ಕಾಶಿ ರಾಜಕುಮರಿಯರನ್ನು ಗೆದ್ದು ಹೊರಟಿದ್ದನಷ್ಟೆ. ಎದುರಿಗೆ ಸಾಲ್ವ ಬಂದಿದ್ದ. ಅವನನ್ನೂ ಸೋಲಿಸಿಯಾಗಿತ್ತು. ಆದರೆ ಆತ ಹಾಗೆ ಅಜೇಯ ಗಾಂಗೇಯನೆದುರಿಗೆ ಬರಲು ಕಾರಣವಿತ್ತು. ಮೂವರಲ್ಲಿ ಒಬ್ಬಳು ಆಗಲೇ ಸಾಲ್ವ ರಾಜನನ್ನು ಬಯಸಿದ್ದವಳು. ಸಾಲ್ವ ಕೂಡಾ ಅಂಬೆಯನ್ನು ಪ್ರೀತಿಸಿದ್ದ. ಅದಕ್ಕಾಗೇ ಸಾಲ್ವನ ಸೋಲು ಅರಗಿಸಿಕೊಳ್ಳದ ರಾಜಕುಮಾರಿಯೊಬ್ಬಳು ಸಿಡಿದು ಕೇಳಿಬಿಟ್ಟಿದ್ದಳು.
"..ಜೀವಮಾನವಿಡಿ ಮದುವೆಯಾಗಲ್ಲ ಎಂದಿದ್ಯಲ್ಲ ಅಜೇಯ ಭೀಷ್ಮ ಆದರೆ ಈ ಸ್ವಯಂವರಕ್ಕೇಕೆ ಬಂದೆ..?" ಎಂದು ಅಂಬೆ ಪ್ರಶ್ನಿಸಿದಾಗ ಅವನಿಗೆ ತಲೆ ತಗ್ಗಿಸುವಂತಾಗಿದ್ದರೂ ಹೆದೆ ಏರಿಸಿ ಎದುರಿಗಿದ್ದ ರಾಜರನ್ನೆಲ್ಲಾ ಬಗ್ಗು ಬಡಿದು ಮೂವರೂಕನ್ಯೆಯರನ್ನು ಹೊತ್ತು ತಂದು, ಮದುವೆ ಮಾಡಲು ಅಣಿಯಾಗಿದ್ದ. ಆದರೆ ಘಟಿಸಿದ್ದೇ ಬೇರೆ. ಅದಕ್ಕಾಗಿ ಆಕೆ ತಿರುಗಿಬಿದ್ದಿದ್ದಳು. ತಪ್ಪನ್ನು ಸರಿಪಡಿಸಲು ಇಬ್ಬರನ್ನು ವಿಚಿತ್ರವೀರ್ಯನಿಗೆ ಉಳಿಸಿ ಕೊನೆಯವಳನ್ನು ಸಾಲ್ವನಿಗೆ ಹಿಂದಿರುಗಿಸಲು ಸ್ವತ: ಹೋದಭೀಷ್ಮ ಎದುರಿಸಿದ್ದು ದೊಡ್ಡ ಪ್ರಹಸನ. ಸೋತಿದ್ದ ಸಾಲ್ವನೂ ಆಕೆಯನ್ನು ತಿರಸ್ಕರಿಸಿದ್ದ.
ಆ ದಿನ ಸಾಮಾಜಿಕವಾಗಿ ಎರಡೂ ಕಡೆಯಿಂದ ತಿರಸ್ಕೃತಗೊಂಡು ಅವಮಾನಕ್ಕೀಡಾಗಿ ಎದುರು ನಿಂತ ಅಂಬೆ ಮೇಲಿನಂತೆ ಪ್ರಶ್ನಿಸಿದ್ದಳಲ್ಲದೆ " ಭೀಷ್ಮ ನಿನ್ನ ಅವಸಾನಕ್ಕೆ ನಾನೇ ಕಾರಣಳಾಗುತ್ತೇನೆ. ಹೆಣ್ಣನ್ನು ವರಿಸದ, ಗಂಡಸರನ್ನೂ ಅವಮಾನಿಸಿದನೀನು ಎರಡೂ ಅಲ್ಲದ ಶಿಖ೦ಡಿಯವತಾರದ ಜೀವಿಯಿಂದ ನಾಶ ಹೊಂದುತ್ತಿ..!" ಎಂದು ಹತಾಶೆಯಿಂದ ಪ್ರತಿಜ್ಞೆಗೈದು ಪ್ರಾಣಾರ್ಪಣೆ ಮಾಡಿಕೊಂಡು ಬಿಡಬೇಕೆ...? ಅತೃಪ್ತ ಆತ್ಮ ಖಂಡಿತವಾಗಿಯೂ ನೆಲೆ ಹುಡುಕುತ್ತದೆ. ತನ್ನ ಇಷ್ಟಾರ್ಥ ಸಿದ್ಧಿಸುವವರೆಗೆ. ಹಾಗಾಗೇ ಅಲ್ಲೆಲ್ಲೋ ಅಲೆಯುತ್ತಿದ್ದ ಆತ್ಮ ಮುಂದೆಂದೋ ಶಿಖಂಡಿಯಾಗಿ ಜನ್ಮ ತಳೆಯಿತು. ಇಷ್ಟೆಲ್ಲಾ ನಡೆದ ಮೇಲೆ ಆ ವಿಷಾದನೀಯ ಪ್ರಸಂಗದಿಂದ ಆಗ ತಾತ್ಪೂರ್ತಿಕವಾಗಿ ಭೀಷ್ಮ ಪಾರಾಗಿದ್ದ. ಅಂಥಾ ಭೀಷ್ಮ ಈಗ ಗಾಂಧಾರದತ್ತ ಹೊರಟಿದ್ದ ಕುರುಡರಾಜಕುಮಾರ ಧೃತರಾಷ್ಟ್ರನಿಗೆ ಹೆಣ್ಣು ಕೇಳಲು.
ಧೃತರಾಷ್ಟ್ರನಿಗೆ ಹೆಣ್ಣು ಹುಡುಕಲು ತಾನೇ ಸ್ವಯಂವರಕ್ಕೆ ಹೊರಟು ನಿಂತರೆ ಮತ್ತದೇ ತಾಂತ್ರಿಕ ತೊ೦ದರೆ ಇದ್ದುದರಿಂದ ಈ ಬಾರಿ ಸ್ವಯಂವರದ ಮಾತೇ ಬೇಡ. ಹಾಗೆಯೇ ಸಂಬಂಧ ಹುಡುಕಿಕೊಂಡು ದೂರಕ್ಕೆ ಹೊರಟು ಹೋಗೋಣ ಎ೦ದು ಸ್ವಯಂಭೀಷ್ಮ ಹೊರಟು ನಿಂತಿದ್ದ. ಇಲ್ಲದಿದ್ದರೆ ಯಥಾ ಪ್ರಕಾರ ಕುರು ರಾಜವಂಶಕ್ಕೆ ಸಂತಾನ ಹೀನತೆ. ಹಾಗಾಗೇ ನೇರ ನಡೆದು ತಲುಪಿದ್ದು ಸುಬಲನ ಗಾ೦ಧಾರ ದೇಶಕ್ಕೆ. ಕಾರಣ ಗಾಂಧಾರ ರಾಜ ಸುಬಲನಿಗೆ ಸರಿಯಾಗಿ ಹನ್ನೊಂದು ಹೆಣ್ಣು ಮಕ್ಕಳಿದ್ದಾರೆಎನ್ನುವ ಸುದ್ದಿ ಭೀಷ್ಮನಿಗೆ ಸ್ಪಷ್ಟವಾಗೇ ದೊರಕಿತ್ತು. ಗಾಂಧಾರ ರಾಜ ಸುಬಲನೂ ಹಲವು ಮದುವೆಗಳನ್ನು ಆಗಿ ಹನ್ನೊಂದು ಜನ ಹೆಣ್ಣು ಮಕ್ಕಳನ್ನು, ಶಕುನಿ ಸೇರಿದಂತೆ ನೂರು ಜನ ಗಂಡು ಮಕ್ಕಳನ್ನು ಪಡೆದಿದ್ದವನು.
ಮುಂದಿನದು ಇತಿಹಾಸ. ಗಾಂಧಾರದ ಒಳಕೋಣೆಯ ಚರ್ಚೆಯಲ್ಲಿ ಅದೇನೇನಾಯಿತೋ ಗೊತ್ತಿಲ್ಲ. ಒಲ್ಲದ ಮನಸ್ಸಿನಿಂದ ಕುರುಡನೊಂದಿಗಿನ ಸಂಸಾರಕ್ಕೆ ಗಾಂಧಾರಿ ಒಪ್ಪಿದ್ದಳೆನ್ನುವುದು ಒಂದೆಡೆಯಾದರೆ, ಗಾಂಧಾರ ತುಂಬ ಸುಂದರ ರಾಜ್ಯ ಮತ್ತುನೆಮ್ಮದಿಯ ಜನತೆಯನ್ನು ಹೊಂದಿದ್ದು ಅದೆಲ್ಲವನ್ನೂ ಭೀಷ್ಮನ ಕೋಪಕ್ಕೆ ಬಲಿಹಾಕಲಾರದೆ ರಾಜ ಪರಿವಾರ ಇಂಥಾ ತ್ಯಾಗಕ್ಕೆ ಮುಂದಾದರೆನ್ನುವುದೂ ಒಳಗೊಳಗೆ ನಡೆದ ವಿದ್ಯಮಾನ. ಒಟ್ಟಾರೆ ಅಲ್ಲಿಂದ ಕಣ್ಣಿಗೆ ಬಟ್ಟೆ ಬಿಗಿದುಕೊಂಡ ಗಾಂಧಾರಿ ನಡೆದುಬಂದರೆ, ಅವಳ ಹಿಂದೆ ವಿಲಕ್ಷಣ ಕಣ್ಣುಗಳ ಮೊನಚು ಮುಖದ ಶಕುನಿ ಕೂಡಾ ನಡೆದುಬಂದ ತನ್ನ ಪಕ್ಕೆಗೆ ನೇತಾಡಿಸಿಕೊಂಡಿದ್ದ ಎಲುಬಿನ ದಾಳಗಳ ಜೊತೆಗೆ. ಅಂತೂ ಕುರು ಸಿಂಹಾಸನಕ್ಕೆ ರಾಣಿ ದೊರಕಿದಳು ಎನ್ನುವ ಸಂತೋಷದ ಜೊತೆಗೆಹಸ್ತಿನಾಪುರಕ್ಕೆ ಆತಂಕವನ್ನೂ ತರುತ್ತಿದ್ದೇನೆಂದು ಆ ಕ್ಷಣಕ್ಕೆ ಭೀಷ್ಮ ಅರಿಯದೆ ತಪ್ಪು ಮಾಡಿದ್ದ. ಧೃತರಾಷ್ಟ್ರನಿಗಂತೂ ಶಕುನಿಯಂಥವನೊಬ್ಬ ಬಂದು ಸೇರುತ್ತಿರುವುದು ಯಾವ ಲೆಕ್ಕದಲ್ಲೂ ಕುರುಕುಲಕ್ಕೆ ಅವಾಂತರವಾದೀತು ಎನ್ನುವದು ಯಾವಕಾರಣಕ್ಕೂ ಅನ್ನಿಸುವ ಅವಕಾಶವೇ ಇರಲಿಲ್ಲ. ಇನ್ನು ಮೇಲೆ ಪಾಂಡುವಿಲ್ಲದ್ದರಿಂದ ಮಹಾರಾಜನೂ ನಾನೇ, ಮುಂದೆ ಮಕ್ಕಳಾದ ಮೇಲೆ ಅವರೇ ವಾರಸುದಾರರೂ ಕೂಡಾ ಎಂದುಕೊಂಡಿದ್ದ ಅಷ್ಟೆ. ಆದರೆ ಅತ್ತ ಪಾಂಡುವಿನ ಪತ್ನಿ ಕುಂತಿ ಮಗುವನ್ನುಹಡೆದಿರುವ ಸುದ್ದಿ ರಾಜಭವನ ತಲುಪಿತ್ತು. ಎಲ್ಲಕ್ಕಿಂತಲೂ ಸಂಕಟ ಮತ್ತು ತಳಮಳ ಪಟ್ಟವನೆಂದರೆ ಧೃತರಾಷ್ಟ್ರ.
ಕಾರಣ ಮೊದಲೇ ಸಿಂಹಾಸನ ಹಗಲುಗನಸಾದಾಗ ತಾನಾಗೇ ಒಲಿದು ಬಂದಿದ್ದು ಕಿರೀಟ. ಮದುವೆಯಾಗುವುದೇ ಕಷ್ಟವಾಗಿ ಭವಿಷ್ಯ ಪೂರ್ತಿ ಮಂಕೇನೋ ಎನ್ನಿಸುವಾಗ, ದೊಡ್ಡಪ್ಪ ಅದನ್ನು ನಿವಾರಿಸಿ ಸಂಸಾರ ಸುಖದ ಅನುಭವ ನೀಡಿದ್ದ. ಈಗಮಗುವಾಗಲು ಗಾಂಧಾರಿ ಗರ್ಭ ಧರಿಸಿ ಹಡೆಯಲು ಕಾಯುವ ಮುಂಚೆ ಅತ್ತ ಕುಂತಿ ಹಡೆದು ಕುಳಿತಿದ್ದಾಳೆ. ಅಂದರೆ ಅಲ್ಲಿಗೆ ಪಾಂಡು ಶಾಪ ವಿಮೋಚನೆ ಹೊಂದಿದ್ದಾನೆ. ಹಾಗಾದರೆ ಅರಮನೆಗೆ ಹಿಂದಿರುಗುತ್ತಾನೆ. ದೊಡ್ಡಪ್ಪ ಹಿಂದಿನಂತೆ ನನ್ನಕುರುಡುಗಣ್ಣಿನ ನೆಪದಲ್ಲಿ ಅವನಿಗೆ ಮರಳಿ ರಾಜ್ಯಾಭಿಷೇಕ ಮಾಡುತ್ತಾನೆ. ಸಂಕಟದಲ್ಲಿ ಬೆಂದು ಹೋದ ಧೃತರಾಷ್ಟ್ರನಿಗೆ ಹಿಂದೆಯೇ ಬಂದಾವರಿಸಿದ್ದು ಗಾಂಧಾರಿಯ ಒಳಗುದಿ. ಅದೆಂದರೆ ದಿನಗಳು ತುಂಬಿದ್ದರೂ ಮಗು ಹೊರಕ್ಕೆ ಬರುವ ಲಕ್ಷಣವೇಕಾಣದಿರುವುದು. ಜೀವನ ಪೂರ್ತಿ ಹಸ್ತಿನಾವತಿಗಾಗಿ, ತನ್ನ ಗಾಂಧಾರದ ಒಳಿತಿಗಾಗಿ ಜೀವ ತೇಯಲು ನಿರ್ಧರಿಸಿದ್ದಾಗಿಬಿಟ್ಟಿತ್ತು. ಅದಕ್ಕೆ ಸರಿಯಾಗಿ ಇಷ್ಟೆಲ್ಲಾ ತ್ಯಾಗಕ್ಕೆ ಬದಲಾಗಿ ತನ್ನ ಗರ್ಭದಿಂದ ಹುಟ್ಟುವ ಮಗುವೇ ಹಸ್ತಿನಾವತಿಯನ್ನು ಆಳಲಿದೆ ಎಂಬಸಮಾಧಾನವಾದರೂ ಇತ್ತು.
