Monday, June 12, 2017

ಪ್ರತಿ ಬದುಕಿಗೊಂದು ಹೊರಳು ದಾರಿ...

"..ಎಲ್ಲಾ ಸೆಟ್ಲ್ ನೋಡು.. ಇನ್ನೇನಿದ್ರೂ ಮಕ್ಕಳು ಸೆಟ್ಲಾದರ ಮುಗೀತು ನಾನು ಅರಾಮ.." ಎದುರಿಗಿನ ನೊರೆ ನೊರೆ ಬಿಯರಿನ ವಗರಿಗೆ ತನ್ನ ಖುಶಿಯ ಸೇರಿಸುತ್ತಾ ಇನ್ನೂ ಅರ್ಧ ವಯಸ್ಸಿಗೆ ಬರುವ ಮೊದಲೇ ಬದುಕಿಗೊಂದು ಗಮ್ಯ ಕಲ್ಪಿಸಿಕೊಂಡ ಖುಶಿಯಲ್ಲಿ ಬಾಬಣ್ಣ ಮಾತಾಡುತ್ತಿದ್ದರೆ ನಾನು " ಎಲ್ಲರಿಗೂ ಬದುಕು ಹೀಗೆ ಸುರುಳಿತವಾಗಿದ್ದರೆ ಎಷ್ಟು ಚೆನ್ನ" ಎಂದುಕೊಳ್ಳುತ್ತಾ ಒಳಗೊಳಗೆ ಈ ಬಾಬಣ್ಣನ ಹಾಗೆ ನಾನ್ಯಾವತ್ತು ಹಿಂಗೆ ಅರಾಮವಾಗಿ ಕಾಲು ಚಾಚುತ್ತೇನೋ ಎಂದು ತುಂಬ ದೂರದಲಿದ್ದ ಭವಿಷ್ಯದ ಬಗ್ಗೆ ಸಣ್ಣಗೆ ಬೆದರಿಕೊಳ್ಳುತ್ತಾ ಮೇಲೆ ಮಾತ್ರ ಏನೂ ಆಗಿಲ್ಲ ಎನ್ನುವಂತೆ ನೊರೆ ಊದುತ್ತಾ ಮಗ್ಗಿಗೆ ಕೈಯಿಕ್ಕುತ್ತಿದ್ದೆ.
ಸರಿ ಸುಮಾರು ದುಪ್ಪಟ್ಟು ವಯಸ್ಸಿನ ಬಾಬಣ್ಣನಿಗೆ ವಾರದ ಕೊನೆಯಲ್ಲೋ, ತಪ್ಪಿ ಎರಡು ದಿನ ರಜೆ ಬಂದು ಬಿಟ್ಟರೆ ಅದರಲ್ಲೊಂದು ದಿನವೋ.. ಅವನ ಒಟ್ಟಾರೆ ಹಳೆಯ ಕತೆಗಳಿಗೆ ಕಿವಿಯಾಗಲು ನಾನು ಸುಲಭಕ್ಕೆ ಪಕ್ಕಾಗುತ್ತಿದ್ದೆ. ಹಾಗಂತ ಸುಮ್ಮನೆ ಮೀಟರೇನೂ ಅಲ್ಲ ಬಾಬಣ್ಣ. ಆದರೆ ಅವನದ್ದೇ ಬದುಕಿನ ಹಂತಗಳಿಗೆ ತಾನು ಏಗಿದ್ದು, ಜೊತೆಗೆ ಅದೃಷ್ಟ ಜೊತೆ ಕೊಟ್ಟಿದ್ದು ಇಲ್ಲದಿದ್ದರೆ ಇವತ್ತಿಗೇ ಏನಾಗುತ್ತಿದ್ದೇನೋ ಎನ್ನುವ ಅರಿವಾಗದ ಅನನುಭವಕ್ಕೆ ತಾನೇ ಬೆದರಿಕೊಳ್ಳುತ್ತಾ, ದೇವರ ದಯೆ ಎಲ್ಲಾ ನೆಟ್ಟಗಾಯಿತು ಎನ್ನುವ ಪಾಪದ ಮನುಶ್ಯ.
