Saturday, June 24, 2017

ಸೌಂದರ್ಯದ ಗೂಡಲ್ಲಿ ಎಲ್ಲವೊ ಖಾಲಿ ಖಾಲಿ .... 
ಇದು ಕಾಶ್ಮೀರದ ಕಥೆ...

ಕಾಶ್ಮೀರವೆಂಬ ಖಾಲಿ ಕಣಿವೆ..

ಈ ರಾಜ್ಯ ನಮ್ಮ ದೇಶದಲ್ಲಿದ್ದೂ ಇಲ್ಲದಂತಿದೆ. ಇದೊಂದೇ ರಾಜ್ಯ ಇವತ್ತು ಎರಡೆರಡು ರಾಜಧಾನಿಯನ್ನು ಹೊಂದಿದ್ದರೆ, ಪೂರ್ತಿ ಕಣಿವೆಯ ರಾಜ್ಯಕ್ಕೆ ಇರುವುದೊಂದೆ ರಾಷ್ಟ್ರೀಯ ಹೆದ್ದಾರಿ. ರಾಷ್ಟ್ರೀಯ ಹಬ್ಬಗಳಿಗೆ ಇಲ್ಲಿ ಅನಿರ್ಬಂಧಿತ ಬಂದ್ ಘೋಷಿತವಾಗುತ್ತದೆ. ಯಾರೂ ಕರೆ ಕೊಡದಿದ್ದರೂ ಶ್ರಿನಗರವೆಂಬ ಒಂದು ಕಾಲದ ಹಿಮಗಿರಿ ಅಕ್ಷರಶ: ಬಾಗಿಲು ಹಾಕಿಕೊಂಡಿರುತ್ತದೆ. ಒಂದು ಕಪ್ಪು ಟೀ ಸಹಿತ ಆವತ್ತು ಪ್ರವಾಸಿಗರಿಗೆ ಸಿಕ್ಕುವುದಿಲ್ಲ. ಹೀಗೆ ವರ್ಷಾವಧಿಯುದ್ಧಕ್ಕೂ ಬರೀ ಹಿಂಸೆಗೂ, ಬಂದ್‍ಗೂ, ಅನಿರ್ಧಿಷ್ಟಾವಧಿ ಸತ್ಯಾಗ್ರಹ ರೂಪದ ಹಿಂಸೆಗೂ ಕರೆ ಕೊಡುವ ಪ್ರತ್ಯೇಕತಾವಾದಿಗಳ ಅವಿವೇಕಿ ನಡವಳಿಕೆಯ ಬೇಗುದಿಗೂ, ಕೊನೆಗೆ ಬೇರೇನೂ ಇಲ್ಲದಿದ್ದರೆ ವರ್ಷದ ನಾಲ್ಕೈದು ತಿಂಗಳು ಹಿಮದ ಹೊಡೆತಕ್ಕೆ ಸಿಕ್ಕು ಅನಾಮತ್ತಾಗಿ ಮುಚ್ಚಿ ಹೋಗುವ ನಗರಕ್ಕೆ ಸಿಕ್ಕು ಬಸವಳಿಯುವ ಜನರಿಗೆ ನಾಳೆ ಎನ್ನುವ ಭವಿಷ್ಯದ ಬಗ್ಗೆ ಚಿಂತಿಸಲು ಮತ್ತು ಹಾಗೆ ಯೋಚಿಸಿ ಭವಿಷ್ಯ ರೂಪಿಸಿಕೊಳ್ಳಲು ರಾಜಕೀಯ ಜಂಜಡದಲ್ಲಿ ಹೈರಾಣಾದ ಬದುಕು ಅವಕಾಶವನ್ನೆ  ಕೊಡುತ್ತಿಲ್ಲ.
ಬರುವ ದಿನಗಳ ಬಗ್ಗೆ ಹಾಗೊಂದು ಚೆಂದದ ಕನಸನ್ನೇ ಕಾಣದಂತೆ, ಬರಲಿರುವ ಪೀಳಿಗೆಗೆ ಕಳೆದ ಆರು ದಶಕಗಳಿಂದ ಧರ್ಮದ ಅಫೀಮನ್ನುಅದ್ಯಾವ ಪರಿಯಲ್ಲಿ ತಿನ್ನಿಸಲಾಗಿದೆಯೆಂದರೆ ಶಾಂತಿ ಪದಕ್ಕೂ, ನೆಮ್ಮದಿ ಎನ್ನುವ ಶಬ್ದಕ್ಕೂ ಕಾಶ್ಮೀರ ಕಣಿವೆ ವಿರೋಧಿಯಾಗಿ ನಿಂತುಬಿಟ್ಟಿದೆ. ಅಲ್ಲೀಗ ಜನಕ್ಕೆ ಓದುವುದು, ವಿದ್ಯಾವಂತರಾಗುವುದು ಉಹೂಂ... ಯಾವುದೂ ಬೇಡವಾಗಿದೆ. ಏನಿದ್ದರೂ ಇವತ್ತಲ್ಲ ನಾಳೆ ಸ್ವತಂತ್ರವಾಗಿ, ಪಾಕಿಸ್ತಾನದ ಜೊತೆ ಸೇರಿ ತಮ್ಮದು ಅಪ್ಪಟ ಮುಸ್ಲಿಂ ರಾಷ್ಟ್ರವಾಗುತ್ತದೆ ಎನ್ನುವ ನಂಬಿಕೆ(?)ಯೊಂದಿಗೆ ಯುವ ಜನಾಂಗ, ಅಗಾಧ ಸೆಳವಿನ "ರಾವಿ ಮತ್ತು ಝೀಲಂ"ನ ದಂಡೆಯಲ್ಲಿ ಕಲ್ಲು ಆರಿಸುವ ದಂಧೆಗೆ ತಮ್ಮನ್ನು ಒಡ್ಡಿಕೊಂಡಿದೆ.
ಅಸಲಿಗೆ ಈ ಕಣಿವೆ ರಾಜ್ಯದ ವೈರುಧ್ಯಗಳಾದರೂ ಎಂಥವೆಂದಿರಿ..? ಇಲ್ಲಿ ಬದುಕಿಗೆ ವೇಗವೆಂಬುದೇ ಇಲ್ಲ. ಇರುವುದೊಂದು ಹೆದ್ದಾರಿ ಯಾವಾಗ ಬಂದ್‍ಗೆ ಸಿಕ್ಕು ಚೆಕ್ಕು ಚೆದುರಾಗಿ ಹೋಗುತ್ತದೋ ಗೊತ್ತಿರುವುದಿಲ್ಲ. ಅದರಲ್ಲೂ ಹೆಚ್ಚಿನ ಭಾಗ ನಿರಂತರ ಪರ್ವತ ಕುಸಿತಕ್ಕೊಳಗಾಗಿ ಗದ್ದೆಯಂತಾಗುತ್ತಿದ್ದರೆ, ಇನ್ನರ್ಧದ ದಾರಿಯಲ್ಲಿ ಯಾವಾಗಲೂ ಯುದ್ಧ ಸದೃಶ್ಯ ವಾತಾವರಣ ಇಲ್ಲ ನೂರಾರು ಯುವಕರ ಕಲ್ಲೆಸತದಿಂದ ಪ್ರಕ್ಷುಬ್ಧವಾಗೇ ಇರುತ್ತದೆ. ಹಾಗಾಗಿ ಬದುಕು ಪ್ರಾಕೃತಿಕವಾಗಿಯೂ, ಸಾಮಾಜಿಕವಾಗಿಯೂ ತೆವಳುತ್ತಲೆ ಇದೆ. ಅನಂತನಾಗ್, ಶೊಫಿಯಾನ್, ಬಾರಾಮುಲ್ಲಾ, ಕಾರ್ಗಿಲ, ಗಾಂಧಾರ್‍ಬಾಲ್, ಟ್ರಾಲ್ ಹೀಗೆ ಸಾಲುಸಾಲು ಹೆಸರಿನ ಅಪ್ಪಟ ಪ್ರವಾಸಿ ತಾಣವಾಗಬಹುದಾಗಿದ್ದ ಪ್ರದೇಶಗಳು ಕೈಯ್ಯಲ್ಲಿದ್ದರೂ, ಯಾವ ಪ್ರವಾಸಿಯೂ ಸುಳಿಯದ ಪ್ರದೇಶವನ್ನಾಗಿಸಿಕೊಂಡಿದ್ದು ಸ್ವತ: ಸ್ಥಳೀಯರು.
ಅಮರನಾಥ ಯಾತ್ರೆಯ ಒಂದೇ ಸಿಜನ್ನಿನಲ್ಲಿ ಲಕ್ಷಾಂತರ ದುಡಿಯಬಹುದಾಗಿದ್ದ ಅವಕಾಶವನ್ನು ಪ್ರವಾಸಿಗರ ಮೇಲೆ ಕಲ್ಲು ಎಸೆಯುವುದರ ಮೂಲಕ ಹಾಳುಮಾಡಿಕೊಂಡಿದ್ದಾರೆ. ಇವತ್ತು ಪ್ರತಿ ಟ್ಯಾಕ್ಸಿ ಡೈವರು ಅಮರನಾಥ್ ರಸ್ತೆಯಲ್ಲಿ ಹೋಗುವಾಗ ತಪ್ಪದೆ ದಪ್ಪನೆಯ ಟವಲ್ಲು, ಸ್ಕಾರ್ಫ್‍ನ್ನು ತಲೆಗೂ, ಮೈತುಂಬಾ ಕಂಬಳಿಯನ್ನು ಸುತ್ತಿಕೊಳ್ಳಲು ಸಲಹೆ ಕೊಡುತ್ತಾನೆ. ಕಾರಣ ಯಾವ ಹೊತ್ತಿಗೆ ಯಾತ್ರಿಗಳ ಮೇಲೆ ಕಲ್ಲಿನ ದಾಳಿಯಾಗುತ್ತದೆ ಅವನಿಗೂ ಗೊತ್ತಿರುವುದಿಲ್ಲ.
