ಪ್ರವಾಸ ಎಂಬ ವಿಶ್ವವಿದ್ಯಾಲಯ ...
ಅಲ್ಲಿ ಹುಳುಗಳನ್ನು ತಿಂದು ಬದುಕುವವರಿದ್ದಾರೆ... ಮನೆಯೇ ಕಟ್ಟಿಕೊಳ್ಳದೆ ಇನ್ಯಾರದ್ದೋ ಮನೆಯಲ್ಲಿ ಬದುಕು ತೆಗೆಯುವವರಿದ್ದಾರೆ.. ದಿನಕ್ಕೊಮ್ಮೆ ಹೊರಗಿನವರಿಗೆ ಊಟ ಹಾಕದೆ ತಾವು ಅನ್ನ ತಿನ್ನುವುದಿಲ್ಲ ಎನ್ನುವವರು ಒಂದೆಡೆಯಾದರೆ, ಅಪ್ಪಟ ಹಾವಿನ ಮರಿಗಳನ್ನು ಇನ್ನು ಜೀವಂತವಿದ್ದಾಗಲೇ ಚರ್ಮ ಸುಲಿದು ಅದನ್ನು ತೋರಣದಂತೆ ನೇತಾಡಿಸಿ, ಅಷ್ಟೆ ವೇಗವಾಗಿ ಉಪ್ಪು ಖಾರ ಸವರಿ ಮಸಾಲೆ ಚಿಪ್ಸ್ ಮಾಡಿಕೊಳ್ಳುವವರೂ ಗೇಣು ಅಳತೆ ದೂರದಲ್ಲಿದ್ದಾರೆ. ಬೆಳಿಗ್ಗೆ ಎದ್ದ ಕೂಡಲೇ ಕುಟುಂಬವೆಲ್ಲಾ ಸಾಲುಸಾಲಾಗಿ ಕೂತು ಸ್ಥಳಿಯ ತಂಬಾಕಿನ ಜುರ್ಕಿ ಎಳೆಯುವವರದ್ದೇ ಒಂದು ಕಥೆಯಾದರೆ, ಬೆಳ್‍ಬೆಳಿಗ್ಗೆ ಎದ್ದು ಗುಡ್ಡದ ಒಳಕ್ಕೆ ಓಡಿ ಮಧ್ಯಾನ್ಹದ ಹೊತ್ತಿಗೆ ಇಳಿದು ಬರುವ ಊರ ಜನಗಳದ್ದೇ ಇನ್ನೊಂದು ಕಥೆ.
ಸಹ್ಯಾದ್ರಿಯ ಮಡಿಲಲ್ಲಿ ಯಾಣಕ್ಕೆ ಹತ್ತುತ್ತಾರಾದರೂ ಪಕ್ಕದ ಒಡ್ಡಿಘಾಟು ಅಪರಿಚಿತವೇ. ಸಿಂಹಗಢ ಮೈನವಿರೇಳಿಸುತ್ತದೆಯಾದರೂ ಕಾಲೇ ಇಟ್ಟಿರುವುದಿಲ್ಲ. ಮಾಚು ಪಿಚುಗೆ ಸಡ್ಡು ಹೊಡೆಯುವ " ಮಾಂಗಿ-ತುಂಗಿ " ಬಗ್ಗೆ ಯಾರಿಗೆ ಗೊತ್ತಿದೆ..?ಚೈನಾ ಗೋಡೆಯ ಪ್ರತಿಕೃತಿ ಪಕ್ಕದ ರಾಜ್ಯದಲ್ಲಿ ಮೈಲಿಗಟ್ಟಲೇ ಹರಡಿಕೊಂಡಿದೆ. ಸ್ವಿಸ್ ಎಂಥಾ ಎದ್ಭುತ ಎನ್ನುವವರಿಗೆ ಅದಕ್ಕಿಂತಲೂ ಸ್ವಚ್ಛ ಮತ್ತು ದಿನಕ್ಕೆ ನಾಲ್ಕಡಿ ಹಿಮ ಬಿದ್ದು ಯಾವಾಗಲೂ ಮಂಜುಸುರಿಯುವ ಹಿಮಭೂಮಿ ಖಿಲೋನ್‍ಭಾಗ್ ಗೊತ್ತೇ ಇರುವುದಿಲ್ಲ. ಸುಖಾ ಸುಮ್ಮನೆ ಲಕ್ಷಾಂತರ ಖರ್ಚು ಮಾಡಿ ಆಸ್ಟ್ರೇಲಿಯಾ ಸುತ್ತುವವರಿಗೆ ಅದಕ್ಕಿಂತಲೂ ಎತ್ತರಕ್ಕಿರುವ ಕಿಬ್ಬೇರ್ ಕನಸಲ್ಲೂ ಬಂದಿರಲಿಕ್ಕಿಲ್ಲ. ಯಾಕೆಂದರೆ ಇದು ಸ್ವದೇಶದ್ದು. ವಿದೇಶಿಯರೇ ಇರುವ ಸ್ವದೇಶಿ ಹಳ್ಳಿ ಛಾತ್ರಾ ಗೊತ್ತಾ..? ಇರಲಿಕ್ಕಿಲ್ಲ. ಕಾರಣ ಸಧ್ಯಕ್ಕೆ ಅಲ್ಲೆಲ್ಲ ಅಲೆದಿದ್ದು ನಾನೊಬ್ಬನೆ.
