Saturday, August 26, 2017

ಕಾಶ್ಮೀರವೆಂಬ ಖಾಲಿ ಕಣಿವೆ..

ಅದು ಜಗತ್ತಿನ ಉಗ್ರರ ಫ್ಯಾಕ್ಟರಿ...

ಶಿಬಿರಗಳಿಗೆ ಎಲ್ಲೆಲ್ಲಿಂದಲೋ ಬಂದ ಮುಸಲ್ಮಾನರಿಗೆ ನೀರು ನೆರಳು ಎರಡನ್ನೂ ಕೊಡುತ್ತಾ, ಪಾಕಿಸ್ತಾನ ಜಾಗತಿಕವಾಗಿ ಕರ್ಮಠ ಮುಸ್ಲಿಂನಾಡು ಎಂದು ಒಮ್ಮೆಲೆ ಮಂಚೂಣಿಗೆ ಬಂದು ನಿಂತುಬಿಡ್ತಲ್ಲ ಆ ಪಟ್ಟ, ತೀರ ಹೆಂಡತಿಯರ ಹಿಂದೆ ಬಚ್ಚಿಕೊಂಡಿದ್ದ ಲಾಡೆನ್‍ನನ್ನು ಬಡಿದು ಕೆಡುವವರೆಗೂ ಹಾಗೆಯೇ ಉಳಿದಿತ್ತು. ಕಾರಣ ಇದೇ ಪಾಕಿಸ್ತಾನದ ಸರಹದ್ದಿನಲ್ಲೇ ಇದ್ದದ್ದು ಸಂತ್ರಸ್ತರ ಶಿಬಿರದ ಹೆಸರಿನ ಉಗ್ರರ ಫ್ಯಾಕ್ಟರಿಗಳು. ಹಾಗೆ ಲಕ್ಷಾಂತರ ಸಂಖ್ಯೆಯಲ್ಲಿ ಅವರನ್ನು ಕೂಡಿ ಹಾಕಿಕೊಂಡಿದ್ದಾರೂ ಹೇಗೆ...? ಅವರನ್ನು ಯಾಕಾದರೂ ಅಪಘಾನಿಸ್ತಾನ "ತಾಲಿಬಾನಿ" ಎಂದು ಒಪ್ಪಿಕೊಂಡಿತು..? ಎನ್ನುವುದಕ್ಕೆಲ್ಲ ಇತಿಹಾಸವಿದೆ.
ಎರಡು ದೇಶಗಳಾಗಿ ಹಿಂದೂಸ್ತಾನ ಒಡೆಯಿತಲ್ಲ. ಆಗ ಪಶ್ತೂನಿಗಳು/ಬಲೂಚರು ಪಾಕಿಸ್ತಾನದ ಬದಲಿಗೆ ಇನ್ನೂ ಆಚೆಯ ಅಪಘಾನಿಸ್ತಾನವನ್ನು ಸೇರಿಕೊಳ್ಳುತ್ತೇವೆ ಎಂದು ನಿರ್ಧರಿಸಿದರು. ಹಾಗಾದಲ್ಲಿ ತನ್ನ ಕ್ಷೇತ್ರ ಮತ್ತು ಹಿಡಿತ ಎರಡೂ ಕಡಿಮೆಯಾಗುತ್ತದೆಂದು ಅವರನ್ನು ಬಲವಂತದಿಂದ ತನ್ನ ಗಡಿಯೊಳಗೇ ಪಾಕಿಗಳು ಬಂಧಿಸಿಡಲು ನೋಡಿದಾಗ ಗಡಿಯಲ್ಲಿ ಅಪಘಾನ್ನರೊಂದಿಗೆ ಬಡಿದಾಟವೇ ಆಗಿ ಹೋಯಿತು. ಅಪ್ಘನ್‍ರ ದೊರೆ ಜಾಹೀರಿ ಇದರಿಂದಾಗಿ ಕುಪಿತಗೊಂಡು ಪಾಕಿಗಳೊಂದಿಗೆ ಅಕ್ಷರಶ: ಸರಹದ್ದನ್ನೇ ಮುರಿದುಕೊಂಡುಬಿಟ್ಟ. ಹಾಗೆ ಮುರಿದುಕೊಂಡಿದ್ದೇ ಅಲ್ಲದೆ ಬಾರ್ಡರಿನ ಎಲ್ಲ ಬಾಗಿಲನ್ನೂ ಮುಚ್ಚಿಸಿಬಿಟ್ಟ. ಇತ್ತ ಗ್ರೇಟ್ ಗ್ರಾಂಡ್‍ಟ್ರಂಕ್ ರೋಡ್‍ನ್ನು ಬಂದು ಮಾಡಿ ಅಪಘಾನಿಗಳನ್ನು ಇನ್ನಿಷ್ಟು ಸಂಕಷ್ಟಕ್ಕೀಡು ಮಾಡಿ ಅನಾಹುತಕಾರಿ ವಿದ್ಯಮಾನಕ್ಕೆ ಮುನ್ನುಡಿ ಬರೆದುಬಿಟ್ಟಿತು ಪಾಕಿಸ್ತಾನ.
ಯಾವಾಗ ಪಾಕಿ ಗಡಿ ಬಂದಾಗಿ ಸರಂಜಾಮು ಬರುವುದು ನಿಂತು ಹೋಯಿತೋ ದೊರೆ ಜಾಹಿರಿ ಇನ್ನೊಂದು ಗಡಿಯಲ್ಲಿದ್ದ ರಷಿಯಾದತ್ತ ಕೈ ಚಾಚಿ ದೋಸ್ತಿಗಿಳಿದ. ರಷಿಯಾ ತುಂಬಾ ಉದಾರವಾಗಿ ನಡೆದುಕೊಂಡು ಆಗ ತೀರ ಅವಶ್ಯವಿದ್ದ ದಿನಸಿ ಅಹಾರದ ಜೊತೆಗೆ ತೆಕ್ಕೆಗಟ್ಟಲೆ ಅನಾಹುತಕಾರಿ ಬಂದೂಕುಗಳನ್ನೂ ಕೊಟ್ಟುಬಿಟ್ಟಿತು. ಎಗ್ಗಿಲ್ಲದೆ ಶಸ್ತ್ರಾಸ್ತ್ರಗಳು ಆಟದ ಸಾಮಾನಿನಂತೆ ಸಮರಖಂಡದೊಳಕ್ಕೆ ಬಂದು ಜಮೆಯಾಗಿಬಿಟ್ಟವು. ಜಾಹಿರಿ ಬೇಕು ಎನ್ನುತ್ತಿದ್ದಂತೆ ಮುಖ್ಯಪಟ್ಟಣದಲ್ಲಿ ವಾಯು ನೆಲೆಯ ನಿಲ್ದಾಣಗಳನ್ನೂ ರಷಿಯಾ ನಿರ್ಮಿಸಿಕೊಟ್ಟಿತು. ಯಾವ ಅಮೇರಿಕೆಯ ಕಾಲು ಹಿಡಿದರೂ ದಕ್ಕದ ವಸ್ತುಗಳನ್ನೆಲ್ಲಾ ಒಂದೇ ಕೇಳಿಕೆಗೆ ರಷಿಯಾ ಪೂರೈಸಿತೋ ಅಪಘಾನಿಗಳು ಅಪೂಟು ರಷಿಯಾ ಮುಲಾಜಿಗೆ ಬಿದ್ದು ಹೋದರು. ಜೊತೆಗೆ ರಷಿಯಾದ ಸೊಷಿಯಲಿಸ್ಟ್ ಮಿಶ್ರಿತ ಕಮ್ಯೂನಿಸ್ಟ್ ಕೂಡಾ ಕಣಿವೆಗೆ ಕಾಲಿಟ್ಟು ಯಾವ ಮುಸ್ಲಿಂ ರಾಷ್ಟ್ರದಲ್ಲೂ ಇರದ ಸ್ವಾತಂತ್ರ್ಯ, ಸೌಲಭ್ಯಗಳು ಅಪಘಾನಿಗಳಿಗೆ ದೊರಕಿ ಹೋಯಿತು. ಆಗ ಆರಂಭವಾದ ಅಪಘನ್ನರ ಬದುಕಿನ ಸ್ವಾತ್ರಂತ್ರ್ಯದ ಸುವರ್ಣಯುಗ ತುಂಬ ದಿನ ನಡೆಯಲಿಲ್ಲ. ಜಹೀರಿಗೆ ವಿರೋಧವಾಗಿ ಪಾಕಿ ಬೆಂಬಲಿತ ಕರ್ಮಠ ಮುಸ್ಲಿಮ್‍ರನ್ನೊಳಗೊಂಡ "ಪೀಪಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಅಪಘಾನಿಸ್ತಾನ್" ರಚನೆಯಾಗಿ ಶಿಯಾ ವಿರೋಧಿಗಳು, ಮುಲ್ಲಾಗಳು, ಉಲೇಮಾಗಳು ಒಗ್ಗಟ್ಟಾಗಿ ನಾಯಕತ್ವವನ್ನು ಜಾಹೀರನ ವಿರೋಧಿ ದಾವುದ್‍ಖಾನ್‍ಗೆ ವಹಿಸಲಾಯಿತು. ಬದಲಾದ ರಾಜಕೀಯದಲ್ಲಿ ದಾವುದ್ ದೊರೆಯಾದ. ಆದರೆ ಆತ ರಷಿಯಾವನ್ನು ಹೊರಗಿಟ್ಟು ಪಕ್ಕದ ಶಾ ಆಫ್ ಇರಾನ್‍ನೊಂದಿಗೆ ಕೈ ಜೋಡಿಸಿಬಿಟ್ಟ. ಇತ್ತ ಮುಸ್ಲಿಂ ರಾಷ್ಟ್ರವೂ ಆಗದ ಅತ್ತ ಸರಿಯಾದ ವ್ಯವಸ್ಥೆಯೂ ಇಲ್ಲದೆ ಅವನ ಯೋಜನೆಗಳೇ ಅರ್ಥವಾಗದೆ ಸುಖಾಸುಮ್ಮನೆ ದಾವುದ್‍ಖಾನ್ ಅದೇ ಮುಸ್ಲಿಂರ ವಿರೋಧಿಯಾಗಿಬಿಟ್ಟ.
ಸಂಸ್ಕೃತಿ ಸಮೇತ ಎಲ್ಲ ಬದಲಾಗಬೇಕೆಂಬ ಅರ್ಜೆಂಟಿಗೆ ಬಿದ್ದು ಮಸೀದಿಯ ಮೂಲಕ ದಂಗೆ ಏಳುವವರೆಲ್ಲರನ್ನೂ ಗುಳೆಎಬ್ಬಿಸಿ ಹೊರದಬ್ಬಿದ. ವಿರೋಧಿಗಳ ಗಡಿಪಾರಾಯಿತು. ಹೀಗೆ ವಿರೋಧಿಗಳ ಹುಟ್ಟಡಗಿಸಿದನಾದರೂ ರಷಿಯಾದೊಂದಿಗೆ ಗೆಳೆತನ ಮುರಿದುಕೊಂಡು ಅತಿದೊಡ್ಡ ತಪ್ಪು ಮಾಡಿಬಿಟ್ಟಿದ್ದ ಜೊತೆಗೆ ವಿರೋಧಿಗಳು ಎಲ್ಲೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ನಿಗಾ ಇಲ್ಲದೆ ಎರಡನೆ ದೊಡ್ಡ ತಪ್ಪು ಮಾಡಿದ್ದ. ಐದೇ ವರ್ಷದಲ್ಲಿ ರಷಿಯಾ ಅವನನ್ನು ಬರ್ಬರವಾಗಿ ಕೊಲ್ಲಿಸಿತ್ತು. ಅದೇ ಹೊತ್ತಿಗೆ ಇಲ್ಲಿಂದ ಹೊರಬಿದ್ದಿದ್ದ, ರಶಿಯಾ ಬೆಂಬಲವನ್ನೂ ವಿರೋಧಿಸುತ್ತಿದ್ದ ಕರ್ಮಠರು ಒಮ್ಮೆಲೆ ಅಪಘಾನ ವಿರುದ್ಧ ಜೆಹಾದ್ ಘೋಷಿಸಿದ್ದರು. ವೈಪರಿತ್ಯವೆಂದರೆ ಅಪಘಾನಿ ಸೈನ್ಯದೊಳಗೂ ಇದ್ದ ಬೆಂಬಲಿಗರೂ ಸೈನ್ಯಬಿಟ್ಟು ಆಯುಧಗಳ ಸಮೇತ ಇತ್ತ ಬಂದು ಸೇರಿಬಿಟ್ಟರು.
ಅವರೆಲ್ಲಾ ಸೇರಿದಾಗ ಹುಟ್ಟಿದ್ದೇ ಮುಜಾಹಿದೀನ್. ಅಂದರೆ ಧರ್ಮಯೋಧ.
ಹೀಗೆ ಅಪಘಾನಿಸ್ತಾನ ಸರಹದ್ದಿನಿಂದ ಓಡಿಬಂದು ಕಾಲೂರಿ ನಿಂತಿದ್ದ ಧರ್ಮಯೋಧರ ಸಂಖ್ಯೆ ಅನಾಮತ್ತು ಇಪ್ಪತೈದು ಲಕ್ಷ. ಇವರನ್ನೆಲ್ಲಾ ಶಿಬಿರದಲ್ಲಿ ಸಾಕಿ ಅನ್ನ ನೀರು ಕೊಟ್ಟು ವರ್ಚಸ್ಸು ಬೆಳೆಸಿಕೊಂಡದ್ದು ಪಾಕಿಸ್ತಾನ. ಅದರ ಪರಮನೀಚ ಬುದ್ಧಿ ಏನೆಂದರೆ ಇವರನ್ನೆಲ್ಲಾ ಮುಂದೆ ಬಿಟ್ಟು ತನ್ನ ಪಕ್ಕದಲ್ಲೊಂದು ಅಪ್ಪಟ ಮುಸ್ಲಿಂ ಕೈಗೊಂಬೆ ಸರಕಾರ ಸ್ಥಾಪಿಸುವುದು. ಜಗತ್ತಿನೆದುರಿಗೆ ನೋಡಿ ನಾವು ಹೇಗೆ ಅಪ್ಪಟ ಷರಿಯಾ ಸರಕಾರ ನಿರ್ಮಿಸಿದ್ದೇವೆ ಎಂದು ಅದನ್ನು ತೋರಿಸುವುದು. ಸ್ವಂತದ ನಾಡಲ್ಲಿ ಇಂತಹದ್ದನ್ನು ಇಂಪ್ಲಿಮೆಂಟು ಮಾಡುವ ದಮ್ಮು ಪಾಕಿಗಳಿಗೆ ಆಗಲೂ ಇರಲಿಲ್ಲ ಈಗಲೂ ಇಲ್ಲ. ಹಾಗಾಗಿ ಅದು ಇವರಿಗೆಲ್ಲಾ ಆಶ್ರಯದ ನಾಟಕದ ಮೂಲಕ ಇಂತಹ ದೊಡ್ಡ ಸ್ಕೆಚ್ಚು ಹಾಕಿತ್ತು. ಹೀಗೆ ನಿರಾಶ್ರಿತ ಮುಸ್ಲಿಂರಿಗೆ ಅಶ್ರಯ ಕೊಟ್ಟಿದ್ದಕ್ಕಾಗಿ ಜಗತ್ತಿನ ಮುಸ್ಲಿಂದೇಶಗಳು ಪಾಕಿಸ್ತಾನವನ್ನು ಅರಬ್ಬರ ದೊಡ್ಡಣ್ಣನಾಗಿಸಿದವು. ಅವರೆಲ್ಲರ ಉದ್ದೇಶ ರಷಿಯನ್ನರ ಮೇಲೆ ದಾಳಿ ಮತ್ತು ಕರ್ಮಠ ಇಸ್ಲಾಂ ಕಾನೂನು. ಅದರೆ ಅದಾಗಲೇ ಇಲ್ಲ. ರಷ್ಯಾ ಬೆಂಬಲಿತ ಅಪಘಾನಿ ಸರಕಾರ ಇಂತಹ ಕುತಂತ್ರಿಗಳನ್ನು ಒರೆಸಿಹಾಕಿಬಿಟ್ಟಿತ್ತು. ದೈತ್ಯ ರಷಿಯನ್ನರನ್ನು ಎದುರಿಸುವ ತಕತ್ತು ಆಗ ಅರಬ್ಬರಿಗೆ ಇರಲಿಲ್ಲ.
ಈ ಸಂದರ್ಭ ನೋಡಿಕೊಂಡು ಜಗತ್ತಿನ ಮಹಾ ವ್ಯಾಪಾರಿ ದೇಶ ಅಮೇರಿಕ ಇದರಲ್ಲಿ ಕೈಯಿಟ್ಟು ಅನಾಮತ್ತಾಗಿ ಎರಡೂವರೆ ಕೋಟಿ ಆಯುಧಗಳನ್ನು ಕೊಟ್ಟುಬಿಟ್ಟಿತು. ಪಾಕಿ ಪಡೆಗಳು ಹಿಂದೆ ನಿಂತು ಶರಂಪರ ಯುದ್ಧಕ್ಕೆ ಮುಜಾಹಿದ್ದಿನ್‍ರನ್ನು ಮುಂದೆ ಬಿಟ್ಟಿತು. 1988 ರ ಹೊತ್ತಿಗೆ ರಷಿಯಾ ಎಂಬ ಹಿಮಕರಡಿ ಜಿನೇವಾದಲ್ಲಿ ಒಪ್ಪಿಗೆ ಸೂಚಿಸಿ 1989 ರ ಮಾರ್ಚ್‍ನಲ್ಲಿ ಅಪಘಾನಿ ನೆಲ ಬಿಟ್ಟು ಹೊರಬಿತ್ತು. ಆದರೆ ಮುಂದೇನು ಎಂಬ ಸರಿಯಾದ ಯೋಜನೆಯಿಲ್ಲದ ಅಪ್ಘಾನಿಸ್ತಾನ ಅಪ್ಪಟ ಅರಾಜಕರ ಸಂತೆಯಾಗಿ ಹೋಯಿತು. ಅದೆಲ್ಲಾ ತನ್ನ ಉಸಾಬರಿ ಅಲ್ಲ ಎನ್ನುತ್ತಾ ತನ್ನ ಬಂದೂಕು ಮಾರುವ ಕೆಲಸ ಮುಗಿಸಿ ಅಮೇರಿಕೆ ಅಂಗಡಿ ಮುಚ್ಚಿಕೊಂಡು ಹೊರಟುಬಿಟ್ಟಿತ್ತು. ಅತ್ತ ಅಪಘಾನಿಸ್ತಾನೊಳಗೂ ಪ್ರವೇಶ ದೊರಕದ, ತಾಲಿಬಾನ್ ಸರಕಾರದ ವಿರುದ್ಧ ಬಂದೂಕೆತ್ತದ ಸಂತ್ರಸ್ತರ ರೂಪದ ಲಕ್ಷಾಂತರ ಧರ್ಮಯೋಧರು ಪಾಕಿ ಸರಹದ್ದಿನಲ್ಲೇ ಉಳಿದಿದ್ದರಲ್ಲ. ಈಗ ಅವರ ಕೈಯ್ಯಲ್ಲಿ ಅಮೇರಿಕೆ ಬಂದೂಕು ಇತ್ತು. ಅದನ್ನು ಹೆಗಲಿಟ್ಟುಕೊಂಡು ತಿರುಗಿ ನಿಂತು ಪಾಕಿಸ್ತಾನಕ್ಕೇ ಪ್ರಶ್ನೆ ಇಟ್ಟುಬಿಟ್ಟರು.