ಈಗ ಅದೂ ಆಗುತ್ತಿಲ್ಲ. ಲೆಕ್ಕದಂತೆ ಮೊದಲು ಗರ್ಭಿಣಿಯಾದವಳು ತಾನು. ಆದರೆ ಅತ್ತ ಕುಂತಿ ಹಡೆದು ಕುಂತಿದ್ದಾಳೆ, ಅದಕ್ಕಾಗಿಯೇ ನಿಯೋಗ ಆಚರಿಸಿದ್ದಾಳೆ. ಸಿಂಹಾಸನಕ್ಕಾಗಿ ರಾಜಮನೆತನದ ಹೆಂಗಸರು ಎಂಥೆ೦ಥಾ ಅನೈತಿಕ ಅನ್ಯಾಯಗಳಿಗೂ ಕೈಹಾಕುತ್ತಾರೆ, ಹೇಗೆಲ್ಲಾ ಮುಂದುವರೆಯಲು ಸಿದ್ಧರಿರುತ್ತಾರೆ, ಏನೇನು ಮಾಡುತ್ತಾರೆ ಎಂದೆಲ್ಲಾ ರಾಜಮನೆತನದ ಗಾಂಧಾರಿಗೆ ಹೇಳಿಕೊಡಬೇಕಿರಲಿಲ್ಲ. ಒಮ್ಮೆ ಅರಸು ಕುಲದ ಅಗತ್ಯತೆ ಮತ್ತು ಆ ಧಾರ್ಷ್ಟ್ಯವನ್ನೂ ಮೈಗೂಡಿಸಿಕೊಂಡ ಮೇಲೆ ಕುಟುಂಬದಹೆಂಗಸರೂ ಕೂಡಾ ಯಾವ ನಿರ್ಧಾರವನ್ನು ಕೈಗೊಳ್ಳಲೂ ಹಿಂಜರಿಯುವುದಿಲ್ಲ ಎನ್ನುವುದು ಹೊಸದೇನಲ್ಲ ಇತಿಹಾಸದಲ್ಲಿ. ಇವೆಲ್ಲ ದೂರದೃಷ್ಟಿಯಿಂದ ಕುಂತಿ ತುಂಬಾ ದೊಡ್ಡ ನಿರ್ಧಾರಗಳನ್ನು ಕಾಡಿನಲ್ಲಿ ಕುಳಿತೆ ತೆಗೆದುಕೊಂಡಿದ್ದಾಳೆ ಮತ್ತು ಅದಕ್ಕಾಗಿತನಗಿಷ್ಟವಾದ ಪುರುಷರನ್ನು ಆಯ್ದುಕೊಂಡು ನಿಯೋಗ ಆಚರಣೆಯ ನೆಪದಲ್ಲಿ ಬಸಿರಾಗಿದ್ದಾಳೆ. ಎಷ್ಟೆಂದರೂ ಅವಳ ಕುಟುಂಬದ ಮೇಲೆ ರಾಜ ಪರಿವಾರಕ್ಕೂ ವಿಶೇಷ ಮಮತೆ ಇದೆ. ಅದಕ್ಕಾಗಿ ಭವಿಷ್ಯಕ್ಕಾಗಿ ಬದುಕಿನ ಗತಿವಿಧಿಗಳನ್ನು ಅತ್ಯಂತಸ್ಪಷ್ಟವಾಗಿ ಚಲಾಯಿಸುತ್ತಿದ್ದಾಳೆ.
ಆದರೆ ಎಲ್ಲಾ ತ್ಯಾಗಗಳ ಹೊರತಾಗಿಯೂ ನಾನಿಲ್ಲಿ ಕುಳಿತು ಏನು ಮಾಡುತ್ತಿದ್ದೇನೆ..? ಕುರುವಂಶಜನಾಗಿ ಹಿರಿಯ ರಾಜಕುಮಾರ ತನ್ನ ಹೊಟ್ಟೆಯಿಂದ ಹುಟ್ಟಬೇಕಿತ್ತು. ಎಲ್ಲಾ ಸರಿಯಾಗಿದ್ದರೂ ತಾನು ಹಡೆಯುತ್ತಿಲ್ಲ. ಅತ್ತ ಸಂಸಾರ ವಿಮುಕ್ತನಾಗಿದ್ದರೂಪಾಂಡುವಿನ ಕುಟುಂಬ ತನಗಿಂತಲೂ ಮುಂಚೆ ಮಗು ಹಡೆದಾಗಿದೆ. ತಾಳ್ಮೆ ಕಳೆದುಕೊಂಡ ಗಾಂಧಾರಿ ಹೊಟ್ಟೆಯ ಮೇಲೆ ಆ ಭಾರ ಇಳಿಸಿದಳು. ಅಲ್ಲಿಗೆ ಅದ್ಯಾವ ಸಮಸ್ಯೆ ಉದರದಲ್ಲಿತ್ತೋ, ಗಟ್ಟಿಪಿಂಡ ರಕ್ತ ರಾಡಿಯಾಗಿ ಈಚೆಗೆ ಬಂತು. ರಾಜ ಭವನದಲ್ಲಿಭ್ರೂಣ ಅರಚಿತು. ಅಲ್ಲಿಗೆ ಆಗಬಾರದ ಎಡವಟ್ಟಾಗಿ ಹೋಗಿತ್ತು. ಗಟ್ಟಿ ಪಿಂಡ ನೆಲದ ಪಾಲಾಗಿತ್ತು. ಅದ್ಯಾವ ಘಳಿಗೆಯಲ್ಲಿ ಎಡವಟ್ಟಾಗಿತ್ತೊ ಗಾಂಧಾರಿ ದ್ರಾಕ್ಷಾ ಗರ್ಭಕ್ಕೆ ಈಡಾಗಿದ್ದಳು. ಕೇವಲ ಬಸಿರಿನ ಲಕ್ಷಣ ಮತ್ತು ಭ್ರೂಣ ಬೆಳೆದ೦ತೆ ಬೆಳೆದುಬಿಡುವಗರ್ಭ ಎರಡು ವರ್ಷಗಳವರೆಗೂ ಹಡೆಯುವುದೇ ಇಲ್ಲ. ಉಳಿದೆಲ್ಲವೂ ಮೂಲ ಬಸಿರಿನಂಥ ಲಕ್ಷಣಗಳಿದ್ದರೂ ಮಗುವಾಗದ ಗರ್ಭವನ್ನು ದ್ರಾಕ್ಷಾ ಗರ್ಭ ಎಂದು ಗುರುತಿಸುತ್ತಾರೆ.
