Tuesday, January 23, 2018

ಮಹಾಪತನ
ಯುದ್ಧ ರಂಗದ ಬಾಗಿಲಿನಲ್ಲಿಯೇ ಇದ್ದ ದಿಬ್ಬದ ಮೇಲೇರಿ ಅದೆಷ್ಟು ಹೊತ್ತಿನಿಂದ ಕುಳಿತಿದ್ದನೋ ದುರ್ಯೋಧನ. ಸಣ್ಣಗೆ ಸುತ್ತುವರೆದು ಕಂಪಿಸುವಂತೆ ಮಾಡುತ್ತಿದ್ದ ಕುಳಿರ್ಗಾಳಿಗೂ ಅವನ ದೇಹ ಅಲಗುತ್ತಿರಲಿಲ್ಲ. ತೀರ ದಿಬ್ಬದ ಮೇಲೆ ಹುಟ್ಟಿಕೊಂಡ ಬಂಡೆಯೊಂದಕ್ಕೆ ಆಕಾರ ಕೊಟ್ಟಂತೆ ಕಾಣುತ್ತಿತ್ತು ಅವನ ಆಕೃತಿ ಆ ಕತ್ತಲಲ್ಲಿ. ಅಸಲಿಗೆ ಅವನಿದ್ದುದು ಹಾಗೇಯೇ ಅಲ್ಲವೇ. ಅಪ್ಪಟ ಕಲ್ಲು ಬಂಡೆಯೇ ಅವನ ದೇಹ. ಅವನ ಬಂಡೆಯಂತಹ ದೇಹದೊಳಗೆ ಇದ್ದ ಮಾನವ ಮಾತ್ರರಿಗೆ ಇರಬಹುದಾಗಿದ್ದ ಅಪರೂಪದ ಮನಸ್ಥಿತಿ ಅವನಿಗೂ ಇದೆ ಎನ್ನುವುದನ್ನು ಮಾತ್ರ ಕೊನೆಯವರೆಗೂ ಯಾರೂ ಅರ್ಥೈಸಲೇ ಇಲ್ಲವಲ್ಲ ಎನ್ನುವುದೇ ವಿಪರ್ಯಾಸ. ಎಲ್ಲ ಗೊತ್ತಾಗುತ್ತಿದ್ದ,ಗೊತ್ತಾಗುತ್ತಿದ್ದರೂ ಏನೂ ಮಾಡಲಾಗದ ಕರ್ಣನೊಬ್ಬ ಮಾತ್ರ ಒಳಗೊಳಗೆ ತೊಳಲುತ್ತಾ ಅವನ ಸುತ್ತ ಕವಚವಾಗಿ ನಿಂತುಬಿಟ್ಟಿದ್ದ. ಅವನದೇನಿದ್ದರೂ ಮಿತ್ರ ವಾಖ್ಯೆ ಮತ್ತು ರಾಜವಾಖ್ಯೆ ಪರಿಪಾಲನೆ. ಅದರಾಚೆಗೆ ಅವನೇನನ್ನೂ ಯಾವತ್ತೂ ಯೋಚಿಸಿದವನೇ ಅಲ್ಲ.
ಮೈಲು ದೂರದುದ್ದಕ್ಕೂ ಮಿಣಿ ಮಿಣಿ ಬೆಳಕು ಕಾಣಿಸುತ್ತಿದೆ. ದೂರದೂರದವರೆಗೆ ಬೀಡು ಬಿಟ್ಟಿರುವ ಸೈನ್ಯದಲ್ಲಿರುವ ಪ್ರಾಣಿಗಳ ಕೆನೆತದ ಶಬ್ದವೂಗೊರಸಿನ ಗೆರೆತವೂ ಜೊತೆಗೆ ಭಾರಿ ಮೈಯ್ಯ ತೂಕದ ಆನೆಗಳ ಸಣ್ಣನೆಯ ಕದಲಿಕೆಯ ಚಿತ್ಕಾರವೂ ಕೇಳಿಸುತ್ತಿದ್ದರೆ ಅಪರಾತ್ರಿಯ ಆ ಹೊತ್ತಿಗೆ ಮೈಲುಗಟ್ಟಲೇ ಹೂಡಿದ್ದ ಬಿಡಾರದ ಕಡೆಯಿಂದ ಸ್ಪಷ್ಟ ಗೊರಕೆಯ ಸದ್ದುಗಳೂ ಕೇಳಿಬರುತ್ತಿದ್ದವು. ಅದಿನ್ನು ಎಲ್ಲರಿಗೂ ಕೊನೆಯ ರಾತ್ರಿ. ನಾಳೆಯಿಂದ ಯಾವ ಬಿಡಾರದಲ್ಲಿ ಯಾರಿರುತ್ತಾರೋ ಇಲ್ಲವೋ ಸ್ವತ: ಆ ಬಿಡಾರಗಳಿಗೂ ಗೊತ್ತಿರುವುದಿಲ್ಲ. ಸಂಜೆಯ ಹೊತ್ತಿಗೆ ಎಷ್ಟೊ ಕಡೆಯ ಬಿಡಾರಗಳೂ ಉಳಿದಿರುವುದಿಲ್ಲ. ಇವತ್ತಿನ ಶಿಸ್ತು ಮತ್ತು ನಿರುಮ್ಮಳತೆಯೇ ಕೊನೆ. ನಾಳೆಯಿಂದ ಕಾಲಿಟ್ಟಲ್ಲೆಲ್ಲ ಹೆಣದ ವಾಸನೆ ಜೊತೆ ಅದರ ಶಿಥಿಲವೂ ಅಡರತೊಡಗುತ್ತದೆ.
ಇವತ್ತು ನೆಮ್ಮದಿಯಾಗಿರುವವರಾರು ನಾಳೆಯಿಂದ ನಿದ್ರಿಸಲಾರರು. ಎಲ್ಲೆಡೆಯಲ್ಲಿ ಉರಿಸಿಟ್ಟಿದ್ದ ದೊಂದಿಗಳೂ ಆರುವ ಕೊನೆಯ ಹಂತದಲ್ಲಿವೆ. ಅಲ್ಲೆಲ್ಲೋ ಇಷ್ಟು ಬೆಳಕು ಹೊರತುಪಡಿಸಿದರೆಅಧಿಕಾರಿ ವರ್ಗದ ಡೇರೆಗಳ ಕಾವಲುಗಾರರ ಕದಲಿಕೆಗಳ ಆಯುಧಗಳ ತಾಕಲಾಟದ ಶಬ್ದಗಳ ಹೊರತು ಉಳಿದೆಲ್ಲಾ ಅಸಹನೀಯ ಮೌನವೇ. ಅದೊಂದು ರೀತಿಯ ಬಿರುಗಾಳಿಗೂ ಮುನ್ನಿನ ಪ್ರಶಾಂತತೆ. ಅದು ಮನಸ್ಸಿಗೂ ಮೈಗೂ ಯಾವ ರೀತಿಯಲ್ಲೂ ಖುಶಿಯನ್ನೂನೆಮ್ಮದಿಯನ್ನೂ ಕೊಡುವುದಿಲ್ಲ. ನೆಮ್ಮದಿಯನ್ನು ಕದಡುವ ಪ್ರಶಾಂತತೆ ಅದು. ಸಾವಿರ ಚಂಡಮಾರುತಕ್ಕೂ ಮೊದಲಿನ ಶೀತಲತೆ ಅಲ್ಲೆಲ್ಲಾ ಹರಡಿಕೊಂಡಿದ್ದು ದುರ್ಯೋಧನನ ಗಮನಕ್ಕೆ ಬರುತ್ತಿತ್ತು. ಅದಕ್ಕಾಗೇ ಇರಬೇಕು. ಸರಿಯಾಗಿ ಮತ್ತು ನಿರಂತರವಾಗಿ ಯಾವೊಬ್ಬ ಸೈನಿಕನೂ ಗೊರಕೆ ಹೊಡೆಯುತ್ತಿಲ್ಲ. ಕೇಳಿಸುತ್ತಿದ್ದ ಹಾಗೆ ಮಗ್ಗಲು ಬದಲಿಸಿ ಮಲಗುವ ಮುಲುಗಾಟದ ಸದ್ದು ಕೇಳಿಸುತ್ತಿವೆ. ಅರಿವಾಗದ ಆಂದೋಳನೆ ಅವರನ್ನೆಲ್ಲಾ ಕಾಡುತ್ತಿರುವುದು ಅವನಿಗೆ ಗೊತ್ತಾಗುತ್ತಲೇ ಇದೆ. ಆ ಕ್ಷಣಕ್ಕೆ ತಮಗೆ ಮಾತ್ರ ಏನಾಗುವುದಿಲ್ಲ ಈ ಯುದ್ಧದಲ್ಲಿ ಎಂದೇ ಮನಸ್ಸನ್ನು ಪ್ರತಿಯೊಬ್ಬನೂ ನಂಬಿಕೊಂಡು ಗುಂಡಿಗೆ ಗಟ್ಟಿಗೊಳಿಸಿಕೊಳ್ಳುತ್ತಿದ್ದರೂ ಮನಸ್ಸು ಅಧಿರವಾಗುತ್ತಿದ್ದುದರ ಫಲವೇ ಈ ನಿಶಬ್ದ ಅಶಾಂತಿ.
