ಹೌದು ನಾಳಿನಿಂದ
ನಡೆಯಲಿರುವ ಯುದ್ಧದಲ್ಲಿ ಮೊದಲಿಗೇನಿದ್ದರೂ ಬರೀ ದೇಹಗಳನ್ನು ತರಿದು ಹಾಕುವ ಕೆಲಸವೇ ಆಗುತ್ತದೆ. ಅದರ
ಮಧ್ಯೆ ಅವಕಾಶ ಸಿಕ್ಕಿದಾಗಲೆಲ್ಲಾ ತಾನು ಪಾಂಡವರನ್ನು ತಾಗಲು ಪ್ರಯತ್ನಿಸಬೇಕು. ಯಾವಾಗ ನಮ್ಮ ಆರು
ಜನರಲ್ಲಿ ಒಂದು ಘಟ ಬೀಳುತ್ತದೋ ಆಗಲೇ ಯುದ್ಧ ನಿರ್ಣಾಯಕ. ಆದರೆ ಎರಡೂ ಕಡೆಯಲ್ಲೂ ನಮ್ಮ ತಲೆಗಳನ್ನು
ಕಾಯಲೆಂದೇ ವಿಶೇಷ ಯುದ್ಧ ಪರಿಣಿತರು ಈ ಇತಿಹಾಸ ನಿರ್ಮಿಸಲಿರುವ ಯುದ್ಧದಲ್ಲಿ ತಂತಮ್ಮ ಆಯುಷ್ಯದ ಕೊನೆಯ
ಪರೀಕ್ಷೆಗೆ ಇಳಿಯಲಿದ್ದಾರೆ. ಅವರುಗಳಿಗೂ ಇದೊಂದು ಅಗ್ನಿಪರೀಕ್ಷೆ ಎನ್ನುವುದಕ್ಕಿಂತಲೂ ಜೀವಮಾನದ ಅಪರೂಪದ
ಕ್ಷಣ. ತಮ್ಮ ಸಾಮರ್ಥ್ಯ, ರಾಜನಿಷ್ಠೆ ಸಾಬೀತು ಮಾಡಲಿದ್ದಾರೆ. ಇಲ್ಲಿಯವರೆಗೂ
ಆದದ್ದು ಹಾಗೆ ಅಲ್ಲವೇ..?
ಪ್ರತಿ ಬಾರಿಯೂ ಅಗತ್ಯ
ಮತ್ತು ಅನಿವಾರ್ಯತೆಗಳಿಗೆ ಇನ್ಯಾರನ್ನೊ ದಾಳವಾಗಿಸುವ ಸಂಚಿಗೆ ಬಲಿಯಾಗಿಸುವುದರಲ್ಲೇ ರಾಜಕಾರಣ ಮಾಡಿದರು
ಹೆಚ್ಚಿನವರು. ಅದರಲ್ಲೂ ಪಾಂಡವರಂತೂ ಈ ಜಗತ್ತಿನ ಅತೀ ಬಲಶಾಲಿಗಳನ್ನೆಲ್ಲಾ ಮೋಸ ಮಾಡಿಯೇ ಕೊಂದರು.
ಹಾಗೆ ಮಾಡಿದ ಮೋಸ,
ವಂಚನೆ ಮತ್ತು ಪ್ರತಿಬಾರಿ ನಡೆದುಹೋದ ನರಮೇಧದ ಹಿಂದೆ ಕಾಲೂರಿ ನಿಂತು ಅವನ್ನೆಲ್ಲಾ
ಮಾಡಿಸಿದ ವಾಸುದೇವನ ಕೈವಾಡದಿಂದಾಗಿ, ಹತ್ಯೆಗಳೆಲ್ಲವೂ ಧರ್ಮಸಮ್ಮತ ಎನ್ನಿಸುವಂತೆ
ಮಾಡಿಸಿದರು ಮತ್ತು ಕೆಲವೊಮ್ಮೆ ಸ್ವತ: ಮಾಡಿದರು ಕೂಡಾ. ಆದರಲ್ಲಿ ಎಲ್ಲೂ ವಾಸುದೇವ ತನ್ನ ಬೇಳೆಗಳನ್ನು
ಬೇಯಿಸಿಕೊಳ್ಳುತ್ತಿದ್ದಾನೆ ಹೊರತಾಗಿ ಪಾಂಡವರ ಪ್ರಾಣ ಕಾಯಲು ನುಡಿದಿದ್ದ "ಮಮ: ಪ್ರಾಣಾಹಿ ಪಾಂಡವ"
ಎನ್ನುವ ಮಾತಿನ ಪರದೆಯ ಹಿಂದಿದ್ದಾನೆ ಎನ್ನಿಸಲೇ ಇಲ್ಲ. ಕಾರಣ ದೊಡ್ಡವರು ಏನು ಮಾಡಿದರೂ ಸರಿ ಎನ್ನುವಂತಾಯಿತಲ್ಲ.
ಅದೇ ಬೇರೆಯವರು ಹೀಗೆ ನಡೆದಿದ್ದರೆ ಸಮಾಜ, ಪ್ರಸ್ತುತ ಪರಿವರ್ತಕರು ಕೊನೆಗೆ
ಇತಿಹಾಸಕಾರರು ಸರಿ ಎಂದು ಬೆಂಬಲಿಸುತ್ತಿದ್ದರೇ...? ಅಷ್ಟಕ್ಕೂ ಸಾಮಾಜಿಕ
ನ್ಯಾಯದ ಸ್ತರದಲ್ಲಿ ಮಾನವೀಯ ನೆಲೆಯಲ್ಲಿ ಯೋಚಿಸುವುದು ತಪ್ಪಾ..?
ಆ ರಾತ್ರಿ ಅವನು
ಆ ದಿಬ್ಬವನ್ನೇರಿ ಕುಳಿತುಕೊಳ್ಳುವ ಕಾಲಾವಧಿಯ ಐದಾರು ದಶಕದಲ್ಲಿ ನಡೆದ ಘಟನೆಗಳೇನೂ ಸಾಮಾನ್ಯವಾಗಿರಲಿಲ್ಲ.
ಆಗಿದ್ದೆಲ್ಲಾ ಬರೀ ತನ್ನೊಬ್ಬನಿಗಾಗಿಯೇ ಮಾಡಿಕೊಂಡದ್ದು ಎಂದೇನೂ ಇರಲೇ ಇಲ್ಲ. ಒಂದೆಡೆ ಅಂಧ ತಂದೆ.
ಇನ್ನೊಂದೆಡೆಗೆ ಪ್ರಾಣ ಕೊಟ್ಟು ನಿಲ್ಲುತ್ತಿದ್ದ ನೂರು ಜನ ಸಹೋದರರು. ಒಟ್ಟಾರೆ ಏನು ಮಾಡಿದರೂ ಸರಿನೇ.
