Sunday, June 4, 2017

ಹಾಗೊಂದು ಸಂಯಮ ಬರುತ್ತಾದರೂ ಹೇಗೆ..?

ತೀರ ಬೆಂಗಳೂರಿನ ಕತ್ತಲ ರಾತ್ರಿಗಳಿಗೆ ಬೆಳಗಾಗುವ ಹೊತ್ತು ಅದು. ಊಟ ಮುಗಿಸಿ ಹೋಟೆಲ್‍ನಿಂದ ಹೊರಬಂದಾಗ ಮಧ್ಯರಾತ್ರಿ ಕಳೆದುಹೋಗಿತ್ತು. ಬಂದಾಗ ತುಂಬಾ ಗಾಡಿಗಳನ್ನು ಪಾರ್ಕ ಮಾಡಿದ್ದರಿಂದ ನನ್ನ ಕಾರನ್ನು ಸುಮಾರು ದೂರದ ಹಿಂದಿನ ಜಾಗದಲ್ಲಿ ನಿಲ್ಲಿಸಿದ್ದೆ. ಈಗ ಅಲ್ಲಿಗೆ ಹೋಗಲು ಸಾಕಷ್ಟು ಕತ್ತಲಿತ್ತು. ಮೊಬೈಲ್ ಆನ್ ಮಾಡುವಷ್ಟರಲ್ಲಿ ಪ್ರಖರ ಬೆಳಕಿನ ಬ್ಯಾಟರಿ ಬೀರುತ್ತಾ ಈ ಮೊದಲೇ ನೋಡಿದ್ದ ಸಾಕಷ್ಟು ವಯಸ್ಕನಾದ, ಬದುಕಿನ ಬವಣೆಗೆ ಹಣ್ಣಾಗಿದ್ದ ಗೂರ್ಖ ಅಲ್ಲಿಂದ ಬೆಳಕು ಬೀರುತ್ತಾ ದಾರಿ ತೋರುತ್ತಾ ಹಿಂದಿಂದೇ ಬಂದ. ಅವನ ಸೇವೆ ಮತ್ತು ಮುತುವರ್ಜಿಯನ್ನು ನಾನು ಕಾರು ನಿಲ್ಲಿಸುವಾಗಲೇ ಗಮನಿಸಿದ್ದೆ. ನಮಗೆ ಆಗತ್ಯ ಇದೆಯೋ ಇಲ್ಲವೋ ಅವನು ಬಂದ ಕೂಡಲೇ ದಾರಿ ತೋರುತ್ತಿದ್ದ. ಪಾರ್ಕಿಂಗ್‍ನಲ್ಲಿ ಸಾಕಷ್ಟು  ಜಾಗ ಇದ್ದಾಗ್ಯೂ ಗಾಡಿ ಸೇಫಾಗಿ ನಿಲ್ಲಲಿ ಎಂದು ಕಾಳಜಿ ವಹಿಸಿದ್ದ.
ಅದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ಜೊತೆಗೆ ನಾನು ಕಾರು ನಿಲ್ಲಿಸಿ ಈಚೆ ಬರುತ್ತಿದ್ದಂತೆ ಬೈ ಚಾನ್ಸ್ ಬೇರೆ ಕಾರುಗಳ ಸೈಡ್ ಮೀರರ್ ಟಚ್ ಆಗದಿರಲಿ ಎಂದು ಕಾರಿನ ಎರಡೂ ಕನ್ನಡಿಗಳನ್ನು ಒಳಗೆ ತಿರುಗಿಸಿ ಇರಿಸಿದ್ದ. ನಾನು ನಿಲ್ಲಿಸಿದ ಜಾಗದ ಹಿಂಭಾಗ ಕ್ರಮೇಣ ಇಳಿಜಾರಾಗುತ್ತ ಸಾಗಿದ್ದರಿಂದ ಏನೂ ಹೇಳದಿದ್ದರೂ ಟಯರಿಗೆ ಸಪೆÇೀರ್ಟು ಕೊಡಬಲ್ಲಷ್ಟು ಸೈಜಿನ ಕಲ್ಲನ್ನು ಮುಂದಿನ ಟಯರುಗಳ ಕತ್ತಿಗೆ ಸಿಕ್ಕಿಸಿದ್ದ. ತುಂಬ ಆದರದಿಂದ ನಿಂತು ಸೆಲ್ಯೂಟ್ ಹೊಡೆದು, ತನ್ನ ಖುರ್ಚಿಯತ್ತ ನಡೆಯತೊಡಗಿದ್ದ ಆ ವಯೋವೃದ್ಧನ ಕಾರ್ಯ ಕ್ಷಮತೆ ನಿಜಕ್ಕೂ ಅಚ್ಚರಿ ಮೂಡಿಸುವ ವೈಖರಿ. ಸಾಮಾನ್ಯವಾಗಿ ಇಂತಲೆಲ್ಲಾ ಟಿಪ್ಸು ಚೆನ್ನಾಗಿ ಕೊಡಲೆನ್ನುವ ಕಾರಣಕ್ಕೆ ಮಾಡುವ ಆದರಣೆ, ಅದಕ್ಕಾಗಿ ತೋರಿಸುವ ದೇಹ ಭಾಷೆ ಸುಲಭಕ್ಕೆ ಗೊತ್ತಾಗಿ ಬಿಡುತ್ತದೆ. ಅವರ ಅಂಗಿಕ ಅಭಿನಯಗಳೇ ಸಾಕು ಇವನ ಅತಿ ವಿನಯ ಧೂರ್ತತೆಯ ಲಕ್ಷಣ ಎನ್ನಿಸಲು. ಹಾಗಾಗಿ ಸಾಮಾನ್ಯವಾಗಿ ಬಾರ್ ಸರ್ವರು ಮತ್ತು ಇಂತಹ ವಾಚಮೆನ್‍ಗಳು ಅವರ ಕೆಲಸದಲ್ಲಿನ ಆಸ್ಥೆ ಸುಲಭಕ್ಕೆ ತೋರಿಸಿಕೊಂಡು ಬಿಡುತ್ತಿರುತ್ತಾರೆ.
