Saturday, March 10, 2018


ಅಧ್ಯಾಯ -೮
ಸಂಪೂರ್ಣ ನೂರಾ ಐದು ವಿದ್ಯಾರ್ಥಿಗಳು ಜಗತ್ತಿನಲ್ಲೇ ಅತ್ಯುತ್ತಮವಾದ ವಿದ್ಯಾಭ್ಯಾಸವನ್ನು ಮಾಡಿ ಗುರುಗಳ ಕೃಪೆಯಿಂದ ಪುನೀತರಾಗಿದ್ದರು. ಪ್ರತಿಯೊಬ್ಬ ಯೋಧನೂ ಏನಾದರೂ ಮಾಡಬೇಕೆನ್ನುವ ಹಂಬಲ ಮತ್ತು ಅದ್ಭುತವಾದ ವಿದ್ಯೆಯನ್ನು ಪ್ರದರ್ಶಿಸಬೇಕೆನ್ನುವ ಹುಮ್ಮಸ್ಸು ಉಬ್ಬಿರಿಯುತ್ತಿದ್ದ ಅ೦ಗಾಂಗಗಳ ಮಾಂಸ, ಖಂಡ, ಸ್ನಾಯುಗಳಲ್ಲೂ ಗೋಚರಿಸುತ್ತಿತ್ತು. ಭಾರವಾದ ಗದೆಯನ್ನು ತನ್ನ ಹೆಗಲ ಮೇಲಿರಿಸಿಕೊಂಡು ತಿರುಗಾಡುತ್ತಿದ್ಡ ದುರ್ಯೋಧನ ಆಗೀಗ ಅದನ್ನು ಎತ್ತಿ ಸುಖಾ ಸುಮ್ಮನೆ ಗಿರಿಗಿರಿ ಸುತ್ತಿಸುತ್ತಿದ್ದ.
ಅವನ ಎಷ್ಟೋ ಜನ ತಮ್ಮಂದಿರಿಗೆ ಆ ಗದೆಯನ್ನು ಎತ್ತುವುದೇ ಕಷ್ಟವಾಗುತ್ತಿತ್ತು. ಅವನಿಗೆ ಸರಿ ಸಮವಾಗಿ ಗದೆಯನ್ನು ಸುಲಭವಾಗಿ ಎತ್ತಬಲ್ಲ ಸಾಮರ್ಥ್ಯವಿದ್ದವರೆಂದರೆ ಗುರು ದ್ರೋಣರನ್ನು ಹೊರತು ಪಡಿಸಿದರೆ ಭೀಮ ಮಾತ್ರ. ಅಷ್ಟೊಂದು ಲೀಲಾಜಾಲ ಅಂಗಿಕ ಭಾವಾಭಿವ್ಯಕ್ತಿ ಅವನಿಗೆ ಮಾತ್ರವೇ ಸಾಧ್ಯವಿತ್ತು. ಆಗಷ್ಟೆ ಕೊನೆಯ ಬಾರಿಗೆ ಶಸ್ತ್ರಾಭ್ಯಾಸ ಮಾಡಿಸಿ ಕುಳಿತಿದ್ದ ದ್ರೋಣರ ಮನದಲ್ಲಿ, ದಶಕಗಳಿಂದಲೂ ದಹಿಸುತ್ತಿದ್ದ ಪ್ರತಿಕಾರದ ಕಿಡಿ ತಿವಿತಿವಿದು ಎಬ್ಬಿಸುತ್ತಿದ್ದುದು ಈಗ ಬೃಹದಾಕಾರವಾಗಿ ಬೆಳೆದು ನಿಂತಿತ್ತು. ಅಷ್ಟಕ್ಕೂ ದ್ರೋಣರಿಗೆ ಹೀಗಾದೀತು ಎನ್ನುವ ಅಂದಾಜೂ ಇರಲಿಲ್ಲ.
ಕಾರಣ ಬ್ರಾಹ್ಮಣ ಜಗತ್ತಿನ ಏಕೈಕ ವೀರಾಧಿವೀರನೆಂದು ಹೆಸರುವಾಸಿಯಾದ, ಇಪ್ಪತ್ತೊಂದು ಬಾರಿ ಭೂಮ೦ಡಲವನ್ನೆಲ್ಲಾ ಸುತ್ತಿ ಕ್ಷತ್ರಿಯರನ್ನು ನಿರ್ಮೂಲನೆ ಮಾಡಿ, ಶಾಂತವಾಗಿದ್ದ ಭಾರ್ಗವರಾಮ ಶ್ರೀ ಪರುಶುರಾಮರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳವು. ಆಗ ಪಾಂಚಾಲದ ರಾಜಕುಮಾರ ದ್ರುಪದನೂ ಇದ್ದ. ಚೂಟಿಯಾಗಿದ್ದ ಬ್ರಾಹ್ಮಣ ವಟು ದ್ರೋಣನೊಡನೆ ಸಲುಗೆ ಬೆಳೆಸಿದ್ದ ದ್ರುಪದನಿಗೆ, ಮನೆ ಕಡೆಯಿಂದ ಅಷ್ಟೇನೂ ಉತ್ತಮ ಸ್ಥಿತಿವಂತನಲ್ಲ, ಆರ್ಥಿಕ ಬಲವೂ ದ್ರೋಣನಿಗಿಲ್ಲ ಎಂದು ಗೊತ್ತಾಗಿತ್ತು. ವಿದ್ಯೆಯನ್ನೇನೋ ಅದ್ಭುತವಾಗಿ ದ್ರೋಣ ಕಲಿಯುತ್ತಿದ್ದನಾದರೂ ಮನೆಯ ಕಷ್ಟಕಾರ್ಪಣ್ಯಗಳು ಅವನ ಏಕಾಗ್ರತೆ ನಾಶ ಮಾಡುತ್ತಿದ್ದುದನ್ನು ದ್ರುಪದ ಸೂಕ್ಷ್ಮವಾಗಿ ಗಮನಿಸಿದ್ದ. ತನ್ನೊಂದಿಗೆ ಸ್ನೇಹದಲ್ಲಿದ್ದಾನೆ. ಕಲಿಯುವುದರಲ್ಲಿ ಈ ಬ್ರಾಹ್ಮಣರಿಗೆ ಸಮನಾದವರು ಈ ಲೋಕದಲ್ಲಿ ಇಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಮಾಡುತ್ತಿದ್ದಾನೆ. ಗುರುಭಾರ್ಗವರಾಮರ ಈ ಶಿಷ್ಯ ನಾಳೆ ಯಾತಕ್ಕಾದರೂ ಸಮಯಕ್ಕಾದಾನು ಎಂದು ದ್ರುಪದ ರಾಜಕೀಯ ಮುತ್ಸದ್ದಿಯಂತೆ ಮಾತನಾಡಿದ್ದ ಆವತ್ತು,