ಆದರೆ ಅವರೆಲ್ಲರ ಹಿತಾಸಕ್ತಿ ತಾನು ಕಾಯಲೇಬೇಕಿತ್ತಲ್ಲ. ಅವರನ್ನು ಹೊರತುಪಡಿಸಿ ಏನಾದರೂ ಮಾಡಿದ್ದರೆ
ಇದೇ ಇತಿಹಾಸ ತನ್ನನ್ನು ರಾಜ್ಯಾಧಿಕಾರದ ಮೋಹಿ ಎಂದಂತೆ, ಕುಟುಂಬವನ್ನೂ
ಮರೆತ ದ್ರೋಹಿ ಎನ್ನುತ್ತಿತ್ತಾ ಅಥವಾ ಇನ್ಯಾವುದಾದರೂ ಹೊಸ ನಾಮಕರಣ ಮಾಡುತ್ತಿತ್ತಾ..? ತಲೆ ಕೊಡಹಿದ ದುರ್ಯೋಧನ. ಕಾರಣ ದುರಂತ ನಾಯಕನ ಉದಯದ ಘಳಿಗೆಯಿಂದಲೇ ಅವಘಡಗಳ ಸರಮಾಲೆ ಜರುಗಲಾರಂಭಿಸಿದ್ದವು
ಹಸ್ತಿನಾವತಿಯ ನೆಲದಲ್ಲಿ. ಹುಟ್ಟುವಾಗಲೇ ವಿರೋಧವನ್ನು ಎದುರಿಸಿ ಬದುಕುಳಿದ ಮಗುವಾಗಿ ಭೂಮಿಗಿಳಿದಿದ್ದ
ಆತ. ಯಾರ ಕೈಯಲ್ಲೂ ಇಲ್ಲದ ಹುಟ್ಟಿನ ಸಮಯಕ್ಕೂ ಆಗಿನ ಪ್ರಾಕೃತಿಕ ವೈಪರಿತ್ಯಕ್ಕೂ ತಳಕು ಹಾಕುವ ಮೂಲಕ,
ಉಸಿರು ಬಿಟ್ಟು ಭೂಮಿಗೆ ಬಿದ್ದ ಕ್ಷಣವೇ ಅವನ ತಲೆಯ ಮೇಲೆ ಕತ್ತಿ ಇಡುವ ಕೈಂಕರ್ಯ
ನಡೆದುಹೋಗಿತ್ತು ಹಸ್ತಿನಾವತಿಯ ಅರಮನೆಯಲ್ಲಿ. ಆ ಹೊತ್ತಿಗೆ ಇದೇ ಅಂಧ ತಂದೆ ತನ್ನನ್ನು ಉಳಿಸಿಕೊಳ್ಳದಿದ್ದರೆ
ಇಂಥಾ ಅಗಾಧ ಘಟನೆಯ ಈ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದೇನೆ...? ನುಗ್ಗಿ
ಬಂದ ನೆನಪುಗಳು ಒಮ್ಮೆ ಸುಳಿಯೊಡೆದು ಕಾಲ ಘಟ್ಟವನ್ನೇ ಹಿಂದಿರುಗಿಸಿದವು. ತಲೆ ಕೊಡಹಿದ ದುರ್ಯೋಧನ.
... ಹಲವು ದಶಕಗಳ ಹಿಂದೆ.. ...!
* * *
" ಮಗು
ಹುಟ್ಟಿದ ಘಳಿಗೆ, ನಕ್ಷತ್ರ ಮತ್ತು ಕಾಲವೆಲ್ಲಾ ಪರಿಶೀಲನೆ ಮಾಡಿಯಾಗಿದೆ.
ಇದರಿಂದ ಯಾರಿಗೂ ಸುಖವಿಲ್ಲ ಜೊತೆಗೆ ವೇದವ್ಯಾಸರೂ ಸೇರಿದಂತೆ ಎಲ್ಲರ ಅಪೇಕ್ಷೆಯೂ ಇದೆ ಆಗಿದೆ ಮಹಾರಾಜಾ.
ಈ ದುರ್ಘಳಿಗೆಯ ಮಗುವನ್ನು ತ್ಯಜಿಸಿಬಿಡು. ದೇವರ ದಯೆಯಿದ್ದರೆ ಇಂಥಾ ಇನ್ನು ಹತ್ತು ಮಕ್ಕಳು ಹುಟ್ಟಿಯಾವು.
ಯಾಕೆ ಬೇಕು ಇಂಥಾ ಕಾಲ್ಗುಣದ ಮಗು ನಮ್ಮ ಕುರುಕುಲಕ್ಕೆ...?" ಭೀಷ್ಮ
ಪಿತಾಮಹ ನುಡಿಯುತ್ತಿದ್ದರೆ ಮುಚ್ಚಟೆಯಾಗಿದ್ದ ಬೊಮ್ಮಟೆ ಮಗುವಿನ ಬುರುಡೆಯನ್ನು ಹತ್ತಿಯಂತಹ ಕೆನ್ನೆಗಳನ್ನು,
ತನ್ನ ಕುರುಡು ಕಂಗಳಿಂದ ನೋಡಲಾಗದೆ, ಬರಿದೆ ಕೈಗಳಿಂದ ಸವರುತ್ತಾ
ಸ್ಪರ್ಶದಲ್ಲೇ ಸುಖವನ್ನು ಅನುಭವಿಸುತ್ತಾ ಕುಳಿತಿದ್ದ ಧೃತರಾಷ್ಟ್ರ. ಅವನಿಗೆ ಯಾವುದೂ ಸರಿಯಾಗಿ ಅರ್ಥವಾಗುತ್ತಿದ್ದಿಲ್ಲ.
ಅದು ದುರ್ಯೋಧನ ಎನ್ನುವ ಸುಯೋಧನನ ಹುಟ್ಟಿದಾಕ್ಷಣದ ಸ್ವಾಗತವಾಗಿತ್ತು. ಆ ಮಗು ಕುಟುಂಬಕ್ಕೆ ಬೇಡವಾಗಿತ್ತು.
ಮುಖ್ಯವಾಗಿ ರಾಜ್ಯಭಾರ ಮತ್ತು ಅಧಿಕಾರದ ಆಸೆಯಲ್ಲಿ ಪ್ರತಿಯೊಂದು ಪ್ರಮುಖವಾಗುವಾಗ ಸಂಬಂಧಗಳಿಗೆ ಬೆಲೆ
ಇರುವುದಿಲ್ಲ. ಏನೇ ಆಗಲಿ ಮೊದಲು ಅಧಿಕಾರ ನಂತರ ಸುಭಿಕ್ಷ ಮತ್ತು ಸುರಕ್ಷಿತ ರಾಜ್ಯ. ಇದೆಲ್ಲದರ ನಂತರ
ಉಳಿದದ್ದೇನಿದ್ದರೂ. ಹಾಗಾಗೇ ರಾಜಭವನದ ಪುರೋಹಿತರು ಮತ್ತು ಜ್ಯೋತಿಷಿಗಳು ಆ ಮಗುವನ್ನು ತ್ಯಜಿಸಿಬಿಡುವಂತೆ
ಸಲಹೆ ಕೊಡುತ್ತಿದ್ದರು.
ಅಷ್ಟಕ್ಕೂ ಸಲಹೆಗಾರರೆಲ್ಲ
ಸಂಪೂರ್ಣ ಭವಿಷ್ಯವನ್ನು ಕಂಡುಕೊಂಡ ಅಥವಾ ಕೂತಲ್ಲೆ ಕಾಣುವ ತ್ರಿಕಾಲ ಜ್ಞಾನಿಗಳೇನಲ್ಲ. ಅಸಲಿಗೆ ತ್ರಿಕಾಲ
ಜ್ಞಾನಿಗಳನ್ನು ಕಂಡವರಾದರೂ ಯಾರಿದ್ದಾರೆ...? ಅವರದ್ದೇನಿದ್ದರೂ ಸಮಯ ಮತ್ತು ಆ ಹೊತ್ತಿಗಿನ
ನಕ್ಷತ್ರಗಳ ಲೆಕ್ಕಾಚಾರದಲ್ಲಿ ಗುಣಿಸಿ, ಭಾಗಿಸಿ, ಲೆಕ್ಕಿಸುವ ಪ್ರಮೇಯದಾಟ ಅಷ್ಟೆ. ಹಾಗಾಗಿ ಒಂದು ಹಂತದವರೆಗೆ ಮಾತ್ರ ಜ್ಯೋತಿಷ ಅಥವಾ ರಾಜಭವನ
ಬ್ರಾಹ್ಮಣರ ಮಾತನ್ನು ನಂಬಬಹುದಾಗಿತ್ತೆ ವಿನ: ಅವರು ಹೇಳಿದ್ದು ಆಗೇ ಆಗುತ್ತದೆ ಎಂದಲ್ಲ. ಅಪರೂಪಕ್ಕೆ
ಕಾಯ್ದು ಕಾಯ್ದು ಪಡೆದ ಈ ರಾಜ್ಯ ಸಂಭಾಳಿಸುವ ರಾಜವಂಶಜ ಹುಟ್ಟಿದ್ದನ್ನು ಬೇರೆಯವರಿಗೆ ಅರ್ಥೈಸುವುದಾದರೂ
ಹೇಗೆ..? ಅರ್ಥಮಾಡಿಕೊಳ್ಳುವುದು ಮಾಡಿಸುವುದೂ ಆ ಕ್ಷಣಕ್ಕೆ ಧೃತರಾಷ್ಟ್ರನಿಗೂ
ಬೇಕೆ ಆಗಿರಲಿಲ್ಲ. ತಾನೂ ಕೂಡಾ ಗಂಡು ಮಗುವಿನ ತಂದೆಯಾದೆನಲ್ಲ ಎಂಬ ಹಿಗ್ಗಿನಲ್ಲಿ, ತನ್ನ ಮುಂದಿನ ಉತ್ತರಾಧಿಕಾರಿ ಬಂದನಲ್ಲ ಎಂಬ ಎದೆ ಬಿರಿಯುವ ಸಂತಸದಲ್ಲಿ ಇಂತಹ ಅಸಂತೋಷಕಾರಕದ
ಸಲಹೆಗಳತ್ತ ಗಮನಹರಿಸುವ ಸ್ಥಿತಿಯಲ್ಲಿರಲಿಲ್ಲ ಅವನು ಅಷ್ಟೇ. ಅದು ಸಹಜವೇ ಆಗಿತ್ತು ಕೂಡಾ.