ಅಪೂಟು ನೀರಿನ ಸಾಂದ್ರತೆಯ ನಾಡಿನಲ್ಲಿ ಮೂರು ಕಡೆ ನೀರು ಸದಾ ಪ್ರವಹಿಸುವ ಭೌಗೋಳಿಕ ಪರಿಸ್ಥಿತಿ, ಸರಿಯಾಗಿ ಯಾವ ವ್ಯವಸಾಯಕ್ಕೂ ಬೆಂಬಲಿಸಲಾರದು. ಅಪ್ಪಟ ಕಾಶ್ಮೀರ ಸೇಬು ನಿರ್ವಹಣೆ ಸಾಕಾಗದೆ ಮಾರುಕಟ್ಟೆ ಕಳೆದುಕೊಳ್ಳುತ್ತಿದ್ದರೆ ಶತಮಾನಗಳಿಂದ ಹೂಳು ಬೀಳುತ್ತಿರುವ "ದಾಲ್‍ಲೇಕ್" ಒಮ್ಮೆ ಮಾತ್ರ ದೋಣಿ ಸಾರಿಗೆಗೆ ಸಾಕೆನ್ನಿಸುವಂತಾಗಿದೆ. ಹೆಸರಿಗೊಂದು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು ಹೊಂದಿರುವ ಕಣಿವೆಯ ನಗರಿಯಲ್ಲಿ ಕ್ರಮೇಣ ರಾಜಕೀಯ ಕಾರಣದಿಂದಾಗಿ ಜನಸಂಖ್ಯೆ ಅನುಪಾತ ಗಂಭೀರ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ.
ಮುಸ್ಲಿಂ ಮಾತ್ರ ಜೀವಿಸಬೇಕೆನ್ನುವ ಅನರ್ಥಕಾರಿ ನಿಲುವಿಗೆ ಬಿದ್ದಿರುವ ಯುವ ಜನತೆಯ ಶೇ.60 ಹುಡುಗರಿಗೆ ಹದಿಮೂರು ವರ್ಷವಾಗುವ ಮೊದಲೇ ಬಂದೂಕು ಪರಿಚಯವಾಗತೊಡಗಿರುವ ದುರಂತ ಜಾಗತಿಕವಾಗಿ ಇಲ್ಲಿ ಮಾತ್ರ. ಮಿಲಿಟರಿ ಗುಂಡಿಗೆ ಬಲಿಯಾಗುತ್ತಿರುವ ಪ್ರತಿ ಭಯೋತ್ಪಾದಕರಲ್ಲಿ ಯಾರೊಬ್ಬನೂ ಮೂವತ್ತು ದಾಟಿದ ಉದಾ. ಇಲ್ಲ. ಅದರಲ್ಲೂ ಇತ್ತಿಚಿನ ದಿನದಲ್ಲಿ ಅಗಿರುವ ಎನ್‍ಕೌಂಟರ್‍ಗಳಲ್ಲಿ ಬಲಿಯಾಗಿರುವ ಯುವಕರ ವಯಸ್ಸು ಇಪ್ಪತ್ತರ ಆಸು ಪಾಸಿನದ್ದು. ಇಂತಹ ಬೆಳವಣಿಗೆಗೆ ಕುಮ್ಮಕ್ಕು ನೀಡುತ್ತಿರುವವರಲ್ಲಿ ಹದಿವಯಸ್ಸಿನ ಹುಡುಗಿಯರು ಮಹತ್ತರ ಪಾಲು ನಿರ್ವಹಿಸತೊಡಗಿರುವ ಅಪಾಯಕಾರಿ ಬೆಳವಣಿಗೆ ಮತ್ತು ವೈರುಧ್ಯ ಇಲ್ಲಿ ಮಾತ್ರ ಸಾಧ್ಯ. ಉಗ್ರನಾದವನಿಗೆ ಮನಸೋಲುವ ಹುಡುಗಿಯರ ವಿಚಿತ್ರ ಮನಸ್ಥಿತಿ ಯುವಜನತೆಯ ಹಾದಿ ತಪ್ಪಿಸುತ್ತಿದ್ದರೆ, ಮತಾಂಧತೆಯ ಆಕರ್ಷಣೆ ತಾರ್ಕಿಕ ಆಲೋಚನೆಯನ್ನು ಕೆಡುವಿ ಹಾಕಿದೆ.
ಹೀಗೆ ಒಂದು ನೆಲ ಅರ್ಧ ಶತಮಾನದಲ್ಲಿ ತೀರ ಅವಸಾನದತ್ತ ಸರಿಯಲು ಒಂದೆರಡು ಕಾರಣಗಳಲ್ಲ. ರಾಜಕೀಯ ಇಚ್ಚಾ ಶಕ್ತಿ, ದಾರಿ ತಪ್ಪಿದ ಯುವ ಸಮೂಹ, ಗಡಿ ದೇಶದ ಕುಮ್ಮಕ್ಕು, ದೇಶದೊಳಗಿದ್ದೇ ದೇಶದ್ರೋಹಿ ಕೆಲಸ ಮಾಡುವ ಪ್ರತ್ಯೇಕತಾವಾದಿಗಳೆಂಬ ಅವಿವೇಕಿಗಳ ಪಡೆ, ಸುಲಭಕ್ಕೆ ದಕ್ಕುವ ಹೆಸರು ಮತ್ತು ಹಣ, ಸ್ಥಳೀಯವಾಗಿ ಉದ್ಯೋಗಕ್ಕೆ ಬೇರೆ ಅವಕಾಶವೇ ಇಲ್ಲದ ವಿಚಿತ್ರ ಸ್ಥಿತಿ, ಪಾರಂಪರಿಕ ಉದ್ಯೋಗ ವ್ಯವಹಾರ ಒಲ್ಲದ ಹೊಸ ಪೀಳಿಗೆ, ರಾಜಕೀಯವಾಗಿ ಜನರನ್ನು ಕತ್ತಲೆಯಲ್ಲಿಟ್ಟೆ ಸ್ವತ: ಬೇಳೆ ಬೇಯಿಸಿಕೊಳ್ಳುವ ದರಿದ್ರ ರಾಜಕೀಯ, ಸಹಜ ಶೈಕ್ಷಣಿಕ ಮಹತ್ವವನ್ನು ವ್ಯವಸ್ಥಿತವಾಗಿ ಕಡಿಮೆ ಮಾಡುತ್ತಿರುವ ಮದರಸಾಗಳು, ತನ್ನ ದೇಶವನ್ನೇ ದ್ವೇಷಿಸಲು ಕಲಿಸುವ ಧಾರ್ಮಿಕತೆ, ಕನಸಿನ ಸ್ವಾಯತ್ತತೆ, ಮರಣಾನಂತರದ ಲೋಕ ಮತ್ತು ಅಲ್ಲಿ ದಕ್ಕುವ ವಿಲಾಸ ಭೋಗದ ಬಗೆಗಿರುವ ಅಪಸವ್ಯ ಎನ್ನಿಸುವ ನಂಬುಗೆಗಳು, ಸೈನಿಕರ ಕೈಯ್ಯಲ್ಲಿ ಗುಂಡೇಟು ತಿಂದು ಶವವಾದರೆ ಅದಕ್ಕೆ ಸೇರುವ ಊಹಾತೀತ ಜನಸಂದಣಿಯ ಆಕರ್ಷಣೆ ಹೀಗೆ ಹಲವು ವೈರುಧ್ಯಗಳ ಕಾಶ್ಮೀರ ಎಂಬ ಪ್ರಕ್ಷುಬ್ಧ ಕಣಿವೆ ನಿರಂತರವಾಗಿ ಅವಸಾನದತ್ತ ಜಾರುತ್ತಿದ್ದರೆ ಅದನ್ನು ನಿಲ್ಲಿಸುವ ತಪನೆ ಯಾರಲ್ಲೂ ಕಂಡುಬರುತ್ತಿಲ್ಲ.
ಇಚ್ಚಾ ಶಕ್ತಿ  ಇರುವವರಿಗೆ ಬೆಂಬಲ ಇಲ್ಲ. ಇದ್ದವರಿಗೆ ಬದಲಿಸಲೊಲ್ಲದ ಹೀನಾಯತನ. ಎರಡೂ ಅಲ್ಲದವರಿಗೆ ಬುದ್ಧಿಜೀವಿತನದ ತೆವಲು. ಒಟ್ಟಾರೆ ಬಲಿಯಾಗುತ್ತಿರುವ ಕಣಿವೆಯ ಸ್ತ್ರೀ ಸಮೂಹ ಮತ್ತು ಮುಗ್ಧತೆಯ ಅನಿವಾರ್ಯತೆಯಲ್ಲಿರುವ ಸಮೂಹಕ್ಕೆ ಬದುಕು ಬದಲಾಗದೆನ್ನುವ ಖಾತರಿ ಬಂದುಬಿಟ್ಟಿದೆ. ಇಂತಹ ವಿಚಿತ್ರ ರಾಜ್ಯದ ರಾಜಕೀಯ, ಮಿಲಿಟರಿ ಕಾರ್ಯಾಚರಣೆ, ಗಡಿಗಳಲ್ಲಿನ ವಾಸ್ತವ ಚಿತ್ರಣ, ಸೈನಿಕರ ಮೇಲೆ ಅಷ್ಟು ಸುಲಭಕ್ಕೆ ದಾಳಿಯಾಗುವ ಬಗೆ, ಎನ್‍ಕೌಂಟರ್‍ಗೆ ಸಿಕ್ಕುವ ಸ್ವಘೋಷಿತ ಕಮಾಂಡರ್‍ಗಳ ಕ್ಷಣಿಕ ಬದುಕು... ಹೀಗೆ ನೈಜ ಚಿತ್ರಣವನ್ನು ಕಾಲಕಾಲಕ್ಕೆ ಕಟ್ಟಿಕೊಡಲಿದೆ ಈ ಅಂಕಣ ಪ್ರತಿವಾರ.
ಅಂದಹಾಗೆ ಯಾವ ರೀತಿಯಲ್ಲೂ ಕೈಗೆ ದಕ್ಕದ ಕಾಶ್ಮೀರದ ಬಗೆಗಿಷ್ಟು ಮೋಹ ಯಾಕೆ ವಿದೇಶಿ ಶಕ್ತಿಗಳಿಗೆ...? ಆಸಕ್ತಿದಾಯಕ ಕತೆ ಮುಂದಿನ ವಾರಕ್ಕಿರಲಿ.