ಹೀಗೆ ಆಘಾತಕ್ಕೆ ಸಿಕ್ಕು ಹೊರಬಂದ ರಕ್ತ ಸ್ರಾವದಿಂದ ಗಾಂಧಾರಿಯ ಜೀವಕ್ಕೆ ಅಪಾಯವಾಗುವುದರಲ್ಲಿತ್ತು. ಸತ್ಯವತಿಯ ಕೋರಿಕೆಯ ಮೇರೆಗೆ ಹಿಂದೊಮ್ಮೆ ಕುಟುಂಬಕ್ಕೆ ನೆರವಾಗಿದ್ದ ವೇದವ್ಯಾಸ ಹಸ್ತಿನಾವತಿಯ ಅರಮನೆಗೆ ಕಾಲಿಟ್ಟು ಪರಿಸ್ಥಿತಿಸಂಭಾಳಿಸಿದ. ಗಿಡ ಮೂಲಿಕೆಗಳ ಅಂಶಗಳಿಂದ ಸೂಕ್ತ ಶೂಶ್ರೂಷೆ ಮಾಡಿ ಗಾಂಧಾರಿಯನ್ನು ಬದುಕಿಸಿದ. ಸರಿಯಾಗಿ ಬಸಿರಾಗಲು ಅಗತ್ಯದ ಔಷಧೋಪಚಾರವನ್ನೂ ಮಾಡಿದ. ಇದೆಲ್ಲ ಕಳೆದು, ಮತ್ತೆ ಗರ್ಭಧರಿಸಿ ಧೃತರಾಷ್ಟ್ರನನ್ನು ಅಪ್ಪನನ್ನಾಗಿಸಿದ್ದಳುಗಾಂಧಾರಿ. ಅದೇ ಹೊತ್ತಿಗೆ ಸರಿಯಾಗಿ ಕಾಡಿನಲ್ಲಿ ಎರಡನೆಯ ಬಾರಿಗೆ ಕುಂತಿಯು ಗರ್ಭ ತಳೆದಿದ್ದಳು. ಕೆಲವೇ ಗಂಟೆಗಳ ವ್ಯತ್ಯಾಸದಲ್ಲಿ ರಾಜಭವನದಲ್ಲಿ ದುರ್ಯೋಧನ ಹುಟ್ಟಿದ್ದರೆ, ಅತ್ತ ಕಾಡಿನಲ್ಲಿ ಭೀಮ ಭೂಮಿಗೆ ಕಾಲಿರಿಸಿದ್ದ. ವಾಯು ಎನ್ನುವ ದೈತ್ಯಜಟ್ಟಿಯೊಡನೆ ಕಾಡಿನಲ್ಲಿ ವಿಹರಿಸಿದ್ದ ಕುಂತಿ ಅಸಾಧಾರಣ ಬಲಶಾಲಿ ಮಗುವನ್ನು ಹೆತ್ತಿದ್ದಳು. ಆದರೆ ಇತ್ತ ಅಂತ:ಪುರದ ಕಡೆಯಿಂದ ಕೇಳಬೇಕಾದ ಮಗುವಿನ ಅಳುವಿಗೆ ಖುಷಿಯ ಬದಲಾಗಿ ಸಮಯ ಮತ್ತು ಜ್ಯೋತಿಷ್ಯದ ಆಧಾರದ ಮೇಲೆ ಅಪಸ್ವರಗಳುಎದ್ದಿದ್ದವು. ತಪ್ಪು ಮಗುವಿನದೇನಲ್ಲ. ಆ ಹೊತ್ತಿಗಿನ ಪ್ರಕೃತಿಯೇ ಹಾಗಿದ್ದರೆ, ಹೊರಗೆ ಕಾಡಿನಲ್ಲಿ ನಾಯಿ, ನರಿಗಳು ಊಳಿಡುವ ಹೊತ್ತಾಗಿದ್ದರೆ ಆ ಮಗುವೇನು ಮಾಡೀತು..? ಸಹಾಯಕ ವಿವರಿಸುತ್ತಿದ್ದರೆ ತಡಕಾಡುತ್ತಲೇ ಅಂತ:ಪುರಕ್ಕೆ ಧಾವಿಸಿದ್ದಧೃತರಾಷ್ಟ್ರ.
ಇಷ್ಟೆಲ್ಲಾ ಹಿನ್ನೆಲೆಯಲ್ಲಿ ಸುಯೋಧನ ಎಂಬ ಗಂಡು ಮಗು ಅಧಿಕೃತವಾಗಿ ಹಸ್ತಿನಾವತಿಯ ಅರಮನೆಯಲ್ಲಿ ಹುಟ್ಟಿತ್ತು. ಮತ್ತದೆ ಮಾತು. ಕೈಯ್ಯಲ್ಲಿ ಗುಂಡು ಗುಂಡಾದ ಮಗುವನ್ನು ಇಡುತ್ತಾ ನುಡಿದಿದ್ದ ಭೀಷ್ಮ.
" ಈ ಮಗುವಿನ ಭವಿಷ್ಯದಲ್ಲಿ ಕುಟುಂಬ ನಾಶಕ್ಕೆ ಕಾರಣವಾಗುವ ಲಕ್ಷಣಗಳಿವೆ. ಆಚಾರ್ಯರು ಆಡುವ ಮಾತುಗಳು ಸುಳ್ಳಾಗಲಾರವು. ತ್ಯಜಿಸಿ ಬಿಡು.."
"..ಎಂಥಾ ಮಾತು..? ಇಷ್ಟೆಲ್ಲಾ ಕಷ್ಟಪಟ್ಟು ಪಡೆದ ಗಂಡು ಮಗುವನ್ನು ತ್ಯಜಿಸಿ ಬಿಡುವುದೇ. ಬೇಕಿದ್ದರೆ ಮಗುವಿನ ಪಾಪ ಕರ್ಮ ಕಳೆಯಲು ಬೇಕಾದ ಪುಣ್ಯಕಾರ್ಯ, ಹೋಮ, ಹವನ ಇತ್ಯಾದಿ ಮಾಡಿಸಿದರಾಯ್ತು. ಅದನ್ನು ಬಿಟ್ಟು ಮಗುವನ್ನುತ್ಯಜಿಸುವುದೇ..?" ಕೊಂಚ ಸಿಡುಕಿದ್ದ ಧೃತರಾಷ್ಟ್ರ.
ಹೀಗೆ ಮಗುವೊಂದು ಭೂಮಿಗೆ ಇಳಿಯುತ್ತಲೇ ವಂಶಕಂಟಕನೆಂಬ ಹಣೆಪಟ್ಟಿಗೆ ಒಳಗಾಗಿ ಮೊದಲ ಅಳುವಿಗೆ ಬಾಯ್ಬಿಡುವ ಅವನ ಮೇಲೆ ತೂಗುಕತ್ತಿ ತೂಗತೊಡಗಿತ್ತು. ಬರೀ ಯುದ್ಧ ಮಾಡಬಲ್ಲ ಭೀಷ್ಮನಿಗೇನು ಗೊತ್ತಾಗುತ್ತದೆ ತಂದೆಯ ಹೃದಯದಸಂಕಟ. ಸಂಸಾರಿಯಾಗಿದ್ದರೆ ಈ ಎಲ್ಲ ಸಂಕಟಗಳು ಅರ್ಥವಾಗುತ್ತಿದ್ದವು. ರಣರಂಗ ಮತ್ತು ರಾಜ್ಯಾಧಿಕಾರ ಬಿಟ್ಟರೆ ದೊಡ್ಡಪ್ಪನಿಗೇನು ಗೊತ್ತು ಅಪ್ಪನ ಕರುಳ ಸಂಕಟ ಏನೆಂದು. ಆದ್ದರಿಂದಲೇ ಭೀಷ್ಮ ನುಡಿಯುವ ಮುಂಚೆ ಅಬ್ಬರಿಸಿದ.