"..ಮಿತ್ರಾ ನೀನು ಚಿಂತೆ ಬಿಟ್ಟು ಏಕಾಗ್ರತೆಯಿಂದ ಸಾಧನೆ ಮಾಡು.." ದ್ರೋಣ ಬಿರುಗಣ್ಣಿಂದ ದ್ರುಪದನನ್ನು ನೋಡಿದ್ದ. ಅವನಿಗೇನು ಗೊತ್ತಿಲ್ಲವೇ ಏಕಾಗ್ರತೆಯಿಂದ ಕಲಿಯಬೇಕೆಂದು. ಆದರೆ ಏಕಾಗ್ರತೆ ಬರುವುದೆ ಸಮಸ್ಯೆ ಪರಿಹಾರವಾದ ಮೇಲೆ. ಆದನ್ನು ಪರಿಹರಿಸುವಂತೆ ಹಿಂದೆಯೇ ದ್ರುಪದ ನುಡಿದಿದ್ದ,
" ಮಿತ್ರಾ ಯೋಚಿಸಬೇಡ. ನೀನು ನನ್ನ ಅತ್ತ್ಯುತ್ತಮ ಮಿತ್ರರಲ್ಲೊಬ್ಬ. ಒಂದು ಕೈ ನನಗಿಂತಲೂ ಉತ್ತಮ ಬಿಲ್ಲುಗಾರ. ನಿನಗೆ ಈ ಭೂಮಿಯ ಮೇಲೆ ಅಸಾಧ್ಯ ಎನ್ನುವುದಿಲ್ಲ. ಆದರೂ ನಿನಗೆಲ್ಲೂ ನೆಲೆ ನಿಲ್ಲಲಾಗದೆ ಭೂಮಂಡಲದ ಮೇಲೆ ಒಂದು ಸೂರು, ನೆಮ್ಮದಿಯ ನಿದ್ರೆ ಸಿಕ್ಕದಿದ್ದರೆ, ಮುಂದೊಮ್ಮೆ ಪಾಂಚಾಲದ ಅರ್ಧರಾಜ್ಯ ಬೇಕಾದರೂ ಬರೆದುಕೊಡುತ್ತೇನೆ. ಈಗ ನಿಶ್ಚಿಂತೆಯಿಂದಿರು..." ಎಂದು ಸಂತೈಸಿ ಹೇಳಿದ ದ್ರುಪದ ಅದನ್ನು ಮರೆತೂಬಿಟ್ಟಿದ್ದ. ಕಾರಣ ಮಿತ್ರನನ್ನು ಸಂತೈಸುವ ಭರದಲ್ಲಿ ನುಡಿದಿದ್ದನೇನೋ. ಆದರೆ ದ್ರೋಣ ಅದನ್ನು ಗಂಭೀರವಾಗಿ ಪರಿಗಣಿಸಿಬಿಟ್ಟಾನು, ಮುಂದೆಂದಾದರೊಮ್ಮೆ ಈ ಬ್ರಾಹ್ಮಣ ವಟು ತನ್ನೆದುರು ನಿಂತು "...ನಿನ್ನ ಅರ್ಧ ರಾಜ್ಯ ಭಿಕ್ಷಾಂ ದೇಹಿ.." ಎಂದು ಬಿಟ್ಟಾನು ಎಂಬ ಸಣ್ಣ ಯೋಚನೆಯೂ ಹೊಳೆದಿರಲಿಲ್ಲ. ಕಾರಣ ಸಹಜವಾಗನ್ನುವಂತೆ ನನ್ನರ್ಧ ಆಸ್ತಿ ಬೇಕಾದರೂ ಕೊಟ್ಟೇನು ಸುಮ್ಮನಿರು ಎಂದು ಸಂತೈಸಿಬಿಟ್ಟಿದ್ದ.
ವಿದ್ಯಾಭ್ಯಾಸ ಮುಗಿಸಿ ದ್ರುಪದ ಹೊರಟುಹೋದ. ಇತ್ತ ಬಡಬ್ರಾಹ್ಮಣ ಎಂಬ ಹಣೆಪಟ್ಟಿಯಿಂದ ಹೊರಬರಲಾರದೆ ದ್ರೋಣ ತಡಬಡಿಸಿದ. ಅದ್ಭುತ ಬಿಲ್ಲುಗಾರ, ಅಪರ ಪರಾಕ್ರಮಿ ಸರಿ, ಆದರೇನು ಎಲ್ಲಿಯೂ ಸರಿಯಾಗಿ ಆಶ್ರಯ ಸಿಕ್ಕುತ್ತಿಲ್ಲ. ಮಡದಿ ಕೃಪೆ ಸಾಕಷ್ಟು ತೂಗಿಸಲು ಪ್ರಯತ್ನಿಸಿದಳು. ಬೆಂಬಲಕ್ಕೆ ಕೃಪೆಯ ಅಣ್ಣ ಕೃಪ ಕೂಡಾ ದ್ರೋಣನ ಬೆನ್ನಿಗೆ ನಿಂತ. ಉಹೂಂ. ಆದರೂ ಅದೇಕೋ ದರಿದ್ರ ಲಕ್ಷ್ಮಿ ಅವನ ಹೆಗಲಿಳಿಯಲೇ ಇಲ್ಲ. ಸಾಕಾಗಿ ಹೋದ ದ್ರೋಣ ದ್ರುಪದನ ರಾಜ್ಯಕ್ಕೆ ತೆರಳಿದ.
ಅರ್ಧರಾಜ್ಯವನ್ನೇ ಬರೆದುಕೊಡುತ್ತೆನೆಂದಿದ್ದ ಗೆಳೆಯ ಕೊಂಚ ರಾಜಾಶ್ರಯವಾದರೂ ಕೊಟ್ಟಾನು. ಇನ್ನಿಲ್ಲದಂತೆ ಸಹಾಯ ಮಾಡಿ ಅವನ ಸೈನ್ಯಕ್ಕೆ ಬೇಕಾದ ಅದ್ಭುತ ಬಿಲ್ವಿದ್ಯೆ, ಯುದ್ಧ ತರಬೇತು ಎಲ್ಲವನ್ನು ಪ್ರತಿಯಾಗಿ ನೀಡಿದರಾಯಿತು. ಒಂದು ನೆಮ್ಮದಿಯ ಊರು, ಕುಟುಂಬಕ್ಕೊಂದು ಸೂರು, ಪಾಂಚಾಲದರಮನೆಯ ಸೈನ್ಯ ಶಿಕ್ಷಣಾಧಿಕಾರಿಯ ಹುದ್ದೆ ಇನ್ನೇನು ಬೇಕು ಎಂದೆಲ್ಲಾ ಯೋಚಿಸುತ್ತಾ ಅರಮನೆಯ ಬಾಗಿಲಲ್ಲಿ ನಿಂತ ದ್ರೋಣನ ಕನಸು ಭಗ್ನಗೊಂಡಿತ್ತು.
" ಮಹಾರಾಜರು ರಾಜ ಸಮಾಲೋಚಕರೊಂದಿಗೆ ಗಂಭೀರ ಚರ್ಚೆಯಲ್ಲಿದ್ದಾರೆ, ನಿನ್ನನ್ನು ಗುರುತಿಸುತ್ತಿಲ್ಲ ಅವರು. ಅದೇನು ಬೇಕಿದ್ದರೂ ಆಚೆಯ ಊಟದ ಮನೆಯಿಂದ ಕಾಳು ಕಡಿ ತೆಗೆದುಕೊಂಡು ಉಂಡುಹೋಗಲು ಹೇಳಿದ್ದಾರೆ..." ಕಾವಲು ಭಟ ನುಡಿಯುತ್ತಿದ್ದರೆ ನಖಶಿಖಾಂತ ಉರಿದು ಬಿಟ್ಟ. ಅದರಲ್ಲೂ ಹಸಿವಿದ್ದಾಗ ಕೋಪ, ಸಂಕಟ ಜಾಸ್ತಿ. ಬೆನ್ನಿನಿಂದ ಬಾಣವನ್ನು ಸೆಳೆದು, ಕಾವಲಿನವರನ್ನು ಒಂದೇಟಿಗೆ ನಿವಾರಿಸಿಕೊಂಡು ಸಭಾ ಮರ್ಯಾದೆ ಲೆಕ್ಕಿಸದೆ ಮಧ್ಯೆ ನುಗ್ಗಿಬಿಟ್ಟ. ತುಂಬಿದ ದ್ರುಪದನ ಸಭೆ ಅವಾಕ್ಕಾಯಿತು.
ನಾರುಮಡಿ, ಕೃಶ ಶರೀರ, ಉದ್ದುದ್ದ ಗಡ್ಡ ಮೀಸೆಗಳು, ಎದೆಯ ಮೇಲೆ ಶರ ಎಳೆದೆಳೆದು ಬಿಟ್ಟು ಕ್ಷತಿಗೊಂಡ ಕಪ್ಪನೆಯ ಗುರುತು. ಕೈಗಳೆರಡರಲ್ಲೂ ಶರಾಘಾತಕ್ಕೆ ದಡ್ಡುಗಟ್ಟಿದ ಚರ್ಮ, ಕಠೋರ ಬ್ರಾಹ್ಮಣ್ಯದ ಸಂಕೇತವಾಗಿ ನೀಟಾರನೆ  ನಿಂತಿರುವ ಜನಿವಾರ, ಯುದ್ಧೋನ್ಮಾದದಿಂದ ಕಂಪಿಸುತ್ತಿದ್ದ ದೇಹ ಹೊರತುಪಡಿಸಿದರೆ ದ್ರುಪದ ನರೇಶನ ಸನಿಹಕ್ಕೆ ಬರುವಂತಹ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ. ಮಿಗಿಲಾಗಿ ಸಭಾಭವನಕ್ಕೆ ಏಕಾಂಗಿಯಾಗಿ ನುಗ್ಗಿ ತನ್ನನ್ನೇ ಸ್ನೇಹಿತನಂತೆ ಏಕವಚನದಲ್ಲಿ ಕರೆದು ಕೆಳಗಿಳಿಯಲು ಸೂಚಿಸುತ್ತಿರುವ ವ್ಯಕ್ತಿಯನ್ನು ಮಸ್ತಿಷ್ಕ ನೆನಪಿಸಿ ಗುರುತಿಸಿಕೊಳ್ಳಲು ಪ್ರಯತ್ನಿಸಿತಾದರೂ, ಕಾಂಪಿಲ್ಯದ ಮಹಾರಾಜನೆಂಬ ಅಹಂ ಅದಕ್ಕಿಂತಲೂ ಮೊದಲು ಕ್ರಿಯೆಗಿಳಿಯಿತು.
" ನಿನ್ನಂಥವನೊಂದಿಗೆ ಅದೆಂಥಾ ಸ್ನೇಹ. ಸರಿಕರಲ್ಲದವರೊಡನೆ ಅಂದೆಂಥಾ ಮಿತೃತ್ವ..? ಸಭಾಮರ್ಯಾದೆ ಗೊತ್ತಿಲ್ಲದ ಬ್ರಾಹ್ಮಣ. ನಿನ್ನಲ್ಲಿರುವ ಯುದ್ಧೋನ್ಮಾದ ನೋಡಿದರೆ ಅದ್ಯಾವ..."ಮುಂದಿನ ಮಾತನ್ನು ನುಡಿಯಲು ನೀಡದೆ ದ್ರೋಣ ಗುಡುಗಿದ್ಡ.
" ಎಲವೋ ಅವಿವೇಕಿ ದ್ರುಪದ. ಸಿಂಹಾಸನ ಸಿಕ್ಕಿದ ಕೂಡಲೇ ಬಾಲ್ಯ, ಬಳಗ, ಗುರು, ವಿದ್ಯೆ ಎಲ್ಲವೂ ಮರೆತುಬಿಟ್ಟೆಯಾ ಚಾಂಡಾಲ. ನನಗೂ, ನನ್ನ ಬದುಕಿಗೂ ಭರವಸೆಯ ಮಾತನ್ನು ಕೊಟ್ಟು ಬದುಕಲು ಪ್ರೇರೇಪಿಸಿವನೆಂದು ನಂಬಿ ಬಂದೆ. ಹಸಿದ ಹೊಟ್ಟೆಗೆ ಅನ್ನ ಮತ್ತು ಸ್ನೇಹಿತನೆಂಬ ಸಲುಗೆಯಿಂದ ರಾಜಾಶ್ರಯವನ್ನು ಕೇಳಿ ಬಂದಿದ್ದೆ ನೀಚಾ. ಅದಕ್ಕೆ ಬದಲಾಗಿ ಈ ಭಾರ್ಗವರಾಮ ಶಿಷ್ಯ ನಿನ್ನ ರಾಜ್ಯವನ್ನು ರಕ್ಷಿಸಲು ಬದ್ಧನಾಗಿದ್ದ. ಸೈನ್ಯಕ್ಕೆ ಶಿಕ್ಷಣಾಧಿಕಾರಿಯಾಗಿ ಋಣ ತೀರಿಸುತ್ತಿದ್ದ. ಆದರೆ ನಿನ್ನ ನೆತ್ತಿಗೇರಿರುವ ಅಹಂ ನನ್ನನ್ನು ಈ ತುಂಬಿದ ಸಭೆಯಲ್ಲಿ ಅವಮಾನಕ್ಕೀಡು ಮಾಡಿದೆ. ಬಣ್ಣಗೆಟ್ಟ ಪಂಚೆಯುಟ್ಟ ಬಡ ಬ್ರಾಹ್ಮಣನಾದ ನನ್ನನ್ನು ಹೀಯಾಳಿಸಬಾರದಿತ್ತು. ದ್ರುಪದಾ ನಿನ್ನ ಸಿಂಹಾಸನದಿಂದ ಕೆಳಗಿಳಿಸಿ, ನನ್ನ ಶಿಷ್ಯರ ಕೈಯಿಂದ ಹೊಡೆಸಿ, ದೊಡ್ಡದಾದ ನನ್ನ ಮಂಚದ ಕಾಲಿಗೆ ಕೆಡವಿಕೊಳ್ಳದಿದ್ದರೆ ನಾನು ಪರುಶರಾಮರ ಶಿಷ್ಯ ದ್ರೋಣನೇ ಅಲ್ಲ. ನಿನ್ನೊಡನೆ ಸರಿಕನಾದ ನಂತರವೇ ನಿನ್ನನ್ನು ಕಾಣುತ್ತೇನೆ. ಅದಾಗದಿದ್ದರೆ ಈ ಶರೀರವನ್ನು ಪಂಚಭೂತಗಳಿಗೆ ಹವಿಸ್ಸುವಾಗಿಸುತ್ತೇನೆ..." ರಣಾವೇಶದಿಂದ ಪ್ರತಿಜ್ಞೆ ಮಾಡಿ ಪುನ: ಕಾಡು ಸೇರಿದ್ದ ದ್ರೋಣ. ನಂತರದ್ದು ಇತಿಹಾಸ.