Friday, June 16, 2017

ಇದೊಂಥರಾ ಹಲ್ಲಿದ್ದಾಗ ಕಡಲೇ ಇಲ್ಲ ಎನ್ನುವ ಲೆಕ್ಕದಂತೆ...

ಹಿಂದೆಲ್ಲಾ ಸುಲಭವಾಗಿ ದೇವಕಾರು ತಲುಪುವ ಅವಕಾಶ ಇದ್ದಾಗ ಇಲ್ಲಿಗೆ ಕಾಲಿಡದಿದ್ದವರೇ ಹೆಚ್ಚು ಮತ್ತು ಹೀಗೊಂದು ದೇವ ಸದೃಸ್ಯ ಜಲಪಾತ ಇಲ್ಲಿದೆ ಎಂದು ಗೊತ್ತಾಗಿದ್ದೂ ಕೂಡಾ 1993 ರಲ್ಲಿ ಇದರ ಮೊದಲ ವಿಡಿಯೋ ಹೊರಹಾಕಿದಾಗಲೇ. ಆಗೆಲ್ಲಾ ಬೆಂಗಳೂರಿನಿಂದ ಸುಲಭವಾಗಿ ಕೆಲವು ತಂಡಗಳು ಸ್ವಯಂ ತಯಾರಿಯೊಂದಿಗೆ ಬಂದು ಹೋದವು ಎನ್ನುವುದನ್ನು ಹೊರತು ಪಡಿಸಿದರೆ, ಕಾಳಿಯ ಅಗಾಧ ಯೋಜನೆಗಳ ಭಾರಕ್ಕೆ ಸಿಲುಕಿ ಮತ್ತೀಗ ಕೈಗೆಟುಕದಂತೆ ಆಗಿ ಹೋಗಿದೆ ದೇವಕಾರು ಜಲಪಾತ. ಆದರೆ ವಜ್ರ ಜಲಪಾದ ಸಂದರ್ಶಿಸಿದವರು ಮತ್ತೊಮ್ಮೆ ಬೇರೆ ಜಲಪಾತಕ್ಕೆ ಹಂಬಲಿಸಲಾರರು.

ರಸ್ತೆ ಪಯಣ, ಚಾರಣ, ನದಿ ದಂಡೆಯ ನಡಿಗೆ, ದೋಣಿ ಪಯಣ ಹೀಗೆ ಎಲ್ಲ ರೀತಿಯ ಸಂಚಾರಿ ವ್ಯವಸ್ಥೆಯ ಅಗತ್ಯವನ್ನು ಬೇಡುವ ವಜ್ರ ಜಲಪಾತ ಸಧ್ಯ ಮುಕ್ಕಾಲು ಭಾಗ ನೀರಿನಿಂದಾವೃತವಾಗಿದ್ದರೆ ಉಳಿದೊಂದು ಭಾಗ ದಟ್ಟ ಕಾನನದ ಮಧ್ಯೆ ಜಲಪಾತದ ಶಿರೋಭಾಗಕ್ಕೆ ತಾಗಿಕೊಂಡಿದೆ. ಹಾಗಾಗಿ ಆ ರಸ್ತೆ ವ್ಯವಸ್ಥಿತವಾಗುವುದೇ ಇಲ್ಲ. ಏನಿದ್ದರೂ ಕೊಂಚ ಶ್ರಮ ಪಟ್ಟು ಇತ್ತಲಿಂದಲೇ ಪಯಣಿಸಬೇಕು. ಅದಕ್ಕಾಗಿ ಯೋಜನೆ ರೂಪಿಸುವುದೇ ಆದಲ್ಲಿ ಒಂದಿಡಿ ದಿನ ನಿಮ್ಮ ಕೈಯ್ಯಲಿರಲೇಬೇಕು. ಬೆಳಿಗ್ಗೆ ಒಂಬತ್ತರೊಳಗೆ ಹತ್ತಿರದ ಮುಖ್ಯ ಸಂಪರ್ಕ ಕೇಂದ್ರ ಕದ್ರಾ ತಲುಪಿಕೊಂಡರೆ ಸಂಜೆಯ ಹೊತ್ತಿಗೆ ವಾಪಸ್ಸು ಇಲ್ಲಿಗೆ ತಲುಪಬಹುದಷ್ಟೆ.

ಜಲಪಾತಗಳ ಜಿಲ್ಲೆ ಉ.ಕ.ವನ್ನು ದೂರದೂರದಿಂದ ಸಂದಶಿ9ಸುವವರು ಅದೇ ಮಾಗೋಡು, ಉಂಚಳ್ಳಿ, ಕೆಪ್ಪ ಜೋಗ, ಭೈರಿಮನೆ, ಗವಿಗುಂಡಿ, ವಿಭೂತಿ, ಅಣಶಿ, ಶಿವಗಂಗೆ ಹೀಗೆ ಸಿದ್ಧ ಮಾದರಿಯ ರಸ್ತೆಯಲ್ಲಿ ಚಲಿಸಿ, ವಾಹನ ನಿಲ್ಲಿಸಿ ಒಂದಿಷ್ಟು ಮೋಜು ಮಸ್ತಿ ನಡೆಸಿ, ಡಿಜಿಟಲ್ ಕೆಮೆರಾ ಬಂದಿದ್ದಕ್ಕೆ ಈಗೀಗ ಎಲ್ಲಾ ಫೆÇೀಟೊಗ್ರಫರ್‍ಗಳೆ.. ಅಲ್ಲಲ್ಲಿ ನಿಂತು ಕುಂತು ಕ್ಲಿಕ್ಕಿಸಿ ನಡೆದುಬಿಡುತ್ತಾರೆ. ಆದರೆ ದಾರಿಯ ಸಮಸ್ಯೆಯಿಂದ ಸುಲಭಕ್ಕೆ ಲಭ್ಯವಾಗದ ದೇವಕಾರಿನ ವಜ್ರ ಜಲಪಾತ ಸೌಂದರ್ಯದ ಖನಿಯಾಗಿದ್ದರೂ ವರ್ಷದುದ್ದಕ್ಕೂ ತಲುಪುವವರ ಸಂಖ್ಯೆ ಗಣಿನೀಯವಾಗಿ ಕಡಿಮೆಯೇ.

ಹೌದು ದೇವಕಾರು ಮೊದಲಿಗೆ ಅಷ್ಟಾಗಿ ಹೆಸರು ಮಾಡದಿದ್ದರೂ, ಜನ ಸಂಪರ್ಕಕ್ಕೆ ಬಾರದೇ ಉಳಿದು ಹೋಗಿದ್ದರೂ ಸ್ಥಳೀಯವಾಗಿ "ವಜ್ರ" ಜಲಪಾತ ಎಂದು ಸದ್ದಿಲ್ಲದೇ ಹರಿಯುತ್ತಲೇ ಇದೆ ಕಾಡ ಬೆಳದಿಂಗಳಿನಂತೆ. ಆದರೆ ಕದ್ರಾ ಜಲ ವಿದ್ಯುತ್ ಯೋಜನೆಯಡಿಯಲ್ಲಿ ಹಿನ್ನೀರ ವಿಸ್ತಾರ ನೂರಾರು ಎಕರೆ ಕಾಳಿ ನದಿಯ ಹಿಂಭಾಗ ವಿಸ್ತಾರಗೊಂಡಾಗ ದೇವಕಾರಿನ ನೇರ ಸಂಪರ್ಕ ಸಂಪೂರ್ಣವಾಗಿ ಮುಚ್ಚಿಹೋಯಿತು.

ಅಗಾಧ ಎತ್ತರ ಮತ್ತು ರಭಸಕ್ಕೆ ಕಿವಿಗಡಚಿಕ್ಕುವಂತೆ ಶಬ್ದಿಸುತ್ತಾ ಬೀಳುವ ಜಲಪಾತ ಇವತ್ತಿಗೂ ಜಿಲ್ಲೆಯ ವಿಸ್ಮಯ. ಮಳೆಗಾಲದ ಆರಂಭದಿಂದ ಡಿಸೆಂಬರ್‍ವರೆಗೆ ತುಂಬು ಅಗಲದಲ್ಲಿ ಸುರಿಯುವ ದೇವಕಾರು ಜಲಪಾತ ಮೇ ತಿಂಗಳಲ್ಲೂ ಕೂಡ ಖುಷಿ ಕೊಡುವಷ್ಟು ನೀರನ್ನು ಉಳಿಸಿಕೊಂಡು ಹರಿಯುತ್ತಿರುತ್ತದೆ. ಆದರೆ ಸುಲಭಕ್ಕೆ ಈಡಾಗದ ದಾರಿಯ ಸೌಲಭ್ಯದಿಂದಾಗಿ ಮತ್ತು ಸ್ಥಳೀಯವಾಗಿ ಸೌಲಭ್ಯಗಳ ಕೊರತೆಯಿಂದಾಗಿ ಆಸಕ್ತಿ ಇದ್ದರೂ ಇದನ್ನು ತಲುಪುವುದು ಸುಲಭವಾಗುತ್ತಿಲ್ಲ.

ನಾವು ಒಮ್ಮೆ ಕಾಳಿ ನದಿಯ ಹಿನ್ನೀರಿನಲ್ಲಿ ಆಚೆಯ ದಡ ಸೇರಿದರೆ ನಂತರದಲ್ಲಿ ನದಿಯ ಹರಿವಿನ ತಿರುವುಗಳ, ಅಂಚಿನ ಕಾಲು ದಾರಿ ಉಂಟು ಎಂದರೆ ಉಂಟು ಇಲ್ಲ ಎಂದರೆ ಇಲ್ಲಗಳ ನಡುವಿನ ಅಗಾಧ ಕಾಡು ಬೆಳೆಗಳ ನಡುವೆ ಸೊಪ್ಪು ಸದೆ ಸವರುತ್ತಾ ಚಾರಣಕ್ಕಿಳಿದರೆ ಬರೋಬ್ಬರಿ ಎರಡು ಗಂಟೆ ಕಾಡು ದಾರಿ, ದಟ್ಟ ಹಸಿರಿನ ಗದ್ದೆಯ ಅಂಚು, ತೀವ್ರ ಕಡಿದಾದ ಪರ್ವತದ ಮೈ, ನೀರಿನ ಬಂಡೆಗಳ ಒಳಾವರಣದ ಅಗಾಧತೆ, ಮಧ್ಯದಲ್ಲೊಮ್ಮೆ ಎದ್ದುನಿಂತ ಅರ್ಧ ಕೊರಕಲು ಶಿಲಾಬಂಡೆಯ ವೈವಿಧ್ಯಮಯ ಅನುಭವಗಳಿಗೆ ಈಡಾಗುತ್ತಾ ಕಾಳಿನದಿಯ ಪಾತ್ರದಲ್ಲಿ ಎಡತಿರುವನ್ನು ತೆಗೆದುಕೊಳ್ಳುತ್ತಿದ್ದಂತೆ ಕೀ.ಮೀ. ಮೊದಲೆ ಗೋಚರವಾಗುತ್ತದೆ ಅಷ್ಟು ಎತ್ತರದಿಂದ ಧರೆಗುರುಳುತ್ತಿರುವ ದೇವಕಾರು ಜಲಪಾತ.