" ಸಾಧ್ಯವಿಲ್ಲ ದೊಡ್ಡಪ್ಪ. ನನಗೇ ಗೊತ್ತು ಮಗುವನ್ನು ಪಡೆಯಲು ಆದ ಸಂಕಟ. ಅದಕ್ಕಿಂತಲೂ ಹೆಚ್ಚಾಗಿ ಗಾಂಧಾರಿಗೆ ಆದ ಸಂಕಟ. ಇವೆಲ್ಲವನ್ನು ಬಾಯ್ಬಿಟ್ಟು ವಿವರಿಸಲಾಗುವುದಿಲ್ಲ. ಆದ್ದರಿಂದ ಮಗುವನ್ನು ಸಾತ್ವಿಕವಾಗೂ ರಾಜಋಷಿಗಳಸಹಾಯದಿಂದಲೂ ಬೆಳೆಸೋಣ. ರಾಜ ಕುಟುಂಬಕ್ಕೆ ಯಾವುದನ್ನೂ ಪಡೆಯಲಾಗುವುದಿಲ್ಲ ಎಂದೇನಿಲ್ಲ. ಯಾವ ರೀತಿಯ ಗುರುಗಳು ಬೇಕೊ ಅವರನ್ನು ನಿಯಮಿಸಿ ಅವನನ್ನು ಚೆನ್ನಾಗಿ ಬೆಳೆಸೋಣ. ಅಲ್ಲಿಗೆ ಮಗು ಒಳ್ಳೆಯದೇ ಆಗುತ್ತದೆ. ಕುರುವಂಶದರಾಜಕುಮಾರನಿಗಾಗಿ ಕಳೆದ ನಾಲ್ಕಾರು ವರ್ಷಗಳಿಂದ ಪಟ್ಟ ಕಷ್ಟ ಅಷ್ಟಿಷ್ಟಲ್ಲವಲ್ಲ. ಈಗ ತಾನಾಗೇ ಗಂಡು ಮಗುವಾಗುತ್ತಿದ್ದರೆ ಕೇವಲ ಭವಿಷ್ಯವಾಣಿ ನಂಬಿ ಅದನ್ನು ತ್ಯಜಿಸುವುದೇ...? ಆಗುತ್ತಿರುವ ಪ್ರಕೃತಿ ಆಕಸ್ಮಿಕಗಳಿಗೆ, ನಿಸರ್ಗ ನಿಯಮದಂತೆಬದಲಾಗುತ್ತಿರುವ ಪ್ರಾಕೃತಿಕ ವೈಪರೀತ್ಯಗಳಿಗೆ ಭೂಮಿಯ ಸಹಜ ವರ್ತನೆಯ ಕಾರಣವನ್ನು ಏನೂ ಗೊತ್ತಿಲ್ಲದೆ ಭೂಮಿಗಿಳಿಯುತ್ತಿರುವ ಹಸುಕೂಸಿನ ತಲೆಗೆ ಹೊರಿಸುವುದೇಕೆ..? ಕೊಂಚ ಹಿಂದಿನ ಕಾಲಾವಧಿಯತ್ತ ಮನಸ್ಸು ಹರಿಸಿ ದೊಡ್ಡಪ್ಪ. ಏನಾಯಿತು ಯಾದವರ ವಂಶದಲ್ಲಿ...? ಭೂಮಂಡಲವೇ ಸಾಕ್ಷಿ ಅದಕ್ಕೆ. ಅಗತ್ಯ ಇತ್ತೋ ಇಲ್ಲವೋ ಆಗಿನ ಪ್ರಸಂಗದಲ್ಲಿ ಅನಗತ್ಯವಾಗಿ ಕಂಸನನ್ನು ಖಳನನ್ನಾಗಿಸಿದ್ದು ಸುಳ್ಳೆ...? ಸರಿಯಾಗಿ ಅವನ ಪಾಲನೆಯನ್ನು ಮಾಡದ್ದು ಯಾರ ತಪ್ಪು..?
ಅಷ್ಟಕ್ಕೂ ಇತಿಹಾಸದಲ್ಲಿ ಕಂಸನ ದುರಾಡಳಿತ ಮತ್ತು ಕೆಟ್ಟ ನಡವಳಿಕೆಗಳಿಗೆ ಕಾರಣರು ಯಾರು..? ಆಗ ಅವನು ಹುಟ್ಟಿದಾಗ ಅವನನ್ನು ತ್ಯಜಿಸುವ ಮಾತುಗಳು ಬಂದವು. ಕಂಸನ ಕಾರಣದಿಂದ ವಿನಾಶವೇ ಪ್ರಾಪ್ತಿಯಾಗಲಿದೆ ಎಂದು ತಾನೆ ಅವನನ್ನುನೀರಿನಲ್ಲಿ ತೇಲಿಬಿಟ್ಟಿದ್ದು. ಹಾಗೆ ಹುಟ್ಟುತ್ತಲೇ ಮನೆಯಿಂದ ಹೊರ ತಳ್ಳಿದ್ದರಿಂದಾಗೇ, ಅವನಲ್ಲಿ ರಾಜ ಕುಟುಂಬದ ಸಂಸ್ಕಾರ ಬೆಳೆಯಲಿಲ್ಲ. ದುರ್ಬುದ್ಧಿಯವನಾಗಿ ಬೆಳೆದಿರಬಹುದು ಸಂಗದೋಷದಿಂದ. ಇದಕ್ಕೆಲ್ಲಾ ಯಾರು ಹೊಣೆ..? ಅರಮನೆಯಲ್ಲೆ ಇದ್ದುಸರಿಯಾದ ವಿದ್ಯಾರ್ಜನೆ ನಡೆದಿದ್ದರೆ ಕಂಸನೇಕೆ ಸ್ವತ: ತಂದೆಯನ್ನು ಬಂಧಿಸುವ ಕೆಲಸಕ್ಕೆ ಕೈ ಹಾಕುತ್ತಿದ್ದ. ಹೇಗೋ ಒಂದು ರೀತಿಯಲ್ಲಿ, ನಮ್ಮ ಕುಟುಂಬಕ್ಕೆ, ಕುಲಕ್ಕೆ ಮಕ್ಕಳಾಗದ ಕರ್ಮವನ್ನು ಕಳೆಯಲು ಹುಟ್ಟಿರುವ ಈ ಕುಲ ಪುತ್ರನನ್ನು ಹೇಗೆತ್ಯಜಿಸಬಹುದು..? ಈಗ ನಾನು ತ್ಯಜಿಸಿದರೂ ಮುಂದೊಂದು ದಿನ ತನ್ನ ಪೂರ್ವ ಇತಿಹಾಸವನ್ನು, ತಾನು ಕುರುಕುಲದ ಮೂಲ ವಂಶಜ ತನ್ನನ್ನು ಅನ್ಯಾಯವಾಗಿ ಬೀದಿ ಪಾಲು ಮಾಡಿದರು ಎಂದು ಇವನು ಅರಿತರೆ..? ಹಾಗೆ ಅರಿತವನು ರಾಜ್ಯದ ಆಸೆಗೆ, ಪ್ರತೀಕಾರಕ್ಕೆ ನಮ್ಮನ್ನೆಲ್ಲಾ ಎದುರಿಸಿ ನಿಲ್ಲಲಾರ ಎಂದು ಏನು ಖಾತರಿ..?