ಕಾರಣ ಕುರುವಂಶಕ್ಕೆ
ಮೊದಲಿನಿಂದಲೂ ಅದೇನೋ ಸರಿಯಾಗಿ ಮಕ್ಕಳು ನಿಲ್ಲದ ಕಾಟ. ಅಲ್ಲಿಂದ ಇಲ್ಲಿಯವರೆಗೂ ವಂಶಾಭಿವೃದ್ಧಿಯೇ
ಅದೆಷ್ಟು ದೊಡ್ಡ ಸಮಸ್ಯೆಯಾಗಿ ಕಾಡಿಲ್ಲ ಹಸ್ತಿನಾವತಿಯನ್ನು. ಯಾವಾಗ ನೋಡಿದರೂ ಸುತ್ತಲಿನ ಮತ್ತು ಇತರ
ರಾಜ್ಯಗಳ ಮಹಾರಾಜರು,
ಸಾಮಂತರು ಇತ್ಯಾದಿಗಳೆಲ್ಲಾ ಒಂದೆಡೆಗೆ ಮೋಜಿಗೋ ಮಂತ್ರಾಲೋಚನೆಗೋ ಸೇರಿದಾಗಲೆಲ್ಲ
ಅವರವರಲ್ಲೇ, ಒಳಗೊಳಗೆ ಆಡಿಕೊಂಡು ನಗುತ್ತಿದ್ದರಲ್ಲ. ಹಸ್ತಿನಾಪುರದ ರಾಜರುಗಳಿಗೆ
ಸಹಜವಾಗಿ ನೈಜಕ್ರಿಯೆಯಲ್ಲಿ ಮಕ್ಕಳಾಗದ ವಿಚಿತ್ರ ಪರಿಸ್ಥಿತಿಯಿಂದಾಗಿ ಮತ್ತು ತಲೆತಲಾಂತರದಿಂದಲೂ ಈ
ಸಮಸ್ಯೆಯನ್ನು ನೀಗಿಸಲು ಪ್ರಯತ್ನಿಸಿದಷ್ಟೂ ಜಟಿಲವಾಗುತ್ತಲೇ ಹೋಗುತ್ತಾ ಜನ್ಮಾಂತರದ ಸಮಸ್ಯೆಯಾಗಿ ಬದಲಾಗಿತ್ತು. ಬೇರೇನಾದರೂ ಗೆದ್ದು,
ಯುದ್ಧವನ್ನೇ ಘೋಷಿಸಿ ತಮ್ಮ ರಾಜ್ಯಕ್ಕೆ ತಂದು ಸಾಧಿಸಿಕೊಂಡು ಬಿಡಬಹುದು.
ಆದರೆ ಸಂತಾನ ಬೆಳೆಸುವುದಾದರೂ
ಹೇಗೆ..?
ಅದೂ ಒತ್ತಾಯಪೂರ್ವಕವಾಗಿ..? ಹಸ್ತಿನಾವತಿಗೆ ಅಂತಹ ಜಾಡ್ಯ
ತಗಲಲು ತಾಂತ್ರಿಕ ಕಾರಣಗಳೂ ಇಲ್ಲದಿಲ್ಲ. ಕೆಲವೊಬ್ಬರಿಗೆ ಬರೀ ಮೋಹದ ಲೈಂಗಿಕ ಆಮೋದದ ತೆವಲುಗಳಾದರೆ,
ಇನ್ನು ಕೆಲವರು ಶಾಪದ ಹೆಸರಿನಲ್ಲಿ ಮಾನಸಿಕ ಜಾಡ್ಯಕ್ಕೂ ಮೌಢ್ಯಕ್ಕೂ ಈಡಾದವರು. ಇವರೆಲ್ಲಾ
ಒಂದು ಕಡೆಯಾದರೆ ಊರಿಗೆ ಮುಂಚೆ ಮಕ್ಕಳು ಹಡೆದು ಕೂತು, ಕುರುವಂಶದ ಮರ್ಯಾದೆಯನ್ನು
ಮೂರು ಕಾಸಿಗೆ ಹರಾಜಿಗಿಟ್ಟವರೇ. ಆದರೆ ದೊಡ್ಡವರ ಮನೆತನದ ಬಗ್ಗೆ ಮಾತಾಡುವವರಾದರೂ ಯಾರು..?
ಹೀಗೆ ಮಕ್ಕಳು ಮಾಡುವ ವಿಷಯದಲ್ಲಿ ಕುರುಕುಲ ಅದ್ಯಾಕೋ ಇನ್ನಿಲ್ಲದ ಕುಚೋದ್ಯಗಳಿಗೆ
ಈಡಾದ ಕುಟುಂಬ. ಬದುಕಿನ ಉದ್ದಕ್ಕೂ ಯಾವ ಕಾಲಕ್ಕೂ ಕುರುಕುಲದ ಕುಟುಂಬಕ್ಕೆ ಮಕ್ಕಳ ಬವಣೆ ತೀರಲೇ ಇಲ್ಲ.
ಸರಿಯಾಗಿ ಮಕ್ಕಳೂ ಹುಟ್ಟಲಿಲ್ಲ. ಹುಟ್ಟಿದ್ದು ದಕ್ಕುತ್ತಿರಲಿಲ್ಲ. ಎರಡೂ ಸರಿಯಾಗಿದ್ದರೆ ರಾಜ್ಯಾವಾಳುವ
ಕ್ಷಮತೆಯೇ ಇರುತ್ತಿರಲಿಲ್ಲ.
ಅದೆಲ್ಲಾ ಯಾಕೆ..? ವಂಶದ ಅಗ್ರೋಜ
ಭರತ ಚಕ್ರವತಿಯೇ ಸಿಂಹಾಸನದ ಘನತೆಯ ಪ್ರಶ್ನೆ ಬಂದಾಗ ಸ್ವತ: ಭಾರದ್ವಾಜನನ್ನು ತನ್ನ ಮಗನೆಂದು ಲೋಕಕ್ಕೆ
ಸಾರಿ ಉನ್ನತ ಸಂಪ್ರದಾಯಕ್ಕೆ ನಾಂದಿ ಹಾಡುವ ಭರದಲ್ಲಿ ಹೊಸ ಪದ್ಧತಿಯನ್ನೂ ಹುಟ್ಟು ಹಾಕಿದ್ದ. ಮೂಲ
ಸಮಸ್ಯೆ ಶುರುವಾಗಿದ್ದು ಅಲ್ಲಿಂದಾನೇ..? ಭರತ ಹಾಗೆ ಮಾಡದಿದ್ದರೆ ತಮ್ಮ
ವಂಶವಾಹಿನಿಯಲ್ಲಿ ಈ ಸಮಸ್ಯೆ ಬರುತ್ತಲೇ ಇರಲಿಲ್ಲವೆ ಎಂದು ಖಚಿತವಿಲ್ಲ ಯಾರಿಗೂ. ಕಾರಣ ಭರತನ ವಂಶಾವಳಿ
ಮುಂದುವರೆಯುವಾಗ ತಾಂತ್ರಿಕವಾಗಿ ಬೆಳೆದದ್ದು ಭಾರದ್ವಾಜನ ತಂತುಗಳಲ್ಲವೇ..? ಆದರೆ ಹೆಸರಿನ ಮೂಲ ಮಾತ್ರ ಭರತನದಾಯಿತೆ ವಿನ: ಒಳಸುಳಿಯ ತಂತುಗಳ ಬದಲಾವಣೆ ಮಾತ್ರ ಇನ್ಯಾರದ್ದೋ
ಮೂಲದ್ದಾಗಿತ್ತು. ಹೌದು ಎನ್ನಿಸುತ್ತದೆ ಈಗ ನೋಡಿದರೆ. ಹಾಗೆ ಮಾಡುವ ಮೂಲಕ ವಂಶ ಪಾರಂಪರ್ಯವಾಗಿದ್ದ
ಉತ್ತರಾಧಿಕಾರಕ್ಕೆ ಮತ್ತು ಅಗಾಧವಾದ ಭರತ ಖಂಡದ ಈಗಿನ ಹಸ್ತಿನಾಪುರದ ಸಿಂಹಾಸನಕ್ಕೆ ಯಾರಾದರೂ ಒಡೆಯನಾಗಬಹುದೆನ್ನುವ
ಉತ್ತರದಾಯಿತ್ವದ ಕವಲನ್ನೂ, ಅದರ ದಿಶೆಯ ಕೋವೆಯನ್ನೂ ಅಗಲಿಸಿದವನೇ ಅವನು.