ತಾನಾಯಿತು ತನ್ನ ನೌಕರಿಯಾಯಿತು ಎಂಬತ್ತಿದ್ದವನಿಗೆ ಏನಾದರೂ ಐಲುಗಳು, ಕೆಟ್ಟತನಗಳಿವೆಯಾ ಎಂದು ನಾನು ಹುಡುಕುವಷ್ಟು ಪಾಪದ ಸ್ನೇಹಿತನಾಗಿದ್ದ ಬಾಬಣ್ಣ ಆಗೀಗ ನನ್ನನ್ನೂ ಎಳೆದುಕೊಂಡು ಬೆಂಗಳೂರಿನ ತರತರಹದ ರುಚಿಯ ಓಪನ್ ಬಾರ್‍ಗಳಿಗೆ ಲಿಮಿಟೆಡ್ಡಾಗಿ ಹೋಗುತ್ತಿದ್ದ ಎನ್ನುವುದು ಹೊರತು ಪಡಿಸಿದರೆ ಅಪ್ಪಟ ಜಂಟ್ಲಮನ್. ತೀರ ನನಗೂ ಅವನಿಗೂ ಎರಡು ದಶಕದ ಅಂತರವಿದ್ದರೂ ಬಾಬಣ್ಣ ಸ್ನೇಹಿತನಾಗಿ ಆವರಿಸಿಕೊಂಡಿದ್ದು ಅವನ ಸಮಯಕ್ಕಾಗಿ ಎನ್ನುವುದಕ್ಕಿಂತಲೂ, ಆಗಿನ ಪರಿಸ್ಥಿತಿಯಲ್ಲಿ ನಾನ್ಯಾವತ್ತೂ ಬಿಲ್ ಕೊಡುವ ಮಾತೇ ಇರಲಿಲ್ಲವಾದರೂ "ಎಲ್ಲಾರಿಗೂ ಇಂಥದ್ದೊಂದು ಕಾಲ ಇದ್ದೇ ಇರ್ತದ" ಎಂದು ಸಮಾಧಾನಿಸಿಯೂ ನನ್ನನ್ನು ಜತೆಗೆ ಕರೆದೊಯುತ್ತಿದ್ದುದು.
"..ನೋಡು ನನಗೂ ಏನೂ ಇರ್ಲಿಲ್ಲ. ಆ ಪಿಣ್ಯಾದ ಗೂಡ್ಸ್‍ಶೆಡ್‍ನ ನೌಕರಿಯಲ್ಲಿದ್ದಾಗ ನಿನ್ನಂಗೆ ಇದ್ದೆ. ದೇವರು ಕಣ್‍ತೆರೆದ ಅರಾಮಾಯಿತು ನೋಡು. ಇದ್ದಷ್ಟ ದಿನಾ ಚೆಂದಾಗಿ ಇದ್ದು ಬಿಡೋದು ಬಿಟ್ಟು ಹಿಂಗೇ ಅಂತಾ ಬದುಕ್ತೀನಿ ಅಂದರೆ ನಾವೇ ಎಲ್ಲ ಹಾಳು ಮಾಡಿಕೊಳ್ತೀವೆ ವಿನ: ಯಾವ ಉತ್ಪನ್ನನೂ ಇರೋದೇ ಇಲ್ಲ. ಹೌದಲ್ವಾ..? ಬಂದಂಗೆ ತೊಗೊಳದಿದ್ರೆ ಜೀವನ ಯಾವತ್ತು ನೆಮ್ಮದಿಯಾಗಿ ಕಳಿಯೋಕೆ ಸಾಧ್ಯ ಇಲ್ಲ ನೋಡು.." ಎನ್ನುವ ಅವನ ಮಾತುಗಳಿಗೆ ಆಗೆಲ್ಲಾ ನಾನು ಸುಮ್ಮನೆ ತಲೆ ಕಿವಿ ಎರಡೂ ಕೊಡುತ್ತಿದ್ದೆ. ನನಗೂ ಅದೆಲ್ಲಾ ಹೌದೆಂದು ಅರ್ಥವಾಗುವ ಹೊತ್ತಿಗೆ ಮತ್ತೆರಡು ದಶಕ ಕಳೆದಿತ್ತು.
