Sunday, March 27, 2016

ಅಲ್ಲಿ ಹುಳು ತಿಂದರೆ 
ಇಲ್ಲಿ ಕೂಳು..!

(ಶಿವಾಲಿಕಾ ಪರ್ವತ ಸಮೂಹದಲ್ಲಿ ಏರುತ್ತಾ ಸಾಗಿ ಸೇರಬೇಕಾದ ಕುಠಿ ಊರಿಗೆ ಈ ಹೆಸರು ಲಭ್ಯವಾದದ್ದು ಪಾಂಡವರನ್ನು ಕೌರವರಿಂದ ರಕ್ಷಿಸಲು ಕುಂತಿ ಹಸ್ತಿನಾಪುರದಿಂದ ಇಲ್ಲಿಗೆ ಬಂದು ನೆಲೆಸಿದ್ದಕ್ಕಾಗಿ. ಊರಿನ ಸೌಂದರ್ಯಕ್ಕೆ ಶಿಖರ ಪ್ರಾಯವಾಗಿ ಸುತ್ತುವರಿದ ಕಲ್ಲಿನ ಶಿಥಿಲ ಕೋಟೆ ಹಸಿರಿನ ಕ್ಯಾನ್ವಾಸ್ ಮೇಲೆ ಪ್ರಕೃತಿ ಬರೆದ ಚಿತ್ರದಂತೆ ಕಾಣುತ್ತದೆ.) 
ಅಲ್ಲಿ ಜೀವನಕ್ಕೆ, ಜೀವಕ್ಕೆ ಭರಿಸಲಾಗದ ಚಳಿಯ ಹೊರತು ಇನ್ನೇನೂ ಇಲ್ಲ. ಉಪ್ಪನ್ನು ಹೊತ್ತುಕೊಂಡು ಹೋಗುವುದಕ್ಕೂ ಅನಾಮತ್ತು ವಾರಕಾಲ ಮೇಲ್ಮುಖವಾಗಿ ನಡೆಯಬೇಕಾಗುತ್ತದೆ. ಯಾವ ಪರ್ವತ ಯಾವ ಕಡೆಯಲ್ಲಿ ದಿಕ್ಕು ಬದಲಿಸುತ್ತದೋ, ಯಾವ ನದಿಯ ಪಾತ್ರ ಯಾವ ಕಡೆಗೆ ತಿರುಗುತ್ತದೋ ಎನ್ನುವುದ ಊಹಿಸಲಾಗದಷ್ಟು ಅನಿಶ್ಚಿತತೆ ಆ ದಾರಿಯಲ್ಲಿದೆ. ಅಂತಹದರಲ್ಲಿ ಕ್ರಮಿಸಿ ಮನೆಗೆ ಸಾಮಾನು ಸೇರಿದ0ತೆ ಸರ್ವಸ್ವವನ್ನೂ ಒದಗಿಸಿಕೊಂಡು, ಮದುವೆ, ಬಸರು, ಬಾಣಂತನ, ಆಗೀಗ ಕಾಡುವ ಕಾಯಿಲೆ ಇತ್ಯಾದಿಗಳೊಂದಿಗೂ ಏಗುತ್ತಾ, ಆದರೂ ಅರಪಾವಿನಷ್ಟು ಬೇಸರಿಸದೆ ಅಲ್ಲೇ ಬದುಕು, ಬೆವರು, ಅನ್ನ ಎಲ್ಲವನ್ನೂ ಕಂಡುಕೊಂಡು ಜನಜೀವನವನ್ನು ನಡೆಸುತ್ತಿರುವ ಜನರಿಗೆ ತಮ್ಮ ಊರೆಂದರೆ ಅಷ್ಟೇ..!ಅದರಷ್ಟು ಸ್ವರ್ಗ ಸದೃಶ್ಯ ಇನ್ನೊಂದಿಲ್ಲ..
ಶಿಲ್ಲಿ, ಪಲ್ತು, ಸಜ್ಜೆ ಸೇರಿದ0ತೆ ಹಲವು ಧವಸ ಧಾನ್ಯಗಳು, ಜಿಂಕರ್, ಜೀನ್, ತಂಪಾಲ್ಕುಗಳ ಅಹಾರ ಕಣಜ, ಜಗತ್ತಿನಲ್ಲೆಲ್ಲೂ ಇಲ್ಲದ ಶಿಲ್ಲಿಕುರ ಎಂಬ ತಿಂಡಿ, ಫೈನ್, ಆಕ್ರೋಟ್ ಮರಗಳ ಕಾಡಿನ ಮೇಲ್ಭಾಗಕ್ಕೆ ಸ್ವರ್ಗ ಸಮಾನ ದಾರಿ ಕ್ರಮಿಸಿ, ಭೋಜಪತ್ರಗಳ ಕಾಡಿನ ಧೂಪದ ವಾಸನೆಯಲ್ಲಿ ಚಲಿಸಿ, ಭಾರತದ ಕೊಟ್ಟ ಕೊನೆಯ ಅತ್ಯಂತ ಎತ್ತರದ, ಹದಿನೈದು ಸಾವಿರ ಅಡಿ ಎತ್ತರದಲ್ಲಿರುವ "ಪ್ರಾಣಿಗಳಿಗೆ ಪ್ರವೇಶವಿಲ್ಲ"ಎಂಬ ಊರೇ ಕುಠಿ. ಇಲ್ಲಿಗೆ ಹೊರಗಿನಿಂದ ಬರುವ ಕಚ್ಛರ ಮತ್ತು ಸ್ವತ: ಊರಿನ ಕುದುರೆ, ಕತ್ತೆಗಳಿಗೂ ಊರ ಹೊರಗೇ ತಂಗುದಾಣ.