ಕೆಲವೇ ಸಮಯದಲ್ಲಿ ಆಚಾರ್ಯ ಭೀಷ್ಮರ ಎದುರು ನಿಲ್ಲುವಂತಾಯಿತು. ಕೃಪ ಜೊತೆಗಿದ್ದೇ ಇದ್ದ. ಭೀಷ್ಮರೂ ಒಂದು ಕಾಲದಲ್ಲಿ ಪರಶುರಾಮರ ಶಿಷ್ಯರೇ. ಅಲ್ಲಿಂದೀಚೆಗೆ ತಿರುಗಿ ನೋಡಲಿಲ್ಲ. ರಾಜಾಶ್ರಯ ಸಿಕ್ಕ ಮೇಲೆ ವಿದ್ಯೆಯ ಮೇಲಿನ ಹಿಡಿತ ಬಿಗಿಗೊಳಿಸಿದ್ದ ದ್ರೋಣ. ಸಂಪೂರ್ಣ ವಿದ್ಯೆಯನ್ನೆಲ್ಲಾ ಧಾರೆ ಎರೆದು ಮಾತುಕೊಟ್ಟಂತೆ ರಾಜಕುಮಾರರನ್ನು ಜಗತ್ತಿನಲ್ಲಿಯೇ ಸರ್ವಶ್ರೇಷ್ಠ ಯೋಧರನ್ನಾಗಿಸಿದ. ಗುರುದಕ್ಷಿಣೆಯ ವಿಷಯ ಬಂದಾಗ ಅದನ್ನು ಶಿಷ್ಯರಿಂದಲೇ ತೆಗೆದುಕೊಳ್ಳುವುದಾಗಿ ನುಡಿದು ಭೀಷ್ಮ, ಧೃತರಾಷ್ಟ್ರರನ್ನು ಜಾಣ್ಮೆಯಿಂದ ಒಲಿಸಿಕೊಂಡಿದ್ದ. ಕುಳಿತಲ್ಲಿಂದ ಸೇವಕರನ್ನು ಕರೆದು ಮೈದಾನದಲ್ಲಿ ಶಿಷ್ಯರನ್ನು ಸೇರಿಸುವಂತೆ ಸೂಚಿಸಿದ. ಶಿಷ್ಯೋತ್ತಮರ ಮಧ್ಯದಲ್ಲಿ ಎದುರಿಗೆ ಮದಗಜಗಳಂತೆ ಭೀಮ ದುರ್ಯೋಧನರು ನಿಂತುಕೊಂಡಿದ್ದರು.
"..ಎಲ್ಲರೂ ಸರ್ವ ಶ್ರೇಷ್ಠ ವಿದ್ಯೆಗಳನ್ನು ಪಡೆದಿದ್ದೀರಿ. ಇನ್ನೇನಿದ್ದರೂ ದೇವಾನುದೇವತೆಗಳನ್ನು ಒಲಿಸಿಕೊಂಡು ಶಸ್ತ್ರಾಸ್ತ್ರಗಳನ್ನು ಪಡೆಯುವುದಷ್ಟೆ. ಅದಕ್ಕೂ ಮೊದಲು ನನಗೆ ಗುರುದಕ್ಷಿಣೆಯನ್ನು ಕೊಡಬಹುದು ಎಂದೆನ್ನಿಸಿದರೆ ಮನ:ಪೂರ್ವಕವಾಗಿ ಕೊಡುತ್ತೀರಾದರೆ ಕೇಳುತ್ತೇನೆ. ಇದರಲ್ಲಿ ಒತ್ತಾಯವೇನಿಲ್ಲ..." ಎಲ್ಲರೂ ಒಮ್ಮೆ ಸ್ತಬ್ದರಾದರು. ಕುತೂಹಲ. ತಂತಮ್ಮಲ್ಲೇ ಗುಜುಗುಜು ಆರಂಭಿಸಿದರು. ದ್ರೋಣರ ಪೀಠಿಕೆ ಕೇಳುತ್ತಿದ್ದಂತೆ ನಿಂತಲ್ಲಿಯೇ ದುರ್ಯೋಧನ ಕೊಸರಾಡಿದ. ಅದು ಗೊತ್ತಿದ್ದೇ ದುಶ್ಯಾಸನ ಭುಜ ತಿವಿದ. ಹಿಂದೊಮ್ಮೆ ಹೀಗೆಯೇ ದಕ್ಷಿಣೆಯ ನೆಪದಲ್ಲಿ ಕಾಡಿನ ಬೇಡರ ಕುವರ ಏಕಲವ್ಯನ ಬೆರಳು ಪಡೆದು ಈ ಜಗತ್ತು ಕಾಣಬಹುದಾಗಿದ್ದ ಅಪರೂಪದ ಬಿಲ್ಗಾರನೊಬ್ಬನನ್ನು ಕಳೆದುಬಿಟ್ಟಿದ್ದರು. ಆ ದಿನ ಎಲ್ಲರಿಗಿಂತಲೂ ಹೆಚ್ಚಿಗೆ ಸಂಕಟ ಪಟ್ಟಿದ್ದವನು ದುರ್ಯೋಧನ.