ಅವನ್ಯಾವತ್ತೂ ತೀರ ದೊಡ್ಡ ಆಸೆಗಳಿಗೆ ಬಿದ್ದವನಲ್ಲ. ಒಂದು ಹೆಣ್ಣು, ಗಂಡು ಸಂಸಾರದಲ್ಲಿ ಸಂಪ್ರೀತ. ಇನ್ನೇನಿದ್ದರೂ ಮಕ್ಕಳೂ ಸೆಟ್ಲ್ ಆದರೆ ಆಯ್ತು ನೋಡು ಎನ್ನುತ್ತಿದ್ದ. ನಮ್ಮಂತೆ ಸರಹೊತ್ತಿನ ತಿರುಗಾಟ, ಮಧ್ಯವಯಸ್ಕ ಗಂಡಸಿನ ಅಪರಾತ್ರಿಯ ಸಮಸ್ಯೆಗಳು, ಎದುರಾ ಎದುರು ನೋಡದೆ ಇದ್ದವಳ ಎದೆಯ ಬಗ್ಗೆಯೂ ಡಬ್ಬಲ್ ಸೈಜಿನಲ್ಲಿ ಮಾತಾಡುವ ಬಲಹೀನ ಪುರುಷರ ಅಪಸವ್ಯಗಳು, ಕ್ರಿಕೆಟ್ಟು, ಬ್ಲೂ ಫಿಲಮ್ಮು, ತನ್ನ ಕೈಗೆ ದಕ್ಕದವಳ ಬಗೆಗೆ ಸಾಲು ಕಾಮಕತೆಗಳ ಪರಾಕು ಹೇಳುವುದು, ಕಚೇರಿಯ ಸಹೊದ್ಯೋಗಿ ಬಗ್ಗೆ ಇರುವ ಅಸಹನೆಯನ್ನು ಆಕೆಯ ದೈಹಿಕ ರೂಪದ ಬಗ್ಗೆ ಮಾತಾಡಿ ಹಗುರಾಗುವ, ಇನ್ಯಾರದ್ದೋ ಮನೆಯಾಕೆಯ ಬಗ್ಗೆ ಕಣ್ಣು ಹೊಡೆಯುವ ಇತರ ಗಂಡಸರಂತೆ ಯಾವತ್ತೂ ಮಾತಿಗೂ, ಹರಟೆಗೂ ಬಿದ್ದವನಲ್ಲ. ಅವನದೇನಿದ್ದರೂ ಮನೆ ಮಡದಿ ಮಕ್ಕಳು ಅವರ ಭವಿಷ್ಯ ನೌಕರಿ ಆವತ್ತಿನ ಸುದ್ದಿ ಪತ್ರಿಕೆ ಟಿ.ವಿ. ಆಗೀಗೊಮ್ಮೆ ನಾನು ಮತ್ತು ಇತರ ಸ್ನೇಹಿತರ ಜೊತೆಗೆ ತಣ್ಣಗಿನ ಬಿಯರ್ ಮೊಗೆಗೆ ಕೈಯಿಕ್ಕಿ ಹಿತವಾಗಿ ಕಾಲು ಚಾಚಿ ಕೂತುಕೊಳ್ಳುವುದರ ವಿನ: ಬದುಕು ಕೇರಂಬೋರ್ಡ್ ಎದೆಯ ಹುಡುಗಿಯರಂತೆ ಸರಳ ರೇಖೆ.
ಬದುಕನ್ನು ಮುತುವರ್ಜಿಯಿಂದ ನಾಜೂಕಾಗಿ ರೂಪರೇಷೆಗಳನ್ನು ನಿರ್ವಹಿಸುತ್ತಾ ಭವಿಷ್ಯದ ದಿನಗಳನ್ನು ಕಟ್ಟುತ್ತಿದ್ದ. ಹೇಗಾದರೂ ಸರಿ ಇಬ್ಬರೂ ಮಕ್ಕಳನ್ನೂ ತನ್ನಂತೆ "ಸೆಟ್ಲ್" ಮಾಡಿದರೆ ಮುಗೀತು. ತಮ್ಮದೇನಿದ್ದರೂ ಬರುಬರುತ್ತಾ ಮುಗಿಯುವ ಕಾಲ ಎನ್ನುವ ಅಪ್ಪಟ ಭಾರತೀಯ ಮಧ್ಯಮ ವರ್ಗದ ಮನಸ್ಸು ಅವನದ್ದು.