ಭರತನೇ ಹಾಗೆಂದು
ಒಪ್ಪಿಕೊಂಡ ಮೇಲೆ ನಮ್ಮದಿನ್ನೇನು ಎಂದು, ಅದನ್ನೆ ಉದಾಹರಣೆಯಾಗಿಟ್ಟುಕೊಂಡ ಭೂಮಂಡಲದ
ಅನೇಕ ರಾಜ ಮನೆತನಗಳು ತಂತಮ್ಮ ಅನಧಿಕೃತ ಸಂತಾನವನ್ನೂ, ತಮ್ಮ ತಮ್ಮ ತೆವಲುಗಳ
ಬಯಕೆಯನ್ನು ನಿಯೋಗದ ಹೆಸರಿನಲ್ಲಿ ದೃಢೀಕರಿಸತೊಡಗಿದ್ದವು. ಒಟ್ಟಾರೆ ಮೊದಲೇ ಲೋಲುಪ ರಾಜಮನೆತನದ ಅರಸರುಗಳಿಗೆ
ತಂತಮ್ಮ ವಾಂಛೆಯನ್ನು ಅಧಿಕೃತಗೊಳಿಸಿಕೊಳ್ಳಬೇಕಿತ್ತು ಮತ್ತು ಎಲ್ಲರಿಗೂ ತಂತಮ್ಮ ಅನೈತಿಕತೆಯನ್ನು
ಮುಚ್ಚಿಕೊಳ್ಳಲು ಒಂದೊಂದು ನೆಪ ಬೇಕಿತ್ತು. ಅದಕ್ಕೆ ನಿಯೋಗ ಇತ್ಯಾದಿಗಳ ಸೋಗು ರಾಜ ಮನೆತನಗಳಿಗೆ ಅಪ್ಯಾಯಮಾನವಾಗಿ
ಕಂಡಿದ್ದು ಸಹಜವೇ. ಇಂತಹ ಸಮಯದಲ್ಲೇ ಜಗದ್ವಿಖ್ಯಾತ ಭರತ ಒಂದು ಹೆಜ್ಜೆ ಮುಂದೆ ಹೋಗಿ ಭೂಮಂಡಲದ ಹಲವು
ಸಂಬಂಧಗಳನ್ನು ಒಂದೇ ಹೊಡೆತಕ್ಕೆ ಸರಳೀಕರಿಸಿಬಿಟ್ಟಿದ್ದ.
ಆಮೇಲೆ ಇದೇ ದಾರಿಯಲ್ಲಿ
ನಡೆದ ಶಂತನು ಮಹಾರಾಜ ಗಂಗೆಯನ್ನು ಮದುವೆಯಾಗಿ ವಿಫುಲ ಸಂತಾನ ಭಾಗ್ಯ ಪಡೆದಿದ್ದರೂ, ಅವೆಲ್ಲವೂ
ಮೊದಲೇ ನಿಗದಿ ಪಡಿಸಿದಂತೆ ಗಂಗೆಯ ಕುಟುಂಬದವರಿಗೆ ಬಿಟ್ಟುಕೊಟ್ಟಿದ್ದ. ನದಿ ತೀರದಲ್ಲಿ ಅಂಗೈಯಗಲದ
ಭೂಗತಿ ಇಲ್ಲದ ಸಂತ್ರಸ್ತನಂತೆ ಗಂಗೆಯೆಂಬಾಕೆಯೊಂದಿಗೆ ಆಚರಿಸಿಕೊಂಡ ಮಿಲನ ಮಹೋತ್ಸವದ ಪರಿಣಾಮ ಶಂತನು
ಆಕೆಯ ವಿಚಿತ್ರ ಕರಾರಿಗೆ ತನ್ನ ಸಂತಾನಗಳನ್ನೇ ಆಕೆಯ ಕುಟುಂಬದ ಸುಪರ್ದಿಗೆ ಬಿಟ್ಟುಕೊಡಬೇಕಾಯಿತು.
ಅವನ್ನೆಲ್ಲಾ ಆಕೆ ಸಿಂಹಾಸನದ ಮೋಹದಲ್ಲಿ ಅದೇನು ಕಾರ್ಯಾಚರಣೆಯ ಯೋಜನೆ ರೂಪಿಸಿದ್ದಳೊ ಕೊನೆಗೂ ಪತ್ತೆಯಾಗಲೇ
ಇಲ್ಲ. ಅಷ್ಟಾದರೂ ಸಾಲು ಸಾಲು ಮಕ್ಕಳನ್ನು ಅವನು ಬಿಟ್ಟುಗೊಡುತ್ತಿದ್ದನೆ ಹೊರತಾಗಿ ಹೆಣ್ಣಿನ ಮೋಹ
ಮಾತ್ರ ಬಿಡಲಿಲ್ಲ. ದಶಕಗಳ ಕಾಲಾವಧಿಯ ನಂತರ ಎಂಟನೆಯ ಗಂಡು ಮಗುವನ್ನು ಮಾತ್ರ ಆಕೆಯ ಸುಪರ್ದಿಗೆ ಕೊಡುವುದಿಲ್ಲ
ಎಂದು ತಾನೇ ಉಳಿಸಿಕೊಂಡ ಪರಿಣಾಮ ಆಕೆ ಕೈಬಿಟ್ಟು ಹೋದಳು. ಮಗುವು ಮಾತ್ರ ಉಳಿಯಿತು. ಮುಂದೆ ಆತ ಗಾಂಗೇಯ
ಎಂದೇ ಇತಿಹಾಸ ಕಂಡು ಕೇಳರಿಯದ ರೀತಿಯಲ್ಲಿ ಪ್ರಸಿದ್ಧನಾದ.
ಆದರೆ ಗಾಂಗೇಯನ ಹರೆಯ
ಮಾತ್ರ ಹುರುಪುಗೊಳ್ಳ್ಳುವ ಮೊದಲೇ ಅಪ್ಪನ ತೆವಲಿಗೆ ಬಲಿಯಾಗಿ ಹೋಗಿತ್ತು. ಹಾಗಾಗಲು ಕಾರಣ ಶಂತನುವಿಗೆ
ಸಿಕ್ಕ ಮೋಹದ ಹೆಣ್ಣಿನಿಂದಾಗಿ ಆಗಿದ್ದದು. ಎದೆಯೆತ್ತರದ ಮಗನಿಗೆ ಮದುವೆ ಮಾಡುವುದರ ಬದಲಿಗೆ, ಸುಂದರಿಯಾಗಿ
ಕಂಡ ಸತ್ಯವತಿ ಎಂಬ ಕನ್ಯೆಯನ್ನು ತಾನೆ ಮೋಹಿಸಿ ಸಿಂಹಾಸನಕ್ಕೆ ಕಂಟಕವಾದ ಮಾತಿಗೆ ಕಟ್ಟುಬಿದ್ದಿದ್ದ.
ಹೆಣ್ಣಾದ ಆಕೆಗೆ ಚೆನ್ನಾಗಿ ಗೊತ್ತಿತ್ತು ಇಂತಹ ಚಪಲಚಿತ್ತದ ರಾಜರುಗಳಿಂದ ಹೇಗೆ ಲಾಭಮಾಡಿಕೊಳ್ಳಬಹುದೆಂದು.