ಆದರೆ ಅದೆಲ್ಲವನ್ನು ಇವತ್ತು ನಾಳೆಯೂ ಸಹಜವಾಗಿ ತೆಗೆದುಕೊಳ್ಳಬಲ್ಲವನು ತಾನು ಮಾತ್ರ. ಅಗಾಧವಾದ ನೂರಾರು ಎಕರೆ ಪ್ರದೇಶದ ಕುರುಕ್ಷೇತ್ರದ ಅಂಗಳದಲ್ಲಿ ಆದಷ್ಟು ದಿಬ್ಬವನ್ನೆಲ್ಲಾ ಅಗೆದು ಸಮತಟ್ಟು ಮಾಡಿದ್ದರೂ ರಾತ್ರಿಯ ಕಾವಳದ ಬೆಳಕಿನಲ್ಲಿ ಅದರ ಉಬ್ಬು ತಗ್ಗು ವಿಕಾರವಾಗೇ ಗೋಚರಿಸುತ್ತಿದೆ. ನಾಳೆಯಿಂದ ಈ ನೆಲ ನೆಲವಾಗಿರುವುದಿಲ್ಲ. ರಾತ್ರಿಗೂ ಮುನ್ನವೇ ಅಲ್ಲಿ ನಾಯಿ ನರಿಗಳ ಸಂತೆ ನೆರೆಯುವುದು ನಿಶ್ಚಿತ. ಇದೆಲ್ಲ ಚಿತ್ರಣ ಅವನ ಕಣ್ಣ ಮುಂದೆ ಬರುತ್ತಲೇ ಇತ್ತು. ಒಮ್ಮೆ ಎಡಭಾಗದಲ್ಲಿ ಬೀಡುಬಿಟ್ಟಿದ್ದ ತನ್ನ ಕಡೆಯವರೆನ್ನಲಾದ ಸೈನ್ಯದವರ ಕಡೆಗೆ ನೋಡಿದ. ಅದರ ಸಾಲು ಇನ್ನೂ ದೊಡ್ಡದಿತ್ತು.
ನಿಜ... ಕರ್ಣ ಹೇಳಿದಂತೆ ತನ್ನ ಕಡೆಯಲ್ಲಿ ಬಲಾಬಲವೇನೂ ಕಡಿಮೆ ಇಲ್ಲ. ನಾಳೆಯೋ ನಾಡಿದ್ದೋ ಯುದ್ಧ ಅವ್ಯಾಹತವಾಗಿ ನಡೆಯಲಿದೆ. ಈಗಲೂ ತನ್ನನ್ನು ಕಾಡುತ್ತಿರುವುದು ಯುದ್ಧ ಭಯ ಅಥವಾ ಜೀವಭಯವಂತೂ ಅಲ್ಲವೇ ಅಲ್ಲ. ಭಯ ಎನ್ನುವುದು ತನ್ನ ಎದೆಯಲ್ಲಿ ಮೊಳೆಯಲೇ ಇಲ್ಲ ಆವತ್ತಿಗೂ ಇವತ್ತಿಗೂ ತನ್ನನ್ನು ನೋಡಿಯೆ ಇತರರು ಭಯಪಟ್ಟಿದ್ದಾರೆ. ಆಗುತ್ತಿರುವ ಚಿಂತೆ ಎಲ್ಲಾಈ ಸಿಂಹಾಸನಕ್ಕೆ ಬದ್ಧರು ಎನ್ನುವ ಕಾರಣಕ್ಕೆ ತಾನು ಬಹುವಾಗಿ ನಂಬದಿದ್ದರೂನಂಬಿಕೊಂಡ ಈ ಪಿತಾಮಹ ಭೀಷ್ಮಕೃಪಾಚಾರ್ಯರು ಮತ್ತು ಕುಲಗುರು ದ್ರೋಣರದ್ದೆ. ಭೀಷ್ಮರು ತನ್ನ ಪರವಾಗಿ ಹೊಡೆದಾಡುತ್ತಾರೆ. ದಿನಕ್ಕೆ ಹತ್ತು ಸಾವಿರ ಸೈನಿಕರನ್ನು ತರಿದು ಹಾಕುತ್ತಾರೆ ಅವರು ಅಜೇಯರು. ಅಜೇಯರು ಎಂದು ಲೋಕ ಹೇಳುತ್ತದಾದರೂ ಅವರ ತೋಳ್ಬಲದ ಎದುರಿಗೆ ಇವತ್ತಿಗೂ ಯಾರಿಗೂ ನಿಲ್ಲಲಾಗಿಲ್ಲ ಎನ್ನುವುದೇ ಅಜೇಯತ್ವಕ್ಕೆ ಕಾರಣ. ಪ್ರಕಾಂಡ ಶಪಥಗೈದ ಹಿರಿಯರೆನ್ನುವ ಕಾರಣಕ್ಕೆ ಯಾರೂ ಅವರನ್ನೂ ಧನುಸ್ಸಿನ ಬದಲಿಗೆ ಬೇರೆ ರೀತಿಯಲ್ಲಿ ಎದುರಿಸಲು ಸವಾಲೂ ಹಾಕಿಲ್ಲ. ಇಲ್ಲವಾದರೆ ಯಾವತ್ತಿಗಾದರೂ ಒಂದು ಫಲಿತಾಂಶ ಬಂದುಬಿಡುತ್ತಿತ್ತೇನೋ. ಭೂಮಿಯ ಮೇಲೆ ಯಾವ ರೀತಿಯಲ್ಲೂ ಯಾರೂ ಅಜೇಯರಲ್ಲವೇ ಅಲ್ಲ ಒಂದಲ್ಲ ಒಂದು ರೀತಿಯ ಕೊನೆ ಇದ್ದೇ ಇದೆಯಲ್ಲವೇ..?
ಆದರೆ ಶರವೇಗ ಎನ್ನುವುದನ್ನು ತಾತನಿಗಾಗೇ ಮಾಡಿರಬೇಕು. ಅದಕ್ಕಾಗೇ ಅವರದ್ದು ದಿನಕ್ಕೆ ಹತ್ತಾರು ಸಾವಿರ ಸೈನಿಕರನ್ನು ತರಿದು ಹಾಕುವ ವಿಶ್ವಾಸ. ಹಾಗೆ ನೋಡಿದರೆ ಪ್ರಾಯೋಗಿಕವಾಗಿ ಯಾವ ಬಿಲ್ಲಾಳುಗಳಿಗೂ ದಿನಕ್ಕೆ ಅಷ್ಟು ಸಹಸ್ರ ಶರಗಳನ್ನು ಏಣಿಸಲೇ ಸಾಧ್ಯವಿಲ್ಲ. ಒಂದು ರಥದಲ್ಲಿ ಹಿಡಿಸುವ ಬಾಣತೂಣೀರಗಳ ಸಂಖ್ಯೆಯೇ ಐದಾರು ಸಾವಿರ ದಾಟುವುದಿಲ್ಲ. ಇನ್ನು ಅದೆಲ್ಲಿಂದ ಎಸೆದಾರು. ಆದರೆ ಏಕಕಾಲಕ್ಕೆ ಹತ್ತಾರು ಶರಗಳನ್ನು ಪ್ರಯೋಗಿಸಬಲ್ಲ ಚಾತುರ್ಯದಿಂದ ಭೀಷ್ಮ ಇನ್ಯಾರೂ ಕಾದದಂತೆ ಕಾದುತ್ತಾರೆ ಮತ್ತು ಅಷ್ಟೊಂದು ಪ್ರಮಾಣದಲ್ಲಿ ಶಸ್ತ್ರಾಸ್ತ್ರ ಪ್ರಯೋಗ ಮಾಡುತ್ತಾರೆ. ದಿನವೊಂದಕ್ಕೆ ಎರಡ್ಮೂರು ರಥಗಳನ್ನು ಬದಲಿಸಬಲ್ಲ ಅಗಾಧತೆ ಅವರೊಬ್ಬರದ್ದೆ ಇವತ್ತಿಗೂ. ಹಾಗಾಗೇ ಎದುರಿನ ಬಿಲ್ಲಾಳು ಯಾರಿದ್ದರೂ ಅವರ ವೇಗಕ್ಕೆ ಮರುಅಸ್ತ್ರ ಹೂಡಲಾರದೆ ನೆಗೆದುಬೀಳುತ್ತಾನೆ. ಅವರನ್ನು ಎದುರಿಸಿ ನಿಲ್ಲಲಾಗದಿರುವ ಮತ್ತು ಯಾರೂ ಗೆಲ್ಲದಿರುವ ರಹಸ್ಯವೂ ಅದೆ. ಸಧ್ಯದ ಪರಿಸ್ಥಿತಿಯಲ್ಲಿ ಈ ಯುದ್ಧದಲ್ಲಿ ಜಗತ್ತು ಕಂಡ ಸರ್ವ ಶ್ರೇಷ್ಠ ಅತ್ಯಂತ ಹಿರಿಯ ಯುದ್ಧಾಳು ಅವರೇನೆ. ಭಾರ್ಗವ ರಾಮ ಪರುಶುರಾಮ ಕೂಡಾ ಅವರೆದುರಿಗೆ ಸೆಣಸದೆ ಹಿಂಜರಿಯುವಂತೆ ಮಾಡಿದ್ದು ಇತಿಹಾಸ. ಈಗಲೂ ಅದೇ ನಿಖರ ಶರಸಂಧಾನ ಅವರ ವಿಷೇಷತೆ ಮತ್ತು ತಾಕತ್ತು ಕೂಡಾ ಹಾಗಾಗೇ ಅಜೇಯರು.