ಆಗ ನನಗೂ, ಉಗ್ರಸೇನನ ಗತಿಯಾಗುವುದರಲ್ಲಿ ಸಂಶಯವೇ ಇಲ್ಲ. ಅದಕ್ಕಿಂತ ಜೊತೆಯಲ್ಲಿದ್ದೇ ಮಗು ಬೆಳೆಯಲಿ. ಕನಿಷ್ಠ ಕುರುವಂಶದ ಸಂಸ್ಕಾರವನ್ನಾದರೂ ನೋಡುತ್ತಾ ಬೆಳೆದು ಬುದ್ಧಿವಂತನೂ, ಸತ್ಕರ್ಮಿಯೂ ಆಗಬಹುದು. ಆದ್ದರಿಂದ ಜ್ಯೋತಿಷ್ಯಏನೆ ಹೇಳಲಿ. ಅವರಲ್ಲಿ ಅದಕ್ಕೊಂದು ಪರಿಹಾರ ಕೂಡಾ ಇದ್ದೇ ಇರುತ್ತದೆ. ಜೊತೆಗೆ ರಾಜಪ್ರಾಂಗಣದಲ್ಲಿ, ಅರಸು ಮನೆತನದ ಒಡನಾಡಿಯಾಗಿ ಬೆಳೆಯುವ ಮಗು ದಾರಿ ತಪ್ಪೀತೆ..? ಹಾಗಾಗಿ ಬೆಳೆಯುವಾಗಲೇ ಅದರ ಭವಿಷ್ಯವನ್ನು ಈ ಅರಮನೆಯಸರ್ವರೂ ವ್ಯವಸ್ಥಿತವಾಗಿ, ಧನಾತ್ಮಕವಾಗಿ ನಿರ್ಧರಿಸಲಿ. ಹಾಗಾಗಿ ಈಗ ಇನ್ಯಾವುದೋ ಜ್ಯೋತಿಷ, ಪುರಾಣದ ಕಥಾನಕ ಬಲಗಳ ಬೆಂಬಲವನ್ನು ನೀವು ಸೂಚಿಸಿದರೂ ಮಗುವನ್ನು ತ್ಯಜಿಸುವ ಮಾತೇ ಇಲ್ಲ.." ಅವನ ಮಾತಿಗೆ ಉಳಿದವರು ಮರುನುಡಿಯಲಿಲ್ಲ.
ಉಗ್ರಸೇನನ ಉದಾಹರಣೆಯನ್ನು ಧೃತರಾಷ್ಟ್ರ ನುಡಿಯುತ್ತಿದ್ದರೆ ಅದಕೊಂದು ಸಕಾರಣ ನೀಡಲು ಯಾರಿಗೂ ಸಾಧ್ಯವಾಗಲಿಲ್ಲ. ಪಕ್ಕದಲ್ಲೇ ನಿಂತಿದ್ದ ವಿದುರ ಅವನ ಭುಜ ತಟ್ಟಿ ಹೊರನಡೆದ. ಎಷ್ಟೋ ಹೊತ್ತಿನವರೆಗೂ ಅವನೊಂದಿಗೆ ನಿಂತಿದ್ದವನು ಶಕುನಿಮಾತ್ರ. ನಿಧಾನಕ್ಕೆ ಅವನ ಮಡಿಲಿನಿಂದ ಮಗುವನ್ನು ಎತ್ತಿಕೊಂಡು,
" ಭಾವಾ, ಮಗುವನ್ನು ತಂಗಿಯ ಬಳಿಗೆ ಕೊಟ್ಟು ಬರುತ್ತೇನೆ. ಅಂದ ಹಾಗೆ ನೀವೇನೂ ಚಿಂತಿಸಬೇಡಿ. ಅದಕ್ಯಾವ ಕೆಟ್ಟ ದೃಷ್ಟಿಯೂ ತಾಕದಂತೆ ನಾನು ನಿಂತು ನೋಡಿಕೊಳ್ಳುತ್ತೇನೆ. ಹಸ್ತಿನಾವತಿಯ ಭವಿಷ್ಯತ್ತಿನ ಮಹಾರಾಜನನ್ನು ಸರ್ವ ರೀತಿಯಲ್ಲೂಸನ್ನದ್ಧವಾಗಿಸಿ ಬೆಳೆಸೋಣ. ಇದು ನನ್ನ ಮಾತು ಮಹಾರಾಜ. ನೀವು ಬೇಸರಿಸದಿರಿ. ಇನ್ನು ಮೇಲೆ ನನ್ನೆಲ್ಲಾ ಸಮಯವೂ ಇವನಿಗೆ ಮುಡಿಪು ಇದಕ್ಕೆ ನಿಮ್ಮ ಬೆಂಬಲವಿದ್ದರೆ ಸಾಕು... ಭಾವ. " ಎಂದ ತೀರ ನಯವಾಗಿ. ಆ ಹೊತ್ತಿಗೆ ಅಂತಹದ್ದೊಂದುಮಾತೂ, ಅನುನಯವಾದ ಬೆಂಬಲವೂ ಅವನಿಗೂ ಬೇಕಿತ್ತು. ಕೂಡಲೇ ನುಡಿದ ಧೃತರಾಷ್ಟ್ರ.
" ಅಷ್ಟು ಸಾಕು ಶಕುನಿ. ನಿನ್ನ ನಿಯತ್ತಿನ ಮೇಲೆ ನಮಗೆ ಸಂಶಯವಿಲ್ಲ. ಈಗ ಮಾತೂ ಬೇರೆ ಕೊಟ್ಟಿದೀಯ. ಅದು ನಿನ್ನದೇ ತಂಗಿಯ ಮಗು. ಕಣ್ಣಿಲ್ಲದ ನನಗಿಂತ ನೀನು ಅದರೊಂದಿಗೆ ಸದಾಕಾಲವೂ ಇದ್ದು ಬಿಟ್ಟರೆ ನನಗ್ಯಾವ ಚಿಂತೆಯೂ ಇಲ್ಲದ ನೆಮ್ಮದಿ. ಎಲ್ಲ ರೀತಿಯಲ್ಲೂ ಅವನ ಬೆಳವಣಿಗೆಯನ್ನು ಉತ್ತಮವಾಗಿ ರೂಪಿಸು. ಯೋಚಿಸಬೇಡ ಶಕುನಿ, ಹಸ್ತಿನಾವತಿ ನಿನ್ನ ಋಣ ಮರೆಯುವುದಿಲ್ಲ. ಕಾರಣ ಅವನು ಕೇವಲ ನಿನ್ನ ತಂಗಿಯ ಮಗುವಲ್ಲ. ಹಸ್ತಿನಾವತಿಯ ಭವಿಷ್ಯದ ರಾಜಕುಮಾರ, ಯುವರಾಜ.. ಈಮಹಾ ಸಾಮ್ರಾಜ್ಯದ ಮಹಾರಾಜ.. ನೆನಪಿರಲಿ..." ಎಂದ.
" ಇಂಥಾ ದೊಡ್ಡ ಮಾತೇಕೆ ಮಹಾರಾಜ ನಾನು ಅಷ್ಟು ಮಾಡದಿದ್ದರೆ ಹೇಗೆ..? ಅದು ನನ್ನ ಕರ್ತವ್ಯ ಕೂಡಾ. ಯೋಚಿಸಬೇಡಿ. ಎಷ್ಟೆಂದರೂ ನಾನು ಅವನ ಸೋದರ ಮಾವ. ಇನ್ನುಳಿದದ್ಡು ನನಗೆ ಬಿಡಿ.." ಎಂದು ನಡೆದುಹೋದ. ಅವನ ಪಕ್ಕೆಯಲ್ಲಿದ್ದದಾಳಗಳು ಕದಲುತ್ತಾ ಕಿಣಿ ಕಿಣಿ ನಾದ ಹೊರಡಿಸಿದ್ದು ಕೇಳಿಸಿತು. ಹೀಗೆ ಏನೂ ಅರಿಯದ ಕಂದವೊಂದು ಹುಟ್ಟುತ್ತಲೇ ಹಲವು ದಿಶೆಯಲ್ಲಿ ಚರ್ಚೆಗೆ ಸಿಕ್ಕು ತನ್ನ ಭವಿಷ್ಯವನ್ನು ನಿರ್ದೇಶಿಸಲು ಇನ್ಯಾರಾದೋ ಕೈಗೆ ದಂಡವಾಗಿಯೂ, ಇನ್ನಾರದೋ ದೂರದದುರಾಲೋಚನೆಗೆ ಸಮಿತ್ತುವಾಗತೊಡಗಿತ್ತು.