ಕಾರಣ ಉಳಿದದ್ದೇನೆ ಇರಲಿ. ಒಬ್ಬ ಮನುಷ್ಯ ವಿದ್ಯೆಯನ್ನೇ ಕದ್ದಿದ್ದರೂ ಅದರಲ್ಲಿ ಸದುದ್ದೇಶ ಇದ್ದರೆ ಮನ್ನಿಸಿ ಬೆಳೆಸಬೇಕಾದ, ಉತ್ತಮ ದಾರಿ ತೋರಬೇಕಾದ ಗುರುವೇ ಬದುಕಿದ್ದೂ ಸತ್ತಂತೆ ಮಾಡಿಬಿಟ್ಟರೇ..? ದುರ್ಯೋಧನ ದ್ರೋಣರ ಈ ಬೇಡಿಕೆಯಿಂದಾಗಿ ಒದ್ದಾಡಿ ಹೋಗಿದ್ದ. ತಾನೆ ಅರಮನೆಯಿಂದ ಸಾಕಷ್ಟು ಸಂಪತ್ತನ್ನು ಕಾಡುಪುತ್ರನಿಗೆ ನೀಡಿ ಹೇಗೋ ಬದುಕಿಕೋ ಎಂದು ಕಣ್ಣೊರೆಸಿ ತಬ್ಬಿ ಸಂತೈಸಿ ಬಂದಿದ್ಡ. ಆ ಹುಡುಗನಾದರೂ ಒಂದಿನಿತಾದರೂ ದ್ರೋಣರ ಬಗ್ಗೆ ಕಪಟವನ್ನಾಡಬೇಕು..? ಉಹೂಂ.. ಬೆರಳೇನು ಗುರುದ್ರೋಣ ಕೇಳಿದ್ದರೆ ಕತ್ತು ಕೂಡಾ ಕೊಟ್ಟು ಬಿಡುತ್ತಿದ್ಡೆ ಎನ್ನಬೇಕೆ...? ಅದೆ೦ಥಾ ಗುರು ಭಕ್ತಿ...?
ಛೇ.. ಅಂಥವನೊಬ್ಬನನ್ನು ತಮ್ಮೊಂದಿಗೆ ಬೆಳೆಸಿದ್ದರೆ ಈ ರಾಜ್ಯಕ್ಕೆ ಅದರಲ್ಲೂ ಹಸ್ತಿನಾಪುರಕ್ಕೊಬ್ಬ ಅದ್ಭುತ ಸೇನಾನಿ ಸಿಗುತ್ತಿದ್ದ ಎಂದು ದ್ರೋಣರು ಯೋಚಿಸಬೇಕಿತ್ತು. ಯಾಕೆಂದರೆ ಇವರೆಲ್ಲಾ ಕಟಿಬದ್ಧರಾಗಿರುವುದು ಹಸ್ತಿನಾವತಿಯ ರಾಜ ಸಿಂಹಾಸನಕ್ಕೆ ಮತ್ತದರ ರಕ್ಷಣೆಗೆ. ಆದರೆ ಅಂತಹ ಅದ್ಭುತ ಬಿಲ್ಗಾರನೊಬ್ಬನ ಬೆರಳೆ ಕತ್ತರಿಸಿಕೊಂಡರಲ್ಲಾ. ಈ ಗುರುಗಳ ಬುದ್ಧಿಗೆ ಅದೇನು ಮ೦ಕೋ ಅಥವಾ ಏಕಲವ್ಯನ ಗ್ರಹಚಾರವೋ ಎಂದುಕೊಳ್ಳುವಾಗಲೇ ತಿಳಿದ ವಿಷಯದಿಂದ ದುರ್ಯೋಧನ ಜುಗುಪ್ಸೆಗೊಂಡಿದ್ದ. ಇಂತಹ ಘಟನೆಗಳ ಅನುಭವವಿದ್ದ ದುರ್ಯೊಧನ ಕೊಂಚ ಅನ್ಯಮನಸ್ಕನಾಗಿಯೇ ನಿಂತಿದ್ದ.
ಈಗ ನೋಡಿದರೆ ಕೇಳುತ್ತಿರುವ ರೀತಿಯೇ ವಿಚಿತ್ರ. ಇವರಿಗೆ ಗುರುದಕ್ಷಿಣೆಯಾಗಿ ಏನೇ ಕೊಡಬೇಕಿದ್ದರೂ ಅದು ಭೀಷ್ಮ ಪಿತಾಮಹ ಅಥವಾ ಅಪ್ಪ ಧೃತರಾಷ್ಟ್ರರ ಜವಾಬ್ದಾರಿ. ಈಗ ತಮ್ಮೆದುರಿಗೆ ಪೀಠಿಕೆ ಇಡುತ್ತಿದ್ದಾರೆ ಅಂದರೆ ಖಂಡಿತಕ್ಕೂ ಇದರಲ್ಲೇನೋ ಗಮ್ಮತ್ತಿದೆ. ನಿಂತಲ್ಲೇ ನೆಟ್ಟ ನೋಟದಿಂದಲೇ ದ್ರೋಣರನ್ನು ದಿಟ್ಟಿಸಿದ ದುರ್ಯೋಧನ ನುಡಿದ.
" ಗುರುಗಳೆ ನಮ್ಮನ್ನೆಲ್ಲ ಕಡೆದು ಶಿಲೆಯಿಂದ ಮೂರ್ತಿಯನ್ನಾಗಿಸಿದವರು ನೀವು. ನಿಮಗೆ ಈ ದೇಹ, ಇದಕ್ಕೆ ನೀಡಿದ ವಿದ್ಯೆ ಸೇರಿದಂತೆ ಸಂಸ್ಕಾರಗಳ ಮೇಲೂ ಸಂಪೂರ್ಣ ಹಕ್ಕಿದೆ. ನಿಮ್ಮ ಬೇಡಿಕೆ ಏನೇ ಇದ್ದರೂ ಸರಿ. ನಮ್ಮೆಲ್ಲ ಸಹೋದರರ ಪರವಾಗಿ ನಾನು ಮಾತು ಕೊಡುತ್ತಿದ್ದೇನೆ. ನೀವು ನಿಸ್ಸಂಕೋಚವಾಗಿ ಏನು ಬೇಕಿದ್ದರೂ ಕೇಳಿ. ಬೆರಳಿನಿಂದ ಹಿಡಿದು ತಲೆಯವರೆಗೂ ನಿಮ್ಮೆದುರಿಗೆ ಇರಿಸುತ್ತೇವೆ..." ಬೇಕೆಂದೆ ಒತ್ತಿ ನುಡಿದ ದುರ್ಯೋಧನ. ಅವನ ಮಾತಿನಲ್ಲಿದ್ದ ಮೊನಚನ್ನು ಗಮನಿಸಿಯೂ ಸುಮ್ಮನಾದರು ದ್ರೋಣ. ಅವರಿಗೀಗ ಕೆದಕುವುದು ಬೇಕಿರಲಿಲ್ಲ. ಅಷ್ಟಕ್ಕೂ ದುರ್ಯೋಧನ ಮೊದಲಿನಿಂದಲೂ ಮಹಾಸ್ವಾಭಿಮಾನಿ. ಹಿಂದಿನಿಂದ ಆಡಿ ಹಂಗಿಸಿದವನಲ್ಲ. ನೇರಾನೇರ ಸ್ನೇಹದಿಂದ ಕದನದವರೆಗೂ. ಅವರು ಒಮ್ಮೆ ಎಲ್ಲರತ್ತ ತಿರುಗಿ ನೋಡಿ ನುಡಿದರು.