ಇಲ್ಲದಿದ್ದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಸಾವಿಲ್ಲದಿರುತ್ತದೆಯೇ..ಕೆಲವೊಬ್ಬರಿಗೆ ಮೊದಲು ಕೆಲವೊಬ್ಬರಿಗೆ ಕೊಂಚ ತಡ ಎನ್ನುವುದು ಸರ್ವಕಾಲಿಕ ಸತ್ಯವೂ ಹೌದು. ಆದರೆ ತನ್ನ ಶತ್ರು ಪಾಳೆಯದಲ್ಲಿ ಯಾರ ಧ್ವಂಸ ಮಾತ್ರದಿಂದಅಂದರೆ ಪಾಂಡವರ ಹರಣದಿಂದ ಮಾತ್ರ ತನ್ನ ಗೆಲವು ಸಾಧ್ಯವೋ ಅವರನ್ನೇ ನಾನು ಮುಟ್ಟುವುದಿಲ್ಲ ಎನ್ನುತ್ತಾರೆ ಸೈನ್ಯದ ಸೇನಾಪತಿ. ಸೇನಾಪತಿಯೇ ಇಂಥವರನ್ನು ಹೊರತು ಪಡಿಸಿ ಬೇರೆಯವರ ಮೇಲೆ ಮಾತ್ರ ಯುದ್ಧ ಮಾಡುತ್ತೇನೆ ಎಂದು ಬಹಿರಂಗವಾಗಿ ಮಾತಾಡಿಬಿಟ್ಟರೆ ಉಳಿದ ಕೆಳಗಿನ ಸಾಲಾವಳಿಯ ಸೈನಿಕರೂಅಧಿಕಾರಿಗಳಾದರೂ ಯಾಕೆ ಪಾಂಡವರನ್ನು ತಡುವಿಕೊಂಡಾರು..ಇಂಥಾ ವಿಪರ್ಯಾಸ ಮತ್ತು ಕುಚೋದ್ಯದ ಮಧ್ಯೆ ಯಾರ ಬೆಂಬಲವೂ ಇಲ್ಲದೆ ತಾನು ಗೆಲ್ಲಲುಮಾತು ಮತ್ತು ಛಲ ಎರಡನ್ನೂ ಉಳಿಸಿಕೊಳ್ಳಲು ಜೊತೆಗೆ ಹಸ್ತಿನಾವತಿಯ ಸಿಂಹಾಸನಕ್ಕೆ ಹೋರಾಡಬೇಕು ಯಾರ ಬೆಂಬಲವೂ ಇಲ್ಲದೆ.
ಯಾಕೆಂದರೆ ಯಾವಾಗ ಭೀಷ್ಮ ಎದುರಾಳಿಗಳಿಗೆಬದುಕಲು ಅರ್ಹರೆನ್ನುವ ಪ್ರಮಾಣ ಪತ್ರ ಯುದ್ಧಕ್ಕೆ ಮೊದಲೇ ಕೊಟ್ಟುಬಿಟ್ಟಿದ್ದಾರೋ ಇನ್ಯಾಕಾದರೂ ಉಳಿದ ಸೈನ್ಯ ಅಥವಾ ಸಿಬ್ಬಂದಿ ಪಾಂಡವರನ್ನು ಕೊಲ್ಲುವ ಯೋಜನೆ ರೂಪಿಸಿ ಅವರ ಮೇಲೆ ಎರಗಿಯಾರು. ಸಾಧ್ಯವೇ ಇಲ್ಲ. ಅಲ್ಲಿಗೆ ಪರೋಕ್ಷವಾಗಿ ಅವರಿಗೆಲ್ಲ ಇರುವ ಏಕೈಕ ಎದುರಾಳಿ ಮತ್ತು ಅಪಾಯ ಎರಡೂ ನನ್ನೊಬ್ಬನಿಂದ ಮಾತ್ರವೇ. ಅಲ್ಲಿಗೆ ಪ್ರತಿಯೊಬ್ಬರ ಲಕ್ಷದಲ್ಲಿ ನಾನಿರುತ್ತೇನೆ ಅಥವಾ ಅವರಿರುತ್ತಾರೆ. ಒಂದೋ ಕೊಲ್ಲಲು ಇಲ್ಲ ಉಳಿಸಲು. ಬಾಕಿಯವರದ್ದೇನಿದ್ದರೂ ಯುದ್ಧ ಹಪಾಹಪಿಯನ್ನು ತೀರಿಸಿಕೊಳ್ಳುವ ಲೆಕ್ಕವಷ್ಟೆ... ಛೇ..
ಯುದ್ಧ ಎಂದ ಮೇಲೆ ಎದುರಾಳಿಯನ್ನು ಮುಗಿಸುವುದೋ ಅಥವಾ ಸೆರೆ ಹಿಡಿಯುವುದೋ ಏನಾದರೊಂದು ಆಗಲೇ ಬೇಕು. ಮೊದಲ ಏಟಿನಲ್ಲೇ ಹಲವು ಅರಿಗಳ ತಲೆ ತರಿಯುವೆನು ಎನ್ನುವ ಯುದ್ಧಾಳು ಮಾತ್ರ ಕೊನೆಯವರೆಗೂ ಭುಜದ ಮೇಲೆ ಜಯದ ಅಟ್ಟಣಿಗೆ ಹೊತ್ತು ನಡೆಯುತ್ತಾನೆ. ಅವನ ರಕ್ತದಾಹಕ್ಕೆ ಸೈನ್ಯ ತಾನಾಗೇ ಚೆಕ್ಕು ಚೆದುರಾಗುತ್ತದೆ. ಮೊದಲ ಹೊಡೆತಕ್ಕೆ ಆರ್ಭಟಿಸುವ ಯೋಧನ ರಕ್ತಪಾನಕ್ಕೆ ಎದುರಾಳಿ ತಾನಾಗೇ ಬಲಿಯಾಗಿ ಬಿಡುತ್ತಾನೆ. ಒಮ್ಮೆ ಶತ್ರುವಿನ ಮನದಲ್ಲಿ ಸಾವಿನ ಮತ್ತು ಸಾವಿಗಂಜುವ ಭಾವ ಬೇರೂರಿದರೆ ಅಲ್ಲಿಗೆ ಅರ್ಧ ಗೆಲವು ದಕ್ಕಿದಂತೇನೆ. ಕಾರಣ ಎದುರಾಳಿ ಯಾವಾಗ ಅಂಜಿಕೆಯ ಸುಳಿಗೆ ಸಿಲುಕಿರುತ್ತಾನೊ ಆಗ ನಿರ್ಭಯವಾಗಿ ಶಸ್ತ್ರ ಬೀಸುತ್ತಾ ರಂಗದಲ್ಲಿ ರುಮುರುಮು ಸುತ್ತಲಾರ. ಅಲ್ಲಿಗೆ ಅವನ ಶಸ್ತ್ರದ ರಭಸವೂ ಕಡಿಮೆಯಾಗುತ್ತಾ ಅಪಾಯಕಾರಿಯಾಗಿ ಸುಲಭಕ್ಕೆ ಚಲಿಸಲಾರ.
ಎದುರಾಳಿಯನ್ನು ಮಾನಸಿಕವಾಗಿ ಗೆಲ್ಲಬಹುದಾದ ಯುದ್ಧದ ಮೊದಲ ತಂತ್ರವೇ ಅದು. ಆದರೆ ನನ್ನ ಸೈನ್ಯದ ಪ್ರಮುಖರಿಗೆ ಅತಿರಥಮಹಾರಥರಿಗೆ ಎದುರಾಳಿ ಸೈನ್ಯದ ವೀರರನ್ನು ಕಂಡರೆ ಅಕ್ಕರೆಅವರನ್ನು ಕೊಲ್ಲಲಾರೆ ಎಂದೇ ರಥವೇರುತ್ತಿದ್ದಾರೆ. ಆ ಮಟ್ಟಿಗೆ ಮೊದಲ ಭೇರಿ ಮೊಳಗುವ ಮೊದಲೆ ಮಾನಸಿಕವಾಗಿ ಯುದ್ಧವನ್ನು ಕಾಟಾಚಾರಕ್ಕೆ ಮಾಡುತ್ತಿದ್ದೇವೆ ಎನ್ನುವ ಭಾವದೊಂದಿಗೆತೀರ ಅಗತ್ಯವಾದ ಮತ್ತು ಆತ್ಮವಿಶ್ವಾಸ ತುಂಬುವ ಮಾನಸಿಕ ವಿಜಯವನ್ನು ಎದುರಾಳಿಗಳಿಗೆ ಬಿಟ್ಟುಕೊಟ್ಟೆ ರಂಗಕ್ಕಿಳಿಯುತ್ತಿದ್ದಾರೆ. ಮಂಚೂಣಿಯ ನಾಯಕರಲ್ಲಿ ಈ ಯುದ್ಧವನ್ನು ಗೆಲ್ಲಲೇಬೇಕೆನ್ನುವ ತಪನೆಯಾಗಲಿಗತಿಯಾಗಲಿಯುದ್ಧಕ್ಕೆ ಅಗತ್ಯದ ಮಾನಸಿಕ ಸ್ಥೈರ್ಯವಾಗಲಿ ಕಂಡು ಬರುತ್ತಲೇ ಇಲ್ಲ.