* * *
ಒಂದು ಕಡೆಯಲ್ಲಿ ಮೊದಲ ಮಗು ಬೆಳೆಯತೊಡಗಿದಂತೆ ಒಂದರ ಹಿಂದೆ ಒಟ್ಟಾರೆ ನೂರೊಂದು ಮಕ್ಕಳು ಜನಿಸಿದರು. ಅವರೊಂದಿಗೆ ದುಶ್ಯಿಲೆ ಎಂಬ ಹೆಣ್ಣು ಮಗುವು ಕೂಡಾ ಜನಿಸಿತ್ತು. ಅವರೆಲ್ಲಾ ಕೌರವರೆಂದು ಗುರುತಿಸಿಕೊಂಡಿದ್ದು, ರಾಜಕುಮಾರಿಯನ್ನು ತಂದು ಧೃತರಾಷ್ಟ್ರನಿಗೆ ಮದುವೆ ಮಾಡಿದ್ದು ಸಾರ್ಥಕ ಎನ್ನುವಂತೆ ಕಣ್ಣಿಲ್ಲದಿದ್ದರೂ ಅಷ್ಟೊಂದು ಮಕ್ಕಳನ್ನು ಮಾಡುವ ಮೂಲಕ ಕುರುವಂಶ ಬೆಳೆಯಲು ಅನುವಾಗುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸತೊಡಗಿದ್ದ. ಅದನ್ನೆಲ್ಲನೋಡುತ್ತಿದ್ದ ಭೀಷ್ಮನಿಗೂ ಈಗ ಮತ್ತೆ ಪಾಂಡುವನ್ನು ಹಿಂದಕ್ಕೆ ಕರೆಸುವ ಯೋಚನೆ ಆರಂಭವಾಗಿತ್ತು. ಕಾರಣ ಅವನಿಗೂ ಅಲ್ಲಿ ನಿಯೋಗದಿಂದ ಮಕ್ಕಳಾಗಿವೆ. ಅವನ ಪ್ರಕಾರ ಬಿತ್ತಿದ ಬೀಜ ಎಲ್ಲಿಯದೆ ಆದರೂ ಕ್ಷೇತ್ರ ತಮ್ಮದೇ ಆಗಿದ್ದರಿಂದ, ಸಂಪೂರ್ಣಕುರು ಕುಲದ್ದೇ ಆಗುತ್ತದೆ ಎಂದು.
ಕುಂತಿ ಪಾಂಡುವನ್ನು ನಿಪುತ್ರಕನನ್ನಾಗಿಸುವ ಬದಲಿಗೆ ನಿಯೋಗವಾದರೂ ಸೈ ಎಂದು ಅವನ ಮಾತಿನಂತೆ ತನಗಿಷ್ಟವಾದ ಬಲಿಷ್ಠ ಕುಲೀನ ಮತಸ್ಥರನ್ನು ಒಲಿಸಿಕೊಂಡು ಅವರೊಂದಿಗೆ ಏಕಾಂತದಲ್ಲಿ ಸಮಯೋಚಿತ ಸಮಯದಲ್ಲಿನ ಸಮಾಗಮದಿಂದನಿಯೋಗ ಆಚರಿಸಿ, ಮೂವರು ಮಕ್ಕಳನ್ನು ಪಡೆದಿದ್ದರೆ, ಪಾಂಡುವಿನ ಎರಡನೆ ಮಡದಿ ಮಾದ್ರಿಯೂ ಕೂಡಾ ಹಿಂದುಳಿಯದೆ ನಿಯೋಗಕ್ಕೆ ಸೈ ಎಂದು ಎರಡು ಮಕ್ಕಳನ್ನು ಪಡೆದಿದ್ದಾಳೆ. ರಾಜ್ಯದ ಹಿತದೃಷ್ಠಿ ಮತ್ತು ಹಿತಾಸಕ್ತಿಗಳ ಒಲವಿನಿಂದರಾಜಮನೆತನದ ಸ್ತ್ರೀಯರು ಹೀಗೆ ನಿಯೋಗದ ಹೆಸರಿನಲ್ಲಿ ತಮ್ಮ ಮನಮೆಚ್ಚಿದ ಪರಪುರುಷರನ್ನು ಆಹ್ವಾನಿಸುವುದು ಹೊಸದೇನಲ್ಲ. ಅದು ವಂಶಾಭಿವೃದ್ಧಿಯೂ ಆಗುತ್ತಿತ್ತು ಜೊತೆಗೆ ನಿಸರ್ಗ ಸಹಜ ಪ್ರೇಮ, ಕಾಮಗಳ ಬೆಸುಗೆಯ ಒತ್ತಾಸೆಗೆ ಸ್ವಚ್ಛಂದಸಮಾಗಮಕ್ಕೆ ಅವಕಾಶವೂ ಆಗುತ್ತಿತ್ತು. ಅದರಲ್ಲಿ ಸಾಮಾಜಿಕವಾಗಿ ಯಾವ ತಪ್ಪೂ ಇಲ್ಲವಲ್ಲ.
ಹೇಗೋ ಒಟ್ಟಾರೆ ತಂತಮ್ಮ ಮನದಾಸೆಗಳು ಈಡೇರಲೇಬೇಕೆನ್ನುವುದು ರಾಜಮನೆತನದ ಸ್ತ್ರೀಯರ ಅಪೇಕ್ಷೆ, ಅಭೀಪ್ಸೆಗಳಿಗೆ ಈಡಾಗದ ಪುರುಷರಾದರೂ ಯಾರಿದ್ದಾರೆ..? ಅದೂ ಖುದ್ದಾಗಿ ಸ್ತ್ರೀಯೊಬ್ಬಳು ಆಹ್ವಾನಿಸಿದರೆ ಸ್ವಯಂ ಕುಲೀನ ಯಾಕೆ, ಎಂಥಾ ಮೇಲ್ಸ್ತರದ ಗಂಡಸೂ ಕಚ್ಚೆ ಬಿಚ್ಚಿಕೊಂಡು ಬಂದುಬಿಡುತ್ತಾನೆ ಎನ್ನುವುದು ಭೂಮಿಯ ಹುಟ್ಟಿನೊಂದಿಗೆ ಬಂದ ಆಜೀವ ರಹಸ್ಯ. ಇದರಲ್ಲಿ ಹೊಸದೇನೂ ಇಲ್ಲ. ಅದು ಗಂಡಸರ ಜೀವವಾಹಿನಿಗಳಲ್ಲೇ ಅಡರಿರುವ ತಂತುಗಳ ಪ್ರತಾಪ ಅಷ್ಟೆ. ಹಾಗಾಗಿಕಾಡಿನಲ್ಲಿದ್ದೇ ತಮ್ಮ ಸಂತತಿ ಮುರುಟದಂತೆಯೂ, ತನ್ನ ಮನೆತನದ ಬಳ್ಳಿಗಳು ಚಿಗುರುವಂತೆಯೂ ನೋಡಿಕೊಳ್ಳಲು ಸುಲಭವಾಗಿ ನಿಯೋಗದ ಸಹಾಯ ಪಡೆದವಳು ಕುಂತಿ. ಆದರೆ ಇಲ್ಲಿರುವ ನೂರೊಂದು ಕೌರವರಿಗಿಂತಲೂ ಕಾಡಿನಲ್ಲಿದ್ದಪಾಂಡುವಿನ ಮಕ್ಕಳು ಪಾಂಡವರು ಅತ್ಯಂತ ಪ್ರತಿಭಾಶಾಲಿಗಳೂ, ಹೆಚ್ಚು ಮೇಧಾವಿಗಳೂ ಆಗಿ ಬೆಳೆಯುತ್ತಿದ್ದಾರಂತೆ ಎಂದು ಅರಮನೆಯ ಚಾರರು ಸುದ್ದಿ ಕೊಡುತ್ತಿದ್ದರೆ ಧೃತರಾಷ್ಟ್ರ ಒಳಗೊಳಗೆ ಕೊರಗುತ್ತಿದ್ದ. ಅದಕ್ಕೆ ಕಾರಣವೂ ಇಲ್ಲದಿಲ್ಲ.
