Tuesday, March 6, 2018


ಅವನು ಯಾರು ಎಂಬ ಪ್ರಶ್ನೆಗೆ ಉತ್ತರ ಅಥವಾ ಇತರರಲ್ಲಿ ಅರಿವು ಮೂಡುವ ಮೊದಲೇ ಆತ ಶರ ಸಂಧಾನ ಆರಂಭಿಸಿಬಿಟ್ಟಿದ್ದ. ನಿಂತಲ್ಲಿಂದಲೇ ಏಕಕಾಲಕ್ಕೆ ಪಿತಾಮಹ ಭೀಷ್ಮ ಸೇರಿದಂತೆ ದ್ರೋಣ ಮತ್ತು ಕೃಪಾಚಾರ್ಯರ ಪಾದಾರವಿಂದಗಳಿಗೆ ಬಾಣ ಪ್ರಯೋಗದಿಂದ ಪ್ರಣಾಮವನ್ನು ಸಲ್ಲಿಸಿ, ಅವರು ಎಚ್ಚೆತ್ತುಕೊಳ್ಳುವುದರಲ್ಲಿ ನಭೋಮ೦ಡಲದಲ್ಲಿ ಶರಾಘಾತದಿಂದ ಬೆಳಕನ್ನು ಸೃಷ್ಟಿಸಿದ, ಅತ್ತ ತಿರುಗುವುದರೊಳಗಾಗಿ ಇತ್ತ ಮೇಘಗಳ ಮಾಲೆಯಲ್ಲಿ ತುಂತುರು ಸೃಷ್ಠಿಸಿ ಜನರನ್ನು ಹುಚ್ಚೆಬ್ಬಿಸಿದ್ದ. ದಶದಿಕ್ಕುಗಳಿಗೂ ಏಕಕಾಲಕ್ಕೆ ಶರಗಳನ್ನು ತೂರುತ್ತಾ, ಯಾರಿಗೂ ಎತ್ತ ಏನು ನೋಡಬೇಕು ಎಂಬುದನ್ನು ತಿಳಿಯಲೂ ಅವಕಾಶ ಕೊಡದಂತೆ ಅರ್ಜುನನಿಗಿಂತಲೂ ಒಂದು ಕೈ ಹೆಚ್ಚೆ ಎನ್ನುವಂತೆ ಅಮೋಘ ಪ್ರದರ್ಶನ ನೀಡಿದ. ಅವನ ವೇಗ ಮತ್ತು ಶರಗಳ ವೇಗಕ್ಕೆ ಜನಸ್ತೋಮ ಇನ್ನಿಲ್ಲದ ಮಮತೆಯಿಂದ ಅವನನ್ನು ಹುರಿದುಂಬಿಸುತ್ತಾ ಜೈಕಾರ ಹಾಕಿ ಬೊಬ್ಬಿರಿಯಿತು. ಶರಗಳ ಮೇಲಾಟದಲ್ಲಿ ಇತರರು ಮೈಮರೆತಿರುವಾಗಲೇ ಆಗಸದಲ್ಲಿ ಮಿಂಚು ಸಹಿತ ಬೆಳಕನ್ನು ಸೃಷ್ಠಿಸುತ್ತಾ, ಅದಕ್ಕಾಗಿ ಒಂದಕ್ಕೊಂದು ಬಾಣಗಳ ಆಘತವನ್ನು ನಿರಂತರವಾಗಿ ಕಾಯ್ದುಕೊಳ್ಳುತ್ತಾ, ಕೊನೆಯಲ್ಲಿ ದೊಡ್ಡ ದನಿಯಲ್ಲಿ ನುಡಿದ ಆ ದನುರ್ಧಾರಿ.
" ಸೇರಿರುವ ಮಹಾಜನಗಳೇ, ಇಲ್ಲಿಯವರೆಗೂ ನನ್ನ ಪ್ರದರ್ಶನವನ್ನು ನೋಡಿದ್ದೀರಿ. ನೀವು ಒಪ್ಪುವುದಾದರೆ ಈಗಾಗಲೇ ಕೈ ಚಳಕ ತೋರಿಸಿದಂತೆ ಈ ಅರ್ಜುನನ ಮೇಲೆ ದ್ವಂದ್ವ ಯುದ್ಧವನ್ನು ಮಾಡಬಲ್ಲೆ. ಅವನನ್ನು ಇಲ್ಲಿಯೇ ಈಗಲೇ ನಾನು ದ್ವಂದ್ವ ಯುದ್ಧಕ್ಕೆ ಆಹ್ವಾನಿಸುತ್ತಿದ್ದೇನೆ. ಮಹಾರಾಜ ನಿಮ್ಮ ಅಪ್ಪಣೆಯಿದ್ದಲ್ಲಿ ಅವನನ್ನು ನನ್ನೆದುರಿಗೆ ಯುದ್ಧಕ್ಕೆ ಇಳಿಸಿ... " ಎಂದು ನಭೋಮಂಡಲವೆಲ್ಲ ಕೇಳಿಸುವಂತೆ ಧನುಸ್ಸಿನ ಠೇಂಕಾರ ಮಾಡಿದ. ಒಂದು ಕ್ಷಣ ನೆರೆದಿದ್ದ ರಾಜ ಪರಿವಾರವೆಲ್ಲಾ ಅವಾಕ್ಕಾಯಿತು.