ಅಲ್ಲಿಗೆ ಯುದ್ಧದಲ್ಲಿ ಗೆದ್ದು ಅಥವಾ ಅವರನ್ನು ಸೆರೆ ಹಿಡಿದು ಜಯಿಸಬೇಕೆನ್ನುವ ಅಮಿತೋತ್ಸಾಹನಿಜವಾದ ಕಾಳಜಿ ಇರುವುದು ಕೇವಲ ತನಗೆಅಶ್ವತ್ಥಾಮನಿಗೆದುಶ್ಯಾಸನಶಕುನಿ ಮಾವ ಮತ್ತು ಕರ್ಣ ಇತ್ಯಾದಿಗಳಿಗೆ. ಏನಿದ್ದರೂ ನಿಜವಾದ ಯುದ್ಧ ನಮ್ಮಿಂದ ಮಾತ್ರವೇ ಆಗಬೇಕಿದೆ. ಹಾಗಾದರೆ ಇಲ್ಲಿ ನಮ್ಮ ವಿನ: ಯಾರಿಂದಲೂ ಪಾ೦ಡವರನ್ನು ಪುಡಿಗಟ್ಟಲು ಸಾಧ್ಯವಿಲ್ಲ. ಇದೆಲ್ಲದಕ್ಕಿಂತಲೂ ಅನಾಹುತಕಾರಿ ಎಂದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿತನ್ನ ಕೈಮೀರಿದ ವರ್ತನೆಯಲ್ಲಿ ಆರಂಭದ ಪ್ರಮುಖ ಘಟ್ಟದಲ್ಲಿ ಫಲಿತಾಂಶ ಹೊಮ್ಮಿಸಲು ತೀರ ಅವಶ್ಯವಿದ್ದ ಪ್ರಾಣಮಿತ್ರ ಕರ್ಣನನ್ನು ತಾವಿರುವವರೆಗೆ ಯುದ್ಧ ರಣರಂಗಕ್ಕಿಳಿಯದಂತೆ ಮಾಡಿಬಿಟ್ಟಿದ್ದಾರೆ ಸೈನ್ಯಾಧಿಪತಿ ಪಿತಾಮಹ. ಹಾಗೆ ವಿನಾಕಾರಣ ಕೆರಳಿಸಿ ತುಂಬಾ ಬುದ್ಧಿವಂತಿಕೆಯಿಂದ ಯೋಜನೆ ರೂಪಿಸಿ ಅವನನ್ನು ಯುದ್ಧ ಭೂಮಿಗೇ ಬಾರದಂತೆಮುಖ್ಯವಾಹಿನಿಯಿಂದ ಮಹಾರಥಿಯೊಬ್ಬನನ್ನು ಉದ್ದೇಶ ಪೂರ್ವಕವಾಗಿಯೇ ಭೀಷ್ಮ ಪಿತಾಮಹ ಪಕ್ಕಕ್ಕೆ ಸರಿಸಿಬಿಟ್ಟಿದ್ದಾರೆ. ಇದು ಗೊತ್ತಾಗದ ರಣತಂತ್ರವೇನಲ್ಲ. ಕರ್ಣನಿಗೂ ತನಗೂ ಈ ಬಗ್ಗೆ ಮಾಹಿತಿ ಇದ್ದರೂ ಪರಿಸ್ಥಿತಿ ಮತ್ತು ವಚನ ಎನ್ನುವ ಕರ್ಮಕ್ಕೆ ಇಬ್ಬರೂ ಬದ್ಧರೆ. ಇದೂ ಕೂಡಾ ಯುದ್ಧಕ್ಕೆ ಮೊದಲೇ ತನ್ನನ್ನು ನಿರ್ವಿರ್ಯಗೊಳಿಸುವಗೊಳಿಸಿದ ಉಪಾಯವಲ್ಲದೇ ಬೇರೇನಲ್ಲ.
ಕಾರಣ ಕರ್ಣನದೇನಿದ್ದರೂ ಪಾಂಡವರನ್ನು ಪುಡಿಗಟ್ಟಿದರೆನೇ ಯುದ್ಧ ಗೆದ್ದಂತೆ ಎನ್ನುವ ನೇರ ಹಣಾಹಣಿಯ ಲೆಕ್ಕಾಚಾರ. ಅದಕ್ಕಾಗಿ ಅವನು ರಂಗದಲ್ಲಿ ಕೇವಲ ಪಾಂಡವರನ್ನು ಹುಡುಕಿಕೊಂಡು ತಾಕುವುದೊಂದೆ ಗಮ್ಯವಾಗಿಸಿಕೊಂಡು ಚಲಿಸುತ್ತಾನೆ. ಅವನ ಕೈಗೆ ಸಿಕ್ಕುವ ಯೋಧ ಎಂಥವನಿದ್ದರೂ ಬದುಕಲಾರ. ಗೆಲುವಂತೂ ಅವನ ವಿರುದ್ಧ ಸಾಧ್ಯವೇ ಇಲ್ಲ. ಸ್ವತ: ಪಿತಾಮಹರಂತೆ ಎಕಕಾಲಕ್ಕೆ ಅಷ್ಟದಿಕ್ಕಿಗೂ ಶರಸಂಧಾನ ಮಾಡಬಲ್ಲ ಪರಾಕ್ರಮಿ. ಅವನ ಈ ವರ್ತನೆಯಿಂದ ಮತ್ತು ಕರ್ಣನನ್ನು ಯಾರೂ ಗೆಲ್ಲಲಾರರು ಎಂಬುದನ್ನು ಅರಿತೇತನ್ನ ಪ್ರಿಯ ಪಾಂಡವರನ್ನು ರಕ್ಷಿಸಲೆಂದೇ ಸೇನಾಪತಿ ಭೀಷ್ಮ ಈ ಯೋಜನೆ ರೂಪಿಸಿದ್ದಾರಾ..ತಾನಿರುವವರೆಗೆ ಕರ್ಣ ರಂಗಕ್ಕಿಳಿಯಬಾರದು ಎಂದರೆಸೇನಾಪತಿಯಾಗಿ ಅವರು ಇರುವವರೆಗೂ ಯುದ್ಧ ಮುಕ್ತಾಯ ಅಥವಾ ಫಲಿತಾಂಶದತ್ತ ಪೂರಕವಾಗಿ ನಡೆಯುವುದೇ ಇಲ್ಲ. ಕಾರಣ ಅತ್ತ ಪಾಂಡವರನ್ನು ಸಾಯಿಸುವವರಾರು ಇಲ್ಲ. ಇತ್ತ ಪಿತಾಮಹ ಮತ್ತು ಆಚಾರ್ಯರನ್ನು ಬಡಿದು ಹಾಕುವವರೂ ಯಾರೂ ಇಲ್ಲ. ಅಲ್ಲಿಗೆ ಇದು ಅಡ್ಡಗೋಡೆಯ ಮೇಲಿನ ದೀಪವೇ.
ಎಲ್ಲಿಯವರೆಗೆ ಪಿತಾಮಹ ಮತ್ತು ದ್ರೋಣರು ಹೋರಾಡುತ್ತಾರೋ ಅಲ್ಲಿಯವರೆಗೂ ಪಾಂಡವರು ನಿರಾಳ. ಕಾರಣ ಬಾಕಿ ಸೈನ್ಯದತ್ತ ಅವರು ಲಕ್ಷ್ಯವಹಿಸಿ ಹೋರಾಡುತ್ತಿದ್ದರೆ ಚಿಂತೆಯೇ ಇರುವುದಿಲ್ಲ. ಬೇರೆನಾದರೂ ಘಟಿಸೀತು ಎನ್ನುವ ಲೆಕ್ಕಾಚಾರಕ್ಕೆ ಈಡಾಗಬೇಕಾದ ಕರ್ಣ ರಂಗದಲ್ಲಿರುವುದಿಲ್ಲ. ಅಲ್ಲಿಗೆ ಅತ್ತ ತನ್ನ ಕರುಳ ಬಾಂಧವರೂ ಸುರಕ್ಷಿತ. ಇತ್ತ ತನ್ನ ಸಿಂಹಾಸನ ಮತ್ತು ಹಸ್ತಿನಾಪುರ ರಕ್ಷಣೆಯ ಮಾತೂ ಉಲ್ಲಂಘಿಸಿದಂತಾಗುವುದಿಲ್ಲ. ಇದೇ ಬೇಕಾಗಿರುವುದು ಸೈನ್ಯದ ಮಹಾರಥಿಗಳಿಗೆ.
ಇದ್ಯಾವ ಲೆಕ್ಕಾಚಾರ...?
ಇನ್ನು ದ್ರೋಣರು ಯಾರೆಂದರೆ ಯಾರನ್ನೂ ಬಡಿದು ಹಾಕಬಲ್ಲವರಾದರೂಅಜೇಯರಾದರೂ ಪಾಂಡವರ ಶಿರಕ್ಕೆ ಶರ ಪ್ರಯೋಗ ಮಾಡುವುದರಲ್ಲಿ ಒಮ್ಮೆಯಲ್ಲ ಹಲವು ಬಾರಿ ಯೋಚಿಸುತ್ತಾರೆ. ಅವರಿಗೆ ಇವತ್ತಲ್ಲ ನಾಳೆ ಹಸ್ತಿನಾಪುರದ ಸೈನ್ಯಾಧಿಕಾರಿಯಾಗುವ ಅವಕಾಶದ ನಿರೀಕ್ಷೆ ಮತ್ತು ಆಸೆ ಎರಡೂ ಇದ್ದೇ ಇದೆ. ಹಾಗಾಗಿಯಾದರೂ ಮತ್ತು ಸಿಂಹಾಸನದ ಋಣ ಸಂದಾಯಕ್ಕಾದರೂ ಯುದ್ಧದಲ್ಲಿ ನಿಯತ್ತು ತೋರುತ್ತಾರಾದರೂ ಪಿತಾಮಹನ ಮಾತನ್ನು ಅವರೂ ಮೀರಲಾರರು.