ಅಲ್ಲಿ ಅದ್ವಿತೀಯರಾದ ತಪಸ್ವಿಗಳು, ಅಪ್ರತಿಮ ಧನುರ್ವಿದ್ಯಾ ಪರಿಣಿತರು ಪಾಂಡುವಿನ ಮಕ್ಕಳಿಗೆ ತರ ತರಹದ ಕೌಶಲ್ಯವನ್ನು ಹೇಳಿಕೊಡುತ್ತಿದ್ದರೆ, ಬೇರಾವ ಕೆಲಸವೂ ಸಮಯದ ಅಭಾವವೂ ಇರದ ಪಾಂಡುಪುತ್ರರು ಆಸಕ್ತಿಯಿಂದ ವಿದ್ಯೆಯನ್ನುಕಲಿಯತೊಡಗಿದ್ದರು. ಇತ್ತ ಅರಮನೆಯಲ್ಲೂ ಮಕ್ಕಳು ಒಬ್ಬರಿಗಿಂತಲೂ ಒಬ್ಬರು ಮೇಲಾಟ ನಡೆಸುತ್ತಿದ್ದರೆ, ಅವರು ಯಾವ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಕೇಳಿಕೊಂಡು ವಿಚಾರಿಸಿಕೊಳ್ಳುವುದರಲ್ಲೇ ಧೃತರಾಷ್ಟ್ರ ಸುಸ್ತಾಗುತ್ತಿದ್ದ. ದಿನವಿಡಿಅರಮನೆಯ ತುಂಬಾ ಅವರ ಕಲರವವೇ ರಿ೦ಗಣಿಸತೊಡಗಿತ್ತು. ಅದರಲ್ಲೂ ಮೊದಲ ಮಗ ದುರ್ಯೋಧನ ಎಲ್ಲ ಮಕ್ಕಳಿಗೂ ನಾಯಕನಂತೆ ತಂಡವನ್ನು ನಡೆಸತೊಡಗಿದ್ದ.
ಅದೇನೋ ಉಳಿದ ಸಣ್ಣವರಿಗೂ ಅವನ ಮಾತು, ಠೀವಿ, ದೈಹಿಕ ಬಲ, ಗತ್ತು, ಗಾಂಭೀರ್ಯಗಳು ಹಿಂಬಾಲಕರನ್ನಾಗುವಂತೆ ಪ್ರೇರೇಪಿಸುತ್ತಿದ್ದವು. ದೈಹಿಕವಾಗಿ ಹುಟ್ಟಾ ಬಲವೂ, ಅಪೂರ್ವ ಬುದ್ಧಿ ಶಕ್ತಿಯೂ ಜೊತೆಗೆ ಎಲ್ಲದರಲ್ಲೂ ಗೆಲ್ಲಬೇಕೆನ್ನುವ ಅವನನಿರಂತರ ಛಲ, ನೋಡುನೋಡುತ್ತಲೇ ಬಾಲ್ಯದಲ್ಲೇ ಅವನನ್ನು ನಾಯಕನ ಪಟ್ಟಕ್ಕೇರಿಸಿದ್ದವು. ಒಂದು ಕಾರ್ಯ ಅಥವಾ ಮನಸ್ಸಿಗೆ ಬೇಕು ಎನ್ನಿಸಿದ್ದನ್ನು ಪೂರೈಸಿಕೊಳ್ಳಲು, ಆಡಿದ ಮಾತಿಗೆ ಒಪ್ಪವಾಗಿ ನಿಂತು ಮುಗಿಸುವ ದಕ್ಷತೆಗೆ ಅವನ ಛಲಕ್ಕೆಅರಮನೆಯೇ ಬೆರಗಾಗುತ್ತಿತ್ತು. ಅವನಾದರೂ ಅಷ್ಟೆ, ತನಗಿಂತ ಚಿಕ್ಕವರನ್ನು ಎಲ್ಲೂ ಎಂದೂ ಕೂದಲೂ ಕೊಂಕದಂತೆ ನೋಡಿಕೊಳ್ಳತೊಡಗಿದ್ದ. ಎಲ್ಲರನ್ನೂ ಸೇರಿಸಿಕೊಂಡು ಎಲ್ಲೆ೦ದರಲ್ಲಿ ದಾಂಗುಡಿಯಿಡುತ್ತಿದ್ದ. ಅರಮನೆ ತೋಟ, ಕಾಡು, ಮೇಡು, ನದಿತೀರ ಮಕ್ಕಳ ಸೈನ್ಯದಲ್ಲಿ ಅಲುಗಾಡುತ್ತಿದ್ದವು.
ಅದಕ್ಕಿಂತಲೂ ಧೃತರಾಷ್ಟ್ರನನ್ನು ಧೃತಿಗೆಡಿಸಿದ್ದು, ಎಲ್ಲಿಯದರೂ ಇವತ್ತಲ್ಲ ನಾಳೆ ಪಾಂಡು ಬಂದು ಸಿಂಹಾಸನ ಕೇಳಿದರೆ, ಅವನೊಂದಿಗೆ ಅವನ ಮಕ್ಕಳೂ ಬಂದು ಮುಂದಿನ ಅಧಿಕಾರವನ್ನು ಸಹಜವಾಗೇ ಪಡೆಯುತ್ತವಲ್ಲ ಎನ್ನುವುದು. ಕಾರಣತನಗಿಂತಲೂ ಮುಂಚೆ ಸಿಂಹಾಸನವನ್ನು ಏರಿದವನು ಪಾಂಡು. ಅಲ್ಲಿಗೆ ಇಷ್ಟೆಲ್ಲಾ ಕಷ್ಟಪಟ್ಟ ತಮ್ಮ ಪರಿಸ್ಥಿತಿ ದೇವರಿಗೇ ಪ್ರೀತಿ. ಯಾವುದೇ ಕಾರಣಕ್ಕೂ ಸಿಂಹಾಸನ ಕೈ ಬಿಡಲೂಬಾರದು ಮತ್ತು ತನ್ನ ಮಗನ ಯುವ ರಾಜ್ಯಾಭಿಷೇಕ ನಿರಾಂತಕವಾಗಿಯೂಸಾಗಬೇಕು. ಆದರೆ ಇದೆಲ್ಲಾ ಸಾಧ್ಯವಾ..? ಸ್ವತ: ದೃತರಾಷ್ಟ್ರನಿಗೇ ಸಂಶಯವಿತ್ತು. ಕಾರಣ ಅವನೊಬ್ಬ ಸಿಂಹಾಸನ ಮತ್ತು ರಾಜಾಜ್ಞೆಗಳ ಮಧ್ಯೆ ಕಾಲೂರಿ ನಿಂತುಬಿಟ್ಟಿದ್ದ. ಅವನ ಮಾತೇ ಸಧ್ಯಕ್ಕೆ ಅಖಂಡ ಭೂಮಂಡಲದುದ್ದಕ್ಕೂ ನಡೆಯುತ್ತಿತ್ತು. ಹಸ್ತಿನಾವತಿಯ ಮುಖ್ಯ ಬೆನ್ನೆಲುಬು ಅವನೇ ಆಗಿದ್ದ. ಅವನನ್ನು ಒಪ್ಪಿಸುವುದು ಅಥವಾ ಅವನ ವಿರುದ್ಧ ಹೋಗುವುದು ಮಾತ್ರ ಸಾಧ್ಯವೇ ಇರಲಿಲ್ಲ.
No comments:
Post a Comment