ಕಾರಣ ಕ್ಷತ್ರಿಯನಾದವನಿಗೆ ದ್ವಂದ್ವ ಯುದ್ಧವಾಗಲಿ ಇನ್ನಾವುದೇ ರೀತಿಯ ಸವಾಲುಗಳನ್ನು ಎಸೆದಲ್ಲಿ ಅದನ್ನು ಮನ್ನಿಸದೇ, ಸೆಣೆಸದೆ ಬಿಡುವಂತಿಲ್ಲ. ಅದರಲ್ಲೂ ಹಸ್ತಿನಾವತಿಯ ರಾಜ ಪರಿವಾರಕ್ಕೆ ಸವಾಲು..? ಎಲ್ಲೆಲ್ಲೂ ಒಂದು ಕ್ಷಣ ಆತ೦ಕ ಕವಿದಿತ್ತು. ಕೂಡಲೇ ಅದಕ್ಕುತ್ತರಿಸುವ ಅಥವಾ ಪ್ರತಿಕ್ರಿಯಿಸುವ ಮನಸ್ಥಿತಿ ಅಲ್ಲಿ ಯಾರಿಗೂ ಕಂಡು ಬರಲಿಲ್ಲ. ಜನಸ್ತೋಮ ಮಾತ್ರ ಎಲ್ಲೆಲ್ಲೂ ಬಾನು ಭುವಿ ಸೇರುವಂತೆ ಕಿರುಚುತ್ತಾ ಇಬ್ಬರಿಗೂ ಜೈಕಾರ ಹಾಕುತ್ತಿದ್ದರೆ ಅರ್ಜುನ ಕೂಡಾ ಒಮ್ಮೆ ಕೊಂಚ ಆಂದೋಳನೆಗೊಳಗಾಗಿ ಆಚಾರ್ಯರ ಮುಖವನ್ನು ದಿಟ್ಟಿಸಿದ. ಜಗತ್ತಿನಲ್ಲೇ ಅಪ್ರತಿಮ ಬಿಲ್ಲುಗಾರನನ್ನಾಗಿಸುತ್ತೇನೆ ಎಂದು ಮಾತು ಕೊಟ್ಟಿದ್ದಾರೆ ಆಚಾರ್ಯರು. ಈಗ ನೋಡಿದರೆ ಇವನೊಬ್ಬನೆಲ್ಲಿಂದ ಹುಟ್ಟಿಕೊಂಡ. ಈಗಲೇ ಇವನ ಕಥೆ ಮುಗಿಸಬೇಕು. ಹೀಗೆ ಬೆಳೆಯಲು ಬಿಟ್ಟರೆ ಮುಂದೊಮ್ಮೆ ನನಗೇ ಎದುರಾಳಿಯಾದರೂ ತಪ್ಪೇನಿಲ್ಲ. ಕೂಡಲೇ ಅರ್ಜುನ ಅಂಗಳಕ್ಕೆ ಧುಮುಕಿ ದ್ವಂದ್ವ ಯುದ್ಧದ ಮುನ್ನಿನ ಸೆಣಸಿಗೆ ಮೊದಲಿಟ್ಟ. ಇಬ್ಬರೂ ಅದ್ಭುತ ಬಿಲ್ಲಾಳುಗಳು. ಬಾನು ಭುವಿ ಎಲ್ಲ ಬಾಣಗಳಿಂದ ಮುಚ್ಚಿ ಹೋದವು. ಆ ಯುವಕನ ಕೈ ಚಳಕಕ್ಕೆ ದ್ರೋಣರ ಶಿಷ್ಯ ಸಾಟಿಯಾದೇ ಹೋಗುತ್ತಿದ್ದಂತೆ, ಅಸ್ತ್ರ-ಪ್ರತ್ಯಾಸ್ತ್ರಗಳ ಮೇಲಾಟಕ್ಕೆ ಅರ್ಜುನ ಮುಂದಾಗಲು ಬಗ್ಪಿಳಿಕೆಗೆ ಕೈ ಹಾಕಿದ. ಕೂಡಲೇ ಕೃಪಾಚಾರ್ಯರು ಮಧ್ಯೆ ಪ್ರವೇಶಿಸಿ ಅವರಿಬ್ಬರ ಪ್ರದರ್ಶನ ನಿಲ್ಲಿಸಿ ಪ್ರಶ್ನಿಸಿದರು.
" ಯುವಕ ನೀನು ಅಸಾಧಾರಣ ಪ್ರತಿಭಾವಂತನೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸಮಾನರೊಡನೆ ಮಾತ್ರವೇ ದ್ವಂದ್ವಯುದ್ಧ ಎನ್ನುವುದು ನೀತಿ. ಹಾಗಾಗಿ ನೀನು ಯಾರು..? ನಿನ್ನ ಕುಲ ಯಾವುದು..? ನೀನು ಯಾವ ದೇಶದ ರಾಜಕುಮಾರ..? ಎಲ್ಲಿಂದ ಬರುತ್ತಿರುವೆ ನಿನ್ನ ಗುರುಗಳು ಯಾರು..? ಇವುಗಳನ್ನು ಸಭಿಕರಿಗೆ ಮತ್ತು ಮಹಾರಾಜರಿಗೆ ಅರಿಕೆ ಮಾಡಿಕೊಂಡರೆ ದ್ವಂದ್ವ ಯುದ್ಧದ ನೀತಿಯಂತೆ ಮುಂದುವರೆಯಬಹುದಾಗಿದೆ..." ಎಂದರು. ಅಲ್ಲಿಯವರೆಗೂ ತಲೆಯೆತ್ತಿ ಆ ಕ್ಷಣಕ್ಕೆ ಅರ್ಜುನನನ್ನು ಸೋಲಿಸಿಯೇ ಸಿದ್ಧ ಎಂದು ತಯಾರಾಗಿ ನಿಂತಿದ್ದ ಯುವಕ ಈಗ ಮಾತು ಬಾರದೇ ನಿಂತುಬಿಟ್ಟ. ಆದರೂ ಸಾವರಿಸಿಕೊಂಡು ನುಡಿದ.
" ಆಚಾರ್ಯರೇ, ಸೇರಿರುವ ಹಿರಿಯರೇ ಯುದ್ಧ ಯಾವಾಗಲೂ ವೀರರ ನಡುವೆ ನಡೆಯುತ್ತದೆಯೇ ಹೊರತಾಗಿ ಅಸಮಾನರಲ್ಲಿ ಅಲ್ಲವಲ್ಲ. ಅದಕ್ಕೆ ಜಾತಿ ನೀತಿಗಳ ಪ್ರಶ್ನೆ ಯಾಕೆ..? ಅಷ್ಟಕ್ಕೂ ನಿಮಗೆ ಅರ್ಜುನನ ಬಾಹುಬಲದ ಮೇಲೆ ವಿಶ್ವಾಸ ಇಲ್ಲದಿದ್ದರೆ ಬಿಟ್ಟು ಕೊಡಲು ಹೇಳಿ. ನಾನು ಹೊರಟು ಹೋಗುತ್ತೇನೆ. ಅದನ್ನು ಬಿಟ್ಟು ಕುಲ ಸ್ಥರದ ಮಾತೇಕೆ ಆಚಾರ್ಯರೇ, ವಿದ್ಯೆ ಅಥವಾ ಪ್ರತಿಭೆಗೇಕೆ ಕುಲದ ಹಂಗು ಅಥವಾ ಅಂತಸ್ತಿನ ಗೋಡೆ ಕಟ್ಟುತ್ತೀರಿ...? ಯುದ್ಧ ಎಂದ ಮೇಲೆ ಕೇವಲ ರಾಜಕುಮಾರರನ್ನು ಮಾತ್ರ ಎದುರಿಸುವುದೇ..?" ಇನ್ನು ಏನು ನುಡಿಯುತ್ತಿದ್ದನೊ ಕೂಡಲೇ ದ್ರೋಣರು ನುಡಿದರು,
"ನೋಡು ಕುಮಾರಾ, ನೀನಾರೆಂದು ಗೊತ್ತಿಲ್ಲ. ಆದರೂ ಸಮಾನರಲ್ಲದವರೊಡನೆ ರಾಜರಲ್ಲದವರೊಡನೆ, ಕ್ಷತ್ರೀಯರಲ್ಲದವರೊಡನೆ ಯುದ್ಧವಾಗಲಿ ಮೇಲಾಟವಾಗಲಿ ಮಾಡಬಾರದು. ದ್ವಂದ್ವಯುದ್ಧ ಆಹ್ವಾನವಂತೂ ಶಾಸ್ತ್ರ ರೀತ್ಯಾ ನಿಷಿದ್ಧವೇ. ಹಾಗಾಗಿ ನೀನು ನಿನ್ನ ಸಮಾನ ಸ್ಥರದ ಪರಿಚಯ ಹೇಳಿಕೊಂಡು ಅರ್ಜುನನನ್ನು ಆಹ್ವಾನಿಸು. ಅವನೂ ಮೇಲಾಟಕ್ಕೆ ಬರುತ್ತಾನೆ..." ಎನ್ನುವಷ್ಟರಲ್ಲಿ ಯಾರೊ ಸಭಿಕರು ಕೂಗಿದರು,
" ಅವನು ನಮ್ಮ ಅದಿರಥನ ಸಾಕುಮಗ ಕರ್ಣ.. "
" ಅದಿರಥ ಎಂದರೆ..?"
" ನಮ್ಮ ರಥದ ಸಾರಥಿ ಅಲ್ಲವೇ..? ಅ೦ದರೆ ಇವನು ಸೂತಪುತ್ರ...? "
" ಸೂತ ಪುತ್ರ.. ? " ಹುಬ್ಬೇರಿಸಿದರು ಹಲವರು. ಕೂಡಲೇ ಆಚಾರ್ಯ ಸೇರಿದಂತೆ ದ್ರೋಣಾಚಾರ್ಯರು ಗುಡುಗಿದರು.
" ಸೂತಪುತ್ರನಾದವನು ನೀನು ರಾಜಪರಿವಾರದೊಡನೆ, ಕ್ಷತ್ರಿಯರೊಡನೆ ಹೋರಾಡಬಹುದೇ..? ಇದೆಲ್ಲಿಯ ಅಧಿಕ ಪ್ರಸಂಗತನ. ಇದು ಕುರುವಂಶದ ರಾಜಕುಮಾರರ ಶಸ್ತ್ರಾಸ್ತ್ರ ಪರಿಚಯ ಕಾರ್ಯಕ್ರಮ ಸಮಾನರಲ್ಲದವರಿಗಿಲ್ಲಿ ಅವಕಾಶವಿಲ್ಲ.." ಎನ್ನುತ್ತಿದ್ದಂತೆ ಅತ್ತಲಿಂದ ಹಾಹಾಕಾರ ಕೇಳಿಬಂತು. ಎಲ್ಲಾ ರೀತಿಯ ಸಭಾ ಮರ್ಯಾದೆಗಳನ್ನು ಮೀರಿ, ಯಾರನ್ನೂ ಲೆಕ್ಕಿಸದೆ ಮದಗಜದಂತೆ ರಂಗದ ಮಧ್ಯಕ್ಕೆ ಭಾರಿ ಬೆಂಬಲದೊಂದಿಗೆ ನುಗ್ಗಿ ಬಂದವನೇ ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ, ಎರಡು ತೋಳು ಅಗಲಿಸಿ ತುಂಬು ಮನಸ್ಸಿನ ಅಹ್ವಾನ ನೀಡುವವನಂತೆ ಕರ್ಣನನ್ನು ಆಲಂಗಿಸಿಕೊಂಡು ಬಿಟ್ಟ ದುರ್ಯೋಧನ.
ಅವನ ಧನುಸ್ಸಿನ ಹುರಿಯನ್ನು ಕೈಯ್ಯಲ್ಲಿ ಸವರುತ್ತಾ, ಅದರ ಬಿರುಸನ್ನು ಅವನ ಯುಧ್ಧೋತ್ಸಾಹಿ ಒರಟುತನವನ್ನು ಆನಂದಿಸುವವನಂತೆ, ಆತ್ಮೀಯತೆಯಿಂದ ಅವನ ಬೆನ್ನ ಮೇಲೆ ಕೈಯ್ಯಾಡಿಸಿ, ಮೇಲಿನಿಂದ ಕೆಳಗಿನವರೆಗೆ ಅವನ ಭವ್ಯ ನಿಲುವನ್ನು ಕಣ್ಣಲ್ಲೇ ತುಂಬಿಕೊಳ್ಳುತ್ತಾ ಆದರದಿಂದ ಗಾಢವಾಗಿ ತಬ್ಬಿದ. ಕರ್ಣ ನಿಂತೇ ಇದ್ದ ದುರ್ಯೋಧನ ತೆಕ್ಕೆಯಲ್ಲಿ. ಜನ ನಿಬ್ಬೆರಗಾಗಿ ನೋಡುತ್ತಿದ್ದರೆ ದುರ್ಯೋಧನ ಕರ್ಣನನ್ನು ತುಂಬು ಮನಸ್ಸಿನಿಂದ ಆದರಿಸುತ್ತಾ ನುಡಿದ,
" ನಿನ್ನಂಥ ಯುವ ಯುದ್ಧಾಳುವಿನ ಸಾರಥ್ಯ ಮತ್ತು ಸಾಮರ್ಥ್ಯ ಎರಡೂ ಈ ಕುರುವಂಶದ ಸಿಂಹಾಸನಕ್ಕೆ ಬೇಕು ಕರ್ಣಾ. ನಿನಗ್ಯಾವ ಯೋಚನೆ ಬೇಡ. ನಾನು ನಿನಗೆ ರಾಜಾಶ್ರಯ ನೀಡುತ್ತೇನೆ. ನಿನ್ನ ಶಸ್ತ್ರಾಸ್ತ್ರ ಸಾಮರ್ಥ್ಯ ಮತ್ತು ಸಾಧನೆಯನ್ನು ಮುಂದುವರೆಸು. ನಿನಗೆ ನನ್ನ ಆಸ್ಥಾನದಲ್ಲಿ ಯಾವುದೇ ಮೇಲು ಕೀಳಿನ ಹಂಗಿಲ್ಲ ಕುವರ ಕರ್ಣ. ಇಂದಿನಿಂದ ನೀನು ದುರ್ಯೋಧನನ ಅಂತರಂಗದ ಆಪ್ತರಲ್ಲೊಬ್ಬ. ಇದಕ್ಕೆ ಕಾರಣ ಕೇವಲ ನೀನೊಬ್ಬ ಅದ್ಭುತ ಬಿಲ್ಲಾಳು ಮತ್ತು ಸಾಧಕ ಹೊರತು ಬೇರೇನಲ್ಲ. ಉಳಿದ ವಿಷಯಕ್ಕೆ ನೀನು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಸರಿಯೇ.. ? " ಎನ್ನುತ್ತಿದ್ದರೆ ನಡುಮಟ್ಟ ಬಾಗಿ ಅವನಿಗೆ ವಂದಿಸಿದ ಕರ್ಣ ನುಡಿದ.