ಅಪರೂಪದ ಸರೋವರಗಳನ್ನು ಹಾಡಿ ಹೊಗಳುತ್ತಾ ವಿದೇಶಕ್ಕೆ ಹಾರುವವರಿಗೆ ಥ್ರೀ ಇಡಿಯಟ್ಸ್ ಬರುವವರೆಗೆ ಪಾಂಗಾಂಗ್ ಬಗ್ಗೆ ಗೊತ್ತೇ ಇರಲಿಲ್ಲ. ಇವತ್ತಿಗೂ ನೀರ ಮೇಲಿಂದ ಚೈನಾ ಬಾರ್ಡರು, ಅದಕ್ಕೂ ಮೇಲೆ ನಿಂತರೆ ಈ ಕಡೆಯ ಬಂಗ್ಲಾದೇಶದ ಅಂಗಡಿಗಳನ್ನು ಪಕ್ಕದಲ್ಲೇ ಕಾಣಿಸುವ ಅಧ್ಬುತತೆಗಳು ನಮ್ಮ ನೆಲದಲ್ಲೇ ಬೆರಳಿಗೆ ತಾಗುವಷ್ಟು ಹತ್ತಿರದಲ್ಲಿ ಹೊರಳುತ್ತಿವೆ. ಕಾಡು, ನೀರು ನೋಡಲೆಂದೇ ಅಮೇಝಾನ್‍ಗೆ ಹೋಗುವವರಿಗೆ ಇವತ್ತು ಅದರ ಅಪ್ಪನಂತಹ ಕಾಳಿ ಕೊಳ್ಳದ, ಕಾನೇರಿಯ ಒಡಲಿಗೆ ಇದುವರೆಗೂ ಯಾವನೂ ದೋಣಿ ಇಳಿಸುವ ಸಾಹಸವನ್ನೇ ಮಾಡಿಲ್ಲ ಎನ್ನುವುದು ಗೊತ್ತೇ ಇಲ್ಲ.
ಒಂಟೆಗಳಿಲ್ಲದೆ ಇಲ್ಲದೆ ಬದುಕೇ ಇಲ್ಲ ಎನ್ನುವವರು ಕೆಲವರಾದರೆ, ಎಂತದ್ದೇ ಮನೆ ಇರಲಿ ಮರದ ಕೆಳಗೆ ಅಡುಗೆ ಮಾಡಿದರೆ ಜೀವಕ್ಕೂ ಮೈಗೂ ಹಿತ ಎನ್ನುವ ಅಪ್ಪಟ ದಾರಿಹೋಕರದ್ದೇ ಹೊಸ ಲೋಕ. ನೀವೇನೆ ಮಾಡಿಕೊಳ್ಳಿ ನಾನು ಜೀವಮಾನವೀಡಿ ನಿಂತೇ ಇರುತ್ತೆನೆನ್ನುವ ಸನ್ಯಾಸಿಯೂ ಅಲ್ಲದ ಅಘೋರಿಯೂ ಅಲ್ಲದ ಅಪ್ಪಟ ಹಟಮಾರಿಯ ಲೋಕದ ಸಾಧಕರ ಊರು ಮಾಶೇಥ್ ಒಂದೆಡೆಯಾದರೆ, ಕಣ್ಣಲ್ಲೆ ಕೊಂದುಬಿಡಲೇ ಎನ್ನುವ ಮಾಟಗಾತಿಯರ ಬೆರಗಿನ ಪ್ರಪಂಚವೇ ಅಧ್ಬುತ.
