Saturday, June 24, 2017

ಸೌಂದರ್ಯದ ಗೂಡಲ್ಲಿ ಎಲ್ಲವೊ ಖಾಲಿ ಖಾಲಿ .... 
ಇದು ಕಾಶ್ಮೀರದ ಕಥೆ...

ಕಾಶ್ಮೀರವೆಂಬ ಖಾಲಿ ಕಣಿವೆ..

ಈ ರಾಜ್ಯ ನಮ್ಮ ದೇಶದಲ್ಲಿದ್ದೂ ಇಲ್ಲದಂತಿದೆ. ಇದೊಂದೇ ರಾಜ್ಯ ಇವತ್ತು ಎರಡೆರಡು ರಾಜಧಾನಿಯನ್ನು ಹೊಂದಿದ್ದರೆ, ಪೂರ್ತಿ ಕಣಿವೆಯ ರಾಜ್ಯಕ್ಕೆ ಇರುವುದೊಂದೆ ರಾಷ್ಟ್ರೀಯ ಹೆದ್ದಾರಿ. ರಾಷ್ಟ್ರೀಯ ಹಬ್ಬಗಳಿಗೆ ಇಲ್ಲಿ ಅನಿರ್ಬಂಧಿತ ಬಂದ್ ಘೋಷಿತವಾಗುತ್ತದೆ. ಯಾರೂ ಕರೆ ಕೊಡದಿದ್ದರೂ ಶ್ರಿನಗರವೆಂಬ ಒಂದು ಕಾಲದ ಹಿಮಗಿರಿ ಅಕ್ಷರಶ: ಬಾಗಿಲು ಹಾಕಿಕೊಂಡಿರುತ್ತದೆ. ಒಂದು ಕಪ್ಪು ಟೀ ಸಹಿತ ಆವತ್ತು ಪ್ರವಾಸಿಗರಿಗೆ ಸಿಕ್ಕುವುದಿಲ್ಲ. ಹೀಗೆ ವರ್ಷಾವಧಿಯುದ್ಧಕ್ಕೂ ಬರೀ ಹಿಂಸೆಗೂ, ಬಂದ್‍ಗೂ, ಅನಿರ್ಧಿಷ್ಟಾವಧಿ ಸತ್ಯಾಗ್ರಹ ರೂಪದ ಹಿಂಸೆಗೂ ಕರೆ ಕೊಡುವ ಪ್ರತ್ಯೇಕತಾವಾದಿಗಳ ಅವಿವೇಕಿ ನಡವಳಿಕೆಯ ಬೇಗುದಿಗೂ, ಕೊನೆಗೆ ಬೇರೇನೂ ಇಲ್ಲದಿದ್ದರೆ ವರ್ಷದ ನಾಲ್ಕೈದು ತಿಂಗಳು ಹಿಮದ ಹೊಡೆತಕ್ಕೆ ಸಿಕ್ಕು ಅನಾಮತ್ತಾಗಿ ಮುಚ್ಚಿ ಹೋಗುವ ನಗರಕ್ಕೆ ಸಿಕ್ಕು ಬಸವಳಿಯುವ ಜನರಿಗೆ ನಾಳೆ ಎನ್ನುವ ಭವಿಷ್ಯದ ಬಗ್ಗೆ ಚಿಂತಿಸಲು ಮತ್ತು ಹಾಗೆ ಯೋಚಿಸಿ ಭವಿಷ್ಯ ರೂಪಿಸಿಕೊಳ್ಳಲು ರಾಜಕೀಯ ಜಂಜಡದಲ್ಲಿ ಹೈರಾಣಾದ ಬದುಕು ಅವಕಾಶವನ್ನೆ  ಕೊಡುತ್ತಿಲ್ಲ.