" ರಾಜಕುವರ ದುರ್ಯೋಧನ. ನಿನ್ನ ಸ್ನೇಹಕ್ಕೆ ನಾನು ಯಾವ ರೀತಿಯಲ್ಲೂ ಋಣಿಯಾಗಿರಲು ಸಾಧ್ಯವಾಗುತ್ತಿಲ್ಲ. ಇದೋ ನೆರೆದ ಸಭಿಕರೆದುರು ಇಂದು ನಾನು ಪ್ರಮಾಣ ಮಾಡುತ್ತೇನೆ. ನನ್ನ ಕೊನೆಯ ಉಸಿರು ಇರುವವರೆಗೂ ನಿನ್ನ ತಲೆ ಕಾಯುತ್ತೇನೆ. ಇಂದಿನಿಂದ ನಿನ್ನ ಸಿಂಹಾಸನ ಮತ್ತು ನಿನ್ನ ರಾಜ್ಯದ ಹಿತಕ್ಕಾಗಿಯೇ ಈ ಪ್ರಾಣ ಮೀಸಲು. ಇದಕ್ಕೆ ಆ ಸೂರ್ಯದೇವನ ಮೇಲಾಣೆ ಅವನೇ ಸಾಕ್ಷಿ. ನಿನ್ನ ತಲೆ ಉರುಳಿಸಲೇನಾದರೂ ಸಂಚಿದ್ದರೆ ಅದಕ್ಕೂ ಮೊದಲು ಯಾವತ್ತಿಗೂ ಈ ಘಟ ಉರುಳದೇ ಸಾಧ್ಯವಾಗುವುದಿಲ್ಲ. ಆ ಸೂರ್ಯ ಭೂಮಿಯ ಕಿರಣಗಳನ್ನು ಸ್ಪರ್ಶಿಸುವ ಯಾವ ಹೊತ್ತಿನಲ್ಲೂ ಈ ಘಟ ನೆಲಕ್ಕುರುಳುವುದಿಲ್ಲ ದುರ್ಯೋಧನಾ. ರಣಾಂಗಣದಲ್ಲಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಈ ಧನಸ್ಸನ್ನು ನಿನಗಾಗಿ ಮೀಸಲಿಡುತ್ತೇನೆ. ಆ ಸೂರ್ಯ ರಶ್ಮಿ ಭೂಮಿಯ ಮೇಲಿರುವವರೆಗೂ ಕರ್ಣನನ್ನು ಭೂಮಂಡಲದ ಮೇಲೆ ಗೆಲ್ಲಬಲ್ಲವರಿಲ್ಲ. ಇದಕ್ಕೆ ಆ ಸೂರ್ಯ ದೇವನ ಮೇಲಾಣೆ. ಇನ್ನೇನಿದ್ದರೂ ಈ ಯುದ್ಧ ಪರಿಣಿತಿ ಕುರು ರಾಜಕುಮಾರ ನಿನಗೇ ಮಾತ್ರ ಮೀಸಲು.." ಎಂದು ಹೆದೆಯೇರಿಸಿ ನಿಂತ. ಅಲ್ಲಿಗೆ ಪ್ರದರ್ಶನ ವಿಚಿತ್ರ ತಿರುವನ್ನು ತೆಗೆದುಕೊಳ್ಳುವುದರೊಂದಿಗೆ ಎಲ್ಲರೂ ಅಯೋಮಯವಾದ ಸನ್ನಿವೇಶದಲ್ಲಿ ನಿಂತುಕೊಂಡರು. ರಂಗದ ಮಧ್ಯದಲ್ಲಿ ಅವರಿಬ್ಬರೂ ಪರಿಸ್ಥಿತಿಯನ್ನು ಅದ್ಯಾವ ಮಟ್ಟಕ್ಕೆ ಹಿಡಿತಕ್ಕೆ ತೆಗೆದುಕೊಂಡು ಬಿಟ್ಟಿದ್ದರೆಂದರೆ ಬಹುಶ: ಅವರಿಬ್ಬರ ಬಲಾಬಲಕ್ಕೆ ಎದುರು ಎನ್ನುವುದೇ ಇರುವುದಿಲ್ಲ ಎಂದು ನಿಚ್ಚಳವಾಗಿ ಕಾಣಿಸುತ್ತಿತ್ತು.
ಆಗಲೇ ಅತ್ತಲಿಂದ ಭೀಮನು ಅಬ್ಬರಿಸಿದ್ದು ಕೇಳಿಸಿತು.
" ಅರ್ಜುನ. ಸೂತಪುತ್ರನೊಡನೆ, ರಾಜನಲ್ಲದವರೊಡನೆ ಏನು ದ್ವಂದ್ವ ಯುದ್ಧದ ಮಾತು ಎದ್ದು ಈ ಕಡೆಗೆ ಬಾ.." ಅದನ್ನೆ ಉಳಿದ ಹಿರಿಯರು ಅನುಮೋದಿಸುವ೦ತೆ ಕಲರವವೆಬ್ಬಿಸಿದರು. ರಂಗದ ಮಧ್ಯೆ ಆಗಷ್ಟೆ ಕೊಂಚ ಹೆಮ್ಮೆಯಿಂದ ಇನ್ನೇನು ದ್ವಂದ್ವ ಯುದ್ಧವಾಗೇ ಬಿಡುತ್ತದೆ ಎನ್ನುವಂತೆ ನಿಂತಿದ್ದ ಕರ್ಣ ಈ ಬೆಳವಣಿಗೆಯಿಂದ ಏನು ಮಾಡುವುದೋ ತೋಚದೆ ಅಸಹಾಯಕನಾಗಿ ದುರ್ಯೋಧನನ ಕಡೆಗೆ ನೋಡಿದ. ಅಷ್ಟರಲ್ಲಿ ದ್ರೋಣರು,
" ರಾಜಕುಮಾರ ದುರ್ಯೋಧನ ಇದೇನು ಹುಡುಗಾಟ. ಸಮಾನ ವಂಶ ಅಲ್ಲದವರೊಡನೆ ಯುದ್ಧ ಹಾಗಿರಲಿ ಮಿತ್ರತ್ವವಂತೂ ಮೊದಲೇ ಹೊಂದಲಾಗುವುದಿಲ್ಲ. ಅದರಲ್ಲಿ ಇದ್ದಕ್ಕಿದ್ದಂತೆ ಇದೇನು ಹೊಸ ರಾಗ ತೆಗೆಯುತ್ತಿದ್ದಿ. ಇದು ಕೇವಲ ಪ್ರದರ್ಶನ ವೇದಿಕೆ. ನೀನೇಕೆ ಆ ಸೂತಪುತ್ರನನ್ನು ಯಾವುದೇ ರಾಜ್ಯವಿಲ್ಲದವರನ್ನು ಬೆಂಬಲಿಸುತ್ತಿದ್ದಿ. ಅಸಲಿಗೆ ಸಮರ್ಥ ಕುಲ, ನೆಲೆ ಇಲ್ಲದವನೊಡನೇನು ಮಾತು. ಈ ಪ್ರದರ್ಶನ ಮುಗಿಯಿತು ಇಲ್ಲಿಗೆ ನಿಲ್ಲಲಿದೆ.. " ಎಂದು ಘೋಷಿಸಿ ಹೊರಡಲನುವಾದರು. ಕೂಡಲೇ ಗದೆಯನ್ನು ಎತ್ತಿ ಹೂ೦ಕರಿಸುತ್ತಾ ನೆಲಕ್ಕೆ ಒಮ್ಮೆ ಜೋರಾಗಿ ಅಪ್ಪಳಿಸಿದ ದುರ್ಯೋಧನ. ದಶದಿಕ್ಕುಗಳೂ ಅದುರಿದವು. ಅವನ ಗದೆಯ ಆರ್ಭಟಕ್ಕೆ ರಂಗವೇ ಕಂಪಿಸಿ ಜನವೆಲ್ಲಾ ಹೋ... ಎಂದು ಭಯದಿಂದ ಕಿರುಚಿದರು. ತೀವ್ರವಾಗಿ ದ್ವನಿಯೇರಿಸಿ ನುಡಿದ ದುರ್ಯೋಧನ.