ಆದರೆ ಅಂತಹದ್ದೊಂದು ಭಾವ ಅಥವ ತೋರ್ಪಡಿಕೆ ಏನೂ ಇಲ್ಲದ ಮನುಶ್ಯ ಯಾವ ಮಾತೂ ಆಡದೆ ಕಡೆ ಪಕ್ಷ ಎಲ್ಲೆಡೆ ಆಗುವಂತೆ " ನಾನು ಎಷ್ಟೆಲ್ಲಾ ಅಪ್‍ಡೇಟ್ ಆಗಿ ಇರಿಸಿದೆ ನೋಡಿದಿರಾ ಎನ್ನುವ ಒಂದು ಲುಕ್ ಕೊಟ್ಟು ಹೋಗುವ ಸೀನ್ ಆದರೂ ಇರುತ್ತದಲ್ಲ. ಅದ್ಯಾವುದೂ ಘಟಿಸಲಿಲ್ಲ...". ಕಾರು ಸೇಫಾಯಿತು ಎನ್ನಿಸಿದೊಡನೆ ಮತ್ತೆ ಆಚೆಯಿಂದ ವಾಹನ ಬಂದಾವೆಂಬ ನಿರೀಕ್ಷೆಯಲ್ಲಿ ಗೇಟಿನ ಪಕ್ಕ ನಿಂತು ಬಿಟ್ಟಿದ್ದ. ನಾನು ಗಮನಿಸಿದಂತೆ ತುಂಬ ಕಡಿಮೆ ಜನ ಹಾಗೆ ಇಂತಹ ಕೆಲಸದಲ್ಲಿ ವೃತ್ತಿಪರವಾಗಿರುತ್ತಾರೆ. ಸಿಟ್ಟಿಂಗ್ ಕೂತ ಮಧ್ಯದಿಂದ ನಾನೊಮ್ಮೆ ಎದ್ದು ಬಂದಾಗ ಅವನು ಕೂಡಲೇ ಕಾರಿನ ಬಳಿ ಸಾರಿ ನಿಂತು ತೆಗೆಯುತ್ತಾರಾ ಹೊರಡುತ್ತಾರಾ.. ಎನ್ನುವ ಪ್ರಶ್ನಾರ್ಥಕ ಭಾವ ನೋಡಿ... ಕಾಯ್ದಿದ್ದ. ನಾನು ಮಾತಾಡುತ್ತಿದ್ದೇನೆ ಎನ್ನುವಂತೆ ...ಸುಮ್ಮನೆ ಮೊಬೈಲ್ ತೋರಿಸಿ... ಒಳ ಬಂದಿದ್ದೆ.