ಇತ್ತ ಮಗನಿಗಾಗಿ ಆಕೆಯನ್ನು ಕೇಳಲಾರ, ಹಾಗಂತ ಕಂಡ ಮೋಹದಿಂದ ಹೊರಬರಲಾರದ
ಲೋಲುಪತೆ. ಅದರ ಪರಿಣಾಮ ಸಂಪೂರ್ಣ ಕುರುಕುಲದ ಭವಿಷ್ಯವೇ ಬದಲಾಗಿ ಹೋಯಿತು. ಅತ್ಯಂತ ಸೂಕ್ತ ಮತ್ತು
ಸಶಕ್ತ ಮಹಾರಾಜನೊಬ್ಬನನ್ನು ಕಾಣುವ ಅವಕಾಶದಿಂದ ಹಸ್ತಿನಾವತಿ ಶಾಶ್ವತವಾಗಿ ವಂಚಿತವಾಯಿತು.
ಅಪ್ಪನಿಗೆ ಸತ್ಯವತಿ
ಎಂಬ ಕನ್ಯೆ ಬೇಕಾಗಿದ್ದಾಳೆ ಎಂಬ ಕಾರಣ ಅವನ ಮಗನಾದ ಗಾಂಗೇಯ ಅಪರೂಪದ ಪ್ರತಿಜ್ಞೆ ಕೈಗೊಂಡ. ಆದರೆ ಅದರಿಂದ
ಮುಂದಾನೊಂದು ದಿನ ಭವಿಷ್ಯತ್ತಿನಲ್ಲಿ ತನಗೇ ಅದು ಸತ್ವ ಪರೀಕ್ಷೆಯಾಗಲಿದೆಯೆಂದು ಸಣ್ಣ ಸುಳಿವೂ ಆಗಿರಲಿಕ್ಕಿಲ್ಲ
ಅವನಿಗೆ. ಸ್ವತ: ಅವಳ ತಂದೆಯ ಬಳಿಗೆ ಸಾರಿ ಅವರ ಮನವೊಲಿಸಿ, ಅವಳ ಮಕ್ಕಳಿಗೇ
ಸಿಂಹಾಸನ ಬಿಟ್ಟುಕೊಡುವುದಾಗಿಯೂ ತಾನು ಕೇವಲ ಸಿಂಹಾಸನ ಮತ್ತದರ ರಕ್ಷಣೆಗೆ ಬದ್ಧ, ಅದನ್ನು ಪಾಲಿಸಲು ಎಂದಿಗೂ ಮದುವೆಯೇ ಆಗಲಾರೆ ಎಂದು ಭೀಷಣವಾದ ಪ್ರತಿಜ್ಞೆಗೈದು ಅಜೇಯ ಭೀಷ್ಮನಾಗಿಬಿಟ್ಟ.
ಅಲ್ಲಿಗೆ ಸಶಕ್ತವಾದ ಸಂತಾನ ಮತ್ತು ದೃಢವಾದ ರಾಜ್ಯಾಡಳಿತ ಕೊಡಬಹುದಾಗಿದ್ದ ಭೀಷ್ಮ ಯಾವತ್ತಿಗೂ ಬೇಡದ
ಮಾತು ಕೊಟ್ಟು ಕತೆಯ ಹಾದಿ ತಿರುವಿಬಿಟ್ಟಿದ್ದ.
ಅವನೊಬ್ಬನೆ ಆ ಹೊತ್ತಿಗೆ
ಹಸ್ತಿನಾವತಿಗೆ ಸೂಕ್ತ ವಂಶಾಭಿವೃದ್ಧಿ ಮಾಡಬಲ್ಲ ಪುರುಷನಾಗಿದ್ದರೂ ಸ್ವತ: ಎಲ್ಲಾ ಅವಕಾಶಗಳ ಬಾಗಿಲು
ಹಾಕಿಬಿಟ್ಟಿದ್ದ ಗಾಂಗೇಯ. ನಂತರದಲ್ಲಿ ರಾಜವಂಶ ಮತ್ತು ಇನ್ಯಾವುದೋ ಕುಲದ ಮಿಶ್ರ ತಳಿಯಾಗಿ ಸತ್ಯವತಿಗೆ ಹುಟ್ಟಿದ ಚಿತ್ರಾಂಗದ ಮದುವೆಗೆ ಮೊದಲೇ
ಸತ್ತುಹೋದರೆ,
ವಿಚಿತ್ರವೀರ್ಯ ಕಾಯಿಲೆಯಿಂದ ತೀರಿಕೊಂಡ. ಅಷ್ಟೆಲ್ಲಾ ಕಷ್ಟಪಟ್ಟು ಪ್ರತಿಜ್ಞೆ ಮಾಡಿದ
ಕಾರ್ಯಗಳೆಲ್ಲವೂ ಹೊಳೆಯಲ್ಲಿ ಹುಣಿಸೆ ತೊಳೆದಂತೆ ಆಗಿತ್ತು. ಅವನದ್ದು ಅಪರೂಪದ ಕಾರ್ಯ ಎಂದು ಲೋಕವೇನೋ
ಶ್ಲಾಘಿಸಿತ್ತು. ಆದರೆ ಆಗಿದ್ದು ಮಾತ್ರ ನಿರುಪಯೋಗ ಕಾರ್ಯ. ಏನನ್ನೂ ಮಾಡಬಹುದಾಗಿದ್ದ ಶಕ್ತಿವಂತ ಮತ್ತು
ಅಪರೂಪದ ತೇಜೋವಂತನಾದ ಭೀಷ್ಮ ಸಂತಾನ ಮುಂದುವರಿಕೆಯ ಮಟ್ಟಿಗೆ ಅಕ್ಷರಶ: ನಿರುಪಯೋಗಿಯಾಗಿ ಹೋಗಿದ್ದ.
ಮತ್ತದೆ ಬಂಜೆತನ ಹಸ್ತಿನಾವತಿಯ ರಾಜಮನೆತನಕ್ಕೆ.
ಉಳಿದಿದ್ದ ರಾಣಿಯರಿಬ್ಬರಿಗೂ
ಸ್ವತ: ಗಂಡಂದಿರಿಂದ ಮಕ್ಕಳಾಗುವ ಯೋಗವೇ ಇರಲಿಲ್ಲ. ಮಕ್ಕಳಿಲ್ಲದೆಯೂ ಕುರುವಂಶದ ಸಿಂಹಾಸನವನ್ನು ಭೀಷ್ಮ
ಕಾಯಬಹುದಿತ್ತೆ ವಿನ: ಸ್ವತ: ಸಿಂಹಾಸನ ಏರುವಂತಿರಲಿಲ್ಲ. ಆದ್ದರಿಂದ ಇಬ್ಬರೂ ಮಲಸಹೋದರರೂ ತೀರಿಕೊಂಡಿದ್ದರಿಂದ, ಇತ್ತ ಸಿಂಹಾಸನದ
ಮೇಲೂ ಅಧಿಕಾರ ಸ್ಥಾಪಿಸಬೇಕಾಗಿದ್ದರಿಂದ ಸತ್ಯವತಿ ಎಂಬ ತಾಯಿ ಸ್ವತ: ತಮ್ಮಂದಿರ ಹೆಂಡತಿಯರನ್ನು ಇಟ್ಟುಕೊಂಡು
ಬಿಡು ಎನ್ನುವಂತಹ ಅನಾಹುತಕಾರಿ ಯೋಜನೆ ಜಾರಿಗೊಳಿಸುವ ಪ್ರಯತ್ನಕ್ಕಿಳಿದಿದ್ದಳು. ಆದರೆ ಪ್ರತಿಜ್ಞಾ
ಬದ್ಧ ಭೀಷ್ಮ ಅದನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದ. ಸತ್ಯವತಿಯಾದರೋ ರಾಜಕುಲದ, ಸಿಂಹಾಸನದ ಆಸೆಗೆ ವಯಸ್ಕ ಮಹಾರಾಜನನ್ನು ಮೆಚ್ಚಿ ಬಂದಿದ್ದಳೆ ವಿನ: ಅವಳಿಗೇನು ಗೊತ್ತು ರಾಜಪರಿವಾರದ
ನಿಯಮಾವಳಿ ಮತ್ತು ಪ್ರತಿಜ್ಞೆಗಳ ಮಹತ್ವ. ಆಕೆಯ ಪ್ರೇಮದ ಅಮಲು ಇಳಿದು ಅದ್ಯಾವುದೋ ಕಾಲವಾಗಿತ್ತು.