" ಪಿತಾಮಹ ಸರ್ವಶಾಸ್ತ್ರ ಮತ್ತು ಮಂತ್ರಾಸ್ತ್ರಗಳನ್ನು ಬಲ್ಲ ಕೋವಿದರು ನೀವು. ಯುದ್ಧ ರಂಗಕ್ಕಿಳಿದಾಗ ಪ್ರತಿ ಯೋಧನ ಜಾತಿಯನ್ನೇನಾದರೂ ಕೇಳುತ್ತಾ ಕುಳಿತಿದ್ದಿದೆಯೆ..? ಅರಿಗಳ ತಲೆ ಸವರುವುದನ್ನು ಹೊರತು ಪಡಿಸಿ ನೀವು ರಂಗದಲ್ಲಿ ಯಾವತ್ತಾದರೂ ಅವರ ಕುಲ ನೆಲೆ ಹುಡುಕಿದ್ದಿದೆಯೇ...? ಮತ್ಯಾಕೆ ಈಗ ಆ ಪ್ರಶ್ನೆ. ವಿದ್ಯೆಗೆ ಅವರ ಪ್ರತಿಭೆಗೆ ಬೆಲೆ ಕೊಡದ ರಾಜ ರಾಜನಲ್ಲ. ಯಾವ ಯುದ್ಧ ಅಥವಾ ಮಿತ್ರತ್ವದಲ್ಲಿ ಜಾತಿ, ಕುಲ, ನೆಲೆಗಳ ಪ್ರಶ್ನೆ ಬಂದಿದ್ದಿದೆ...? ರಾಜರು ಬಾಹು ಬಲದಿಂದ ಶ್ರೇಷ್ಠತ್ವವನ್ನು ಪಡೆಯುತ್ತಾರೆಯೇ ವಿನಹ ಪಟ್ಟದಿಂದಲ್ಲ. ಧರ್ಮ ಕೂಡಾ ಬಾಹುಬಲವನ್ನೇ ಅನುಸರಿಸುತ್ತದೆ. ಇನ್ನು ಕುಲ ಮತ್ತು ನೆಲೆಯ ವಿಚಾರವನ್ನು ಹುಟ್ಟಿನ ರಹಸ್ಯಗಳನ್ನು ಮಾತನಾಡುವುದಾದರೆ ಈ ತುಂಬಿದ ಸಾರ್ವಜನಿಕ ಸಭೆಯಲ್ಲಿ ಆ ವಿಷಯವನ್ನೇ ಎತ್ತದಿರುವುದು ಒಳ್ಳೆಯದು.
ಪಿತಾಮಹ ಈಗ ಹೇಳಿ ಕರ್ಣ ಯಾವ ರೀತಿಯಲ್ಲಿ ಯುದ್ಧಕ್ಕೆ ಅಥವಾ ಸಖ್ಯಕ್ಕೆ ಅರ್ಹನಲ್ಲವೆಂದು..? ಸಮಾಜದಲ್ಲಿ, ಯುದ್ಧದಂತಹ ಸನ್ನಿವೇಶದಲ್ಲಿ ಅಥವಾ ಪ್ರಾಣದ ಹಂಗು ತೊರೆದು ರಾಜ ಸಿಂಹಾಸನ ಉಳಿಸುವಾಗ, ರಾಜ ಮನೆತನಗಳನ್ನು ಕಾಪಾಡುವಾಗ ಯಾವತ್ತೂ ಇತಿಹಾಸದಲ್ಲಿ ಹೀಗೆ ಜಾತಿಯ ಪ್ರಶ್ನೆ ಕೇಳಿ ಕಾರ್ಯವಾಸಿ ನಿರ್ಣಯಗಳನ್ನು ತೆಗೆದುಕೊಂಡಿಲ್ಲ. ಮೊದಲಿನಿಂದಲೂ ಕುರು ಸಿಂಹಾಸನಕ್ಕೆ ಅಗತ್ಯ ಬಿದ್ದಾಗಲೆಲ್ಲ ಪರಜಾತಿಯವರೇ ಆಪ್ತರಾಗಿ ಹಿತ ಕಾಯ್ದಿರುವ ಸತ್ಯ ಹೊರಒಳಗಿನ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಎಷ್ಟು ಜನ ಇವತ್ತು ಅರಮನೆಯಲ್ಲಿ ಕೇವಲ ಕ್ಷತ್ರೀಯರಾಗೇ ಉಳಿದು ಬದುಕುತ್ತಿದ್ದಾರೆ...? ಮೂಲತ: ಈ ಸಿಂಹಾಸನದ ಉಳಿವಿಗಾಗಿ ವಂಶೋದ್ಧಾರಕ್ಕೂ ಬಾರದ ಜಾತಿಯ ಪ್ರಶ್ನೆ ಈಗ್ಯಾಕೆ ಬರುತ್ತಿದೆ...? " ಎನ್ನುವಷ್ಟರಲ್ಲಿ ಅತ್ತಲಿಂದ ಭೀಮನು,
" ದುರ್ಯೋಧನಾ ಒಬ್ಬ ರಥಿಕ ಸಿಕ್ಕ ಮಾತ್ರಕ್ಕೆ ಸರ್ವ ಸ್ಥರಗಳೂ ಲಭ್ಯವಾದುವೆಂದಲ್ಲ. ಅಸಲಿಗೆ ಸೂತಪುತ್ರನೊಬ್ಬ ಕೊಂಚ ಬಿಲ್ಗಾರಿಕೆ ಕಲಿತ ಮಾತ್ರಕ್ಕೆ ಅರ್ಜುನನಂತಹ ಹಸ್ತಿನಾವತಿಯ ವಂಶದವರೊಡನೆ ಏನು ದ್ವಂದ್ವ ಯುದ್ಧದ ಮಾತು..? ಸರಿಕರೊಡನೆ, ಮೇಲ್ಸ್ತರದವರೊಡನೆ ನಡೆಯಬೇಕಿರುವ ಕುಲೀನ ವಂಶಸ್ಥರ ಈ ಸ್ಥಳದಲ್ಲಿ ಅನಾವಶ್ಯಕ ರಗಳೆ ಎಬ್ಬಿಸಬೇಡ.." ಎಂದ. ಅದಕ್ಕೆ ಬೆಂಬಲಿಸುವಂತೆ ಕೃಪಾಚಾರ್ಯರು ಕರ್ಣನನ್ನುದ್ದೇಶಿಸಿ,
" ಕರ್ಣ.. ನೀನು ನಿಜಕ್ಕೂ ಸೂತಪುತ್ರನೇ ಆದರೆ ಆ ಕಡೆ ಸರಿದು ಬಿಡು. ಕುಲೀನ ವಂಶಸ್ಥರ ಈ ಪ್ರದೇಶದಲ್ಲಿ ಯಾಕೆ ಬೇಡದ ರಗಳೆ...? ಉಚ್ಛ ಸ್ತ್ರೀಯಗರ್ಭ ಮತ್ತು ಪಿತೃಪ್ರಧಾನ ವ್ಯವಸ್ಥೆಯಲ್ಲಿ ವೃಥಾ ಅವಮಾನಕ್ಕೆ ತುತ್ತಾಗಬೇಡ. ರಾಜನಾದವನು ಕ್ಷತ್ರಿಯನಲ್ಲದವನೊಡನೆ ಏನು ಮಾತು..? " ಎಂದು ಮಾತನಾಡುವ ಮುಂಚೆ ಮೊದಲಿನಿಗಿಂತಲೂ ರಭಸದಿಂದ ಅಬ್ಬರಿಸಿದ ದುರ್ಯೋಧನ.