ಮಧ್ಯ ರಾತ್ರಿಯ ಹೊತ್ತಿನಲ್ಲಿ ಕಾರು ತೆಗೆಯುವ ಮೊದಲು ಮತ್ತೆ ಬಂದವನೇ ತುಂಬ ನಿಧಾನಕ್ಕೆ ಅದರೆ ಕರೆಕ್ಟಾಗಿ ಮೀರರ್ ಸರಿ ಮಾಡಿ, ಎದುರಿಗಿನ ಗ್ಲಾಸನ್ನು ಕೂಡಲೇ ಪೇಪರ್‍ನಲ್ಲಿ ಒರೆಸಿ, ಗಾಲಿಗೆ ಸಿಕ್ಕಿಸಿದ್ದ ಕಲ್ಲುಗಳನ್ನು ತೆಗೆದು ಎಲ್ಲಾ ಸರಿಯಾಯಿತೆನ್ನುವ ಫೀಲು ಬರುತ್ತಲೆ, ವಿನಾಕಾರಣ ಊರಿಗೆಲ್ಲ ಕೇಳಿಸುವಂತೆ ವಿಜಿಲ್ ಊದದೆ ಪಕ್ಕ ನಿಂತು ಹಲ್ಲು ಗಿಂಜದೆ ಸರಿದು ಹೋಗಿದ್ದು ನನಗಿನ್ನೂ ನೆನಪಿದೆ. ನಿರ್ವಿಕಾರವಾಗಿ ಇದೆಲ್ಲಾ ನಾನು ಪ್ರತಿ ಗಾಡಿಗೂ ಮಾಡುತ್ತೆನ್ನೆನ್ನುವ ಅವನ ನಿರ್ವಿಕಾರತೆ ಮತ್ತು ಅನಿವಾರ್ಯ ಎನ್ನುವ ಭಾವ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಒಮ್ಮೆ ತಾನು ಮುತುವರ್ಜಿ ವಹಿಸಬೇಕಾದ ಕಾರ್ಯ ಮುಗಿಯುತ್ತಿದ್ದಂತೆ ಅವನು ಗೇಟಿನತ್ತ ಸರಿದು ಹೋಗಿದ್ದ.
 ಆದರೆ ಅವನು ಕಾರಿನ ಬಾಗಿಲು ಹಾಕುವಾಗ ಮತ್ತು ಗೇಟಿನಿಂದ ಇನ್ನೇನು ಹೊರ ಬರಬೇಕು ಆಗ ನಿಂತು ತುಂಬು ಆಸ್ಥೆಯಿಂದ ಹೊಡೆದ ಸೆಲ್ಯೂಟು ಎಂತವನಿಗೂ ಮುಜುಗರ ಉಂಟು ಮಾಡುವ ಹಾಗಿತ್ತು. ತೀರ ವೃತ್ತಿ ಪರ ಬಿಹೇವಿಯರ್ ಅಂತಾರಲ್ಲ ಹಾಗೆ. ನಾನು ಆ ರಾತ್ರಿಯಲ್ಲೂ ಸುಮ್ಮನೆ ಒಮ್ಮೆ ಕಾರು ನಿಲ್ಲಿಸಿದೆ. ಅವನ ಮುಖದಲ್ಲಿ ಯಾವುದೇ ಬದಲಾವಣೆಗಳಿರಲಿಲ್ಲ. ಅದೇ ವಿನಯ ಮತ್ತು ಆಪ್ತತೆ ಜೊತೆಗೆ ಗೌರವ..
ಕಿಟಕಿಯ ಗಾಜಿಳಿಸಿದವನು, ಅವನು ಎದುರಿಗೆ ಬರುತ್ತಲೆ ಸುಮ್ಮನೆ ಅವನ ಕೈಯ್ಯನ್ನು ಎರಡೂ ಕೈಯ್ಯಲ್ಲಿ ಹಿಡಿದು ನುಡಿದಿದ್ದೆ..
" ಇಷ್ಟೊಂದು ಸೆಲ್ಯೂಟ್ ಹೊಡೆಯಲೇ ಬೇಡಿ ತಾತಾ... ನಾವು ಅಷ್ಟೆಲ್ಲಾ ಗೌರವಕ್ಕೆ ಅರ್ಹರಲ್ಲ.." ಅವನು ಅಷ್ಟೇ ವಿನಯದಿಂದ ಸ್ವಲ್ಪವೇ ಬೊಚ್ಚಾಗಿದ್ದ ಬಾಯಿ ಅಗಲಿಸಿ ಬರಿದೇ ನಕ್ಕ. ನಾನು ಮತ್ತೊಮ್ಮೆ ನುಡಿದೆ..