ಜಗತ್ತಿನ ಬೆಳಗುಗಳು ಕಣ್ತೆರೆದುಕೊಳ್ಳುವುದೇ ಆಯಾ ಊರಿನ ಸಂಜೆಗಳಲ್ಲಿ ಎನ್ನುವುದು ತುಂಬಾ ಜನ ಪ್ರವಾಸಿ ಪುಟ ಬರೆಯುವವರಿಗೆ ಗೊತ್ತೇ ಇಲ್ಲ. ಏನಿದ್ದರೂ ಇವತ್ತು ಗೂಗಲ್ ಮಾಡುವವರು ಒಮ್ಮೆ ಅಂಥ ಸಂಜೆಯ ಹೊತ್ತಿನ ಅಯಾ ಊರಿನ ಬದಲಾಗುವ ಬೆರಗುಗಳನ್ನೂ ಅದರ ಬದುಕಿನ ಬದುಕನ್ನೂ ಹತ್ತಿರದಿಂದ ನೋಡಬೇಕು.. ಕೇವಲ ಬೆಂಗಳೂರಿನ ಮೆಜೆಸ್ಟಿಕ್ಕಿಗೆ ಕಣ್ತೆರೆದು ಆತುಕೊಂಡು ನೋಡುವ ನಮಗೆ ಇಂಥಾ ಇಳಿಸಂಜೆಗಳಲ್ಲಿ ದೊರೆಯುವ ಬದುಕಿನ ಪಾಠ ಅರಗಿಸಿಕೊಳ್ಳಲು ಮೆದುಳಿನ ಅಷ್ಟೂ ನ್ಯೂರಾನ್ಸ್‍ಗಳು ಖರ್ಚಾದಾವು.
ತಿರುಗಾಟದ ಮೂಲಕ ಬದುಕಿನ ಪಾಠ ಮತ್ತು ಅಲ್ಲಿ ಅನುಭವಕ್ಕೀಡಾಗುವ ಸಮಸ್ಥಿತಿಯ ಪಲ್ಲಟದಲ್ಲಿ ಮೆದುಳಿನಲ್ಲಿ ಸೇರಿಹೋಗುವ ಹೊಸ ಚಿತ್ರಣಗಳು ಮರೆಯಾಗುವುದು ಈ ಜನ್ಮದಿಂದ ಮರೆಯದಾಗ ಮಾತ್ರವೇ. ಪ್ರವಾಸ ಎನ್ನುವುದು ಕ್ಲಾಸಿನಲ್ಲಿ ಕೂತು ಕೇಳಿದಂತಲ್ಲ. ನಾನು ಇವತ್ತಿಗೂ ಭಾಷೆ ಬಾರದ, ಅಪೂಟು ಇಂಗ್ಲೀಷು ಮತ್ತು ಹಿಂದಿಯೆಂದರೆ ಏನು ಎನ್ನುವಂತಹ ಸ್ಥಳದಲ್ಲೂ ಬೆನ್ನಿಗೆ ಬ್ಯಾಗೇರಿಸಿಕೊಂಡು ಅಲೆದು ಬಂದಿದೇನೆ. ಬದುಕು ಯಾವತ್ತೂ ಕೈಕೊಡಲಿಲ್ಲ. ಆದರೆ ಚೆನ್ನಾಗಿ ಭಾಷೆ ಗೊತ್ತಿರುವ ಊರುಗಳಲ್ಲಿ ಯಾಮಾರಿದ್ದೇನೆ ಕಾರಣ ಜನ ಇಲ್ಲಿ ಅಗತ್ಯಕ್ಕಿಂತ ಹೆಚ್ಚಿಗೆ ಬದುಕುತ್ತಿದ್ದಾರೆ.