ಹಾಗೆಂದ ಮೇಲೆ ಪಿತಾಮಹ ಸೇನಾಧಿಪತಿಯಾಗಿರುವವರೆಗೂ ದ್ರೋಣರೂ ಪಾಂಡವರನ್ನು ತಾಕಲಾರರು. ಅಲ್ಲಿಗೆ ಪಿತಾಮಹ ಭೀಷ್ಮ ಮತ್ತು ಗುರು ದ್ರೋಣರು ಯುದ್ಧವನ್ನು ಆಟದಂತೆ ಭಾವಿಸಿಕೊಂಡು ಸುಖಾ ಸುಮ್ಮನೆ ವಿರೋಧಿ ಸೈನ್ಯವನ್ನೆಲ್ಲಾ ತರಿದು ಹಾಕುತ್ತಿದ್ದರೆ ತಾವು ಮೂವರೇ ಸೇರಿ ಇನ್ನಿತರ ಬೆಂಬಲದೊಂದಿಗೆ ಹೇಗಾದರೂ ಪಾಂಡವರನ್ನು ಬಡಿದು ಹಾಕಬೇಕು. ಹಾಗಾಗಿ ಇದು ತನ್ನ ಸೈನ್ಯದ ಪ್ರಮುಖರನ್ನುಸೇನಾಪತಿಯನ್ನೂ ನಂಬಿಕೊಂಡು ಮಾಡುವ ಯುದ್ಧವಲ್ಲವೇ ಅಲ್ಲ. ಅವರೆಲ್ಲಾ ಏನಿದ್ದರೂ ಹಸ್ತಿನಾಪುರದ ಋಣಕ್ಕೆಅಪ್ಪನ ಮುಲಾಜಿಗೆ ಬಿದ್ದು ಸಿಂಹಾಸನ ಕಾಯುವ ಕಾಯಕಕ್ಕೇ ಇಳಿದಿದ್ದಾರೆಯೇ ವಿನ: ತನ್ನಂತೆ ಛಲಕ್ಕೂಅನ್ಯಾಯವಾಗುತ್ತಿರುವ ಸಾಮಾಜಿಕ ನ್ಯಾಯದ ಪರೀಧಿಯಲ್ಲೂ ಯೋಚಿಸುತ್ತಿಲ್ಲ. ಅವರಿಗ್ಯಾರಿಗೂ ತನ್ನ ಸಹೋದರರಿಗೆ ಆಗುತ್ತಿರುವ ಅನ್ಯಾಯಕ್ಕೆ ನ್ಯಾಯ ಕಲ್ಪಿಸುವಅಪ್ಪನ ಅಂಧಕಾರದ ಬದುಕಿಗೆ ಬೆಳಕು ನೀಡುವ ಅಗತ್ಯತೆಗಳೂ ಇಲ್ಲ. ಅವಶ್ಯಕತೆಯಂತೂ ಮೊದಲೇ ಇಲ್ಲ. ಸಿಂಹಾಸನದ ಆಸೆಯನ್ನು ಅವರಿಬ್ಬರೂ ಕನಸಲ್ಲೂ ಮಾಡಲಾರರು. ಅವರದೇನಿದ್ದರೂ ಅರಮನೆಯ ಋಣ ಅದರ ಮುಲಾಜಿಗೆ ಬಿದ್ದು ಬೇಕಿದ್ದರೆ ಜೀವ ಕೊಡುವವರೆಗೂ ಕಾದುತ್ತಾರೆ ಅಷ್ಟೆ.
ಯಾರು ಗೆದ್ದರೂ ಯಾರು ಸೋತರೂ ಅವರ ಬದುಕುಗಳಲ್ಲಿ ವ್ಯತ್ಯಾಸ ಬೀಳುವುದಿಲ್ಲ. ಬದುಕಿ ಉಳಿಯುವವರುಗೆಲ್ಲುವವರು ಯಾರೇ ಆದರೂ ಇಬ್ಬರನ್ನೂ ರಾಜ ಮರ್ಯಾದೆಯಿಂದಲೇ ನೋಡಿಕೊಳ್ಳುತ್ತಾರೆ. ಮಕ್ಕಾಗುವುದು ಏನಿದ್ದರೂ ತಮ್ಮ ಬದುಕುಗಳಿಗೆಸ್ವಾಭಿಮಾನಕ್ಕೆಮರ್ಯಾದೆಗೆ ಅದಕ್ಕೂ ಮಿಗಿಲಾಗಿ ಅಧಿಕಾರದಂಚಿನಿಂದ ದಬ್ಬಿಸಿಕೊಂಡ ಅವಮಾನಕ್ಕೆ. ಹಾಗಾಗಿ ಯುದ್ಧದ ನಿಜ ಹೋರಾಟ ಆಗಬೇಕಿರುವುದು ತಮ್ಮಿಂದಲೇ ಹೊರತಾಗಿ ಯುದ್ಧದ ಹಪಾಹಪಿಗಾಗಿ ಬಂದು ಸೇರಿರುವ ಯಾವ ಕಡೆಯಿಂದಲೂಯಾವ ಸೈನ್ಯದಿಂದಲೂ ಅಲ್ಲ. ಎರಡ್ಮೂರು ದಶಕಗಳಿಂದ ಯುದ್ಧವನ್ನೇ ಕಾಣದ ಭೂಮಂಡಲದ ರಾಜರುಗಳು ಸೇರಿರುವುದೂ ಕೂಡಾ ಇಂಥಹದ್ದೇ ಉಮೇದಿಗೆ. ದಕ್ಕಿದರೆ ಹಸ್ತಿನಾಪುರದ ಸಖ್ಯದ ಸುಖ ಕೂಡಾ. ಗೆದ್ದ ಯಾವ ತಂಡವೂಸೋತವರನ್ನು ಬದುಕಿರುವವರನ್ನು ವೈರಿಯಾಗಿ ಗುರುತಿಸುವುದಿಲ್ಲ ಎನ್ನುವ ಸಾಮಾನ್ಯ ಮತ್ತು ಅಪರಿಮಿತ ವಿಶ್ವಾಸದ ನಂಬುಗೆ ಎಲ್ಲರಲ್ಲೂ ಇದೆ.
ಹಾಗಾಗಿ ಗೆದ್ದಾದ ಮೇಲೆ ಯಾವ ಕಡೆಯವರು ಗೆದ್ದರೂ ತಾವು ಮತ್ತು ತಮ್ಮ ಸೈನ್ಯ ಸಹಜವಾಗೇ ಮಾರ್ಯದೆಯುತವಾಗಿ ಹಸ್ತಿನಾವತಿಯ ಸಖ್ಯದೊಂದಿಗೆ ಅಗಾಧ ಬೆಂಬಲ ಮರ್ಯಾದೆಯೊಂದಿಗೆ ಮರಳುತ್ತವೆ. ಅದಕ್ಕಿಂತ ಇನ್ನೇನು ಬೇಕು ಆರ್ಯಾವರ್ತದಲ್ಲಿ ಹಸ್ತಿನಾವತಿಯ ಸ್ನೇಹದ ರಾಜ ಮನೆತನ ಅಥವಾ ಸೈನ್ಯ ಎಂದರೆ ಭೂಮಿಯ ಮೇಲೆಲ್ಲಾ ಅವರಿಗೆ ದಕ್ಕುವ ಮರ್ಯಾದೆಯೇ ಬೇರೆ. ಅದಕ್ಕಾಗೇ ಯಾವ ಕಡೆಯಿಂದ ಬಡಿದಾದರೂ ಅವರೆಲ್ಲಾ ತನ್ನಂತೆ ಜೀವಭಯ ಬಿಟ್ಟು ಕಾದುವುದಾಗಲಿಜೀವ ತೆಗೆಯುವ ರೊಚ್ಚಿನ ಛಲವನ್ನಾಗಲಿ ರಂಗದಲ್ಲಿ ತೋರುವ ಸಂಭಾವ್ಯತೆ ತುಂಬ ಕಡಿಮೆಯೇ. ಏನಿದ್ದರೂ ತಂತಮ್ಮ ಪ್ರಾಣಾಪಾಯವಿರುವಾಗ ಮಾತ್ರ ಕತ್ತಿ ಬೀಸುವುದು ಬಿರುಸಾಗಬಹುದು ಹೊರತು ಯಾವ ಸೈನ್ಯದ ಸಿಬ್ಬಂದಿಗೂ ಇದರ ಸೋಲು ಗೆಲವು ಅವರವರ ಬದುಕಿನಲ್ಲಿ ತುಂಬ ವ್ಯತ್ಯಾಸವನ್ನೇನೂ ತರುವುದಿಲ್ಲ.