" ನೀವೆಲ್ಲರೂ ಈ ಜಗತ್ತಿನಲ್ಲಿಯೇ ಅದ್ಭುತ ಯುದ್ಧ ಯೋಧರಾಗಿ ರೂಪಗೊಂಡಿದ್ದೀರಿ. ನಿಮ್ಮ ಬಾಣ ತೂಣಿರಗಳ ಎದುರಿಗೆ, ಗದೆ ಗುರಾಣಿ ಈಟಿಗಳ ಹೊಡೆತಕ್ಕೆ ಭೂಲೋಕವೇ ಬೆಚ್ಚಿ ಬೀಳಬಲ್ಲದು. ಇವುಗಳನ್ನೆಲ್ಲಾ ಒರೆಗೆ ಹಚ್ಚುವ ಕಾಲ ಇದೀಗ. ನೀವೆಲ್ಲಾ ಗುರುದಕ್ಷಿಣೆಯಾಗಿ ಕಾಂಪಿಲ್ಯದ ದೊರೆ ದ್ರುಪದನನ್ನು ಯುದ್ಧದಲ್ಲಿ ಕೆಡವಿ ಹೊತ್ತುಕೊಂಡು ಬಂದು ನನ್ನ ಮನೆಯ ಮ೦ಚದ ಕಾಲಿಗೆ ಕೆಡುವಬೇಕು ಹೇಳಿ ಸಾಧ್ಯವೇ....?" ದ್ರೋಣರ ವಿಲಕ್ಷಣ ಬೇಡಿಕೆಗೆ ಒಂದರೆಕ್ಷಣ ಧರ್ಮರಾಯನೂ ಯೋಚಿಸಿದ. ಅರ್ಜುನ ಬಿಲ್ಲಿನ ಮೇಲಿನ ಹಿಡಿತ ಬಿಗಿಸಿ ಏನು ಹೇಳಲಿ ಎಂದು ತಲೆ ಅತ್ತಿತ್ತ ಕುಣಿಸಿದ. ಆದರೆ ಮಾತು ಕೊಟ್ಟಾಗಿದೆ ಇನ್ನೇನು ಯೋಚಿಸುವುದಿದೆ. ರಾಜಧರ್ಮವನ್ನು ಮರೆಯುವುದು ಹೇಗೆ ಸಾಧ್ಯ...? ಎದೆಸೆಟೆಸಿ ಹೆಗಲಿಗೆ ಗದೆಯೇರಿಸಿ ನುಡಿದ ದುರ್ಯೋಧನ.
" ಗುರುಗಳೆ. ನಿಮ್ಮ ಮಾತು ನಮಗೆ ಆಜ್ಞೆ ಅದನ್ನು ಕೋರಿಕೆಯಾಗಿಸಬೇಕಿಲ್ಲ. ದ್ರುಪದ ನಿಮ್ಮ ಮ೦ಚಕ್ಕೆ ಬಂದು ಬಿದ್ದ ಎಂದು ತಿಳಿದುಕೊಳ್ಳಿ ಇದು ಶತ:ಸಿದ್ಧ.. ಆದರೆ.." ಎಂದು ನಿಲ್ಲಿಸಿದ.
" ಏನದು..?" ದ್ರೋಣ ಕಣ್ಣನ್ನು ಕಿರಿದುಗೊಳಿಸಿದರು. ಕಾರಣ ದುರ್ಯೋಧನನದ್ದು ಛಲದಲ್ಲೂ, ಕೊಟ್ಟ ಮಾತಿಗೂ ಎದಿರಿಲ್ಲ. ಮಾತು ಆಡಿದೊಡನೆ ಅದಕ್ಕೆ ಬದ್ಧ. ಅದರಲ್ಲೂ ಅವನ ಗದೆಯ ಕೌಶಲ್ಯದ ಎದುರಿಗೆ ಭೀಮನನ್ನು ಹೊರತು ಪಡಿಸಿದರೆ ನಿಲ್ಲಬಲ್ಲವರು ಯಾರೂ ಇಲ್ಲ. ದ್ರುಪದ ಕಾಲಡಿಗೆ ಬರುವುದರಲ್ಲಿ ಸಂಶಯವಿಲ್ಲ. ಒಳಗೊಳಗೆ ಹೆಮ್ಮೆಯಾಯಿತು ಅವರಿಗೆ. ಆದರೆ ಇವನ ಸಂಶಯವೇನೋ..? ದ್ರೋಣ ನಿಂತಲ್ಲೇ ಕೊಸರಿದರು.
" ಗುರುಗಳೆ. ದ್ರುಪದ ನಮಗೆಲ್ಲ ಒಬ್ಬ ರಾಜನಾಗಿ ಪರಿಚಯವೇ ಹೊರತಾಗಿ ಯಾವುದೇ ರೀತಿಯಲ್ಲೂ ಸಮಾನ ಶತ್ರುವೂ, ಸಮಾನ ಮಿತ್ರನೂ ಅಲ್ಲವೇ ಅಲ್ಲ. ಯಾವುದೇ ಕಾರಣಗಳಿಲ್ಲದೇ ಅನ್ಯಾಯವಾಗಿ ನಾವು ಅವನನ್ನು ಯುದ್ಧರಂಗಕ್ಕೆ ಕರೆತರುವಂತಿಲ್ಲ. ಅದು ರಾಜಧರ್ಮವೂ ಅಲ್ಲ. ಹಳೆಯ ದ್ವೇಷ, ಅಸೂಯೆ ಅಥ್ವಾ ಭೂ ವಿವಾದ ಸೇರಿದಂತೆ ಯಾವುದರಲ್ಲೂ ಪಾಂಚಾಲ ರಾಜ ನಮ್ಮೊಂದಿಗೆ ಮುಖ, ಕೈ, ಬಾಯಿ ಕೆಡಿಸಿಕೊಂಡಿದ್ದಿಲ್ಲ. ಅನಾವಶ್ಯಕವಾಗಿ ದ್ರುಪದ ಹಸ್ತಿನಾವತಿಯೊಂದಿಗೆ ಜಿದ್ದಿಗೆ ಬಿದ್ದ ಅಧರ್ಮೀಯನೂ ಅಲ್ಲ. ಹೋಗಲಿ ಹೆಣ್ಣುಗಳಿವೆ ಅವನ್ನಾದರೂ ಹೊತ್ತು ತರೋಣ ಎಂದರೆ, ಆಗೇನಾದರು ಅವನು ತಿರುಗಿ ಬಿದ್ದರೆ ಅವನನ್ನೂ ಮೂಟೆ ಕಟ್ಟಿ ಹೊತ್ತು ತಂದು ಕ್ಷತ್ರೀಯ ಧರ್ಮ ಮೆರೆಯೋಣ ಎಂದರೆ ದ್ರುಪದನಿಗೆ ಹೆಣ್ಣು ಮಕ್ಕಳೂ ಇಲ್ಲ. ನಿಮಗೆ ಮದುವೆ ಯೋಗ್ಯ ಗಂಡು ಮಕ್ಕಳೂ ಇಲ್ಲ. ಹೀಗಿದ್ದಾಗ ನಾನು ನನ್ನ ಸಹೋದರರೊಡನೆ ನಿಮ್ಮ ದಕ್ಷಿಣೆಯಾಗಿ ದ್ರುಪದನನ್ನು ಹೆಡೆಮುರಿಗೆ ಕಟ್ಟಿ ಹೊತ್ತುಕೊಂಡು ಬರುವಾಗ, ರಾಜ ಧರ್ಮದಂತೆ ದ್ರುಪದನನ್ನು ಹೊತ್ತೊಯ್ಯುತ್ತಿರುವುದಾದರೂ ಏಕೆ ಎಂದು ಅವನಿಗೆ ಹೇಳಬೇಕಲ್ಲವಾ..?