ಹಾಗಾಗೇ ಏನೂ ಅಲ್ಲದ ಊರಿನಲ್ಲೂ ಅದ್ಭುತಗಳಿವೆ ಅಂದಿದ್ದು. ಸ್ವತಂತ್ರ ಪೂರ್ವದ ಊರ ಸ್ಥಿತಿಗತಿ ಹೇಗಿತ್ತೋ ಮತ್ತು ಆಗ ಯಾವ ಮಟ್ಟದಲ್ಲಿ ಜನ ಬದುಕುತ್ತಿದ್ದರೋ ಈಗಲೂ ಅಲ್ಲಿಂದ ಒಂದಿಂಚೂ ಮುಂದೆ ತೆವಳದ ಊರುಗಳು ಲೆಕ್ಕಕ್ಕೆ ನಿಲುಕದಷ್ಟಿವೆ. ಇವತ್ತು ಹೊರಟರೆ ನಾಳೆಯೇ ವಾಪಸ್ಸು ಬರಬೇಕೆನ್ನಿಸುವಷ್ಟು ಒಳಗಿರುವ ಹಳ್ಳಿಗಳು ಕರೆಂಟು, ಕುಡಿಯುವ ನೀರು, ಶಾಲೆ ಇತ್ಯಾದಿಗಳಿಂದ ವಂಚಿತವಾಗಿ ಅಪ್ಪಟ ಭೂಮಿಯ ಮೇಲೆ ಸಂಪರ್ಕಿತ ನಡುಗಡ್ಡೆಯಂತೆ ಬದುಕುತ್ತಿರುವುದು ಕಣ್ಣಿಗೆ ರಾಚುವ ನಗ್ನಸತ್ಯ.
ಬಹುಶ: ಹಾಗಾಗೇ ಅವೆಲ್ಲಾ ಈಗಲೂ ಹಸಿರು ಹರಿಯದ ಭೂಮಿಯ ತೊಗಲಿನಂತೆ ಢಾಳಾಗಿ ಹಾಗೆ ಉಳಿದಿವೆ. ಇಷ್ಟಕ್ಕೆಲ್ಲಾ ಕಾರಣ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಬಹುಶ: ಈ ಜನ್ಮಕ್ಕೆ ಹೆಂಗೆ ತಿರುಗಿದರೂ ಮುಗಿಯದ ನನ್ನ ದೇಶದ ಅಧ್ಬುತ ಯಾರಿಗೂ ಬೇಕಿಲ್ಲ. ಏನಿದ್ದರೂ ಗೋವೆಯ ದಂಡೆ, ಗೋಕರ್ಣದ ಲಿಂಗ, ಮುಂಬೈ ನ ಚೌಪಾಟಿ, ಗುಜ್‍ನ ಸೋಮನಾಥ್, ಹಿಮಾಲಯದ ಶಿಮ್ಲಾ ಮತ್ತು ಕೊನೆಯಲ್ಲಿ ತೀರ ಹೆಚ್ಚೆಂದರೆ ಬುಡದ ಕನ್ಯಾಕುಮಾರಿಯಿಂದ ಮೇಲ್ಗಡೆಯ ಲೇಹ್‍ದಲ್ಲೆರಡು ದಿನ ತಿರುಗಿದರೆ ದೇಶ ಮುಗಿಯಿತು ಇನ್ನು ಬೇರೆ ದೇಶ ನೋಡೊಣ, ಇಲ್ಲೆಲ್ಲಾ ಬರೀ ಕೊಳಕು..ನಮ್ಮಲ್ಲಿ ಎನೂ ಸರಿ ಇಲ್ಲಾ ಎಂದು ದೇಶದ ಬಗ್ಗೆ ಗೊತ್ತಿಲ್ಲದೆ ಗೊಣಗುವವರ ಕಣ್ತೆರೆಸುವುದೇ ಈ ಅಲೆಮಾರಿಯ ಉದ್ದೇಶ. ನೂರು ಪ್ರವಾಸದ ಅನುಭವ ನನ್ನ ಬೆನ್ನಿಗಿದೆ.