ಎರಡೂ ಕಡೆಯಲ್ಲಿ ಮೈಲುಗಟ್ಟಲೇ ತನ್ನ ಶಿಬಿರದ ಬಿಡಾರಗಳು ತಲೆಯೆತ್ತಿ ನಿಂತಿವೆ. ಎಂಥೆಂಥವರೆಲ್ಲಾ ಮೊದಲ ಬಾರಿಗೆ ಯುದ್ಧವೊಂದರ ಹೂ೦ಕಾರಕ್ಕೆ ಉಮೇದಿನಿಂದ ಬಂದಿಳಿದಿದ್ದಾರೆ. ಆದರೆ ಯಾರಿಗೂ ತನ್ನ ಒಳತೋಟಿ ಅರಿವಾಗುತ್ತಿಲ್ಲ. ನಿಜವೇ.. ಕರ್ಣ ಹೇಳಿದಂತೆ ಇದು ಕೇವಲ ತಾನು ಗೆದ್ದೇ ಗೆಲ್ಲುವ ಯುದ್ಧವಲ್ಲ. ಹಾಗಂತ ತಾನು ನಂಬುವುದೂ ಇಲ್ಲ. ಕಾರಣ ಯುದ್ಧದಲ್ಲಿ ಎಲ್ಲವೂ ಸರಿ ಅಥವಾ ಎಲ್ಲವೂ ಸಮ್ಮತ ಎನ್ನುವಾಗ ಪಾಂಡವರ ಸೇನಾಪತಿ ದೃಷ್ಟದ್ಯುಮ್ನ ಸೇರಿದಂತೆ ಚಾಣಾಕ್ಷ ಕೃಷ್ಣ ಅವರನ್ನೆಲ್ಲಾ ಸುರಕ್ಷಿತವಾಗಿರಿಸಲು ಇಬ್ಬರೂ ಏನಾದರೂ ಮಾಡೇ ಮಾಡುತ್ತಾರೆ.
ಯುದ್ಧದಲ್ಲಿ ಎಲ್ಲವೂ ಸಮ್ಮತವೇ ಆದರೂ ತಾನಿವತ್ತಿಗೂ ರಂಗದಲ್ಲಿ ಮೋಸದ ಯುದ್ಧಕ್ಕಿಳಿದ ದಾಖಲೆಗಳಿಲ್ಲವೇ ಇಲ್ಲ. ತನ್ನ ಬಡಿದಾಟಗಳೆನಿದ್ದರೂ ತನ್ನ ನಂಬಿ ಬಂದ ನೂರು ಜನ ತಮ್ಮಂದಿರು ಮತ್ತು ಹುಟ್ಟು ಕುರುಡ ಅಪ್ಪ ಧೃತರಾಷ್ಟ್ರನ ಸಿಂಹಾಸನವನ್ನು ಉಳಿಸಿಕೊಳ್ಳುವುದರಲ್ಲೇ ಆಯಿತು. ಆದನ್ನಾದರೂ ನ್ಯಾಯವೆಂದೇ ಅಲ್ಲವೇ ನಾನು ಉಳಿಸಿಕೊಳ್ಳಲು ಹೋರಾಡಿದ್ದು. ಉಳಿದದ್ದೇನೆ ಇರಲಿ ರಾಜ್ಯಾಧಿಕಾರಸಿಂಹಾಸನ ಎಂದ ಮೇಲೆ ಇಂಥವೆಲ್ಲಾ ಇದ್ದದ್ದೇ. ಆದರೆ ಪಾಂಡವರೆಂದರೆ ಕಂಡು ಬರುವ ಪ್ರೀತಿಆದರಗಳು ಎಂದಿಗೂ ತಮ್ಮ ಮೇಲೆ ಯಾರಿಗೂ ಕಾಣಿಸಲೇ ಇಲ್ಲವಲ್ಲ. ಎಲ್ಲೂ ತಾನು ಧರ್ಮ ವಿಮುಖನೂಅನ್ಯಾಯದ ಪರನೂ ಆಗಿಲ್ಲದಿದ್ದುದರಿಂದಲೇ ಇಂದು ಪಿತಾಮಹ ಕೂಡಾ ತನ್ನ ಪರವಾಗೇ ಯುದ್ಧಕ್ಕಿಳಿದಿದ್ದಾರೆ. ಇಲ್ಲದಿದ್ದರೆ ಅವರ್‍ಯಾಕೆ ಪಾಂಡವರ ಸೈನ್ಯದ ವಿರುದ್ಧ ಶಸ್ತ್ರ ಎತ್ತುತ್ತಿದ್ದರು...?
ಅವರೆಲ್ಲಾ ಮನಸ್ಸು ಮಾಡಿದ್ದರೆ ಧರ್ಮಜನನ್ನು ಸಿಂಹಾಸನಕ್ಕೇರಿಸುವುದೆಷ್ಟರ ಮಾತಾಗಿತ್ತು..ಆದರೆ ಎಂದೂ ನನ್ನನ್ನಾಗಲಿಮಹಾರಾಜನನ್ನಾಗಲಿ ಸರಿಸಿ ಸಿಂಹಾಸನ ಬಿಟ್ಟುಕೊಡು ಎಂದು ಕೇಳಲಿಲ್ಲ. ಬದಲಿಗೆ ಅವರಿಗೂ ಒಂದಿಷ್ಟು ರಾಜ್ಯ ಕೊಡುವಂತೆ ಉಪದೇಶಿಸಿದರು. ಆದಾಗ್ಯೂ ಪಾಂಡವರು ಅಜ್ಞಾತವಾಸಕ್ಕೆ ಮುಂಚೆ ಸಿಕ್ಕು ಬಿದ್ದಾಗ ಅಥವಾ ಮಾತಿಗೆ ತಪ್ಪಿದಾಗಲೂ ಹಿರಿಯರು ನೇರ ರಾಜ್ಯ ಕೊಡು ಎನ್ನುವ ಬದಲಿಗೆ "ಹೇಗೂ ಇದೆಲ್ಲಾ ಆಯಿತಲ್ಲ. ನೀವೇ ರಾಜ್ಯ ನಡೆಸಿಆದರೆ ಪಾಂಡುವಿನ ಮಕ್ಕಳಿಗೂ ಒಂದಷ್ಟು ಭೂಮಿ ನೀಡಿ ಬಿಟ್ಟುಬಿಡು. ಅವರೂ ಎಲ್ಲಾ ಕಡೆಯಲ್ಲಿ ಸೋತಿದ್ದಾರೆ...!" ಎಂದು ಎಲ್ಲೂ ಹೇಳಲೇ ಇಲ್ಲ. ಬದಲಿಗೆ ಅವರನ್ನು ಸಮರ್ಥಿಸಿ ಮಾತಾಡಿದರು. ಜೊತೆಗೆ ಯುಧಿಷ್ಠಿರನಿಗೆ ಮೊದಲೊಮ್ಮೆ ಸರ್ವ ಸಂಪತ್ತು ಹಿಂದಿರುಗಿಸಿದರೂಸಭೆಯಲ್ಲಿ ಮಾಡಿದ ಪ್ರತಿಜ್ಞೆಗಳೂ ತರ್ಪಣವಾಗುತ್ತವೆಮಾತುಗಳೂ ಹಿಂದಕ್ಕೆ ಪಡೆಯುತ್ತಿದ್ದೇವೆ ಎಂದೇನೂ ಅವನು ಹೇಳಲಿಲ್ಲ. ಅಂದರೆ ಸರ್ವಸಂಪತ್ತು ರಾಜ್ಯ ಹಿಂದಿರುಗಿಸಿದ ಮೇಲೂ ಸೇಡು ಕಾಯ್ದುಕೊಂಡೇ ಉಳಿದ. ಅದನ್ನು ಉಳಿದವರೂ ಅನುಮೋದಿಸಿದರು. ಇದೆಂಥಾ ಧರ್ಮ..ದಿಬ್ಬದಿಂದಿಳಿದು ನಿಂತಲ್ಲೇ ಶಥಪಥ ತಿರುಗಿದ ದುರ್ಯೋಧನ ಹಿಂದಕ್ಕೆ ಕೈ ಬಿಗಿದು ಉಸಿರ್ಗರೆದ. ಹಿಂದಿರುಗಿಸಿದ್ದ ಸಂಪತ್ತಿಗೆ ಪ್ರತಿಯಾಗಿ ಅವರು ಮಾಡಿದ್ದ ಶಪಥಗಳು ಹಿಂದಿರುಗಿಸಿರಲಿಲ್ಲ ಎನ್ನುವುದು ಮಾತ್ರ ಯಾರಿಗೂ ದೊಡ್ಡದಾಗಿ ಕಾಣಲೇ ಇಲ್ಲ ಆವಾಗ.
ಆವತ್ತಿಗೂ ಇವತ್ತಿಗೂ ತಾನು ನಂಬಿಕೆಗೆ ಬದ್ಧನಾಗೇ ರಾಜ್ಯಧಿಕಾರಕ್ಕೆ ಅವಶ್ಯವಿದ್ದ ಪ್ರಸ್ತಾವನೆಗೆ ಅಂಟಿಕೊಂಡೆ ಬಂದಿದ್ದೇನೆ. ತನ್ನ ನೇರವಂತಿಕೆ ಮತ್ತು ನಿಷ್ಠುರತನವನ್ನುಛಲವನ್ನು ಸಮಸ್ತ ಹಿರಿಯರು ರಾಜ್ಯದ ಮೋಹ ಮತ್ತು ದುರಹಂಕಾರವೆಂದುಬಿಟ್ಟರಲ್ಲ. ದುರಹಂಕಾರ...! ಇರಬಹುದೇನೋ ಜಗದ್ವಿಖ್ಯಾತ ಕುರುವಂಶದ ಹಸ್ತಿನಾವತಿಯ ಸಾಮ್ರಾಟಮಹಾರಾಜನಾಗಬೇಕೆಂದವನು ತಾನು. ಎಂದಿಗೂ ಗದಾಯುದ್ಧದಲ್ಲಿ ಅಜೇಯ. ಅಷ್ಟು ಮಾತ್ರದ ಅಹಂಕಾರ ತೋರಿಸಿದ್ದರೂ ಇರಬಹುದೇನೋ.