ಬರುವ ದಿನಗಳ ಬಗ್ಗೆ ಹಾಗೊಂದು ಚೆಂದದ ಕನಸನ್ನೇ ಕಾಣದಂತೆ, ಬರಲಿರುವ ಪೀಳಿಗೆಗೆ ಕಳೆದ ಆರು ದಶಕಗಳಿಂದ ಧರ್ಮದ ಅಫೀಮನ್ನುಅದ್ಯಾವ ಪರಿಯಲ್ಲಿ ತಿನ್ನಿಸಲಾಗಿದೆಯೆಂದರೆ ಶಾಂತಿ ಪದಕ್ಕೂ, ನೆಮ್ಮದಿ ಎನ್ನುವ ಶಬ್ದಕ್ಕೂ ಕಾಶ್ಮೀರ ಕಣಿವೆ ವಿರೋಧಿಯಾಗಿ ನಿಂತುಬಿಟ್ಟಿದೆ. ಅಲ್ಲೀಗ ಜನಕ್ಕೆ ಓದುವುದು, ವಿದ್ಯಾವಂತರಾಗುವುದು ಉಹೂಂ... ಯಾವುದೂ ಬೇಡವಾಗಿದೆ. ಏನಿದ್ದರೂ ಇವತ್ತಲ್ಲ ನಾಳೆ ಸ್ವತಂತ್ರವಾಗಿ, ಪಾಕಿಸ್ತಾನದ ಜೊತೆ ಸೇರಿ ತಮ್ಮದು ಅಪ್ಪಟ ಮುಸ್ಲಿಂ ರಾಷ್ಟ್ರವಾಗುತ್ತದೆ ಎನ್ನುವ ನಂಬಿಕೆ(?)ಯೊಂದಿಗೆ ಯುವ ಜನಾಂಗ, ಅಗಾಧ ಸೆಳವಿನ "ರಾವಿ ಮತ್ತು ಝೀಲಂ"ನ ದಂಡೆಯಲ್ಲಿ ಕಲ್ಲು ಆರಿಸುವ ದಂಧೆಗೆ ತಮ್ಮನ್ನು ಒಡ್ಡಿಕೊಂಡಿದೆ.
ಅಸಲಿಗೆ ಈ ಕಣಿವೆ ರಾಜ್ಯದ ವೈರುಧ್ಯಗಳಾದರೂ ಎಂಥವೆಂದಿರಿ..? ಇಲ್ಲಿ ಬದುಕಿಗೆ ವೇಗವೆಂಬುದೇ ಇಲ್ಲ. ಇರುವುದೊಂದು ಹೆದ್ದಾರಿ ಯಾವಾಗ ಬಂದ್‍ಗೆ ಸಿಕ್ಕು ಚೆಕ್ಕು ಚೆದುರಾಗಿ ಹೋಗುತ್ತದೋ ಗೊತ್ತಿರುವುದಿಲ್ಲ. ಅದರಲ್ಲೂ ಹೆಚ್ಚಿನ ಭಾಗ ನಿರಂತರ ಪರ್ವತ ಕುಸಿತಕ್ಕೊಳಗಾಗಿ ಗದ್ದೆಯಂತಾಗುತ್ತಿದ್ದರೆ, ಇನ್ನರ್ಧದ ದಾರಿಯಲ್ಲಿ ಯಾವಾಗಲೂ ಯುದ್ಧ ಸದೃಶ್ಯ ವಾತಾವರಣ ಇಲ್ಲ ನೂರಾರು ಯುವಕರ ಕಲ್ಲೆಸತದಿಂದ ಪ್ರಕ್ಷುಬ್ಧವಾಗೇ ಇರುತ್ತದೆ. ಹಾಗಾಗಿ ಬದುಕು ಪ್ರಾಕೃತಿಕವಾಗಿಯೂ, ಸಾಮಾಜಿಕವಾಗಿಯೂ ತೆವಳುತ್ತಲೆ ಇದೆ. ಅನಂತನಾಗ್, ಶೊಫಿಯಾನ್, ಬಾರಾಮುಲ್ಲಾ, ಕಾರ್ಗಿಲ, ಗಾಂಧಾರ್‍ಬಾಲ್, ಟ್ರಾಲ್ ಹೀಗೆ ಸಾಲುಸಾಲು ಹೆಸರಿನ ಅಪ್ಪಟ ಪ್ರವಾಸಿ ತಾಣವಾಗಬಹುದಾಗಿದ್ದ ಪ್ರದೇಶಗಳು ಕೈಯ್ಯಲ್ಲಿದ್ದರೂ, ಯಾವ ಪ್ರವಾಸಿಯೂ ಸುಳಿಯದ ಪ್ರದೇಶವನ್ನಾಗಿಸಿಕೊಂಡಿದ್ದು ಸ್ವತ: ಸ್ಥಳೀಯರು.