ನಾ ನೋಡಿದಂತೆ ಈ ಸೆಟ್ಲ್ ಎನ್ನುವುದು ಬಹಳಷ್ಟು ಗಂಡಸರ ಬದುಕನ್ನು ನುಂಗಿ ಹಾಕಿದೆ. ಎಷ್ಟೊ ಜನ ಅದಕ್ಕೆ ಈಡಾಗದೆ ಎಕ್ಕುಟ್ಟಿ ಹೋದವರಿದ್ದಾರೆ. ಎಲ್ಲ ಗಂಡಸರಲ್ಲೂ ಏನಾದರಾಗಲಿ ಇಪ್ಪತ್ತೈದಾಗುವ ಹೊತ್ತಿಗೆ ಸೆಟ್ಲಾಗಿ ಬಿಡಬೇಕು ಎನ್ನುವ ತಹತಹ. ದಿನವೂ ಅದಕ್ಕಾಗಿ ಒಂದು ಯೋಜನೆ, ಲಭ್ಯವಾಗದ ಫಲಿತಾಂಶ, ಎಡವಟ್ಟಾಗುವ ಆಥಿಕ ಪರಿಸ್ಥಿತಿ, ಸಕಾಲಕ್ಕೆ ಕೈಗೆ ದಕ್ಕದ ಇನ್‍ಫ್ಲೂಯೆನ್ಸು, ರಾಜಕೀಯ ಹಲವು ಹಳವಂಡದಲ್ಲಿ ಎಲ್ಲಾ ಇದ್ದೂ ಲಭ್ಯವಾಗದ ಅವಕಾಶದ ಮಧ್ಯದಲ್ಲಿ ಹತಾಶವಾಗುವ ದಿನಗಳು, ಅರ್ಹತೆಯಿದ್ದರೂ ಇನ್ಯಾರದ್ದೋ ಪಾಲಾಗುವ ವಾಸ್ತವದ ಅಸಹಾಯಕತೆಗಳು, ತೀರ ಕೈಯಿಂದ ದುಡ್ಡು ಹಾಕಿ ಏನಾದರೂ ಮಾಡಲು ಅಷ್ಟಾಗಿ ಬೆಂಬಲವಿಲ್ಲದ ಮನೆಯ ಪರಿಸ್ಥಿತಿ, ಇದ್ದರೂ ತೆಗೆದುಕೊಳ್ಳಲು ಆಗದ ರಿಸ್ಕು ಅದಕ್ಕೆ ಬೇಕಾದ ಮೀಟರು ಇಲ್ಲದಿರುವುದು, ಇವನು ಏನಾದರೂ ಮಾಡಿ, ಏನಾದರೂ ಸಾಧನೆ ಮಾಡಿ ದುಡ್ಡು ದುಗ್ಗಾಣಿ ಮಾಡಿಕೊಂಡು ಬಿಟ್ಟರೆ..? ಹಾಗೆ ದುಡಿದು ನಮಗಿಂತ ಮೇಲೆ ಹೋದರೆ..? ಹೀಗೆ ಹೋಗಲೂ ಬಿಡದಂತೆ ಕಾಲೆಳೆಯುವವರ ಮಧ್ಯೆ ಏಗಬೇಕಾಗುವ ಅನಿವಾರ್ಯದ ಹಳವಂಡಗಳು, ಎಷ್ಟೊ ಜನಕ್ಕೆ ಹುಟ್ಟಾ ಬುದ್ಧಿವಂತಿಕೆ ಕೈ ಕೊಟ್ಟು ಮಾರ್ಕು ಅಷ್ಟಕಷ್ಟೆ ಆಗಿ ಎಲ್ಲೂ ನೆಲೆ ನಿಲ್ಲದ, ನಿಲ್ಲುವಂತಿದ್ದರೂ ಈ ನೌಕರಿ ಜೀವನ ಪೂರ್ತಿ ಹೀಗೆ ಹಣಿಯುತ್ತದೆನ್ನುವ ಕೆಲಸಗಳು.. ಹೀಗೆ ಒಟ್ಟಾರೆ ಬದುಕು ಸ್ಥಿರಗೊಳ್ಳಬೇಕು ಎನ್ನುವ ಹಂತದಲ್ಲಿ ಬಡಿದಾಟ ಪುರುಷರ ಬದುಕಿನಲ್ಲಿ ಅನಿವಾರ್ಯವಾ ಅಥವಾ ಹೀಗೆ ನೌಕರಿ ಮಾಡಿ ಮನೆ ಸಂಸಾರ ಮಾಡಲು ಗಂಡಸು ದುಡಿಯಲೇಬೇಕು ಎನ್ನುವುದನ್ನು ಮಾಡಿಟ್ಟಿದ್ದರಿಂದ ಆದ ಒಟ್ಟಾರೆ ಈ ಜೀವನ ಸುರುಳಿಯ ಗಂಡಸರ ಅಪಸವ್ಯದ ದುರಂತವಾ ಗೊತ್ತಿಲ್ಲ.
ಆದರೆ ಈ ಹಂತವನ್ನು ಹೇಗೋ ಮಾಡಿ ಪೂರೈಸಿ ಕಾಲೂರಿಕೊಂಡು ಬಿಡುವ ಗಂಡಸು ನಂತರ ಕುಡಿತ, ತಲಬುಗಳು, ಬರೀ ಹಣ ಮಾಡುವ ಹುಕಿ ಇಂತಹ ಕುಟುಂಬಕ್ಕೆ ಕಿರಿಕಿರಿಯಾಗುವ ವ್ಯವಸ್ಥೆಗಳಿಗೆ ತಗುಲಿಕೊಳ್ಳದಿದ್ದರೆ ಇದ್ದುದ್ದರಲ್ಲೇ ಆರ್ಥಿಕ ಸಧೃಢತೆಗಾಗಿ ನೌಕರಿಯ ಹೆಂಡತಿ ಇರಲಿ ಎನ್ನುವವರಂತೂ ಬದುಕನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡು ಕೂತುಬಿಡುತ್ತಾರೆ.
ಹಾಗೆ ತೀರ ಮೇಲ್ಮಟ್ಟದಲ್ಲಿ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಸಾಕು ಎನ್ನುವ ಹಾಗೆ ವಯಸ್ಸಿಗೂ ಮೊದಲೆ ಒಂದಷ್ಟು ದುಡ್ಡು ದುಗ್ಗಾಣಿ ಸೈಟು ಎಂದೆಲ್ಲಾ ಮಾಡಿಕೊಳ್ಳುತ್ತಲೆ ಸಾಗಿದ ಬಾಬಣ್ಣ ಮೊದಲಿನಂತೆ ನಿಯಮಿತವಾಗಿ ಲಭ್ಯವಾಗುತ್ತಿರಲಿಲ್ಲವಾದರೂ ಆಗೀಗ "ಸಿಟ್ಟಿಂಗ್" ಜಾರಿ ಇದ್ದೇ ಇತ್ತು. ಕಳೆದ ವರ್ಷ ಇನ್ನೇನು ಮಗಳು ಕೈಗೆ ಬಂದಳು, ಮಗನೂ ಇಂಜಿನಿಯರಿಂಗ್ ಓದುತ್ತಿದ್ದಾನೆ ಎಂಬೆಲ್ಲ ಖುಶಿಯ ಬದುಕಿನ ಅವಗಾಹನೆಗಳೊಂದಿಗೆ ಬಿಯರ್ ಮೊಗೆಗೆ ಎಂದಿನಂತೆ ಕೈ ಚಾಚಿ, ಅದರ ನೊರೆ ಆರುವ ಮೊದಲೇ ಸಿಡಿಲಿನಂತೆ ಬಂದ ಸುದ್ದಿಗೆ ಬಾಬಣ್ಣ ತೀರ ಕುಸಿದು ಹೋದ.