ಆಕೆಗೇನಿದ್ದರೂ ಇನ್ನು ಬರೀ ತನ್ನ ಕುಲದ ಮುಂದುವರಿಕೆಯಷ್ಟೆ ಗಮ್ಯ.
ಹಾಗಾಗಿ ತನ್ನದೆ
ವಂಶದ ರಕ್ತ ಮುಂದುವರೆಯಲಿ ಎಂದು ಮನೆಯಲ್ಲೇ ಇರುವ ಹೆಂಗಸರೊಂದಿಗೆ ಸಂಬಂಧ ಹೊಂದಿಬಿಡು ಎಂದು ಭೀಷ್ಮನಿಗೆ
ಸೂಚಿಸಿದ್ದಳು ನಿಯೋಗದ ಹೆಸರಿನಲ್ಲಿ. ಆದರೆ ಅದಾವುದಕ್ಕೂ ಅವನು ಜಗ್ಗದೆ ಹೋದಾಗ, ಕೊನೆಗೆ
ಸೂಕ್ತ(?)ವ್ಯಕ್ತಿಯಾಗಿ ತೋರಿದ, ರಾಜ ಮನೆತನದ
ಕೌಟುಂಬಿಕ, ರಾಜಕಾರಣದ ವ್ಯವಹಾರದಲ್ಲಿ ತಲೆ ಹಾಕಲಾರನೆನ್ನುವ ನಂಬಿಕೆಯ ಆಧಾರದ
ಮೇಲೆ, ಸರ್ವ ಮಂಡಳಿ ಒಪ್ಪಿದ ವೇದವ್ಯಾಸರ ಸಾಂಗತ್ಯಕ್ಕೆ ಮನವೊಲಿಸಿ,
ಸೂಕ್ತ ಸಮಯದಲ್ಲಿ ಕೂಡಿಸಿದ ಪರಿಣಾಮ ಅಂಬಿಕೆ, ಅಂಬಾಲಿಕೆಯರು
ಮಕ್ಕಳನ್ನು ಪಡೆದು ಕುರುವಂಶವನ್ನು ಮುಂದುವರೆಸಬೇಕಾಯಿತು. ಆಗ ಲಭ್ಯವಾದ ಅವಕಾಶವನ್ನು ಬಳಸಿಕೊಂಡು
ರಾಣಿವಾಸದವರ ಜತೆಗಿದ್ದ ಸಖಿ ಕೂಡಾ ಬಂದಿದ್ದ ವೇದವ್ಯಾಸರೊಂದಿಗೆ ಸಮಾಗಮವನ್ನು ಆಚರಿಸಿಕೊಂಡುಬಿಟ್ಟಳು.
ದಿನಕ್ಕೊಮ್ಮೆ ಭೂರಿ ಭೋಜನ, ಮನಸೋ ಇಚ್ಛೆ ಮೈಮನ ಹಗುರಗೊಳಿಸುವಂತಹ ಸೇವೆ,
ಜೊತೆಗೆ ಹಗಲು ರಾತ್ರಿ ಪಾಂಗಿತ ಸಮಾಗಮ ಅಷ್ಟೆ. ಆಗ ಹುಟ್ಟಿದವರೇ ಧೃತರಾಷ್ಟ್ರ,
ಪಾಂಡು ಮತ್ತು ವಿದುರನೆಂಬ ದಾಸಿಯ ಮಗ.
ಹೋಗಲಿ ಇವರಿಬ್ಬರಾದರೂ
ಸರಿಯಾಗಿದ್ದರೇ...?
ಅದೂ ಇಲ್ಲ. ಕಾರಣ ಧೃತರಾಷ್ಟ್ರ ಹುಟ್ಟುಕುರುಡ. ಹಾಗಾಗಲೂ ಕಾರಣವಿಲ್ಲದಿರಲಿಲ್ಲ.
ನಿಯೋಗಕ್ಕೆ ಒಪ್ಪಿದ ವ್ಯಾಸರ ಅಂಶ ಅದು. ಭೂಮಿಯ ಯಾವ ಮೂಲೆಯಿಂದ ಎದ್ದು ಬಂದ ಋಷಿವರ್ಯನೋ ಅವನು. ಯಾವ
ರೀತಿಯಲ್ಲಿ ಯಾವ ಕಾರಣಕ್ಕೆ ಹುಟ್ಟು ಅಂಧತ್ವ ಬರುತ್ತದೆನ್ನುವುದನ್ನು ವೀರ್ಯ ಕಣವ ಹೊಕ್ಕು ನೋಡಿದವರಾದರೂ
ಯಾರು..? ಸಮಾಗಮವಾಗಿ ಸಂತಾನ ಬೇಕಿತ್ತು ಆಯಿತು. ಆದರೆ ಅವೂ ಸರಿಯಾಗಿ ದಕ್ಕಲಿಲ್ಲ.
ಆದ್ದರಿಂದ ಹೇಗಾದರೂ ರಾಜ್ಯಾಭಿಷೇಕವಾಗಲಿ ನಂತರದ್ದು ತನ್ನದೇ ಹೊಣೆ ಎಂದು, ಗಡಿಯಿಂದ ಹಿಡಿದು ಸರ್ವ ರೀತಿಯ ರಕ್ಷಣೆಯನ್ನು ಕುರು ಸಿಂಹಾಸನಕ್ಕೆ ಕೊಡುವವನು ತಾನೇ ಎಂದು
ಭೀಷ್ಮ, ಕುರುಡ ಧೃತರಾಷ್ಟ್ರನನ್ನು ಸರಿಸಿ ಪಾ೦ಡುವಿಗೆ ಪಟ್ಟಾಭಿಷೇಕ ಮಾಡಿ
ಸಂಭ್ರಮಿಸಿದ್ದ. ಪಾಂಡುವೇನೂ ಕಿತ್ತು ಹಾಕುವವನಾಗಿರಲಿಲ್ಲ. ಒಂದು ಹದಕ್ಕೆ ಮಟ್ಟಸವಾದ ಆಳೇ. ರಾಜ್ಯಾಧಿಕಾರ,
ಯುದ್ಧ ಎಲ್ಲದರಲ್ಲೂ ಪಳಗಿದ್ದ. ಪಟ್ಟವೇರುತ್ತಿದ್ದಂತೆ ಜೈತ್ರಯಾತ್ರೆ ಮಾಡಿ ಬಂದ.
ಪುಂಡ್ರರಾಜನಿಂದ ಹಿಡಿದು ದಶಾರ್ಣನವರೆಗೂ ಕಪ್ಪ ಕಾಣಿಕೆ ಸಲ್ಲಿಸಿ ಹಸ್ತಿನಾವತಿಗೆ ಬಾಗಿ ನಿಂತಿದ್ದರು
ಭೂಮ೦ಡಲದ ರಾಜರು. ವರ್ಷಗಳ ಕಾಲ ಯುದ್ಧ ಭೂಮಿಯಲ್ಲಿದ್ದವ, ಗೆದ್ದ ಮದ ಬೇರೆ
ಬಂದವನೇ ವಿಹಾರಾರ್ಥ ಹೆಂಡತಿಯರೊಂದಿಗೆ ಕಾಡಿಗೆ ತೆರಳಿದ.
ಎಲ್ಲಾ ಸರಿಹೋಯಿತು
ಎಂದುಕೊಳ್ಳುವಷ್ಟರಲ್ಲಿ ಪಾಂಡು ಕಾಡಿನಲ್ಲಿ ಬೇಟೆಯಾಡುತ್ತಾ ವಿಹರಿಸುತ್ತಿದ್ದಾಗ ಕಂಡಿದ್ದು ಪೊದೆಯ
ಆಚೆಗೆ ಸಮಾಗಮದಲ್ಲಿದ್ದ ಪ್ರಾಣಿಗಳ ಜೋಡಿ. ತಡ ಮಾಡದೆ ಮೋಜಿನ ಬಾಣಕ್ಕೀಡಾಗಿಸಿದ್ದ ಪಾಂಡು. ಎಡವಟ್ಟಾಗಿದ್ದೆ
ಅಲ್ಲಿ. ಬಾಹ್ಯ ಮರ್ಯಾದೆಗೆ ಅಂಜಿ ಪ್ರಾಣಿಗಳ ಚರ್ಮದ ತಡಿಕೆಯಡಿ ನಿಂತು ಸುಖಿಸುತ್ತಿದ್ದ ಕಿಂದಮ ಋಷಿಯ
ದಂಪತಿ ಜೋಡಿ ಅದಾಗಿತ್ತು. ದೂರದಿಂದ ನೋಡುವಾಗ ಆ ರಭಸಕ್ಕೆ ಅದೊಂದು ಪ್ರಾಣಿಗಳ ಸಮಾಗಮ ಎನ್ನಿಸುತ್ತಿತ್ತು.
ತತಕ್ಷಣ ಬಾಣ ಹೂಡಿಬಿಟ್ಟಿದ್ದ ಪಾಂಡು. ಸರಿಯಾಗಿ ಈಡಿಗೆ ಸಿಕ್ಕಿದ್ದ ಕಿಂದಮ ಮನದನ್ನೆಯೊಂದಿಗೆ ಪ್ರಾಣಬಿಡುವ
ಮೊದಲು,
ಪಾಂಡುವಿಗೆ ಅಂತಹದ್ದೇ ಸುಖದ ಕ್ಷಣಗಳಲ್ಲಿ ನಿನಗೆ ಸಾವಾಗಲಿ ಎಂದು ಶಪಿಸಿ ಪ್ರಾಣ
ಬಿಟ್ಟುಬಿಟ್ಟಿದ್ದ. ಶಾಪ ಎನ್ನುವುದು ಅವನ ಸಂಕಟ ಮತ್ತು ಮರಣ ಯಾತನೆಯ ಫಲವೇ ಹೊರತು ಆಗೇ ಆಗುತ್ತದೆಂದು
ಯಾರಿಗೆ ಗೊತ್ತಿತ್ತು...?
ಆದರೆ ಆಗ ಆದ ಅನಾಹುತಕೆ
ಕಾಡಿದ ಪಾಪಪ್ರಜ್ಞೆ ಮತ್ತು ಋಷಿಯೊಬ್ಬನ ಸಂಕಟಕಾರಕ ಮಾತುಗಳು ಇನ್ನಿಲ್ಲದಂತೆ ಅವನ ಮನಸ್ಸಿಗೆ ನಾಟಿ, ಸಾಂಗತ್ಯಕ್ಕೆ
ಪುರುಷತ್ವ ಜೊತೆ ನೀಡದೆ ಹೋಗುವ ಮಾನಸಿಕ ಕಾಯಿಲೆಗೆ ತುತ್ತಾಗಿಬಿಟ್ಟ. ಈ ಒಳ ಹೆದರಿಕೆಯಿಂದಾಗಿ ಆಪ್ತ
ಸಮಯದಲ್ಲಿ ಮೆದುಳಿನ ಚೋದಕಗಳು ವ್ಯವಸ್ಥಿತವಾಗಿ ಕೈಕೊಟ್ಟು ಬಿಡುತ್ತಿದ್ದವು. ಇನ್ನೇನು ತಾನು ಹೆಂಡತಿಯೊಂದಿಗೆ
ಸೇರಬೇಕೆನ್ನುವಾಗ ಅವನ ಶಾಪದ ಹೆದರಿಕೆಯಿಂದಾಗಿ ಸರ್ರನೆ ಇಳಿದು ಹೋಗುತ್ತಿದ್ದ. ಮನಸ್ಸಿನ ಆಟ ಅದು.
ಸರಿಯಾಗಿ ಮಾನಸಿಕ ದೌರ್ಬಲ್ಯಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಚೇತರಿಸಿಕೊಳ್ಳುತ್ತಿದ್ದನೇನೋ. ಆದರೆ
ಅತ್ತೆವ ಶಾಪದ ಭಯಕ್ಕೆ ಬಿದ್ದು ಮನಸ್ಸಿನ ಉದ್ರೇಕ ಮರೀಚಿಕೆಯಾಗಿ ಹೋಯಿತು. ಅಲ್ಲಿಗೆ ಪಾಂಡುವಿನ ದರ್ಬಾರು
ನಿಂತುಹೋಯಿತು. ಸಂಸಾರ ವಿಮುಖನಾಗಿ ಅಣ್ಣನಿಗೆ ಹಸ್ತಿನಾವತಿಯನ್ನು ಬಿಟ್ಟುಕೊಟ್ಟು ಶತಶೃಂಗ ಪರ್ವತದ
ಕಾಡು ಸೇರಿಬಿಟ್ಟಿದ್ದ. ಇನ್ನು ಅವನಿಂದ ಹಸ್ತಿನಾವತಿಯ ವಂಶಾಭಿವೃದ್ಧಿ ಎನ್ನುವುದು ಕನಸಿನ ಗಂಟೇ ಸರಿ.
ಅಲ್ಲಿಗೆ ಕುರುವಂಶದ
ಸಂತಾನ ಹೀನತೆಯ ಚರಿತ್ರೆ ಮತ್ತೆ ಮುಂದುವರೆದಿತ್ತು. ಹಾಗಂತ ಧೃತರಾಷ್ಟ್ರ ಇರಲಿಲ್ಲವೆಂದಲ್ಲ. ಅದೇಕೋ
ಅವನಿಗೂ ಮಕ್ಕಳಾಗಿರಲಿಲ್ಲ. ಮೂಲತ: ಅವನಿಗೆ ಮದುವೆಯಾಗುವುದೇ ಅಷ್ಟು ಸುಲಭವಿರಲಿಲ್ಲ. ಧೃತರಾಷ್ಟ್ರ
ಬಲಶಾಲಿ,
ಕಟುಮಸ್ತಾದ ಜಟ್ಟಿಯಂತಹ ದೇಹಿಯಾಗಿದ್ದರೂ ದೈಹಿಕ ಆಳ್ತನ ಸಹಜವಾಗೇ ಬಂದಿದ್ದರೂ,
ಸ್ವತ: ಸ್ವಯಂವರದಲ್ಲಿ ಭಾಗವಹಿಸಿ ಕನ್ಯೆಯರನ್ನು ಕರೆತರುವಂತಿರಲಿಲ್ಲ. ಕಾರಣ ಹುಟ್ಟು
ಕುರುಡ. ಅದಾಗಲೇ ಹಸ್ತಿನಾವತಿಯ ಸುತ್ತಲಿನ ಚೇದಿ, ಕಳಿಂಗ, ಕಾಶಿ, ಮಗಧ ಇತ್ಯಾದಿ ರಾಜ್ಯಗಳಲ್ಲಿ ರಾಜಕುಮಾರ ಹುಟ್ಟು ಕುರುಡ
ಎಂದು ಹಬ್ಬಿ ಬಿಟ್ಟಿದ್ದರಿಂದಾಗಿ ಹಸ್ತಿನಾವತಿಯೊಂದಿಗೆ ಸಂಬಂಧ ಬೆಳೆಸುವ ಸಂದರ್ಭವೇ ಇರಲಿಲ್ಲ. ಹಾಗಾಗೇ
ಮತ್ತೆ ಮದುವೆಯ ವಿಷಯಕ್ಕೂ ರಂಗಕ್ಕಿಳಿಯಬೇಕಾಗಿ ಬಂದಿದ್ದು ಭೀಷ್ಮನೇ.