"ನೀವ್ಯಾಕೆ ಷರಿಯಾ ಜಾರಿಗೆ ತರುತ್ತಿಲ್ಲ..?"
ಪಾಕಿಗಳ ಬುಡದಲ್ಲಿ ಡೈನಮೈಟು ಯಾವಾಗ ಬೇಕಾದರೂ ಡಮ್ಮೆನ್ನುವ ಪರಿಸ್ಥಿತಿ. ಸೈನ್ಯದ ಮೂಲಕ ಬಡಿಯಬಲ್ಲ ಕೆಲಸವಿದಲ್ಲ ಎಂದು ಪಾಕಿಗಳಿಗೆ ಮೊದಲ ದಿನವೇ ಗೊತ್ತಾಗಿತ್ತು. ಪೂರ್ತಿ ಮುಸ್ಲಿಂ ಜಗತ್ತು ತಿರುಗಿಬೀಳುತ್ತದೆ.
" ಇಲ್ಲ ಇಲ್ಲ ಇಲ್ಲೆಲ್ಲಾ ಇಸ್ಲಾಮ್ ಸ್ಥಾಪನೆ ನಡೆಯುತ್ತಿದೆ ಅದರೆ ಜಾಗತಿಕವಾಗಿ ನಮ್ಮ ಸಹೋದರರು ಕಾಫೀರರ ಕೈಯ್ಯಲ್ಲಿ ನರಳುತ್ತಿದ್ದಾರೆ ಮೊದಲು ಅವರನ್ನೆಲ್ಲಾ ಬಿಡಿಸಬೇಕು.." ಎಂದುಬಿಟ್ಟರು. ಅಲ್ಲಿಗೆ ಧರ್ಮಯೋಧರ ಗುರಿ ಈಗ ಚೆಚನ್ಯಾ, ಕೆನ್ಯಾ, ಕಾಶ್ಮೀರ ಹೀಗೆ ಎಲ್ಲೆಡೆಗೆ ಚದುರುತ್ತಿದೆ. ಸಾಯಲೇ ಸಿದ್ಧವಾಗಿರುವ ಈ ಪಡೆ ಪಾಕಿಸ್ತಾನದ ಉಗ್ರರ ಫ್ಯಾಕ್ಟರಿಯಿಂದ ಹೊರಬರುತ್ತಲೇ ಇರುತ್ತದೆ. ಈಗ ಅದಕ್ಕೆ ಮೂಸುಲ್‍ನಂತಹ ಕಿತ್ತುಹೋದ ನಗರದ ಜನರೂ ಭರ್ತಿಯಾಗುತ್ತಿದಾರೆ. ಆದರೆ ಕಣಿವೆಗೆ ಕಾಲಿಡುತ್ತಿದ್ದಂತೆ ಸ್ವಂತ ಜನರ ಜತೆಗೆ ಇವರೂ ಸೈನ್ಯಕ್ಕೆ ಈಡಾಗುತ್ತಿದ್ದಾರೆ. ಕಣಿವೆ ಖಾಲಿಯಾಗದೆ ಏನಾದೀತು.

No comments:

Post a Comment