" ಆಚಾರ್ಯರೇ, ಪಿತಾಮಹ ಭೀಷ್ಮ, ನಾನು ಮೊದಲೇ ಹೇಳಿದ್ದೇ ವಂಶಾನುವಂಶೀಯ ಚರ್ಚೆ ಬೇಡ. ಕೇವಲ ವೀರತ್ವ ಮತ್ತು ಪ್ರತಿಭೆಯ ಚರ್ಚೆಯಾಗಲಿ, ಪ್ರದರ್ಶನವಾಗಲಿ ಎಂದು. ಆದರೆ ನೀವಾಗಿ ಕೆದರುತ್ತಿದ್ದೀರಿ ಹಾಗಿದ್ದರೆ ಕೇಳಿ. ಕರ್ಣನು ಸೂತ್ರಪುತ್ರನಾದರೂ ವೀರರಲ್ಲಿ ವೀರ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಅವನು ಈ ರಂಗಕ್ಕೆ ಅರ್ಹನೇ, ಅದೇ ವಂಶದ ಮಾತಿಗೆ ಬಂದರೆ ಇಲ್ಲಿ ಎಲ್ಲರಿಗೂ ಪ್ರಧಾನ ಕುಲಗುರುವಾಗಿರುವ ದ್ರೋಣಾಚಾರ್ಯರಿಗೆ ಯಾವ ವಂಶ ಇತಿಹಾಸವಿದೆ..? ಅವರು ಯಾವ ಉಚ್ಛ ಸ್ತರದ ಸಂತತಿಯ ಕೂಸು ..? ಎಲ್ಲಿಯೂ ಸಲ್ಲದ ಸಂತತಿಯಲ್ಲಿ ಅವರ ಹಿನ್ನೆಲೆಗೆ ಗುರುತೇ ಇಲ್ಲವಲ್ಲ..? ಅವರ ಹುಟ್ಟಿನ ಹಿನ್ನೆಲೆ ಗೊತ್ತಿಲ್ಲದ್ದೇನಲ್ಲವಲ್ಲ. ಅತಿ ಅವಸರಕ್ಕೆ ಬಿದ್ದ ದೊನ್ನೆಯಲ್ಲಿ ಹುಟ್ಟಿದ ದ್ರೋಣರು ಇವತ್ತಿಗೂ ಕುಲದ ವಿಷಯದಲ್ಲಿ ಕಳಂಕಿತರೆ. ಅಗ್ನಿಸ್ತೋಮ ಯಾಗದ ಮಧ್ಯದಲ್ಲಿ ಅಪ್ಸರೆಯ ಸಂಗದಲ್ಲಿ, ದ್ರೋಣದಲ್ಲಿ ಜನಿಸಿದ ಗುರುಗಳಿಗೆ ಅದ್ಯಾವ ಹಿನ್ನೆಲೆಯಿದೆ..?
ಗುರುಗಳೇ, ಇವತ್ತು ಅತಿದೊಡ್ಡ ಸಾಮ್ರಾಜ್ಯ ಹಸ್ತಿನಾವತಿಯ ಕುಲಾಚಾರ್ಯ ಎಂದು ಗುರುತಿಸಿದ್ದು ನಿಮ್ಮಲ್ಲಿನ  ರಣಕಲೆಯಿಂದ, ಅದ್ಭುತ ಬಿಲ್ಗಾರಿಕೆಯಲ್ಲಿನ ಸಾಧನೆಯಿಂದ. ಪರಶರಾಮರ ಶಿಷ್ಯರಾಗಿ ನೀವು ಸಾಧಿಸಿದ ಶರಸಂಧಾನದಿಂದಾಗಿ. ಅಷ್ಟಾಗಿಯೂ ಈ ಅರ್ಜುನನ್ನು ಬಿಲ್ಗಾರನನ್ನಾಗಿಸುವ ನೆವದಲ್ಲಿ ಅಂದು ಆ ಏಕಲವ್ಯನ ಬದುಕನ್ನು ಹಾಳು ಮಾಡಿದ ನಿಮ್ಮದು ಅದ್ಯಾವ ನೀತಿ ಮತ್ತು ಧರ್ಮ..? ಏಕಲವ್ಯನು ಎಂದೂ ನೇರವಾಗಿ ನಿಮ್ಮ ಬಳಿ ಶಿಷ್ಯನಾಗಿರಲೇ ಇಲ್ಲ. ಕೇವಲ ಅವನ ಔನ್ನತ್ಯದಿಂದಾಗಿ ಬೌದ್ಧಿಕವಾಗಿ ಗುರುವಾಗಿ ಸ್ವೀಕರಿಸಿದ್ದನಷ್ಟೆ. ಅದು ಅವನ ಹಿರಿಮೆ. ಅದರಲ್ಲಿ ನಿಮ್ಮ ಹೆಚ್ಚುಗಾರಿಕೆ ಏನೂ ಇರದಿದ್ದಾಗಲೂ ಅವನ ಸಾಧನೆಯನ್ನು ನಿಲ್ಲಿಸುವ ಉದ್ದೇಶದಿಂದ ಅವನ ಬೆರಳನ್ನೇ ಬಲಿತೆಗೆದುಕೊಂಡಿರಿ. ಆವತ್ತು ಅಂಥಾ ನಿಷಾದ ರಾಜನ ಮಗನಿಂದ ಹೆಬ್ಬೆರಳನ್ನೇ ದಕ್ಷಿಣೆಯಾಗಿ ಪಡೆಯುವಾಗ ಮುಖ್ಯವಾಗದ ಜಾತಿ ಕುಲ ಇವತ್ತು ಯಾಕೆ ಮುಖ್ಯವಾಗುತ್ತಿದೆ..?
ಇನ್ನು ಅದೇ ರೀತಿಯಲ್ಲಿ ಕೃಪಾಚಾರ್ಯರಾದರೂ ನೋಜೆ ಹುಲ್ಲಿನ ಸಮಾಗಮದಲ್ಲಿ ಹುಟ್ಟಿದವರಾದ್ದರಿಂದ ಹಿನ್ನೆಲೆಯ ಬಗ್ಗೆ ಜಾತಿಯ ಬಗ್ಗೆ ಮಾತಾಡಲು ಅವರಿಗೆಲ್ಲಿಯ ಹಕ್ಕು..? ಇನ್ನು ಸರ್ವ ಸಮ್ಮತ ಮಹಾ ಮಹಿಮ ಷಣ್ಮುಖನ ಹಿನ್ನೆಲೆ ಇಂದಿಗೂ ರಹಸ್ಯ. ಆದರೆ ಆತ ಆರಾಧ್ಯ ದೈವವಲ್ಲವೇ..? ವಿಶ್ವಾಮಿತ್ರ ಮೂಲತ: ಕ್ಷತ್ರೀಯರಾದರೂ ಅತ್ಯುತ್ತಮ ಬ್ರಾಹ್ಮಣ್ಯವನ್ನು ಸಾಧಿಸಿದರು. ಶಾಶ್ವತ ಬ್ರಹ್ಮತ್ವವನ್ನೂ ಪಡೆದರು. ಆದ್ದರಿಂದ ವೀರರ ಕುಲ ಗೋತ್ರ ವೃತ್ತಾಂತವನ್ನು ಹುಟ್ಟಿನ ಮೂಲಕ್ಕೆ ಕೈ ಹಾಕುವುದು ಬೇಡವೆಂದೆ ಹೇಳಿದ್ದೆ.