ರಾಜ್ಯದ ಮೇಲೆ ದಾಳಿ ಮಾಡಿದಾಗ ಶತ್ರುನಾಶವೇ ವಿನಃ ನಾಗರಿಕ ನಾಶ ರಾಜಧರ್ಮವಲ್ಲ. ಹೀಗಿದ್ದಾಗ ಅಲ್ಲಿಯ ಪ್ರಜೆಗೂ ರಾಜನ ಕಾರ್ಯಗಳ ಹಿಂದಿನ ರಾಜಕಾರಣವನ್ನು ಅರಿತುಕೊಳ್ಳುವ ಹಕ್ಕಿದ್ದೇ ಇದೆ. ಜನ ಸಾಮಾನ್ಯನೊಬ್ಬ ನನ್ನನ್ನೋ, ನನ್ನ ತಮ್ಮ೦ದಿರನ್ನೋ, ಹಸ್ತಿನಾವತಿಯ ರಾಜಕುಮಾರರೇ ಏಕೆ ನಮ್ಮ ಮೇಲೆ ದಾಳಿ ಮಾಡಿದಿರಿ ಎಂದು ಕೇಳಿದರೆ ಏನೆಂದು ಉತ್ತರಿಸುವುದು..? ಸ್ವತ: ದ್ರುಪದನಿಗಲ್ಲದಿದ್ದರೂ ರಾಜವಾಡೆಯ ಹೆಣ್ಣು ಮಗಳ್ಯಾರಾದರೂ ಎದುರಿಗೆ ನಿಂತ ನನ್ನ ಪ್ರಶ್ನಿಸಿದರೆ, ಉತ್ತರಿಸದೆ ಧಿಮಾಕಿನಿಂದ ದ್ರುಪದನನ್ನು ಹೊತ್ತು ತಂದೆವಾದರೆ ಅದಕ್ಕಿಂತ ಹೇಯ ರಾಜಧರ್ಮ ಇನ್ನೊಂದಾಗಲಿಕ್ಕಿಲ್ಲ. ಕುರುಕುಲಕ್ಕೆ ಅದು ಶೊಭೇಯೂ ಅಲ್ಲ. ಹೀಗಾಗಿ ತಾವು ದಯವಿಟ್ಟು ದ್ರುಪದನ ಮೇಲೆ ಸವಾರಿ ಮಾಡುವ ನಮ್ಮ ಯುದ್ಧದ ಹಿಂದಿನ ಉದ್ದೇಶವನ್ನು ತಿಳಿಸಿದರೆ ಅಷ್ಟರಮಟ್ಟಿಗೆ ನಾವು ರಾಜಧರ್ಮದೊಂದಿಗೆ ನಮ್ಮ ವಿಜಯಯಾತ್ರೆ ಆರಂಭಿಸುತ್ತೇವೆ. ದ್ರುಪದನನ್ನು ಕರೆತರುವುದರಲ್ಲಿ ತಾವು ಸಂಶಯ ಇಟ್ಟುಕೊಳ್ಳಬಾರದು..." ಒಂದರೆಕ್ಷಣ ಎಲ್ಲರೂ ನಿಶಬ್ದರಾಗಿ ನಿಂತುಬಿಟ್ಟರು. ಯಾರೊಬ್ಬರೂ ತೆಗೆದು ಹಾಕುವ ಮಾತಲ್ಲ ಅದು.
ಅದು ನಿಜಕ್ಕೂ ಭವಿಷ್ಯದ ಮಹಾರಾಜನೊಬ್ಬ ಆಡಿದ ಮಾತುಗಳು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ. ಗುರು ದ್ರೋಣರೂ ಅವನ ಮಾತಿಗೆ ಒಂದು ಕ್ಷಣ ತಲೆದೂಗಿದರು. ಸ್ವಯಂ ಧರ್ಮರಾಯನಂತೂ ಪಕ್ಕಕ್ಕೆ ಬಂದು ದುರ್ಯೋಧನನ ತೋಳು ಸವರಿ "..ನಿನ್ನ ಮಾತು ಸರಿ, ನಿನ್ನ ನಡೆಯೂ ಸರಿ.."ಎಂದು ಬೆಂಬಲಕ್ಕೆ ನಿಂತ. ದ್ರೋಣರಿಗೂ ಸುಲಭಕ್ಕೆ ನೆವ ಹೇಳುವ ಹಾಗಿರಲಿಲ್ಲ. ಸಾವರಿಸಿಕೊಂಡು ದುರ್ಯೋಧನನಿಗೆ ತೃಪ್ತಿಯಾಗುವಂತೆ ಧರ್ಮಕ್ಕೆ ಚ್ಯುತಿ ಬಾರದಂತೆ ಚಾಣಾಕ್ಷತೆಯಿಂದ ಉತ್ತರಿಸಬೇಕು, ಎಲ್ಲಾ ಎದುರಿಗೆ ನಿಂತು ತಮ್ಮನ್ನೇ ನೋಡುತ್ತಿದ್ದಾರೆ. ಗ್ರಹಿಸಿ ಮಾತಾಡಬೇಕು. ಅಷ್ಟರಲ್ಲಿ ಹಿಂದಿನಿಂದ ಬಾಣದಂತೆ ನುಗ್ಗಿಬಂದ ಚಾಲಾಕಿ ಅರ್ಜುನ. ಬಿಲ್ಲನ್ನು ಎದುರಿಗೆ ಇರಿಸಿ ಮಂಡಿಯೂರಿ, ಕೈ ಮುಂದೆ ಮಾಡಿ ಪ್ರತಿಜ್ಞೆ ಮಾಡುವವನಂತೆ ಭೀಕರವಾಗಿ ನುಡಿದ.