ಅಮರನಾಥ ಯಾತ್ರೆಯ ಒಂದೇ ಸಿಜನ್ನಿನಲ್ಲಿ ಲಕ್ಷಾಂತರ ದುಡಿಯಬಹುದಾಗಿದ್ದ ಅವಕಾಶವನ್ನು ಪ್ರವಾಸಿಗರ ಮೇಲೆ ಕಲ್ಲು ಎಸೆಯುವುದರ ಮೂಲಕ ಹಾಳುಮಾಡಿಕೊಂಡಿದ್ದಾರೆ. ಇವತ್ತು ಪ್ರತಿ ಟ್ಯಾಕ್ಸಿ ಡೈವರು ಅಮರನಾಥ್ ರಸ್ತೆಯಲ್ಲಿ ಹೋಗುವಾಗ ತಪ್ಪದೆ ದಪ್ಪನೆಯ ಟವಲ್ಲು, ಸ್ಕಾರ್ಫ್‍ನ್ನು ತಲೆಗೂ, ಮೈತುಂಬಾ ಕಂಬಳಿಯನ್ನು ಸುತ್ತಿಕೊಳ್ಳಲು ಸಲಹೆ ಕೊಡುತ್ತಾನೆ. ಕಾರಣ ಯಾವ ಹೊತ್ತಿಗೆ ಯಾತ್ರಿಗಳ ಮೇಲೆ ಕಲ್ಲಿನ ದಾಳಿಯಾಗುತ್ತದೆ ಅವನಿಗೂ ಗೊತ್ತಿರುವುದಿಲ್ಲ.
ಅಪೂಟು ನೀರಿನ ಸಾಂದ್ರತೆಯ ನಾಡಿನಲ್ಲಿ ಮೂರು ಕಡೆ ನೀರು ಸದಾ ಪ್ರವಹಿಸುವ ಭೌಗೋಳಿಕ ಪರಿಸ್ಥಿತಿ, ಸರಿಯಾಗಿ ಯಾವ ವ್ಯವಸಾಯಕ್ಕೂ ಬೆಂಬಲಿಸಲಾರದು. ಅಪ್ಪಟ ಕಾಶ್ಮೀರ ಸೇಬು ನಿರ್ವಹಣೆ ಸಾಕಾಗದೆ ಮಾರುಕಟ್ಟೆ ಕಳೆದುಕೊಳ್ಳುತ್ತಿದ್ದರೆ ಶತಮಾನಗಳಿಂದ ಹೂಳು ಬೀಳುತ್ತಿರುವ "ದಾಲ್‍ಲೇಕ್" ಒಮ್ಮೆ ಮಾತ್ರ ದೋಣಿ ಸಾರಿಗೆಗೆ ಸಾಕೆನ್ನಿಸುವಂತಾಗಿದೆ. ಹೆಸರಿಗೊಂದು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ಹೊಂದಿರುವ ಕಣಿವೆಯ ನಗರಿಯಲ್ಲಿ ಕ್ರಮೇಣ ರಾಜಕೀಯ ಕಾರಣದಿಂದಾಗಿ ಜನಸಂಖ್ಯೆ ಅನುಪಾತ ಗಂಭೀರ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ.
