ರೀತಿಯ ದಿವ್ಯ ನಿರ್ಲಕ್ಷದಲ್ಲಿ ಕಾಲೂರಿ ನಿಂತಿದ್ದ. ಪ್ರತಿಯೊಬ್ಬನಲ್ಲೂ ಮೊದಲು
ಮೂಡಿದ ಪ್ರಶ್ನೇಯೆ ಅದು. ಯಾರು ಇವನು...?
No comments:
Post a Comment