ಆದರೆ ಒಂದು ವ್ಯವಸ್ಥೆಯನ್ನು ಇಷ್ಟೊಂದು ಜನ ಮಹಾ ಮುತ್ಸದ್ದಿಗಳು ಕುರುವಂಶದ ಹಿತ ಕಾಪಾಡಬೇಕಿದ್ದವರು ನಿಭಾಯಿಸಬೇಕಾದ ಹಾಗೆ ಕಗ್ಗಂಟನ್ನು ನಿಭಾಯಿಸಲೇ ಇಲ್ಲವಲ್ಲ. ದ್ಯೂತದಿಂದ ಹಿಡಿದು ಯುದ್ಧ ಕೊನೆಯ ಘಳಿಗೆಯವರೆಗೂ ಪಿತಾಮಹ ವಚನಬದ್ಧ. ಗುರು ದ್ರೋಣಾಚಾರ್ಯರು ಸಿಂಹಾಸನಕ್ಕೆ ನಿಷ್ಠರು. ವಿದುರ ಚಿಕ್ಕಪ್ಪನಂತೂ ಮಹಾರಾಜರ ಆಪ್ತನಷ್ಟೆ ಪಾಂಡವರಿಗೂ ಶುಭಹಿತೈಶಿ. ಎಲ್ಲಾ ಗೊತ್ತಿದ್ದೂ ಈ ವಂಶದ ಕಥೆ ಹೀಗೆ ನಡೆಯಬೇಕೆಂದು ಅತ್ಯಂತ ಚಾಣಾಕ್ಷತೆಯಿಂದ ನಿಭಾಯಿಸಿದವನು ಸೋದರ ಮಾವಶಕುನಿ. ನಿಜಕ್ಕೂ ಇಲ್ಲಿಯವರೆಗಿನ ಇತಿಹಾಸದಲ್ಲಿ ಕಂಡು ಕೇಳರಿಯದ ಸಂಚು ಅವನದು. ಶತ್ರುನಾಶ ಎಂದು ಅವಡುಗಚ್ಚಿದರೆ ಅವನಂತೆ ಎಲ್ಲವನ್ನು ಬಿಟ್ಟು ನಿಲ್ಲಬೇಕು. ಉಳಿದ ತನ್ನ ತಮ್ಮಂದಿರಿಗೋ ಯಾವತ್ತಿದ್ದರೂ ತಾನು ನಿರ್ಧರಿಸಿದ ನಿರ್ಧಾರವೇ ಅಂತಿಮ.
ಪಾಲು ಕೊಡಬೇಕೆಂಬ ಪದ್ಧತಿಗೆ ಮೊದಲು ಋಣಾತ್ಮಕ ಧೋರಣೆ ಬೆಳೆಸಿ ಎಲ್ಲಾ ಹಾಳು ಮಾಡಿದವರೇ ಈ ಹಿರಿಯರು. ಹೋಗಲಿ ಅಷ್ಟೋ ಇಷ್ಟೋ ನಿರ್ಧರಿಸಿ ಈ ಕಗ್ಗಂಟನ್ನು ಬಿಡಿಸಬಹುದಾಗಿತ್ತೇನೋ ಆದರೆ ಎಲ್ಲರೂ ತನ್ನ ಮಾತನ್ನು ಬದಿಗಿಟ್ಟೇ ಯೋಚಿಸಿದರೆ ಹೊರತಾಗಿ ಯಾರೂ ನನ್ನ ಭಾವನೆಗಳಿಗೆ ಬೆಲೆನೇ ಕೊಡಲಿಲ್ಲವಲ್ಲ. ಒಮ್ಮೆ
ನಾವು ದ್ಯೂತದ ನಂತರವೂ ಮಾತಿಗೆ ತಪ್ಪಿದೆವು ಅವಧಿಗೆ ಮೊದಲೇ ವನವಾಸಅಜ್ಞಾತ ಪೂರೈಸಲಾಗಲಿಲ್ಲ. ನಾವು ಹಸ್ತಿನಾವತಿಗೆ ನಿರಂತರ ನಿಷ್ಠರಾಗಿರುತ್ತೇವೆ ಮಹಾರಾಜ ಧೃತರಾಷ್ಟ್ರರೆ ಚಕ್ರವರ್ತಿ.. ಇನ್ಯಾಕೆ ಇವೆಲ್ಲಾ ರಗಳೆಗಳು...?" ಎಂದು ಧರ್ಮಜ ಹೇಳಿಬಿಟ್ಟಿದ್ದರೆ ನಾನೇ ನಿಭಾಯಿಸಿಬಿಡುತ್ತಿದ್ದೆ. ಹಸ್ತಿನಾವತಿಯ ಸುದ್ದಿಗೆ ಬಾರದಿದ್ದರೆ ಮುಗಿದು ಹೋಗುತ್ತಿತ್ತು. ಆದರೆ ಯಾರೂ ಹೀಗೆ ಯೋಚಿಸಲೇ ಇಲ್ಲ. ಬದಲಿಗೆ ನಾನು ನಿರಂತರ ಪಾಂಡವರನ್ನು ಹಣಿಯಲು ಯತ್ನಿಸುತ್ತಿದ್ದೇನೆ ಎನ್ನುವಂತೆಯೇ ಚಿತ್ರಿಸಿಬಿಟ್ಟರು. ಮೋಸದಿಂದ ಹಸ್ತಿನಾಪುರ ಕಬಳಿಸುತ್ತಿದ್ದೇನೆ ಎನ್ನುವ ಭಾವನೆ ಉಂಟಾಗುವಂತೆ ಮಾಡಿದರು. ಅಷ್ಟಕ್ಕೂ ನಾನ್ಯಾವತ್ತೂ ಹಾಗೆ ವರ್ತಿಸಿರಲೇ ಇಲ್ಲ. ಮಹಾರಾಜ ಧೃತರಾಷ್ಟ್ರ ಇರುವವರೆಗೂ ಬದಲಾವಣೆ ಬೇಡ ಎಂದಿದ್ದು ತಪ್ಪೇ...ಅಪ್ಪ ಇರುವವರೆಗೂ ನಾನು ಮಹಾರಾಜನಾಗುವ ಯಾವ ಹುನ್ನಾರವನ್ನೂ ಮಾಡಿರಲೇ ಇಲ್ಲ. ಏನಿದ್ದರೂ ಆಗಲೂ ಮತ್ತು ಈಗಲೂ ಅವರೇ ಮಹಾರಾಜರು ಎನ್ನುವುದನ್ನು ಯಾಕೆ ಈ ಹಿತೈಸಿಗಳು ಒಪ್ಪುತ್ತಿಲ್ಲ..?
ನಾನೂ ಆವತ್ತಿಗೂ ಇವತ್ತಿಗೂ ವಚನ ಬದ್ಧನೇ. ಅಂಗ ರಾಜ್ಯಾಭಿಷೇಕದಿಂದ ಹಿಡಿದುಸ್ವತ: ಯುಧಿಷ್ಠಿರನ ಯಾಗದಲ್ಲಿ ಕೋಶಾಧಿಕಾರಿಯಾಗಿ ಕಾರ್ಯ ನಿರ್ವಹಿಸುವವರೆಗೂ ಒಮ್ಮೆಯೂ ದ್ರೋಹದ ಯೋಚನೆ ಮಾಡಿದವನಲ್ಲ. ಹಾಗಾಗೇ ಆವತ್ತಿನಿಂದ ಇವತ್ತಿನವರೆಗೂ ಕರ್ಣ ನಿಭಾಯಿಸಿದ ಸ್ನೇಹ ಬಹುಶ: ಈ ಜಗತ್ತಿನಲ್ಲೇ ಮಾದರಿ. ಅದರಲ್ಲಿ ಸಂಶಯವೇ ಇಲ್ಲ. ಕನಿಷ್ಟ ಅವನು ನುಡಿದು ಬೆಂಬಲಿಸಿದಂತೆ ತನ್ನನ್ನು ಬೆಂಬಲಿಸಿದವರು ಯಾರು...ಉಹೂ೦... ಒಂದೇ ಒಂದು ದಿನಕ್ಕೂ ಯಾರೆಂದರೆ ಯಾರೂ ಇಲ್ಲ. ಕರ್ಣ ಮೊದಲ ದಿನದಿಂದ ಇವತ್ತಿನವರೆಗೂ ತನ್ನನ್ನು ದೊರೆ ಎಂದ. ಇವತ್ತಿಗೂ ಅವನ ನಿಷ್ಠೆ ದೊರೆಯೆಡೆಗೆ. ವೈರತ್ವವೇನಿದ್ದರೂ ಈ ಸಿಂಹಾಸನಕ್ಕೆ ವಿರೋಧಿಸುವ ಯಾರಿದ್ದರೂ ಅವರೊಂದಿಗೆ. ಹಾಗಾಗೇ ಈ ಪಿತಾಮಹ ಮತ್ತು ಗುರು ದ್ರೋಣರ ವಿರೋಧಕ್ಕೂ ಅವನು ಸಿಲುಕಬೇಕಾಯಿತಲ್ಲ. ಅವನು ಹೇಳುವುದೂ ಸರಿನೇ,
"..ಭೀಷ್ಮ ಮತ್ತು ದ್ರೋಣರು ಮಹಾರಥಿಗಳು ನಿಜವೇ ದುರ್ಯೋಧನಾ. ಅವರಿಬ್ಬರೂ ಅಜೇಯರು ಎನ್ನುವುದರಲ್ಲೂ ಸಂಶಯವೇ ಇಲ್ಲ. ಆದರೆ ಇವರು ಪಾಂಡವರನ್ನು ಕೊಂದು ನಿನಗೆ ಯುದ್ಧ ಗೆದ್ದು ಕೊಡುತ್ತಾರೆ ಎನ್ನುವ ಮಾತಿನಲ್ಲಿ ಒಂದ೦ಶವೂ ಸತ್ಯ ಕಂಡುಬರುತ್ತಿಲ್ಲ. ಎಲ್ಲಿಯವರೆಗೆ ಒಬ್ಬ ಪಾಂಡವನ ತಲೆ ಉರುಳುವುದಿಲ್ಲವೋ ಅಲ್ಲಿಯವರೆಗೆ ಯುದ್ಧ ಗೆದ್ದಂತಾಗುವುದಿಲ್ಲ. ಅಕ್ಕಪಕ್ಕದ ಅಕ್ಷೆಹಿಣಿ ಸೈನ್ಯವನ್ನೆಲ್ಲಾ ಹೆಸರಿಗಷ್ಟೆ ತರಿದು ಹಾಕಬೇಕಾಗುತ್ತದೆ. ಅದೆಲ್ಲಾ ಯಾವ ಲೆಕ್ಕವೂ ಅಲ್ಲ. ಪಿತಾಮಹ ಮನಸ್ಸು ಮಾಡಿದರೆ ಒಂದೇ ಅಸ್ತ್ರದಲ್ಲಿ ಸೈನ್ಯ ಧೂಳಿಪಟವಾಗುವುದಿಲ್ಲವೇ. ಆದರೆ ಅವರು ಹಾಗೆ ಮಾಡುವುದಿಲ್ಲ. ಇತ್ತ ಪಾಂಡವರನ್ನೂ ಕೊಲ್ಲುವುದಿಲ್ಲ. ಅತ್ತ ಸೈನ್ಯವನ್ನೂ ದಿನಕ್ಕಿಷ್ಟಿಷ್ಟೆ ತರಿಯುತ್ತಾರೆ. ಅಲ್ಲಿಗೆ ವಾರಗಟ್ಟಲೆ ತಿಂಗಳುಗಟ್ಟಲೆ ಯುದ್ಧ ನಡೆಯುತ್ತಲೇ ಇರಬೇಕು. ಬೇಸರಪಟ್ಟೇ ಯುದ್ಧಾಳುಗಳು ಕೊನೆಕೊನೆಗೆ ಸೋತುಬಿಡುತ್ತಾರೆ.. ನೋಡುತ್ತಿರು... " ಎಷ್ಟು ನಿಜ ಅವನ ಮಾತು. ಎಂಥಾ ದೂರದೃಷ್ಠಿ ಅವನದ್ದು.