ಭೀಮಾ ತಪ್ಪು ತಿಳಿಯಬೇಡ. ನಿನ್ನ ವಂಶದ ಹಿನ್ನೆಲೆಗೆ ಬಂದರೆ ನಿಮ್ಮ ಹುಟ್ಟಿನ ರಹಸ್ಯವೇನು..? ಪಿತಾಮಹನೇ ಇದಕ್ಕೆ ಸಾಕ್ಷಿ. ಯಾವ ಹಿನ್ನೆಲೆಯಲ್ಲಿ ಪಾಂಡವರು ಜನಿಸಿದರು. ಅವರ ಹಿಂದಿನ ಜಾತಿಯ ಪ್ರಶ್ನೆಗಳನ್ನು ಎತ್ತಿದರೆ ಎಲ್ಲರೂ ಅಲ್ಲಿಗೆ ಮೂಲವಿಲ್ಲದವರೇ. ಪಾಂಡವರಂತೂ ಸಂಪೂರ್ಣ ನಿಯೋಗಿಗಳು. ಯಾರಿಗೆ ಗೊತ್ತು ಯಾವ ಪುರುಷನ ಸಂಯೋಗದಲ್ಲಿ ಯಾರು ಜನಿಸಿದರೆಂದು..? ಅಲಭ್ಯವಾಗಿದ್ದ ಜನ್ಮ ಕಾರಣಕ್ಕೆ ಬೆಂಬಲಿಸಿದ ನಿಯೋಗದ ಮಹಾತ್ಮರ ಮೂಲಗಳನ್ನು ಕೆದಕಿದರೆ ಪಾಂಡವರೆಲ್ಲರೂ ಮೂಲಹೀನರೆ. ಕ್ಷೇತ್ರ ನಮ್ಮದಾದ ಮಾತ್ರಕ್ಕೆ ಚಿಗುರುವ ಮರ ನಮ್ಮದಾಗುವುದಿಲ್ಲ. ಕಾರಣವಾಗುವ ವಂಶದ ಮೂಲವಾಗುತ್ತವೆ ಎನ್ನುವುದು ನಿಸರ್ಗ ನಿಯಮ. ಆದರೂ ಪ್ರತಿಯೊಬ್ಬರೂ ಅವರವರ ಹಿರಿಮೆಯಿಂದ ಗುಣಾವಗುಣಗಳಿಂದ ಗುರುತಿಸಿಕೊಳ್ಳುತ್ತಾರೆಯೇ ವಿನ: ಸ್ಥರಗಳಿಂದಲ್ಲ. ಯುಧಿಷ್ಠೀರನನ್ನು ಧರ್ಮರಾಯ, ಧರ್ಮಜನೆನ್ನಲು ಆತ ಕುರುವಂಶೀಯ ಹಿರಿಯ ಎಂದಲ್ಲ. ಅವನು ಗುರುತಿಸಿಕೊಂಡಿರುವ ಧರ್ಮ ನಿಷ್ಠೆಯಿಂದ. ಅಷ್ಟಕ್ಕೂ ರಾಜನಾಗಲು ಬೇಕಾಗುವ, ಇರಬೇಕಾದ ಮುಖ್ಯ ಅರ್ಹತೆಗಳಾದರೂ ಏನು.. ?
ಶೌರ್ಯ ಮತ್ತು ಸೇನೆಯನ್ನು ಮುನ್ನಡೆಸುವ ಸಾರಥ್ಯ, ಕೊನೆಯಲ್ಲಿ ಕುಲ. ಮೊದಲಿನವೆರಡೂ ಅಂಶಗಳಲ್ಲಿ ಕರ್ಣನನ್ನು ಪ್ರಶ್ನಿಸುವ ಅವಶ್ಯಕತೆಯೇ ಇಲ್ಲ. ಇಲ್ಲಿನ ಜನರು ಅವನ ಮೇಲೆ ಹಾಕಿದ ಜೈಕಾರವೇ ಅದಕ್ಕೆ ಸಾಕ್ಷಿ. ನಮ್ಮೆಲ್ಲ ರಾಜಕುಮಾರರಿಗಿಂತಲೂ ಹೆಚ್ಚಿನ ಪ್ರಾವೀಣ್ಯತೆಯನ್ನು ಜನರ ಅಭಿಮಾನವನ್ನು ಅವನು ಗಳಿಸಿದ್ದೇ ಇದಕ್ಕೆ ಸಾಕ್ಷಿ. ಇನ್ನು ಅವನು ರಾಜನಾಗಿರಲೇಬೇಕೆಂದು ನಿಮ್ಮ ಅಪೇಕ್ಷೆಯಾದರೆ ಇದೋ ಈ ರಣಕಲಿ ಕರ್ಣ ಈಗಿನಿಂದಲೇ ಅಂಗರಾಜ್ಯದ ರಾಜಾಧಿಪತಿಯಾಗುತ್ತಾನೆ.ಇಷ್ಟು ಹೇಳಿದ ಮೇಲೂ ಕರ್ಣನನ್ನು ಪ್ರಶ್ನಿಸುವ ಅಧಿಕ ಪ್ರಸಂಗತನವಾಗಲಿ, ಅವನ ರಾಜ್ಯಾಭಿಷೇಕವನ್ನು ತಡೆಯುವ ಉದ್ಧಟತನವಾಗಲಿ ಯಾರಲ್ಲಾದರೂ ಇದ್ದರೆ ನನ್ನೆದುರಿಗೆ ಬಂದು ಹೆದೆಯೇರಿಸಲಿ ಯಾರಲ್ಲಿ..? " ಎಂದು ಅರಮನೆಯ ಸೇವಕರನ್ನು ಕರೆದವನೇ,
"...ಸರ್ವ ಸಾಮಾನುಗಳು ರಾಜಗೌರವದ ಸಕಲ ವ್ಯವಸ್ಥೆಯೂ ಆಗಲಿ. ಈಗಲೇ ನಾನು, ನನ್ನ ಆತ್ಮೀಯ ಮಿತ್ರನನ್ನು ಅಂಗ ರಾಜ್ಯಕ್ಕೆ ರಾಜನನ್ನಾಗಿ ಪಟ್ಟಾಭಿಷೇಕ ನೆರವೇರಿಸುತ್ತಿದ್ದೇನೆ.." ಎಂದು ಭಯಂಕರವಾಗಿ ಆಜ್ಞೆ ಮಾಡಿದ. ಅಲ್ಲಿಗೆ ಸೇರಿದವರಲ್ಲಿ ಶಬ್ದವೇ ಇರಲಿಲ್ಲ. ಅಸಲಿಗೆ ಪಿತಾಮಹ ಭೀಷ್ಮ ಮತ್ತು ಉಳಿದ ರಾಜವಂಶದವರ ಮುಖದಲ್ಲಿ ರಕ್ತವೇ ಉಳಿದಿರಲಿಲ್ಲ. ದುರ್ಯೋಧನ ಹೇಳಿದ ಯಾವ ವಿಷಯದಲ್ಲೂ ತೆಗೆದು ಹಾಕುವಂತಹದ್ದು, ಅವನಿಗೆ ಉತ್ತರಿಸಲು ಯಾರ ಬಳಿಯೂ ಯಾವ ಸಮಜಾಯಿಸಿ ಕೂಡಾ ಇರಲಿಲ್ಲ. ತೀರ ಕುರುವಂಶದ ಬುಡಕ್ಕೆ ದುರ್ಯೋಧನ ಕೈ ಹಾಕಿದ್ದ. ಅವನದೇನಿದ್ದರೂ ನೇರಾ ನೇರ. ಆದರೆ ಉಚ್ಛ ನೀಚ ಭೇದವಿಲ್ಲದ ಅಪರೂಪದ ಮಿತ್ರತ್ವವೊಂದಕ್ಕೆ ಅದು ನಾ೦ದಿಯಾಗಿತ್ತು. ಮುಂದಿನ ಕಾರ್ಯದಲ್ಲಿ ಎಲ್ಲೂ ಯಾರಲ್ಲೂ ಸ್ವರ ಹೊರಡಲಿಲ್ಲ. ನಿರಾತಂಕವಾಗಿ ಸುಗಂಧ ನೀರು ಅಭಿಷೇಚಿಸಿ ದುರ್ಯೋಧನ ವ್ಯವಸ್ಥಿತವಾಗಿ ಅಲ್ಲಿಯೇ ರಣಾಂಗಣದಲ್ಲಿ ಕರ್ಣನಿಗೆ ಅಂಗ ರಾಜ್ಯಾಭಿಷೇಕ ಮಾಡಿದ.