ಇತ್ತ ಕುದುರೆ, ಅತ್ತ ಕತ್ತೆಯೂ ಅಲ್ಲದ ಕಚ್ಛರ ಎಂಬ ಕುಕತ್ತೆಯನ್ನು ಸಾಮಾನು, ಇತರೆ ಸಾರಿಗೆಯನ್ನಾಗಿ ಬಳಸಿಕೊಳ್ಳುವ, ಕೆಳಗಿಳಿದರೆ ಹಿಂದಿರುಗಲು ಹತ್ತು ದಿನ ಬೇಡುವ ಊರಿನ ವೈಶಿಷ್ಠ್ಯವೆಂದರೆ ಮನೆಗಳ ಕಲಾವಂತಿಕೆ. 140 ಜನಸಂಖ್ಯೆ ಕುಠಿಯ ಪ್ರಮುಖ ಅಂಶ ಸಮಬಾಳು ಸಮಪಾಲು. ಎತ್ತರದ ಪರ್ವತ ಪ್ರದೇಶದ ಕೊರಕಲಿನ ಕುರುಚಲು ಕಾಡಿನ ಬುಡ ಅಗೆದು ಹುಳುಗಳನ್ನು ಹುಡುಕಲು ಒಟ್ಟಾಗಿ ತೆರಳುತ್ತಾರೆ. ಈ ಪರ್ವತದಲ್ಲಿ ಲಭ್ಯವಿರುವ ಹುಳುಗಳು ವರ್ಷಕ್ಕೆ ಎಳೆಂಟು ಲಕ್ಷ ರೂಪಾಯಿ ದುಡಿದುಕೊಡುತ್ತವೆ. ಚಿನ್ನಕ್ಕಿಂತಲೂ ದುಬಾರಿ.
 ಅದಕ್ಕಾಗಿ ಹಿಮಕರಗುತ್ತಿದ್ದಂತೆ ಹುಳು ಆರಿಸುವ ಕೆಲಸ ಶುರು. ಹುಡುಗರು, ಗಂಡಸರು ಇದಕ್ಕಾಗಿ ವಾರಗಟ್ಟಲೇ ಬೆಟ್ಟವೇರುತ್ತಾರೆ ಪುನ: ಹಿಮ ಮುಚ್ಚಿಕೊಳ್ಳುವವರೆಗೂ. ಸಾಮಾನು, ಆಹಾರ ಪೂರೈಕೆ ಇನ್ನೊಂದು ತಂಡದ ಕೆಲಸ. ಸಾಮೂಹಿಕ ಕಾರ್ಯದಲ್ಲಿ ಬರುವ ಹಣದಲ್ಲಿ ಸಮಾನ ಪಾಲು ಊರಿಗೆಲ್ಲಾ. ವರ್ಷದ ಪ್ರಮುಖ ಉತ್ಪಾದನೆಯ ಕೆಲಸ ಸಾಂಗವಾಗುತ್ತದೆ. ಮುಂದಿನ ಋತುಮಾನದವರೆಗೆ ಹುಳುವಿನ ಸಹಜ ನೈಜ ಬೆಳವಣಿಗೆಗೆ ಅನುಕೂಲವಾಗುವ0ತಹ ವಾತಾವರಣ ಕಲ್ಪಿಸಿ ಬೆಟ್ಟ ಇಳಿಯುವ ಇವರ ಜೀವನಶೈಲಿ ತುಂಬ ಉಚ್ಛಸ್ಥರದಲ್ಲಿದೆ. ವರ್ಷದಲ್ಲಿ ನಾಲ್ಕು ಬಾರಿ ಹುಳುಗಳ ಬೇಟೆ. ಅದರ ಮಾರುಕಟ್ಟೆ ಕುದುರಿಸಲು ಟಿಬೆಟ್ಟಿಗೆ ಕುದುರೆ ಏರಿ ದೌಡು. ಅಲ್ಲಿಂದ ಚೀನಾ ತಲುಪುತ್ತದೆ.