ಪ್ರವಾಸ ಎನ್ನುವುದು ಜಗತ್ತಿನ ಅತಿದೊಡ್ಡ ಪ್ರಾಯೋಗಿಕ ಪಾಠಶಾಲೆ. ಅದು ನಿಮ್ಮನ್ನು ಹೇಗೆ ಮಲಗಬೇಕು ಎನ್ನುವುದರಿಂದ ಹಿಡಿದು, ನೀರನ್ನು ಹೇಗೆ ಕುಡಿಯಬೇಕು ಎನ್ನುವುದರ ಜತೆಗೆ ಅಂಗೈಯನ್ನು ಮುಟಿಕೆ ಮಾಡಿಕೊಂಡು ಹೇಗೆ ಅಹಾರವನ್ನು ಕಾಯ್ದು ಸವಿಯಬೇಕು ಎನ್ನುವುದರವರೆಗೂ ಕಲಿಸುತ್ತದೆ. ಎರಡೇ ನಿಮಿಷದಲ್ಲಿ ಸ್ನಾನವನ್ನು ಹೇಗೆ ಮುಗಿಸಬೇಕೆನ್ನುವುದನ್ನು ಈ ಜನ್ಮಕ್ಕೆ ಕಲಿಯದವರೂ ಒಂದೇ ದಿನಕ್ಕೆ ಕಲಿತಿದ್ದಾರೆ. ನಿಂತೆ ತಿಂದು ತೇಗುವುದು ಹೇಗೆ, ಯಾವ ಕಮೋಡು ಇಲ್ಲದ ಜಾಗದಲ್ಲೂ ವ್ಯವಸ್ಥಿತವಾಗಿ ಶುಚಿಗೊಳಿಸಿಕೊಂಡು ಹೇಗೆ ಹೊರಬರಬೇಕೆನ್ನುವುದನ್ನು ಒಂದೇ ಪಾಠದಲ್ಲಿ ಹೇಳಿಕೊಡುವುದೇ ಪ್ರವಾಸ.
ನಮ್ಮ ಲಗೇಜು ನಮಗಿಂತ ಭಾರವಾಗಬಾರದು, ಅದರೆ ಅಗತ್ಯಬಿದ್ದರೆ ತಿಂಗಳೂ ಅದರಲ್ಲಿ ಕಳೆಯಬಹುದು ಎನ್ನುವಂತಿರಬೇಕೆಂಬ ಗುಟ್ಟನ್ನು ಕಲಿಸುವುದೇ ಪ್ರವಾಸ. ಅದೆಲ್ಲಕ್ಕಿಂತಲೂ ಮಿಗಿಲು ಎಷ್ಟು ಮಾತಾಡಬೇಕು ಎಷ್ಟು ಮಾತಾಡಬಾರದು, ಎಲ್ಲಿ ತಿನ್ನಬೇಕು, ಎಲ್ಲಿ ತಿನ್ನಬಾರದು, ಹೇಗೆ ತಿನ್ನಬೇಕು, ಹೇಗೆ ಹಸಿವು ನೀಗಿಸಿಕೊಂಡು ನಿಯಂತ್ರಿತವಾಗಿ ಬದುಕಬೇಕು ಮತ್ತದಕ್ಕಿಂತಲೂ ಮಿಗಿಲಾಗಿ ಹೇಗೆ ಮನುಷ್ಯ ತಿರುಬೋಕಿಯಾಗುತ್ತಲೇ ಚೆಂದದ ಸ್ನೇಹದ ಕಮೋಡಿನೊಳಗೆ ಗಿರಿಗಿಟ್ಲೆ ಆಡಬಹುದೆಂಬುವುದನ್ನು ಕಲಿಸುವುದು ಶುದ್ಧ ತಿರುಗಾಟ ಮಾತ್ರ.
ಇದರ ಹೊರತಾಗಿ ಬದುಕಿಗೆ ಯಾವ ಯುನಿವರ್ಸಿಟಿಯೂ ನಿಮಗೆ ಇಷ್ಟು ಅಗಾಧ ಪಾಠಗಳನ್ನು ಅಷ್ಟು ಚಿಕ್ಕ ಅವಧಿಯಲ್ಲಿ ನೆನಪಿಡುವಂತೆ ಕಲಿಸಲಾರವು. ಪ್ರಯಾಸವನ್ನು ಮರೆತು ಬಿಡುತ್ತೇವೆ ಆದರೆ ಪ್ರವಾಸವನ್ನಲ್ಲ. ಅಂಥಾ ತಿರುಗಾಟದ ಅನುಭವಗಳನ್ನು ಬರೆಯಲಿದ್ದೇನೆ .. ಪ್ರತಿವಾರ..
ಕಾರಣ ನಾನೇ
ಅಲೆಮಾರಿ..
No comments:
Post a Comment