ಇವತ್ತಿಗೂ ಯುದ್ಧದ ಪೂರ್ವಭಾವಿ ಸಭೆಗಳಲ್ಲಿ ಒಮ್ಮೆಯೂ ಗೆಲ್ಲುವ ಬಗ್ಗೆ ಮಾತಾಡಲೇ ಇಲ್ಲ. ಯುದ್ಧೋತ್ಸಾಹ ಬಿಟ್ಟರೆ ಬೇರೇನೂ ಕಂಡೇ ಬರುತ್ತಿಲ್ಲ. ನಿಜವಾದ ಯುದ್ಧೋತ್ಸಾಹದ ಜೊತೆಗೆ ಗೆಲುವಿನ ತುಡಿತ ಇರುವ ಮಹಾರಥಿಯೆಂದರೆ ಕರ್ಣ ಮಾತ್ರ. ಉಳಿದಂತೆ ನಾನು ಸ್ವತ: ನಿಂತರೆ ಪಾಂಡವರು ಯಾರೆಂದರೆ ಯಾರೂ ಈಡಾಗುವುದಿಲ್ಲ ತನಗೆ. ಭೀಮನೊಬ್ಬನೆ ಸರಿ ಎದುರಾಳಿ. ಅವನನ್ನು ಬಗ್ಗು ಬಡಿಯಲೆಂದೇ ಹದಿಮೂರು ವರ್ಷಗಳ ಕಾಲ ಗದಾಯುದ್ಧ ಮಾಡಿ ಯುದ್ಧದ ಏಟುಗಳನ್ನು ತಡೆಯಲೆಂದೆ ದೇಹವನ್ನು ವಜ್ರದೇಹಿಯಾಗಿಸಿದ್ದೇನಲ್ಲ. ಆದರೆ ಹೀಗೆ ಕರ್ಣನನ್ನು ದೂರವಿಟ್ಟುನನಗೆ ಬೆಂಬಲ ಸಿಗದಂತೆ ಮಾಡಿ ಪಾಂಡವರನ್ನು ರಕ್ಷಿಸುತ್ತಾ ಸೈನ್ಯವನ್ನು ಹೊಡೆಯುವ ಯೋಜನೆಯಿಂದ ನನ್ನ ಕೈಗೆ ಪಾಂಡವರ ಪೈಕಿ ಯಾರೊಬ್ಬರೂ ಸಿಗಲಾರರು. ಭೀಮನ ಹೊರತಾಗಿ ಯಾರು ಎದುರಾದರೂ ಅಲ್ಲಿಯೇ ಅವರ ಕಥೆ ಮುಗಿದುಹೋಗುತ್ತದೆ. ಆದ್ದರಿಂದಲೇ ಅವರನ್ನು ರಕ್ಷಿಸುತ್ತಲೇ ಹೋರಾಡುವ ಸೇನಾಪತಿ ಭೀಷ್ಮ ಯುದ್ಧ ಗೆಲ್ಲಲಾರ. ಆದರೆ ಇತ್ತ ವಚನ ಬದ್ಧನಾಗಿ ಹಸ್ತಿನಾವತಿಯ ತನ್ನ ಸೈನ್ಯವನ್ನೂ ಸೋಲಿಗೂ ಬಿಡಲಾರ. ಇದೊಂದು ತರಹ ಎಡಬಿಡಂಗಿತನವಲ್ಲದೇ ಬೇರೇನಲ್ಲ.
ನಿಂತಲ್ಲೆ ಒಮ್ಮೆ ಸುತ್ತೆಲ್ಲಾ ಕಣ್ಣಾಡಿಸಿದ ದುರ್ಯೋಧನ. ಅಲ್ಲೆಲ್ಲ ಕೊಂಚ ಕೊಂಚ ಕುದುರೆಗಳ ಕಾಲ್ಕೆರತದ ಶಬ್ದ ಬಿಟ್ಟರೆ ಎಲ್ಲಾ ಭೀಕರ ಯುದ್ಧದ ಮುನ್ನಿನ ಪ್ರಶಾಂತತೆ ಅದು. ಅದವನಿಗೆ ಅರಿವಾಗುತ್ತಲೇ ಇತ್ತು. ಸಮುದ್ರ ಮೊರೆಯುವ ಮುನ್ನಿನ ಅನಾಹುತಕಾರಿ ನಿಶಬ್ದ ಅದು. ಅಲೆ ಅಲೆಯಾಗಿ ಬಂದ ನೆನಪುಗಳ ಭಾರಕ್ಕೆ ಬಳಿಯಲ್ಲೇ ಇದ್ದ ದಿಬ್ಬವನ್ನೇರಿ ಕುಳಿತು ಕೈ ಹಿಂಚಾಚಿ ಆಗಸವನ್ನೆ ದಿಟ್ಟಿಸಿದ ದುರ್ಯೋಧನ.
ಅವನಿಗೆ ಗೊತ್ತಿತ್ತು. ಸಂಪೂರ್ಣ ಹದಿನೆಂಟು ಅಕ್ಷೆಹಿಣಿ ಸೈನ್ಯವನ್ನು ಬಗ್ಗು ಬಡಿದು ಬೀಗಿದರೂ ತನ್ನೊಬ್ಬನನ್ನುಹಸ್ತಿನಾವತಿಯ ಕೌರವ ದುರ್ಯೋಧನನನ್ನು ಗೆಲ್ಲದ ಅಥವಾ ಕೊಲ್ಲದ ಹೊರತು ಪಾಂಡವರು ಎಂದಿಗೂ ವಿಜಯಿಗಳಾಗಲಾರರು. ಹಾಗೆಯೇ ನಾವು ಕೂಡಾ ಒಬ್ಬ ಪಾಂಡವನನ್ನಾದರೂ ಕೊಲ್ಲದೇ ಯುದ್ಧ ಮುಗಿಯುವುದಿಲ್ಲ. ಅದವರಿಗೂ ಗೊತ್ತಿದೆ. ಅದನ್ನು ದೇವಾಂಶ ಸಂಭೂತನೆಂದೇ ಹೆಸರಾದ ಕೃಷ್ಣ ಕೂಡಾ ಹೇಳಿದ್ದಾನಂತಲ್ಲ. ದುರ್ಯೋಧನನೊಬ್ಬನೆ ಸೈನ್ಯ. ಅವನೊಂದಿಗೆ ಆರಂಭ ಅವನೊಂದಿಗೆ ಅಂತ್ಯ. ಉಳಿದೆಲ್ಲಾ ಅವರವರ ಪಾಪ ಕರ್ಮಗಳಿಗನುಸಾರವಾಗಿ ಆಯುಷ್ಯ ಮುಗಿಸಿಕೊಂಡವರು ಅಷ್ಟೆ.
ಹಾಗಾಗೇ ನಾಳಿನಿಂದ ನಡೆಯಲಿರುವ ಯುದ್ಧ ನಿರ್ಣಾಯಕ.

No comments:

Post a Comment