"ಏನ್ ಮಾಡ್ಲಿ ಗೊತ್ತಾಗ್ತಿಲ್ಲ.. ಮಗಳು ಹೇಳಿದ್ರೆ ನಾನೇ ಮದುವೆ ಮಾಡ್ತಿದ್ದೆ. ಮಾರಾಯ ಓಡಿಹೋಗಿದಾಳೆ. ಎಲ್ಲಿ ಹೋದ್ಲೊ ಎನೋ.." ಎನ್ನುತ್ತಾ ಕುಸಿದಿದ್ದ ಬಾಬಣ್ಣ ಒಂದೇ ದಿನಕ್ಕೆ ತೊಂಬತ್ತು ವಯಸ್ಸಿನಂತಾಗಿ ಹೋಗಿದ್ದ.
ಹೀಗೆ ಐವತ್ತು ಅರವತ್ತರ ಮಧ್ಯ ವಯಸ್ಸಿನ ಗಂಡಸು ಇನ್ನೇನಾದರೂ ಸುಧಾರಿಸಿಕೊಂಡಾನು ಆದರೆ ಹೀಗೆ ಮಗಳು ಓಡಿ ಹೋಗುವ ಉಪದ್ಯಾಪಿತನವಿದೆಯಲ್ಲ. ಅದರಂತಹ ದೊಡ್ಡ ಮಾರಕ ಇನ್ನೊಂದಿರಲಿಕ್ಕಿಲ್ಲ ಅವನ ಬದುಕಿಗೆ. ಎಲ್ಲಿ ಯಾರಿಗೆ ಏನು ಹೇಳುವುದು ಎನ್ನುವುದು ಒಂದೆಡೆಯಾದರೆ ಭವಿಷ್ಯಕ್ಕಾಗಿ ಮಾಡಿಕೊಂಡ ಕನಸು ಯೋಜನೆ ಎಲ್ಲದಕ್ಕೂ ಆಕೆ ಒಂದೇ ಗುಕ್ಕಿನಲ್ಲಿ ಬೆಂಕಿ ಇಟ್ಟು ಬಿಟ್ಟಿರುತಾಳೆ. ಎಲ್ಲಾ ಒಂದೇ ಹೊಡೆತಕ್ಕೆ ಹಳ್ಳ ಹಿಡಿದಿರುತ್ತವೆ. ಅಸಲಿಗೆ ಅವನಿಗೆ ಸಮಜಾಯಿಸಿಕೊಳ್ಳಲೂ ಏನೂ ಉಳಿದಿರುವುದೇ ಇಲ್ಲ. ಎಂದಿನಂತೆ ಇಂಥಾ ಸಮಯದಲ್ಲೂ "ನೀವು ಸರಿಯಾಗಿ ಮಗಳಿಗೆ ಬುದ್ಧಿ ಹೇಳಿದ್ದರೆ ಹಿಂಗಾಗ್ತಿರಲಿಲ್ಲ. ಅದಕ್ಕೆ ಓಡಿ ಹೋದಳು" ಎನ್ನುವ ಹೆಂಡತಿಯೂ ಇದ್ದು ಬಿಟ್ಟರೆ ಅವನದು ಅಕ್ಷರಶ: ಬದುಕು ಮೂರಾ ಬಟ್ಟೆಯಾಗುವುದರಲ್ಲಿ ಸಂಶಯವೇ ಇರುವುದಿಲ್ಲ.
ಉಳಿದ ಮಗಳ  ಮಗನ ಕತೆ ಮುಂದಿನ ವಾರಕ್ಕಿರಲಿ.
ಇಲ್ಲದಿದ್ದರೆ ಹೀಗೆ ಎಲ್ಲೆಡೆಯೊ ನಡೆಯುವ ಕತೆಗಳನ್ನು ನಾನು ಪಿಸುಗುಡುವುದಾದರೂ ಹೇಗೆ..?

No comments:

Post a Comment