ಸಾಕಷ್ಟು ಹರಿಯುವ ನೀರಿನ ಸೌಲಭ್ಯವನ್ನು ಹೊರತು ಪಡಿಸಿದರೆ ಎನೆಂದರೆ ಏನೂ ಲಭ್ಯವಾಗದ ದೇವಕಾರಿಗೆ ಹೋಗುವಾಗ ಸಾಕಷ್ಟು ಆಹಾರ ಪದಾರ್ಥಗಳ ಸಂಗ್ರಹ ಒಯ್ಯುವುದು ಅವಶ್ಯ. ಜೊತೆಗೆ ಕೇವಲ ದೇವಕಾರಲ್ಲ ಅದರ ನದಿ ಪಾತ್ರ ಹೊರತು ಪಡಿಸಿ ಈಚೆಯ ದಂಡೆಗೆ ಬಂದ ನಂತರವೂ ರಸ್ತೆಯ ವಿನ: ಎನೂ ಸಿಕ್ಕುವುದಿಲ್ಲ. ಆದ್ದರಿಂದ ಸಂಪೂರ್ಣ ಆಹಾರ ವಯಸ್ಥೆ ಮತ್ತು ಅಗತ್ಯದ ವಸ್ತುಗಳು ಏನೇ ಬೇಕಿದ್ದರೂ ಎಲ್ಲಾ ಒಯ್ದುಕೊಳ್ಳುವುದೇ ಹೊರತಾಗಿ ಎಲ್ಲೂ ಸಹಾಯ ಅಥವಾ ಪೂರೈಕೆಯನ್ನು ನಿರಿಕ್ಷೀಸುವಂತಿಲ್ಲ. ನದಿ ನೀರು ಕುಡಿಯಲು ಅಭ್ಯಂತರ ಇಲ್ಲದಿದ್ದರೆ ಸರಿ. ಇಲ್ಲ ಸಾಕಷ್ಟು ನೀರನ್ನೂ ಬೆನ್ನಿಗೆ ಏರಿಸಿಕೊಳ್ಳುವುದು ಅಗತ್ಯ. ತೀರ ಮೂವತ್ತು ಕಿ.ಮೀ. ದೂರದ ಕದ್ರಾ ಕೂಡಾ ಚಿಕ್ಕ ಊರಿನ ಕೇಂದ್ರ. ಅಲ್ಲೂ ನಮ್ಮ ನಿರಿಕ್ಷೇಯನ್ನು ಮುಟ್ಟುವ ಅಹಾರ ಪದಾರ್ಥ ಸಾದ್ಯವಿಲ್ಲ. ಹಾಗಾಗಿ ಪೂರ್ವ ತಯಾರಿ ಅವಶ್ಯ.

ಆದರೆ ಯಾವಾಗಲೂ ಗೊತ್ತಿರುವ ಅಲ್ಲಲ್ಲಿನ ಜಲಪಾತ, ಝರಿ, ತೊರೆ ಸುತ್ತುವುದಕ್ಕಿಂತಲ್ಲೂ ವಿಭಿನ್ನ ಅನುಭವ ಮತ್ತು ಅಧ್ಬುತ ಯಾನ ಮಾಡಿಸುವ ದೇವಕಾರು ಒಮ್ಮೆಯಾದರೂ ನೋಡಲೇ ಬೇಕಾದ ನೈಜ ದೃಶ್ಯ ವೈವಿಧ್ಯ. ಆದರೆ ದೋಣಿ ದಾಟುವ, ನದಿಯ ಪಾತ್ರದಲ್ಲಿ ಚಲಿಸುವಾಗ ನೀರಿಕ್ಷಿಸುವ ಅಗಾಧ ಸುರಕ್ಷತೆಯ ಸವಾಲುಗಳು ದೇವಕಾರನ್ನು ಈಗಲೂ ಜನ ಮಾನಸದಿಂದ ದೂರವೇ ಉಳಿಸಿವೆ.



(ತಲುಪುವುದು ಹೇಗೆ..?)

ವಜ್ರ ಜಲಪಾತವಿರುವ ದೇವಕಾರಿಗೆ, ಕದ್ರಾದ ಒಳ ಮಾರ್ಗವಾದ ಕೊಡಸಳ್ಳಿಯ ರಸ್ತೆಯಲ್ಲಿ ಮೂವತ್ತು ಕಿ.ಮೀ. ಚಲಿಸಿದರೆ ತಾಗುವ ಹಿನ್ನಿರ ದಾರಿಯ ಮೇಲೆ ದೋಣಿಯಲ್ಲಿ ಸಾಗಿ ನದಿಯನ್ನು ದಾಟಬೇಕು. ದೋಣಿ ಒಂದು ಸಲಕ್ಕೆ ನಾಲ್ಕೈದು ಜನರನ್ನು ಮಾತ್ರ ಒಯ್ಯುವ ಸಾಮಥ್ರ್ಯದಿದ್ದು ಹೆಚ್ಚು ಜನರ ತಂಡವಿದ್ದರೆ ಅದು ವಾಪಸ್ಸು ಬರುವವರೆಗೂ ಕಾಯಬೇಕು. ದೋಣಿಯಿಂದ ಆ ಭಾಗದಲ್ಲಿ ಇಳಿದ ನಂತರ ಸುಮಾರು ಎರಡು ಗಂಟೆ ನಡಿಗೆ ಕಡ್ಡಾಯ ಕಾಡು ಮತ್ತು ಗದ್ದೆಯ ಬದುವಿನ ಕಾಲುದಾರಿಯಲ್ಲಿ.

ಕದ್ರಾ ಹುಬ್ಬಳ್ಳಿಯಿಂದ 140 ಕಿ.ಮೀ. ಕಾರವಾರದಿಂದ 35 ಕಿ.ಮೀ. ದೂರವಿದ್ದು ಎರಡೂ ಕಡೆಯಿಂದ ತಲುಪಬಹುದಾಗಿದೆ. ಇಲ್ಲಿಗೆ ಬಂದು ಫಾರೆಸ್ಟ್‍ರ ಬಳಿಯಲ್ಲಿ ಮೊದಲೇ ಪ್ರವೇಶ ಪತ್ರ ಪಡೆದರೆ ಮಾತ್ರ ಕೊಡಸಳ್ಳಿ ಮಾರ್ಗಕ್ಕೆ ನಮ್ಮ ಖಾಸಗಿ ವಾಹನಕ್ಕೆ ಪ್ರವೇಶಾವಕಾಶ ದಕ್ಕುತ್ತದೆ. ಅಲ್ಲಿಂದ ಕೊಡಸಳ್ಳಿ ಹಿನ್ನೀರ ದಂಡೆಯಲಿ ಮೊದಲೇ ದೇವಕಾರಿನ ಮೂಲದರನ್ನು ಸಂಪರ್ಕಿಸಿ ದೋಣಿಯ ಮೂಲಕ ಆಚೆ ದಂಡೆ ತಲುಪಿ ಚಾರಣ ಮಾಡಿದರೆ ದೇವಕಾರಿನಲ್ಲಿ ದೇವ ಸದೃಶ್ಯ ಜಲಪಾತ ಸವಿಯಬಹುದಾಗಿದೆ. ) 

Monday, June 12, 2017

ಪ್ರತಿ ಬದುಕಿಗೊಂದು ಹೊರಳು ದಾರಿ...

"..ಎಲ್ಲಾ ಸೆಟ್ಲ್ ನೋಡು.. ಇನ್ನೇನಿದ್ರೂ ಮಕ್ಕಳು ಸೆಟ್ಲಾದರ ಮುಗೀತು ನಾನು ಅರಾಮ.." ಎದುರಿಗಿನ ನೊರೆ ನೊರೆ ಬಿಯರಿನ ವಗರಿಗೆ ತನ್ನ ಖುಶಿಯ ಸೇರಿಸುತ್ತಾ ಇನ್ನೂ ಅರ್ಧ ವಯಸ್ಸಿಗೆ ಬರುವ ಮೊದಲೇ ಬದುಕಿಗೊಂದು ಗಮ್ಯ ಕಲ್ಪಿಸಿಕೊಂಡ ಖುಶಿಯಲ್ಲಿ ಬಾಬಣ್ಣ ಮಾತಾಡುತ್ತಿದ್ದರೆ ನಾನು " ಎಲ್ಲರಿಗೂ ಬದುಕು ಹೀಗೆ ಸುರುಳಿತವಾಗಿದ್ದರೆ ಎಷ್ಟು ಚೆನ್ನ" ಎಂದುಕೊಳ್ಳುತ್ತಾ ಒಳಗೊಳಗೆ ಈ ಬಾಬಣ್ಣನ ಹಾಗೆ ನಾನ್ಯಾವತ್ತು ಹಿಂಗೆ ಅರಾಮವಾಗಿ ಕಾಲು ಚಾಚುತ್ತೇನೋ ಎಂದು ತುಂಬ ದೂರದಲಿದ್ದ ಭವಿಷ್ಯದ ಬಗ್ಗೆ ಸಣ್ಣಗೆ ಬೆದರಿಕೊಳ್ಳುತ್ತಾ ಮೇಲೆ ಮಾತ್ರ ಏನೂ ಆಗಿಲ್ಲ ಎನ್ನುವಂತೆ ನೊರೆ ಊದುತ್ತಾ ಮಗ್ಗಿಗೆ ಕೈಯಿಕ್ಕುತ್ತಿದ್ದೆ.
ಸರಿ ಸುಮಾರು ದುಪ್ಪಟ್ಟು ವಯಸ್ಸಿನ ಬಾಬಣ್ಣನಿಗೆ ವಾರದ ಕೊನೆಯಲ್ಲೋ, ತಪ್ಪಿ ಎರಡು ದಿನ ರಜೆ ಬಂದು ಬಿಟ್ಟರೆ ಅದರಲ್ಲೊಂದು ದಿನವೋ.. ಅವನ ಒಟ್ಟಾರೆ ಹಳೆಯ ಕತೆಗಳಿಗೆ ಕಿವಿಯಾಗಲು ನಾನು ಸುಲಭಕ್ಕೆ ಪಕ್ಕಾಗುತ್ತಿದ್ದೆ. ಹಾಗಂತ ಸುಮ್ಮನೆ ಮೀಟರೇನೂ ಅಲ್ಲ ಬಾಬಣ್ಣ. ಆದರೆ ಅವನದ್ದೇ ಬದುಕಿನ ಹಂತಗಳಿಗೆ ತಾನು ಏಗಿದ್ದು, ಜೊತೆಗೆ ಅದೃಷ್ಟ ಜೊತೆ ಕೊಟ್ಟಿದ್ದು ಇಲ್ಲದಿದ್ದರೆ ಇವತ್ತಿಗೇ ಏನಾಗುತ್ತಿದ್ದೇನೋ ಎನ್ನುವ ಅರಿವಾಗದ ಅನನುಭವಕ್ಕೆ ತಾನೇ ಬೆದರಿಕೊಳ್ಳುತ್ತಾ, ದೇವರ ದಯೆ ಎಲ್ಲಾ ನೆಟ್ಟಗಾಯಿತು ಎನ್ನುವ ಪಾಪದ ಮನುಶ್ಯ.
ತಾನಾಯಿತು ತನ್ನ ನೌಕರಿಯಾಯಿತು ಎಂಬತ್ತಿದ್ದವನಿಗೆ ಏನಾದರೂ ಐಲುಗಳು, ಕೆಟ್ಟತನಗಳಿವೆಯಾ ಎಂದು ನಾನು ಹುಡುಕುವಷ್ಟು ಪಾಪದ ಸ್ನೇಹಿತನಾಗಿದ್ದ ಬಾಬಣ್ಣ ಆಗೀಗ ನನ್ನನ್ನೂ ಎಳೆದುಕೊಂಡು ಬೆಂಗಳೂರಿನ ತರತರಹದ ರುಚಿಯ ಓಪನ್ ಬಾರ್‍ಗಳಿಗೆ ಲಿಮಿಟೆಡ್ಡಾಗಿ ಹೋಗುತ್ತಿದ್ದ ಎನ್ನುವುದು ಹೊರತು ಪಡಿಸಿದರೆ ಅಪ್ಪಟ ಜಂಟ್ಲಮನ್. ತೀರ ನನಗೂ ಅವನಿಗೂ ಎರಡು ದಶಕದ ಅಂತರವಿದ್ದರೂ ಬಾಬಣ್ಣ ಸ್ನೇಹಿತನಾಗಿ ಆವರಿಸಿಕೊಂಡಿದ್ದು ಅವನ ಸಮಯಕ್ಕಾಗಿ ಎನ್ನುವುದಕ್ಕಿಂತಲೂ, ಆಗಿನ ಪರಿಸ್ಥಿತಿಯಲ್ಲಿ ನಾನ್ಯಾವತ್ತೂ ಬಿಲ್ ಕೊಡುವ ಮಾತೇ ಇರಲಿಲ್ಲವಾದರೂ "ಎಲ್ಲಾರಿಗೂ ಇಂಥದ್ದೊಂದು ಕಾಲ ಇದ್ದೇ ಇರ್ತದ" ಎಂದು ಸಮಾಧಾನಿಸಿಯೂ ನನ್ನನ್ನು ಜತೆಗೆ ಕರೆದೊಯುತ್ತಿದ್ದುದು.
"..ನೋಡು ನನಗೂ ಏನೂ ಇರ್ಲಿಲ್ಲ. ಆ ಪಿಣ್ಯಾದ ಗೂಡ್ಸ್‍ಶೆಡ್‍ನ ನೌಕರಿಯಲ್ಲಿದ್ದಾಗ ನಿನ್ನಂಗೆ ಇದ್ದೆ. ದೇವರು ಕಣ್‍ತೆರೆದ ಅರಾಮಾಯಿತು ನೋಡು. ಇದ್ದಷ್ಟ ದಿನಾ ಚೆಂದಾಗಿ ಇದ್ದು ಬಿಡೋದು ಬಿಟ್ಟು ಹಿಂಗೇ ಅಂತಾ ಬದುಕ್ತೀನಿ ಅಂದರೆ ನಾವೇ ಎಲ್ಲ ಹಾಳು ಮಾಡಿಕೊಳ್ತೀವೆ ವಿನ: ಯಾವ ಉತ್ಪನ್ನನೂ ಇರೋದೇ ಇಲ್ಲ. ಹೌದಲ್ವಾ..? ಬಂದಂಗೆ ತೊಗೊಳದಿದ್ರೆ ಜೀವನ ಯಾವತ್ತು ನೆಮ್ಮದಿಯಾಗಿ ಕಳಿಯೋಕೆ ಸಾಧ್ಯ ಇಲ್ಲ ನೋಡು.." ಎನ್ನುವ ಅವನ ಮಾತುಗಳಿಗೆ ಆಗೆಲ್ಲಾ ನಾನು ಸುಮ್ಮನೆ ತಲೆ ಕಿವಿ ಎರಡೂ ಕೊಡುತ್ತಿದ್ದೆ. ನನಗೂ ಅದೆಲ್ಲಾ ಹೌದೆಂದು ಅರ್ಥವಾಗುವ ಹೊತ್ತಿಗೆ ಮತ್ತೆರಡು ದಶಕ ಕಳೆದಿತ್ತು.
ಅವನ್ಯಾವತ್ತೂ ತೀರ ದೊಡ್ಡ ಆಸೆಗಳಿಗೆ ಬಿದ್ದವನಲ್ಲ. ಒಂದು ಹೆಣ್ಣು, ಗಂಡು ಸಂಸಾರದಲ್ಲಿ ಸಂಪ್ರೀತ. ಇನ್ನೇನಿದ್ದರೂ ಮಕ್ಕಳೂ ಸೆಟ್ಲ್ ಆದರೆ ಆಯ್ತು ನೋಡು ಎನ್ನುತ್ತಿದ್ದ. ನಮ್ಮಂತೆ ಸರಹೊತ್ತಿನ ತಿರುಗಾಟ, ಮಧ್ಯವಯಸ್ಕ ಗಂಡಸಿನ ಅಪರಾತ್ರಿಯ ಸಮಸ್ಯೆಗಳು, ಎದುರಾ ಎದುರು ನೋಡದೆ ಇದ್ದವಳ ಎದೆಯ ಬಗ್ಗೆಯೂ ಡಬ್ಬಲ್ ಸೈಜಿನಲ್ಲಿ ಮಾತಾಡುವ ಬಲಹೀನ ಪುರುಷರ ಅಪಸವ್ಯಗಳು, ಕ್ರಿಕೆಟ್ಟು, ಬ್ಲೂ ಫಿಲಮ್ಮು, ತನ್ನ ಕೈಗೆ ದಕ್ಕದವಳ ಬಗೆಗೆ ಸಾಲು ಕಾಮಕತೆಗಳ ಪರಾಕು ಹೇಳುವುದು, ಕಚೇರಿಯ ಸಹೊದ್ಯೋಗಿ ಬಗ್ಗೆ ಇರುವ ಅಸಹನೆಯನ್ನು ಆಕೆಯ ದೈಹಿಕ ರೂಪದ ಬಗ್ಗೆ ಮಾತಾಡಿ ಹಗುರಾಗುವ, ಇನ್ಯಾರದ್ದೋ ಮನೆಯಾಕೆಯ ಬಗ್ಗೆ ಕಣ್ಣು ಹೊಡೆಯುವ ಇತರ ಗಂಡಸರಂತೆ ಯಾವತ್ತೂ ಮಾತಿಗೂ, ಹರಟೆಗೂ ಬಿದ್ದವನಲ್ಲ. ಅವನದೇನಿದ್ದರೂ ಮನೆ ಮಡದಿ ಮಕ್ಕಳು ಅವರ ಭವಿಷ್ಯ ನೌಕರಿ ಆವತ್ತಿನ ಸುದ್ದಿ ಪತ್ರಿಕೆ ಟಿ.ವಿ. ಆಗೀಗೊಮ್ಮೆ ನಾನು ಮತ್ತು ಇತರ ಸ್ನೇಹಿತರ ಜೊತೆಗೆ ತಣ್ಣಗಿನ ಬಿಯರ್ ಮೊಗೆಗೆ ಕೈಯಿಕ್ಕಿ ಹಿತವಾಗಿ ಕಾಲು ಚಾಚಿ ಕೂತುಕೊಳ್ಳುವುದರ ವಿನ: ಬದುಕು ಕೇರಂಬೋರ್ಡ್ ಎದೆಯ ಹುಡುಗಿಯರಂತೆ ಸರಳ ರೇಖೆ.
ಬದುಕನ್ನು ಮುತುವರ್ಜಿಯಿಂದ ನಾಜೂಕಾಗಿ ರೂಪರೇಷೆಗಳನ್ನು ನಿರ್ವಹಿಸುತ್ತಾ ಭವಿಷ್ಯದ ದಿನಗಳನ್ನು ಕಟ್ಟುತ್ತಿದ್ದ. ಹೇಗಾದರೂ ಸರಿ ಇಬ್ಬರೂ ಮಕ್ಕಳನ್ನೂ ತನ್ನಂತೆ "ಸೆಟ್ಲ್" ಮಾಡಿದರೆ ಮುಗೀತು. ತಮ್ಮದೇನಿದ್ದರೂ ಬರುಬರುತ್ತಾ ಮುಗಿಯುವ ಕಾಲ ಎನ್ನುವ ಅಪ್ಪಟ ಭಾರತೀಯ ಮಧ್ಯಮ ವರ್ಗದ ಮನಸ್ಸು ಅವನದ್ದು.