ಮುಸ್ಲಿಂ ಮಾತ್ರ ಜೀವಿಸಬೇಕೆನ್ನುವ ಅನರ್ಥಕಾರಿ ನಿಲುವಿಗೆ ಬಿದ್ದಿರುವ ಯುವ ಜನತೆಯ ಶೇ.60 ಹುಡುಗರಿಗೆ ಹದಿಮೂರು ವರ್ಷವಾಗುವ ಮೊದಲೇ ಬಂದೂಕು ಪರಿಚಯವಾಗತೊಡಗಿರುವ ದುರಂತ ಜಾಗತಿಕವಾಗಿ ಇಲ್ಲಿ ಮಾತ್ರ. ಮಿಲಿಟರಿ ಗುಂಡಿಗೆ ಬಲಿಯಾಗುತ್ತಿರುವ ಪ್ರತಿ ಭಯೋತ್ಪಾದಕರಲ್ಲಿ ಯಾರೊಬ್ಬನೂ ಮೂವತ್ತು ದಾಟಿದ ಉದಾ. ಇಲ್ಲ. ಅದರಲ್ಲೂ ಇತ್ತಿಚಿನ ದಿನದಲ್ಲಿ ಅಗಿರುವ ಎನ್‍ಕೌಂಟರ್‍ಗಳಲ್ಲಿ ಬಲಿಯಾಗಿರುವ ಯುವಕರ ವಯಸ್ಸು ಇಪ್ಪತ್ತರ ಆಸು ಪಾಸಿನದ್ದು. ಇಂತಹ ಬೆಳವಣಿಗೆಗೆ ಕುಮ್ಮಕ್ಕು ನೀಡುತ್ತಿರುವವರಲ್ಲಿ ಹದಿವಯಸ್ಸಿನ ಹುಡುಗಿಯರು ಮಹತ್ತರ ಪಾಲು ನಿರ್ವಹಿಸತೊಡಗಿರುವ ಅಪಾಯಕಾರಿ ಬೆಳವಣಿಗೆ ಮತ್ತು ವೈರುಧ್ಯ ಇಲ್ಲಿ ಮಾತ್ರ ಸಾಧ್ಯ. ಉಗ್ರನಾದವನಿಗೆ ಮನಸೋಲುವ ಹುಡುಗಿಯರ ವಿಚಿತ್ರ ಮನಸ್ಥಿತಿ ಯುವಜನತೆಯ ಹಾದಿ ತಪ್ಪಿಸುತ್ತಿದ್ದರೆ, ಮತಾಂಧತೆಯ ಆಕರ್ಷಣೆ ತಾರ್ಕಿಕ ಆಲೋಚನೆಯನ್ನು ಕೆಡುವಿ ಹಾಕಿದೆ.
ಹೀಗೆ ಒಂದು ನೆಲ ಅರ್ಧ ಶತಮಾನದಲ್ಲಿ ತೀರ ಅವಸಾನದತ್ತ ಸರಿಯಲು ಒಂದೆರಡು ಕಾರಣಗಳಲ್ಲ. ರಾಜಕೀಯ ಇಚ್ಚಾ ಶಕ್ತಿ, ದಾರಿ ತಪ್ಪಿದ ಯುವ ಸಮೂಹ, ಗಡಿ ದೇಶದ ಕುಮ್ಮಕ್ಕು, ದೇಶದೊಳಗಿದ್ದೇ ದೇಶದ್ರೋಹಿ ಕೆಲಸ ಮಾಡುವ ಪ್ರತ್ಯೇಕತಾವಾದಿಗಳೆಂಬ ಅವಿವೇಕಿಗಳ ಪಡೆ, ಸುಲಭಕ್ಕೆ ದಕ್ಕುವ ಹೆಸರು ಮತ್ತು ಹಣ, ಸ್ಥಳೀಯವಾಗಿ ಉದ್ಯೋಗಕ್ಕೆ ಬೇರೆ ಅವಕಾಶವೇ ಇಲ್ಲದ ವಿಚಿತ್ರ ಸ್ಥಿತಿ, ಪಾರಂಪರಿಕ ಉದ್ಯೋಗ ವ್ಯವಹಾರ ಒಲ್ಲದ ಹೊಸ ಪೀಳಿಗೆ, ರಾಜಕೀಯವಾಗಿ ಜನರನ್ನು ಕತ್ತಲೆಯಲ್ಲಿಟ್ಟೆ ಸ್ವತ: ಬೇಳೆ ಬೇಯಿಸಿಕೊಳ್ಳುವ ದರಿದ್ರ ರಾಜಕೀಯ, ಸಹಜ ಶೈಕ್ಷಣಿಕ ಮಹತ್ವವನ್ನು ವ್ಯವಸ್ಥಿತವಾಗಿ ಕಡಿಮೆ ಮಾಡುತ್ತಿರುವ ಮದರಸಾಗಳು, ತನ್ನ ದೇಶವನ್ನೇ ದ್ವೇಷಿಸಲು ಕಲಿಸುವ ಧಾರ್ಮಿಕತೆ, ಕನಸಿನ ಸ್ವಾಯತ್ತತೆ, ಮರಣಾನಂತರದ ಲೋಕ ಮತ್ತು ಅಲ್ಲಿ ದಕ್ಕುವ ವಿಲಾಸ ಭೋಗದ ಬಗೆಗಿರುವ ಅಪಸವ್ಯ ಎನ್ನಿಸುವ ನಂಬುಗೆಗಳು, ಸೈನಿಕರ ಕೈಯ್ಯಲ್ಲಿ ಗುಂಡೇಟು ತಿಂದು ಶವವಾದರೆ ಅದಕ್ಕೆ ಸೇರುವ ಊಹಾತೀತ ಜನಸಂದಣಿಯ ಆಕರ್ಷಣೆ ಹೀಗೆ ಹಲವು ವೈರುಧ್ಯಗಳ ಕಾಶ್ಮೀರ ಎಂಬ ಪ್ರಕ್ಷುಬ್ಧ ಕಣಿವೆ ನಿರಂತರವಾಗಿ ಅವಸಾನದತ್ತ ಜಾರುತ್ತಿದ್ದರೆ ಅದನ್ನು ನಿಲ್ಲಿಸುವ ತಪನೆ ಯಾರಲ್ಲೂ ಕಂಡುಬರುತ್ತಿಲ್ಲ.
ಇಚ್ಚಾ ಶಕ್ತಿ  ಇರುವವರಿಗೆ ಬೆಂಬಲ ಇಲ್ಲ. ಇದ್ದವರಿಗೆ ಬದಲಿಸಲೊಲ್ಲದ ಹೀನಾಯತನ. ಎರಡೂ ಅಲ್ಲದವರಿಗೆ ಬುದ್ಧಿಜೀವಿತನದ ತೆವಲು. ಒಟ್ಟಾರೆ ಬಲಿಯಾಗುತ್ತಿರುವ ಕಣಿವೆಯ ಸ್ತ್ರೀ ಸಮೂಹ ಮತ್ತು ಮುಗ್ಧತೆಯ ಅನಿವಾರ್ಯತೆಯಲ್ಲಿರುವ ಸಮೂಹಕ್ಕೆ ಬದುಕು ಬದಲಾಗದೆನ್ನುವ ಖಾತರಿ ಬಂದುಬಿಟ್ಟಿದೆ. ಇಂತಹ ವಿಚಿತ್ರ ರಾಜ್ಯದ ರಾಜಕೀಯ, ಮಿಲಿಟರಿ ಕಾರ್ಯಾಚರಣೆ, ಗಡಿಗಳಲ್ಲಿನ ವಾಸ್ತವ ಚಿತ್ರಣ, ಸೈನಿಕರ ಮೇಲೆ ಅಷ್ಟು ಸುಲಭಕ್ಕೆ ದಾಳಿಯಾಗುವ ಬಗೆ, ಎನ್‍ಕೌಂಟರ್‍ಗೆ ಸಿಕ್ಕುವ ಸ್ವಘೋಷಿತ ಕಮಾಂಡರ್‍ಗಳ ಕ್ಷಣಿಕ ಬದುಕು... ಹೀಗೆ ನೈಜ ಚಿತ್ರಣವನ್ನು ಕಾಲಕಾಲಕ್ಕೆ ಕಟ್ಟಿಕೊಡಲಿದೆ ಈ ಅಂಕಣ ಪ್ರತಿವಾರ.
ಅಂದಹಾಗೆ ಯಾವ ರೀತಿಯಲ್ಲೂ ಕೈಗೆ ದಕ್ಕದ ಕಾಶ್ಮೀರದ ಬಗೆಗಿಷ್ಟು ಮೋಹ ಯಾಕೆ ವಿದೇಶಿ ಶಕ್ತಿಗಳಿಗೆ...? ಆಸಕ್ತಿದಾಯಕ ಕತೆ ಮುಂದಿನ ವಾರಕ್ಕಿರಲಿ.

No comments:

Post a Comment