" ನಿಜ.. ನೀವು ಕೊಡುವ ಈ ಮಟ್ಟಿಗಿನ ಗೌರವಕ್ಕೆ ಎಲ್ಲರೂ ಅರ್ಹರಿರೊದಿಲ್ಲ.. ತಾತಾ ಅಷ್ಟೊಂದು ದೀನರಾಗಿ ನಿಲ್ಲಬೇಡಿ.." ಎಂದೆ. ಸುಮಾರು ಎಪ್ಪತ್ತು ದಾಟಿದ ದೇಹ, ಬಸವಳಿದ ಮುಖದಲ್ಲೂ ಒತ್ತಾಯದ ಕರ್ತವ್ಯ ಹುಟ್ಟಿಸುತ್ತಿದ್ದ ಆಪ್ತತೆ, ಆ ವಯಸ್ಸು, ಮುಖದ ಮೇಲಿದ್ದ ಅನಿವಾರ್ಯತೆ, ನಿಸ್ಸಾಹಯಕತೆ, ದಪ್ಪ ದೇಹ, ಮಾಗಿದ ಜೀವ, ಜಗತನ್ನೆಲ್ಲಾ ಬೆತ್ತಲೆಗಣ್ಣುಗಳಿಂದ ನೋಡಿ ಹಣ್ಣಾಗಿರುವ ಅನುಭವಿ ಜೀವಕ್ಕೆ ಎಂಥವನಿಗೂ ಸೆಲ್ಯೂಟು ಹೊಡೆಯುವ ಅನಿವಾರ್ಯತೆ. ನಾವು ಏನಾದರೂ ಕೊಡುತ್ತೇವೆಯೋ ಬಿಡುತ್ತೇವೋ ಅದು ಬೇರೆ ವಿಷಯ ಆದರೆ ಹೋಟೆಲಿನವರು ಕೊಡುವ ಪಗಾರಿಗೆ ಮುದ್ದಾಮ್ ಮಾಡಲೇ ಬೇಕಾದ ನೌಕರಿ ಎಂದು ಆತ ಆ ಅಪರಾತ್ರಿಯಲ್ಲೂ ಅದೇ ಆಪ್ತತೆಯಿಂದ ಮನುಶ್ಯರಿಗೂ ಗಾಡಿಗೂ ಕೊಡುತ್ತಿದ್ದ ಮುತುವರ್ಜಿ...ಉ¥sóï.
ದೂರದ ದಿಲ್ಲಿಯಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡಿದ್ದಾನೆ. ಅವನ ಈ ದುಡಿಮೆ ಮರುದಿನದ ಬೆಳಿಗೆಗೆ ಮನೆಯಲ್ಲೂ, ದೂರದಲ್ಲಿ ಓದುತ್ತಿರುವ ಮಗಳಿಗೂ ಬೆಳಕಾಗುತ್ತಿದೆಯಂತೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಮಂಚದಲ್ಲಿರುವ ಹೆಂಡತಿ ಉಸುರು ನಿಂತು ಹೋಗುವ ಸಮಯದಲ್ಲೂ, ಯಾವ ಭಾವ ವಿಕಾರವಿಲ್ಲದೆ ಮಧ್ಯ ರಾತ್ರಿ ಕೆಲಸಕ್ಕೆ ನಿಲ್ಲುವ ಆ ಸಂಯಮ ದಕ್ಕುತ್ತದೆಯಾದರೂ ಹೇಗೆ..? ಮುಂದಿನ ಕತೆ ಬೇಕಿಲ್ಲ.
ಆ ದೈನೆಸಿತನಕ್ಕಿಂತ ಅವರ ವಯಸ್ಸು ಮತ್ತು ಅದಕ್ಕೆ ಸಲ್ಲಬೇಕಾದ ಮರ್ಯಾದೆಯನ್ನು ಬಿಟ್ಟು ಜೀವ ಹಿಡಿಯಾಗಿಸಿ ನಿಲ್ಲುವ ಪರಿಸ್ಥಿತಿಯನ್ನೆಲ್ಲ ತುಂಬ ಸಮಯ ನಾನು ನೋಡಲಾರೆ. ಛೇ.. ನಾನು ಕಾರು ನಿಲ್ಲಿಸಿ "ದಾದಾ" ಎಂದು ಕರೆದೆ. ಮತ್ತೊಮ್ಮೆ ಮೇಲಿನಂತೆ ನುಡಿದು ಎರಡೂ ಕೈ ಹಿಡಿದು ಆಪ್ತವಾಗಿ ಅಮುಕಿ ಹೊರಟು ಬಿಟ್ಟೆ. ಹತ್ತಿರದಿಂದ ಒಮ್ಮೆ ಅವನನ್ನು ನೋಡಿ ಕೈಗೆ ಸಿಕ್ಕಷ್ಟು ನೋಟಿನ ಪುಡಿಕೆ ಅವನ ಕೈಗಿಟ್ಟು ಸುಮ್ಮನೆ ಪೆಡಲು ತುಳಿದೆ. ತತಕ್ಷಣಕ್ಕೆ ಗ್ಲಾಸು ಏರಿಸಿ ಅವನೊಂದಿಗಿನ ಸಂಪರ್ಕ ಕಡಿದುಕೊಳ್ಳಲು ಮನಸಾಗಲಿಲ್ಲ.
ದೊಡ್ಡ ದೊಡ್ಡ ಹೋಟೆಲು. ಅವುಗಳ ಗೇಟು ಕಂಡಾಗಲೆಲ್ಲಾ ಯಾಕೋ "ಅವರ" ನೆನಪಾಗುತ್ತಲೇ ಇರುತ್ತದೆ. 


No comments:

Post a Comment