ಕಾರಣ ಹಿಂದೊಮ್ಮೆ
ವಿಚಿತ್ರವೀರ್ಯನಿಗೆ ಕನ್ಯೆಯರನ್ನು ಹುಡುಕುವಾಗ ಕಾಶಿಯ ರಾಜ ತನ್ನ ಮೂವರು ಸುಂದರ ಕನ್ಯೆಯರಿಗೆ ಸ್ವಯಂವರ
ಏರ್ಪಡಿಸಿದ್ದ. ಆದರೆ ಸ್ವಯಂವರ ಸ್ವಂತ ಶಕ್ತಿಯ ಮೇಲೆ ಗೆಲ್ಲಲು ಸಾಮರ್ಥ್ಯವಿಲ್ಲದ ವಿಚಿತ್ರವಿರ್ಯನಿಗೆ
ಬದಲಾಗಿ ಭೀಷ್ಮ ಕಾಶಿ ದೇಶಕ್ಕೆ ತೆರಳಿದ. ಕಾರಣ ವಿಚಿತ್ರವೀರ್ಯ ಹಸ್ತಿನಾವತಿಯ ದೊರೆ. ಅವನಿಗಾಗಿ ಸಿಂಹಾಸನ
ಕಾಯುವ ತಾನು ಕನ್ಯೆಯರನ್ನು ಹೊತ್ತು ತಂದರೆ ತಪ್ಪೇನಿಲ್ಲ ಎನ್ನುವುದು ಭೀಷ್ಮನ ವಾದ. ಹಾಗೆ ಅವನಿಗೋಸ್ಕರ
ಕಾಶಿ ರಾಜನ ಆಸ್ಥಾನಕ್ಕೆ ನುಗ್ಗಿ ಅವರನ್ನು ಹೊತ್ತು ತಂದಿದ್ದ. ಅವನ ಭುಜಬಲದ ಪರಾಕ್ರಮದೆದುರಿಗೆ ಯಾರೂ
ನಿಲ್ಲುವಂತಿರಲಿಲ್ಲ. ಅದು ಸತ್ಯವೇ ಆಗಿತ್ತು.
ಕ್ಷಣಾರ್ಧದಲ್ಲಿ
ಎದುರಿಗೆ ಬಂದವರನ್ನು ಸೋಲಿಸಿ, ಅವಮಾನಿಸಿ ಕಾಶಿ ರಾಜನ ಮೂವರೂ ರಾಜಕುಮಾರಿಯರನ್ನು ರಥಕ್ಕೇರಿಸಿಕೊಂಡು
ಹೊರಟುಬಿಟ್ಟಿದ್ದ. ಆಗ ಎದುರಾದ ಸಾಲ್ವ ದೊರೆಯನ್ನು ಕೆಲವೇ ನಿಮಿಷದಲ್ಲಿ ಹೀನಾಯವಾಗಿ ಸೋಲಿಸಿ ಪೌರುಷ
ಮೆರೆದಿದ್ದೇನೋ ಸರಿನೇ. ಆದರೆ ಗೆದ್ದು ಅನುಭವಿಸಬಹುದಾದ ಹೆಮ್ಮೆಯ ಬದಲಿಗೆ ಜಾಗತಿಕವಾಗಿ ತನ್ನ ಪರಾಕ್ರಮ
ಮತ್ತು ಬೇಡದ ಕಾರ್ಯಕ್ಕೆ ಕೈಹಾಕಿದ್ದು ಇತಿಹಾಸವಾಗಿ
ಹೋಯಿತು. ಯುದ್ಧ ಮತ್ತು ಪ್ರತಿಜ್ಞೆಯ ಮಟ್ಟಿಗೆ ಜಗದ್ವಿಖ್ಯಾತನಾದರೂ ಅದೇ ಕಾರಣಕ್ಕೆ ಅಪವಾದ ಮತ್ತು
ವಿಷಾದಕರ ಸಂಗತಿಯನ್ನು ಭೀಷ್ಮ ಮೈಮೇಲೆ ಎಳೆದುಕೊ೦ಡಿದ್ದ. ಅವನ ಬದುಕಿನ ಮಟ್ಟಿಗೆ ಅದೊಂದು ಘೋರ ಅವಮಾನ.
ಯಾವ ಜಗದೇಕ ವೀರನೂ ನಿರೀಕ್ಷಿಸದ ತಿರುವು ಅದು. ಯಾವ ಪ್ರತಿಜ್ಞೆಯ ಕಾರಣ ಭೂಮಂಡಲಕ್ಕೆ ಅದ್ವಿತೀಯ ಎನ್ನಿಸಿದ್ದನೋ
ಅದೇ ಕಾರಣಕ್ಕೆ ಘೋರ ಅವಮಾನಕ್ಕೆ ಈಡಾಗುವ ಪರಿಸ್ಥಿಯ ಎದುರಿಗೆ ನಿಂತು ಬಿಟ್ಟಿದ್ದ ಭೀಷ್ಮ. ಅದೂ ಹೆಣ್ಣೊಬ್ಬಳಿಂದ.
ಭರತ ವಂಶದ ಬುಡವನ್ನೇ ಜಾಲಾಡಿದ್ದೀರಾ ಸರ್.. ತುಂಬಾ ಚೆನ್ನಾಗಿದೆ ವಿಶ್ಲೇಷಣೆ. ದೊಡ್ಡವರು ಮಾಡಿದ್ದೆಲ್ಲ ಹೇಗಾದ್ರು ಮುಚ್ಚಿ ಹೋಗುತ್ತೆ. ಅವರು ಮಾಡಿದ್ದೇ ಕಾನೂನು, ಪದ್ಧತಿ..
ReplyDeleteಅವನ್ನೆಲ್ಲಾ ಆಕೆ ಸಿಂಹಾಸನದ ಮೋಹದಲ್ಲಿ ಅದೇನು ಕಾರ್ಯಾಚರಣೆಯ ಯೋಜನೆ ರೂಪಿಸಿದ್ದಳೊ ಕೊನೆಗೂ ಪತ್ತೆಯಾಗಲೇ ಇಲ್ಲ. - ಅವರು ಶಾಪಗ್ರಸ್ತ ಅಷ್ಟವಸುಗಳಲ್ಲವಾ?
ಹೆಣ್ಣಾದ ಆಕೆಗೆ ಚೆನ್ನಾಗಿ ಗೊತ್ತಿತ್ತು ಇಂತಹ ಚಪಲಚಿತ್ತದ ರಾಜರುಗಳಿಂದ ಹೇಗೆ ಲಾಭಮಾಡಿಕೊಳ್ಳಬಹುದೆಂದು. - ಸತ್ಯವತಿಗಿಂತಲೂ ಅವಳ ಅಪ್ಪನ ಕರಾರುಗಳಾಗಿದ್ದವು ಅವು. ಶಂತನುವಿನ ಮೋಹಕ್ಕೆ ದೇವವ್ರತನ ಜೀವನ ಬಲಿಯಾಗಬೇಕಾಯ್ತು.
ಆಗ ಲಭ್ಯವಾದ ಅವಕಾಶವನ್ನು ಬಳಸಿಕೊಂಡು ರಾಣಿವಾಸದವರ ಜತೆಗಿದ್ದ ಸಖಿ ಕೂಡಾ ಬಂದಿದ್ದ ವೇದವ್ಯಾಸರೊಂದಿಗೆ ಸಮಾಗಮವನ್ನು ಆಚರಿಸಿಕೊಂಡುಬಿಟ್ಟಳು. - ವಿದುರನ ತಾಯಿ ತಾನಾಗಿ ಹೋದದ್ದಲ್ಲ.. ಒಮ್ಮೆ ಅಂಬಿಕೆ ಮತ್ತೊಮ್ಮೆ ಅಂಬಾಲಿಕೆ ಹೋದ ಮೇಲೆ ಮಗದೊಮ್ಮೆ ಅವರಿಬ್ಬರೂ ಹೋಗಲು ಇಷ್ಟ ಪಡದೆ ದಾಸಿಯನ್ನು ಕಳಿಸಿದರು. ಆಕೆ ಭಕ್ತಿಯಿಂದ ಅವರ ಸೇವೆ ಮಾಡಿದ್ದಕ್ಕೆ ಧರ್ಮಿಷ್ಠನಾದ ವಿದುರನ ಜನನವಾಯಿತು. ಆದರೆ ಎಷ್ಟೆಂದರೂ ದಾಸಿಯ ಮಗ. ಅವನಿಗೆಲ್ಲಿದೆ ಸಿಂಹಾಸನದ ಹಕ್ಕು..
(ನಾನು ಚಿಕ್ಕಂದಿನಲ್ಲಿ ಓದಿದ ಮಹಾಭಾರತದ ಕಥೆಗಳಿಂದ ಕಲಿತದ್ದು.. )