ನಾ ನೋಡಿದಂತೆ ಈ ಸೆಟ್ಲ್ ಎನ್ನುವುದು ಬಹಳಷ್ಟು ಗಂಡಸರ ಬದುಕನ್ನು ನುಂಗಿ ಹಾಕಿದೆ. ಎಷ್ಟೊ ಜನ ಅದಕ್ಕೆ ಈಡಾಗದೆ ಎಕ್ಕುಟ್ಟಿ ಹೋದವರಿದ್ದಾರೆ. ಎಲ್ಲ ಗಂಡಸರಲ್ಲೂ ಏನಾದರಾಗಲಿ ಇಪ್ಪತ್ತೈದಾಗುವ ಹೊತ್ತಿಗೆ ಸೆಟ್ಲಾಗಿ ಬಿಡಬೇಕು ಎನ್ನುವ ತಹತಹ. ದಿನವೂ ಅದಕ್ಕಾಗಿ ಒಂದು ಯೋಜನೆ, ಲಭ್ಯವಾಗದ ಫಲಿತಾಂಶ, ಎಡವಟ್ಟಾಗುವ ಆಥಿಕ ಪರಿಸ್ಥಿತಿ, ಸಕಾಲಕ್ಕೆ ಕೈಗೆ ದಕ್ಕದ ಇನ್‍ಫ್ಲೂಯೆನ್ಸು, ರಾಜಕೀಯ ಹಲವು ಹಳವಂಡದಲ್ಲಿ ಎಲ್ಲಾ ಇದ್ದೂ ಲಭ್ಯವಾಗದ ಅವಕಾಶದ ಮಧ್ಯದಲ್ಲಿ ಹತಾಶವಾಗುವ ದಿನಗಳು, ಅರ್ಹತೆಯಿದ್ದರೂ ಇನ್ಯಾರದ್ದೋ ಪಾಲಾಗುವ ವಾಸ್ತವದ ಅಸಹಾಯಕತೆಗಳು, ತೀರ ಕೈಯಿಂದ ದುಡ್ಡು ಹಾಕಿ ಏನಾದರೂ ಮಾಡಲು ಅಷ್ಟಾಗಿ ಬೆಂಬಲವಿಲ್ಲದ ಮನೆಯ ಪರಿಸ್ಥಿತಿ, ಇದ್ದರೂ ತೆಗೆದುಕೊಳ್ಳಲು ಆಗದ ರಿಸ್ಕು ಅದಕ್ಕೆ ಬೇಕಾದ ಮೀಟರು ಇಲ್ಲದಿರುವುದು, ಇವನು ಏನಾದರೂ ಮಾಡಿ, ಏನಾದರೂ ಸಾಧನೆ ಮಾಡಿ ದುಡ್ಡು ದುಗ್ಗಾಣಿ ಮಾಡಿಕೊಂಡು ಬಿಟ್ಟರೆ..? ಹಾಗೆ ದುಡಿದು ನಮಗಿಂತ ಮೇಲೆ ಹೋದರೆ..? ಹೀಗೆ ಹೋಗಲೂ ಬಿಡದಂತೆ ಕಾಲೆಳೆಯುವವರ ಮಧ್ಯೆ ಏಗಬೇಕಾಗುವ ಅನಿವಾರ್ಯದ ಹಳವಂಡಗಳು, ಎಷ್ಟೊ ಜನಕ್ಕೆ ಹುಟ್ಟಾ ಬುದ್ಧಿವಂತಿಕೆ ಕೈ ಕೊಟ್ಟು ಮಾರ್ಕು ಅಷ್ಟಕಷ್ಟೆ ಆಗಿ ಎಲ್ಲೂ ನೆಲೆ ನಿಲ್ಲದ, ನಿಲ್ಲುವಂತಿದ್ದರೂ ಈ ನೌಕರಿ ಜೀವನ ಪೂರ್ತಿ ಹೀಗೆ ಹಣಿಯುತ್ತದೆನ್ನುವ ಕೆಲಸಗಳು.. ಹೀಗೆ ಒಟ್ಟಾರೆ ಬದುಕು ಸ್ಥಿರಗೊಳ್ಳಬೇಕು ಎನ್ನುವ ಹಂತದಲ್ಲಿ ಬಡಿದಾಟ ಪುರುಷರ ಬದುಕಿನಲ್ಲಿ ಅನಿವಾರ್ಯವಾ ಅಥವಾ ಹೀಗೆ ನೌಕರಿ ಮಾಡಿ ಮನೆ ಸಂಸಾರ ಮಾಡಲು ಗಂಡಸು ದುಡಿಯಲೇಬೇಕು ಎನ್ನುವುದನ್ನು ಮಾಡಿಟ್ಟಿದ್ದರಿಂದ ಆದ ಒಟ್ಟಾರೆ ಈ ಜೀವನ ಸುರುಳಿಯ ಗಂಡಸರ ಅಪಸವ್ಯದ ದುರಂತವಾ ಗೊತ್ತಿಲ್ಲ.
ಆದರೆ ಈ ಹಂತವನ್ನು ಹೇಗೋ ಮಾಡಿ ಪೂರೈಸಿ ಕಾಲೂರಿಕೊಂಡು ಬಿಡುವ ಗಂಡಸು ನಂತರ ಕುಡಿತ, ತಲಬುಗಳು, ಬರೀ ಹಣ ಮಾಡುವ ಹುಕಿ ಇಂತಹ ಕುಟುಂಬಕ್ಕೆ ಕಿರಿಕಿರಿಯಾಗುವ ವ್ಯವಸ್ಥೆಗಳಿಗೆ ತಗುಲಿಕೊಳ್ಳದಿದ್ದರೆ ಇದ್ದುದ್ದರಲ್ಲೇ ಆರ್ಥಿಕ ಸಧೃಢತೆಗಾಗಿ ನೌಕರಿಯ ಹೆಂಡತಿ ಇರಲಿ ಎನ್ನುವವರಂತೂ ಬದುಕನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡು ಕೂತುಬಿಡುತ್ತಾರೆ.
ಹಾಗೆ ತೀರ ಮೇಲ್ಮಟ್ಟದಲ್ಲಿ ಅಲ್ಲದಿದ್ದರೂ ತಕ್ಕ ಮಟ್ಟಿಗೆ ಸಾಕು ಎನ್ನುವ ಹಾಗೆ ವಯಸ್ಸಿಗೂ ಮೊದಲೆ ಒಂದಷ್ಟು ದುಡ್ಡು ದುಗ್ಗಾಣಿ ಸೈಟು ಎಂದೆಲ್ಲಾ ಮಾಡಿಕೊಳ್ಳುತ್ತಲೆ ಸಾಗಿದ ಬಾಬಣ್ಣ ಮೊದಲಿನಂತೆ ನಿಯಮಿತವಾಗಿ ಲಭ್ಯವಾಗುತ್ತಿರಲಿಲ್ಲವಾದರೂ ಆಗೀಗ "ಸಿಟ್ಟಿಂಗ್" ಜಾರಿ ಇದ್ದೇ ಇತ್ತು. ಕಳೆದ ವರ್ಷ ಇನ್ನೇನು ಮಗಳು ಕೈಗೆ ಬಂದಳು, ಮಗನೂ ಇಂಜಿನಿಯರಿಂಗ್ ಓದುತ್ತಿದ್ದಾನೆ ಎಂಬೆಲ್ಲ ಖುಶಿಯ ಬದುಕಿನ ಅವಗಾಹನೆಗಳೊಂದಿಗೆ ಬಿಯರ್ ಮೊಗೆಗೆ ಎಂದಿನಂತೆ ಕೈ ಚಾಚಿ, ಅದರ ನೊರೆ ಆರುವ ಮೊದಲೇ ಸಿಡಿಲಿನಂತೆ ಬಂದ ಸುದ್ದಿಗೆ ಬಾಬಣ್ಣ ತೀರ ಕುಸಿದು ಹೋದ.
"ಏನ್ ಮಾಡ್ಲಿ ಗೊತ್ತಾಗ್ತಿಲ್ಲ.. ಮಗಳು ಹೇಳಿದ್ರೆ ನಾನೇ ಮದುವೆ ಮಾಡ್ತಿದ್ದೆ. ಮಾರಾಯ ಓಡಿಹೋಗಿದಾಳೆ. ಎಲ್ಲಿ ಹೋದ್ಲೊ ಎನೋ.." ಎನ್ನುತ್ತಾ ಕುಸಿದಿದ್ದ ಬಾಬಣ್ಣ ಒಂದೇ ದಿನಕ್ಕೆ ತೊಂಬತ್ತು ವಯಸ್ಸಿನಂತಾಗಿ ಹೋಗಿದ್ದ.
ಹೀಗೆ ಐವತ್ತು ಅರವತ್ತರ ಮಧ್ಯ ವಯಸ್ಸಿನ ಗಂಡಸು ಇನ್ನೇನಾದರೂ ಸುಧಾರಿಸಿಕೊಂಡಾನು ಆದರೆ ಹೀಗೆ ಮಗಳು ಓಡಿ ಹೋಗುವ ಉಪದ್ಯಾಪಿತನವಿದೆಯಲ್ಲ. ಅದರಂತಹ ದೊಡ್ಡ ಮಾರಕ ಇನ್ನೊಂದಿರಲಿಕ್ಕಿಲ್ಲ ಅವನ ಬದುಕಿಗೆ. ಎಲ್ಲಿ ಯಾರಿಗೆ ಏನು ಹೇಳುವುದು ಎನ್ನುವುದು ಒಂದೆಡೆಯಾದರೆ ಭವಿಷ್ಯಕ್ಕಾಗಿ ಮಾಡಿಕೊಂಡ ಕನಸು ಯೋಜನೆ ಎಲ್ಲದಕ್ಕೂ ಆಕೆ ಒಂದೇ ಗುಕ್ಕಿನಲ್ಲಿ ಬೆಂಕಿ ಇಟ್ಟು ಬಿಟ್ಟಿರುತಾಳೆ. ಎಲ್ಲಾ ಒಂದೇ ಹೊಡೆತಕ್ಕೆ ಹಳ್ಳ ಹಿಡಿದಿರುತ್ತವೆ. ಅಸಲಿಗೆ ಅವನಿಗೆ ಸಮಜಾಯಿಸಿಕೊಳ್ಳಲೂ ಏನೂ ಉಳಿದಿರುವುದೇ ಇಲ್ಲ. ಎಂದಿನಂತೆ ಇಂಥಾ ಸಮಯದಲ್ಲೂ "ನೀವು ಸರಿಯಾಗಿ ಮಗಳಿಗೆ ಬುದ್ಧಿ ಹೇಳಿದ್ದರೆ ಹಿಂಗಾಗ್ತಿರಲಿಲ್ಲ. ಅದಕ್ಕೆ ಓಡಿ ಹೋದಳು" ಎನ್ನುವ ಹೆಂಡತಿಯೂ ಇದ್ದು ಬಿಟ್ಟರೆ ಅವನದು ಅಕ್ಷರಶ: ಬದುಕು ಮೂರಾ ಬಟ್ಟೆಯಾಗುವುದರಲ್ಲಿ ಸಂಶಯವೇ ಇರುವುದಿಲ್ಲ.
ಉಳಿದ ಮಗಳ  ಮಗನ ಕತೆ ಮುಂದಿನ ವಾರಕ್ಕಿರಲಿ.
ಇಲ್ಲದಿದ್ದರೆ ಹೀಗೆ ಎಲ್ಲೆಡೆಯೊ ನಡೆಯುವ ಕತೆಗಳನ್ನು ನಾನು ಪಿಸುಗುಡುವುದಾದರೂ ಹೇಗೆ..?