ಈ ಅಂಗರಾಜ್ಯವೆಂಬುದು ಹಸ್ತಿನಾವತಿಗೆ ಸೇರಿದ ಒಂದು ರಾಜ್ಯ. ಅದು ಗಂಗಾ ಮತ್ತು ಸರಯೂ ನದಿಗಳ ಮಧ್ಯೆ ಇರುವ ದೊಡ್ಡ ಭೂ ಪ್ರದೇಶ. ಅನುವಂಶದ ಬಲಿಜರಾಜನಿಗೆ ಸೇರಿದ ಪಟ್ಟದ ಅರಸಿ ಸುದೆಷ್ಣೆಗೆ ಹುಟ್ಟಿದ ತನ್ನ ಮಕ್ಕಳಾದ ಅಂಗ, ವಂಗ, ಕಲಿಂಗ, ಪುಂಡ್ರ ಹಾಗು ಸುಹ್ಮರಿಗೆ ಈ ಭೂಭಾಗವನ್ನು ಹಂಚಿಕೊಟ್ಟಿದ್ದ. ಅಂಗನ ಪಾಲಿಗೆ ಬಂದಿದ್ದ ಭಾಗವನ್ನು ಚಂಪಾಪುರಿ ಎಂಬ ನಾಮದಡಿಯಲ್ಲಿ ಅಂಗರಾಜ ಆಳುತ್ತಿದ್ಡುದರಿಂದ ಕಾಲಾನಂತರದಲ್ಲಿ ಅದು ಅಂಗರಾಜ್ಯವೆಂದೇ ಗುರುತಿಸಿಕೊಂಡಿತು. ಭೀಷ್ಮನ ಆಳ್ವಿಕೆಯಡಿಯಲ್ಲಿ ಕೊನೆಗೆ ಹಸ್ತಿನಾವತಿಗೆ ಸೇರಿತ್ತು. ಅದೀಗ ಕರ್ಣನ ಅಧಿಪತ್ಯಕ್ಕೆ ಒಳಪಡಲಿತ್ತು. ಅದನ್ನೇ ಎರಡನೆ ಯೋಚನೆ ಇಲ್ಲದೆ ಕರ್ಣನಿಗೆ ನೀಡಿಬಿಟ್ಟಿದ್ದ. ಅವನಿಗೆ ಆಭಾರಿಯಾದ ಕರ್ಣ ಎಲ್ಲರೆದುರಿಗೆ ಮತ್ತೊಮ್ಮೆ ನಮಿಸಿ ಮತ್ತೇ ನುಡಿದ.
" ಮಿತ್ರ ನಿನ್ನಿಂದ ಇಂತಹ ಸ್ನೇಹದ ಹೊರತಾಗಿ ನನಗಿನ್ನೇನು ಬೇಕಾಗಿಲ್ಲ. ನಿನ್ನ ಈ ಮಿತ್ರತ್ವದ ಹೃದಯ ವೈಶಾಲ್ಯತೆಗೆ ನನ್ನಿಂದ ಮಾತೇ ಹೊರಡದಂತಾಗಿದೆ. ನಮ್ಮಿಬ್ಬರಲ್ಲಿ ಯಾವ ವೈಮನಸ್ಸೂ ಬಾರದಂತೆಯೂ ಸ್ನೇಹವೆಂದರೆ ಹೀಗಿರಬೇಕೆ೦ದೂ, ಇತಿಹಾಸ ಗುರುತಿಸುವಂತೆಯೂ ನಾನಿರುತ್ತೇನೆ. ನನ್ನ ಕೊನೆಯ ಉಸಿರಿರುವವರೆಗೂ ನಿನ್ನ ರಾಜ್ಯ ಮತ್ತು ರಕ್ಷಣೆ ನನ್ನ ಹೊಣೆ ದುರ್ಯೋಧನಾ. ನೀನಗಿಂತಲೂ ಮೊದಲು ಈ ದೇಹ ಬೀಳಲಿದೆ. ಅಲ್ಲಿಯವರೆಗೂ ನಿನ್ನ ಮತ್ತು ನಿನ್ನ ಸಿಂಹಾಸನದ ರಕ್ಷಣೆ ನನ್ನದು. ಇದು ಆ ಸೂರ್ಯ ದೇವನಾಣೆಗೂ ಸಾಕ್ಷಿ. ಸೂರ್ಯಾಸ್ತದ ಮೊದಲು ಯಾವತ್ತೂ ಈ ಘಟ ಬೀಳಲಾರದು. ಈ ಘಟ ಇದ್ದಷ್ಟು ಕಾಲ ನೀನು ಮತ್ತು ನಿನ್ನ ಸಿಂಹಾಸನ ಅಬಾಧಿತ ಮಿತ್ರ..." ಎಂದು ಬಿಗಿದಪ್ಪಿಕೊಂಡ.
ಸೇರಿದ್ದ ಜನಸ್ತೋಮ ಅವರಿಬ್ಬರನ್ನು ಕೊಂಡಾಡುತ್ತಾ, ಹೊಗಳುತ್ತಾ ಸರಿಯತೊಡಗಿತ್ತು. ರಾಜವಂಶ ಮಾತಿಲ್ಲದೆ ಅಲ್ಲಿಂದ ಹೊರಡಲನುವಾಗಿದ್ದರೆ ಅತ್ತ ಸ್ತ್ರೀ ಕಕ್ಷೆಯಲ್ಲಿ ವಿರಾಜಿಸಿದ್ದ ಆಕೆ ಮಾತ್ರ ಎಲ್ಲರಿಗಿಂತಲೂ ಮೊದಲೇ ಕ್ರೀಡಾಂಗಣ ತೊರೆದು ಅರಮನೆಯ ಅಂತ:ಪುರ ಸೇರಿದ್ದಳು. ಕಾರಣ ಆಕೆಗೆ ಸ್ಪಷ್ಟವಾಗೇ ಗೊತ್ತಾಗಿತ್ತು. ಕರ್ಣ ಸೂತಪುತ್ರನಲ್ಲ. ತನ್ನ ಯೌವ್ವನದ ಕಾಲದಲ್ಲಿ ಸೂರ್ಯನೆಂಬುವವನೊಡನೆ ಬೆರೆತ ಫಲ ಎಲ್ಲೆರೆದುರಿಗೆ ಹೆಮ್ಮರವಾಗಿ ನಿಂತಿದ್ದು ಎದ್ದು ಕಾಣಿಸುತ್ತಿತ್ತು. ಆಕೆಯ ಮುಖದಲ್ಲಿ ರಕ್ತವಿರಲಿಲ್ಲ. ಆಕೆಯನ್ನು ರಾಜಮಾತೆ ಎಂದೇ ಎಲ್ಲರೂ ಕರೆಯುತ್ತಿದ್ದರು. ಆಕೆಯ ಹೆಸರು ಕುಂತಿ.

No comments:

Post a Comment