" ಗುರುಗಳೆ ನೀವು ಕೇಳಿದಿರಿ ಆಯಿತು. ಗುರುವಿನ ಶಬ್ದಕ್ಕೆ ಎದುರು ನನ್ನಿಂದಾಗದು. ಪಥ್ಯವೋ ಅಪಥ್ಯವೋ ನಿಮ್ಮ ಮಾತು ನನಗೆ ಅಪ್ಪಣೆ. ಅಲ್ಲಿ ಧರ್ಮಾಧರ್ಮದ ಚರ್ಚೆ ಇಲ್ಲ. ಅಣ್ಣ ದುರ್ಯೋಧನ ನಿಮಗೆ ಮಾತು ಕೊಟ್ಟಾಗಿದೆ. ಅದಕ್ಕೆ ಉತ್ತರದ ಅವಶ್ಯಕತೆ ಇಲ್ಲ. ಈಗಲೇ ನಾವು ದ್ರುಪದನ ಮೇಲೆ ದಾಳಿಗಿಳಿಯುತ್ತೇವೆ. ನಿಮ್ಮ ಮುಂದಿನ ನಿದ್ರಾವಧಿಯೊಳಗೆ ನಿಮ್ಮ ಮ೦ಚದ ಕಾಲಿಗೆ ದ್ರುಪದನ ದೇಹ. ಗುರುವಿನ ಮಾತು ಮತ್ತು ಆಜ್ಞೆ ಎರಡಕ್ಕೂ ವ್ಯತ್ಯಾಸವಿಲ್ಲ.." ಎದೆಸೆಟೆಸಿ ನಿಂತುಬಿಟ್ಟ. ಒಂದರೆಕ್ಷಣದಲ್ಲಿ ಚೇತರಿಸಿಕೊಂಡು ಬಿಟ್ಟರು ದ್ರೋಣ. ಅವರಿಗೂ ಸನ್ನಿವೇಶದಿಂದ ಪಾರಾದ ತೃಪ್ತಿ. ಹಾಗಾಗಿ ತತಕ್ಷಣಕ್ಕೆ ಎಲ್ಲರಿಗೂ ಆಶೀರ್ವದಿಸುವಂತೆ ಕೈ ಯೆತ್ತಿ " ವಿಜಯೀ ಭವ " ಎಂದು ಅವನನ್ನೆಬ್ಬಿಸಿದರು. ತಮ್ಮ ಬತ್ತಳಿಕೆಯಿಂದ ಬಾಣಗಳ ಗಂಟೊಂದನ್ನು ಕೊಡುತ್ತಾ,
" ಅರ್ಜುನಾ. ಇದರಲ್ಲಿ ವಿಶೇಷ ದಿವ್ಯಾಸ್ತ್ರಗಳೆಲ್ಲಾ ಸೇರಿವೆ. ಇವನ್ನು ನನ್ನ ಬಿಟ್ಟು ಇನ್ಯಾರು ಈ ಜಗತ್ತಿನಲ್ಲಿ ಎದುರಿಸಲು ಬಲ್ಲವರಿಲ್ಲ. ಈಗ ನಿನಗೆ ಇವನ್ನೆಲ್ಲಾ ಧಾರೆಯೆರೆಯುತ್ತಿದ್ದೇನೆ. ಇಂದಿನಿಂದ ನಿನಗೆ ಈ ಜಗತ್ತಿನಲ್ಲಿ ಎದುರಾಳಿಯಾಗಿ ಯಾವ ಬಿಲ್ಲುಗಾರನೂ ನಿಲ್ಲಲಿಕ್ಕೆ ಸಾಧ್ಯವಿಲ್ಲ. ಸ್ವಯಂ ಶಂಕರನೂ ಕೂಡಾ ನಿನ್ನ ಬಾಣಗಳಿಗೆ ಬೆಚ್ಚಬಲ್ಲ. ಜಯಶಾಲಿಯಾಗಿ ಬಾ..." ಎ೦ದು ನುಡಿದು ಎದ್ದು ನಡೆದುಬಿಟ್ಟರು. ಗುಂಪು ನಿಧಾನಕ್ಕೆ ಕರಗಿತು. ಅರ್ಜುನ ಯುದ್ಧೋನ್ಮಾದದಿಂದ ರಥವೇರಿ ನಡೆದ. ಅವನ ಹಿಂದೆ ಉಳಿದ ಸಹೋದರರು.
ಅಗಾಧ ಕ್ರೀಡಾಂಗಣದ ಮಧ್ಯೆ ಏಕಾಂಗಿಯಾಗಿ ನಿಂತೆ ಇದ್ದ ದುರ್ಯೋಧನ. ಅವನ ಮನ ಮೂಕವಾಗಿ ರೋಧಿಸುತ್ತಿತ್ತು. ಯಾವುದು ಹಾಗಿದ್ದರೆ ರಾಜಧರ್ಮ...? ತಾನೇನು ದ್ರುಪದನನ್ನು ಹೊತ್ತು ತರುವುದಿಲ್ಲವೆಂದು ಹೇಳಿಲ್ಲ. ಆ ಲೆಕ್ಕಕ್ಕೆ ತನ್ನ ಏಟಿಗೆ ದ್ರುಪದನ ಸೈನ್ಯ ಒಂದು ಲೆಕ್ಕವೇ ಅಲ್ಲ. ಆದರೆ ಅಮಾಯಕರ ರಕ್ಷಣೆ ಮತ್ತು ನ್ಯಾಯಯುತ ವಿಚಾರವನ್ನಷ್ಟೆ ಪ್ರಸ್ತಾಪಿಸಿದ್ದೆ. ಅದು ರಾಜಧರ್ಮ ಕೂಡಾ. ಆದರೆ ಅವನು ಧರ್ಮಾಧರ್ಮದ ಯೋಚನೆಯಲ್ಲಿ ಯುದ್ಧರಂಗದಲ್ಲಿ ಗುರುವಿನ ಕೋರಿಕೆ ತೀರಿಸುವ ಸಲುವಾಗಿ ಕಾದಲು ಸನ್ನಧ್ಧನಾಗಿ ಹೋದರೂ ಕೊನೆಯಲ್ಲಿ ಆಗಿದ್ದೆ ಬೇರೆ. ದುರ್ಯೋಧನ ಮತ್ತೊಮ್ಮೆ ಗೆದ್ದರೂ, ತಾತ್ವಿಕವಾಗಿಯೂ ತಾಂತ್ರಿಕವಾಗಿಯೂ ಅದೃಷ್ಟದ ಎದುರಿಗೆ ಸೋತುಹೋಗಿದ್ದ.


1 comment:

  1. ನಿಜಕ್ಕೂ ಭವಿಷ್ಯದ ಮಹಾರಾಜನೊಬ್ಬ ಆಡಿದ ಮಾತುಗಳು ಎನ್ನುವುದರಲ್ಲಿ ಎರಡು ಮಾತಿರಲಿಲ್ಲ. great words sir

    ReplyDelete