Sunday, June 4, 2017

ಹಾಗೊಂದು ಸಂಯಮ ಬರುತ್ತಾದರೂ ಹೇಗೆ..?

ತೀರ ಬೆಂಗಳೂರಿನ ಕತ್ತಲ ರಾತ್ರಿಗಳಿಗೆ ಬೆಳಗಾಗುವ ಹೊತ್ತು ಅದು. ಊಟ ಮುಗಿಸಿ ಹೋಟೆಲ್‍ನಿಂದ ಹೊರಬಂದಾಗ ಮಧ್ಯರಾತ್ರಿ ಕಳೆದುಹೋಗಿತ್ತು. ಬಂದಾಗ ತುಂಬಾ ಗಾಡಿಗಳನ್ನು ಪಾರ್ಕ ಮಾಡಿದ್ದರಿಂದ ನನ್ನ ಕಾರನ್ನು ಸುಮಾರು ದೂರದ ಹಿಂದಿನ ಜಾಗದಲ್ಲಿ ನಿಲ್ಲಿಸಿದ್ದೆ. ಈಗ ಅಲ್ಲಿಗೆ ಹೋಗಲು ಸಾಕಷ್ಟು ಕತ್ತಲಿತ್ತು. ಮೊಬೈಲ್ ಆನ್ ಮಾಡುವಷ್ಟರಲ್ಲಿ ಪ್ರಖರ ಬೆಳಕಿನ ಬ್ಯಾಟರಿ ಬೀರುತ್ತಾ ಈ ಮೊದಲೇ ನೋಡಿದ್ದ ಸಾಕಷ್ಟು ವಯಸ್ಕನಾದ, ಬದುಕಿನ ಬವಣೆಗೆ ಹಣ್ಣಾಗಿದ್ದ ಗೂರ್ಖ ಅಲ್ಲಿಂದ ಬೆಳಕು ಬೀರುತ್ತಾ ದಾರಿ ತೋರುತ್ತಾ ಹಿಂದಿಂದೇ ಬಂದ. ಅವನ ಸೇವೆ ಮತ್ತು ಮುತುವರ್ಜಿಯನ್ನು ನಾನು ಕಾರು ನಿಲ್ಲಿಸುವಾಗಲೇ ಗಮನಿಸಿದ್ದೆ. ನಮಗೆ ಆಗತ್ಯ ಇದೆಯೋ ಇಲ್ಲವೋ ಅವನು ಬಂದ ಕೂಡಲೇ ದಾರಿ ತೋರುತ್ತಿದ್ದ. ಪಾರ್ಕಿಂಗ್‍ನಲ್ಲಿ ಸಾಕಷ್ಟು  ಜಾಗ ಇದ್ದಾಗ್ಯೂ ಗಾಡಿ ಸೇಫಾಗಿ ನಿಲ್ಲಲಿ ಎಂದು ಕಾಳಜಿ ವಹಿಸಿದ್ದ.
ಅದನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೆ. ಜೊತೆಗೆ ನಾನು ಕಾರು ನಿಲ್ಲಿಸಿ ಈಚೆ ಬರುತ್ತಿದ್ದಂತೆ ಬೈ ಚಾನ್ಸ್ ಬೇರೆ ಕಾರುಗಳ ಸೈಡ್ ಮೀರರ್ ಟಚ್ ಆಗದಿರಲಿ ಎಂದು ಕಾರಿನ ಎರಡೂ ಕನ್ನಡಿಗಳನ್ನು ಒಳಗೆ ತಿರುಗಿಸಿ ಇರಿಸಿದ್ದ. ನಾನು ನಿಲ್ಲಿಸಿದ ಜಾಗದ ಹಿಂಭಾಗ ಕ್ರಮೇಣ ಇಳಿಜಾರಾಗುತ್ತ ಸಾಗಿದ್ದರಿಂದ ಏನೂ ಹೇಳದಿದ್ದರೂ ಟಯರಿಗೆ ಸಪೆÇೀರ್ಟು ಕೊಡಬಲ್ಲಷ್ಟು ಸೈಜಿನ ಕಲ್ಲನ್ನು ಮುಂದಿನ ಟಯರುಗಳ ಕತ್ತಿಗೆ ಸಿಕ್ಕಿಸಿದ್ದ. ತುಂಬ ಆದರದಿಂದ ನಿಂತು ಸೆಲ್ಯೂಟ್ ಹೊಡೆದು, ತನ್ನ ಖುರ್ಚಿಯತ್ತ ನಡೆಯತೊಡಗಿದ್ದ ಆ ವಯೋವೃದ್ಧನ ಕಾರ್ಯ ಕ್ಷಮತೆ ನಿಜಕ್ಕೂ ಅಚ್ಚರಿ ಮೂಡಿಸುವ ವೈಖರಿ. ಸಾಮಾನ್ಯವಾಗಿ ಇಂತಲೆಲ್ಲಾ ಟಿಪ್ಸು ಚೆನ್ನಾಗಿ ಕೊಡಲೆನ್ನುವ ಕಾರಣಕ್ಕೆ ಮಾಡುವ ಆದರಣೆ, ಅದಕ್ಕಾಗಿ ತೋರಿಸುವ ದೇಹ ಭಾಷೆ ಸುಲಭಕ್ಕೆ ಗೊತ್ತಾಗಿ ಬಿಡುತ್ತದೆ. ಅವರ ಅಂಗಿಕ ಅಭಿನಯಗಳೇ ಸಾಕು ಇವನ ಅತಿ ವಿನಯ ಧೂರ್ತತೆಯ ಲಕ್ಷಣ ಎನ್ನಿಸಲು. ಹಾಗಾಗಿ ಸಾಮಾನ್ಯವಾಗಿ ಬಾರ್ ಸರ್ವರು ಮತ್ತು ಇಂತಹ ವಾಚಮೆನ್‍ಗಳು ಅವರ ಕೆಲಸದಲ್ಲಿನ ಆಸ್ಥೆ ಸುಲಭಕ್ಕೆ ತೋರಿಸಿಕೊಂಡು ಬಿಡುತ್ತಿರುತ್ತಾರೆ.
ಆದರೆ ಅಂತಹದ್ದೊಂದು ಭಾವ ಅಥವ ತೋರ್ಪಡಿಕೆ ಏನೂ ಇಲ್ಲದ ಮನುಶ್ಯ ಯಾವ ಮಾತೂ ಆಡದೆ ಕಡೆ ಪಕ್ಷ ಎಲ್ಲೆಡೆ ಆಗುವಂತೆ " ನಾನು ಎಷ್ಟೆಲ್ಲಾ ಅಪ್‍ಡೇಟ್ ಆಗಿ ಇರಿಸಿದೆ ನೋಡಿದಿರಾ ಎನ್ನುವ ಒಂದು ಲುಕ್ ಕೊಟ್ಟು ಹೋಗುವ ಸೀನ್ ಆದರೂ ಇರುತ್ತದಲ್ಲ. ಅದ್ಯಾವುದೂ ಘಟಿಸಲಿಲ್ಲ...". ಕಾರು ಸೇಫಾಯಿತು ಎನ್ನಿಸಿದೊಡನೆ ಮತ್ತೆ ಆಚೆಯಿಂದ ವಾಹನ ಬಂದಾವೆಂಬ ನಿರೀಕ್ಷೆಯಲ್ಲಿ ಗೇಟಿನ ಪಕ್ಕ ನಿಂತು ಬಿಟ್ಟಿದ್ದ. ನಾನು ಗಮನಿಸಿದಂತೆ ತುಂಬ ಕಡಿಮೆ ಜನ ಹಾಗೆ ಇಂತಹ ಕೆಲಸದಲ್ಲಿ ವೃತ್ತಿಪರವಾಗಿರುತ್ತಾರೆ. ಸಿಟ್ಟಿಂಗ್ ಕೂತ ಮಧ್ಯದಿಂದ ನಾನೊಮ್ಮೆ ಎದ್ದು ಬಂದಾಗ ಅವನು ಕೂಡಲೇ ಕಾರಿನ ಬಳಿ ಸಾರಿ ನಿಂತು ತೆಗೆಯುತ್ತಾರಾ ಹೊರಡುತ್ತಾರಾ.. ಎನ್ನುವ ಪ್ರಶ್ನಾರ್ಥಕ ಭಾವ ನೋಡಿ... ಕಾಯ್ದಿದ್ದ. ನಾನು ಮಾತಾಡುತ್ತಿದ್ದೇನೆ ಎನ್ನುವಂತೆ ...ಸುಮ್ಮನೆ ಮೊಬೈಲ್ ತೋರಿಸಿ... ಒಳ ಬಂದಿದ್ದೆ.
ಮಧ್ಯ ರಾತ್ರಿಯ ಹೊತ್ತಿನಲ್ಲಿ ಕಾರು ತೆಗೆಯುವ ಮೊದಲು ಮತ್ತೆ ಬಂದವನೇ ತುಂಬ ನಿಧಾನಕ್ಕೆ ಅದರೆ ಕರೆಕ್ಟಾಗಿ ಮೀರರ್ ಸರಿ ಮಾಡಿ, ಎದುರಿಗಿನ ಗ್ಲಾಸನ್ನು ಕೂಡಲೇ ಪೇಪರ್‍ನಲ್ಲಿ ಒರೆಸಿ, ಗಾಲಿಗೆ ಸಿಕ್ಕಿಸಿದ್ದ ಕಲ್ಲುಗಳನ್ನು ತೆಗೆದು ಎಲ್ಲಾ ಸರಿಯಾಯಿತೆನ್ನುವ ಫೀಲು ಬರುತ್ತಲೆ, ವಿನಾಕಾರಣ ಊರಿಗೆಲ್ಲ ಕೇಳಿಸುವಂತೆ ವಿಜಿಲ್ ಊದದೆ ಪಕ್ಕ ನಿಂತು ಹಲ್ಲು ಗಿಂಜದೆ ಸರಿದು ಹೋಗಿದ್ದು ನನಗಿನ್ನೂ ನೆನಪಿದೆ. ನಿರ್ವಿಕಾರವಾಗಿ ಇದೆಲ್ಲಾ ನಾನು ಪ್ರತಿ ಗಾಡಿಗೂ ಮಾಡುತ್ತೆನ್ನೆನ್ನುವ ಅವನ ನಿರ್ವಿಕಾರತೆ ಮತ್ತು ಅನಿವಾರ್ಯ ಎನ್ನುವ ಭಾವ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಒಮ್ಮೆ ತಾನು ಮುತುವರ್ಜಿ ವಹಿಸಬೇಕಾದ ಕಾರ್ಯ ಮುಗಿಯುತ್ತಿದ್ದಂತೆ ಅವನು ಗೇಟಿನತ್ತ ಸರಿದು ಹೋಗಿದ್ದ.
 ಆದರೆ ಅವನು ಕಾರಿನ ಬಾಗಿಲು ಹಾಕುವಾಗ ಮತ್ತು ಗೇಟಿನಿಂದ ಇನ್ನೇನು ಹೊರ ಬರಬೇಕು ಆಗ ನಿಂತು ತುಂಬು ಆಸ್ಥೆಯಿಂದ ಹೊಡೆದ ಸೆಲ್ಯೂಟು ಎಂತವನಿಗೂ ಮುಜುಗರ ಉಂಟು ಮಾಡುವ ಹಾಗಿತ್ತು. ತೀರ ವೃತ್ತಿ ಪರ ಬಿಹೇವಿಯರ್ ಅಂತಾರಲ್ಲ ಹಾಗೆ. ನಾನು ಆ ರಾತ್ರಿಯಲ್ಲೂ ಸುಮ್ಮನೆ ಒಮ್ಮೆ ಕಾರು ನಿಲ್ಲಿಸಿದೆ. ಅವನ ಮುಖದಲ್ಲಿ ಯಾವುದೇ ಬದಲಾವಣೆಗಳಿರಲಿಲ್ಲ. ಅದೇ ವಿನಯ ಮತ್ತು ಆಪ್ತತೆ ಜೊತೆಗೆ ಗೌರವ..
ಕಿಟಕಿಯ ಗಾಜಿಳಿಸಿದವನು, ಅವನು ಎದುರಿಗೆ ಬರುತ್ತಲೆ ಸುಮ್ಮನೆ ಅವನ ಕೈಯ್ಯನ್ನು ಎರಡೂ ಕೈಯ್ಯಲ್ಲಿ ಹಿಡಿದು ನುಡಿದಿದ್ದೆ..
" ಇಷ್ಟೊಂದು ಸೆಲ್ಯೂಟ್ ಹೊಡೆಯಲೇ ಬೇಡಿ ತಾತಾ... ನಾವು ಅಷ್ಟೆಲ್ಲಾ ಗೌರವಕ್ಕೆ ಅರ್ಹರಲ್ಲ.." ಅವನು ಅಷ್ಟೇ ವಿನಯದಿಂದ ಸ್ವಲ್ಪವೇ ಬೊಚ್ಚಾಗಿದ್ದ ಬಾಯಿ ಅಗಲಿಸಿ ಬರಿದೇ ನಕ್ಕ. ನಾನು ಮತ್ತೊಮ್ಮೆ ನುಡಿದೆ..
" ನಿಜ.. ನೀವು ಕೊಡುವ ಈ ಮಟ್ಟಿಗಿನ ಗೌರವಕ್ಕೆ ಎಲ್ಲರೂ ಅರ್ಹರಿರೊದಿಲ್ಲ.. ತಾತಾ ಅಷ್ಟೊಂದು ದೀನರಾಗಿ ನಿಲ್ಲಬೇಡಿ.." ಎಂದೆ. ಸುಮಾರು ಎಪ್ಪತ್ತು ದಾಟಿದ ದೇಹ, ಬಸವಳಿದ ಮುಖದಲ್ಲೂ ಒತ್ತಾಯದ ಕರ್ತವ್ಯ ಹುಟ್ಟಿಸುತ್ತಿದ್ದ ಆಪ್ತತೆ, ಆ ವಯಸ್ಸು, ಮುಖದ ಮೇಲಿದ್ದ ಅನಿವಾರ್ಯತೆ, ನಿಸ್ಸಾಹಯಕತೆ, ದಪ್ಪ ದೇಹ, ಮಾಗಿದ ಜೀವ, ಜಗತನ್ನೆಲ್ಲಾ ಬೆತ್ತಲೆಗಣ್ಣುಗಳಿಂದ ನೋಡಿ ಹಣ್ಣಾಗಿರುವ ಅನುಭವಿ ಜೀವಕ್ಕೆ ಎಂಥವನಿಗೂ ಸೆಲ್ಯೂಟು ಹೊಡೆಯುವ ಅನಿವಾರ್ಯತೆ. ನಾವು ಏನಾದರೂ ಕೊಡುತ್ತೇವೆಯೋ ಬಿಡುತ್ತೇವೋ ಅದು ಬೇರೆ ವಿಷಯ ಆದರೆ ಹೋಟೆಲಿನವರು ಕೊಡುವ ಪಗಾರಿಗೆ ಮುದ್ದಾಮ್ ಮಾಡಲೇ ಬೇಕಾದ ನೌಕರಿ ಎಂದು ಆತ ಆ ಅಪರಾತ್ರಿಯಲ್ಲೂ ಅದೇ ಆಪ್ತತೆಯಿಂದ ಮನುಶ್ಯರಿಗೂ ಗಾಡಿಗೂ ಕೊಡುತ್ತಿದ್ದ ಮುತುವರ್ಜಿ...ಉ¥sóï.
ದೂರದ ದಿಲ್ಲಿಯಿಂದ ಬಂದು ಇಲ್ಲಿ ಬದುಕು ಕಟ್ಟಿಕೊಂಡಿದ್ದಾನೆ. ಅವನ ಈ ದುಡಿಮೆ ಮರುದಿನದ ಬೆಳಿಗೆಗೆ ಮನೆಯಲ್ಲೂ, ದೂರದಲ್ಲಿ ಓದುತ್ತಿರುವ ಮಗಳಿಗೂ ಬೆಳಕಾಗುತ್ತಿದೆಯಂತೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಮಂಚದಲ್ಲಿರುವ ಹೆಂಡತಿ ಉಸುರು ನಿಂತು ಹೋಗುವ ಸಮಯದಲ್ಲೂ, ಯಾವ ಭಾವ ವಿಕಾರವಿಲ್ಲದೆ ಮಧ್ಯ ರಾತ್ರಿ ಕೆಲಸಕ್ಕೆ ನಿಲ್ಲುವ ಆ ಸಂಯಮ ದಕ್ಕುತ್ತದೆಯಾದರೂ ಹೇಗೆ..? ಮುಂದಿನ ಕತೆ ಬೇಕಿಲ್ಲ.
ಆ ದೈನೆಸಿತನಕ್ಕಿಂತ ಅವರ ವಯಸ್ಸು ಮತ್ತು ಅದಕ್ಕೆ ಸಲ್ಲಬೇಕಾದ ಮರ್ಯಾದೆಯನ್ನು ಬಿಟ್ಟು ಜೀವ ಹಿಡಿಯಾಗಿಸಿ ನಿಲ್ಲುವ ಪರಿಸ್ಥಿತಿಯನ್ನೆಲ್ಲ ತುಂಬ ಸಮಯ ನಾನು ನೋಡಲಾರೆ. ಛೇ.. ನಾನು ಕಾರು ನಿಲ್ಲಿಸಿ "ದಾದಾ" ಎಂದು ಕರೆದೆ. ಮತ್ತೊಮ್ಮೆ ಮೇಲಿನಂತೆ ನುಡಿದು ಎರಡೂ ಕೈ ಹಿಡಿದು ಆಪ್ತವಾಗಿ ಅಮುಕಿ ಹೊರಟು ಬಿಟ್ಟೆ. ಹತ್ತಿರದಿಂದ ಒಮ್ಮೆ ಅವನನ್ನು ನೋಡಿ ಕೈಗೆ ಸಿಕ್ಕಷ್ಟು ನೋಟಿನ ಪುಡಿಕೆ ಅವನ ಕೈಗಿಟ್ಟು ಸುಮ್ಮನೆ ಪೆಡಲು ತುಳಿದೆ. ತತಕ್ಷಣಕ್ಕೆ ಗ್ಲಾಸು ಏರಿಸಿ ಅವನೊಂದಿಗಿನ ಸಂಪರ್ಕ ಕಡಿದುಕೊಳ್ಳಲು ಮನಸಾಗಲಿಲ್ಲ.
ದೊಡ್ಡ ದೊಡ್ಡ ಹೋಟೆಲು. ಅವುಗಳ ಗೇಟು ಕಂಡಾಗಲೆಲ್ಲಾ ಯಾಕೋ "ಅವರ" ನೆನಪಾಗುತ್ತಲೇ ಇರುತ್ತದೆ.