ಉಳಿದ ಸಮಯದಲ್ಲಿ ತಂತಮ್ಮ ವೈಯಕ್ತಿಕ ಸಂಪಾದನೆಗಾಗಿ ಪ್ರವಾಸಿಗರನ್ನು ಕುದುರೆ ಮೂಲಕ ಕೈಲಾಸ-ಮಾನಸ ಸರೋವರ, ಅನ್ನಪೂರ್ಣೆ ಜೊತೆಗೆ ಹಿಂಬಾಲಕರಾಗಿ ಹುಡುಗರು ಜೂನ್‍ನಿಂದ ಸಪ್ಟೆಂಬರ್‍ವರೆಗೆ ದುಡಿಯುತ್ತಾ ಚಿಕ್ಕಚಿಕ್ಕ ಜಾಗದಲ್ಲಿ ಕೃಷಿ ಮಾಡುವ ಜೋಗ್‍ಕಾಂಗ್‍ರಿಗೆ ದುಡಿಮೆಯೇ ಮೂಲಮಂತ್ರ, ಸಮರಸವೇ ಜೀವಾಳ. ಸ್ತ್ರೀಯರು ಮನೆಯಲ್ಲಿ ಕಾರ್ಪೆಟ್ಟುಗಳನ್ನು ಹೆಣೆದು ಅದಾಯ ಜೊತೆಗೆ ಮನೆವಾರ್ತೆ. ಇವರು ವೈದ್ಯ ವಿಜ್ಞಾನಕ್ಕೂ ಸವಾಲು. ಸ್ಥಳೀಯವಾಗೇ ಕೈ ಕಾಲು ಮುರಿತದ ಅನಾಹುತಗಳಿಗೂ ಔಷಧಿಗಳಿವೆ. ಅದಕ್ಕಿಂತ ದೊಡ್ಡರೋಗ ಬಾಧಿಸಿಲ್ಲ. ಏಡ್ಸ್, ಕ್ಯಾನ್ಸರ್ ಗೊತ್ತೇ ಇಲ್ಲ. ಬಸಿರು, ಬಾಣಂತಿಯರು ಮಕ್ಕಳು ತೀರಿದ್ದು, ವೈಫಲ್ಯ ಎಂಬ ದಾಖಲೆಗಳಿಲ್ಲ. 
ದೆಹಲಿಯಿಂದ ಸಾವಿರ ಕಿ.ಮೀ. ದೂರದ ಕೊನೆಯ ವಾಹನ ಸೌಕರ್ಯದ ಊರು ದಾರ್ಚುಲ. ಅದರಾಚೆಗೆ ಕುಠಿ ತಲುಪಲು ಅನಾಮತ್ತು 113 ಕಿ.ಮಿ. ಕಾಲ್ನಡಿಗೆ. ದಾರ್ಚುಲಾದಿಂದ ಕಾಲ್ನಡಿಗೆಯಲ್ಲಿ ಸಾಗಿದ ನನ್ನ ಪಯಣ.. ಸಿರ್ಖಾ, ಗಾಲ, ಬುಧಿ ಮತ್ತು ಗುಂಜಿ ಹಳ್ಳಿಗಳ ಮೇಲೆ ನಿರಂತರ. ಉತ್ತರಾಖಂಡದಲ್ಲಾದ ಜಲಪ್ರಳಯದಲ್ಲಿ ತವಾಘಾಟವರೆಗಿನ ರಸ್ತೆ ಮಟಾಶ್. ಅಲ್ಲಿಂದ ನಾರಾಯಣ ಆಶ್ರಮದ ದುರ್ಗಮ ದಾರಿ. ಕಾಲ್ದಾರಿಯಲ್ಲಿ ಏರುತ್ತಾ 18 ಕಿ.ಮೀ ಗಾಲದ ಮೂಲಕ ಲಖನಪುರ ತಲುಪಿದಾಗ ಮೈಯೆಲ್ಲ ಕಿತ್ತು ಬರುವ ಬೆವರು. ದಾರಿಮೇಲೆ ಅನ್ನಪೂರ್ಣ, ಮಹಾದೇವ ಮತ್ತು ಶೇಷನಾಗ್‍ನಂತಹ ಪರ್ವತಾಗ್ರಹಗಳನ್ನು ಬಳಸಿಕೊಂಡು ನಾಲ್ಕೂವರೆ ಸಾವಿರ ಅಡಿ ಮೇಲಕ್ಕೇರಿದರೆ ಲಭ್ಯವಾಗುವ ಅಗಾಧ ಭೋಜಪತ್ರ ವೃಕ್ಷ ಮರಗಳ "ಶಿಯಾಲೇಕ್"ಎನ್ನುವ ಅವಿಸ್ಮರಣೀಯ ಪ್ರದೇಶ. ಮಧ್ಯದಲ್ಲಿ ಚಾರಣಿಗರ ತಂಗುದಾಣ ಲಾಮಾರಿ. ಜೋಲಿಂಗ್‍ಕಾಂಗ್ ಪರ್ವತ ಪ್ರದೇಶಕ್ಕೆ ಸೇರಿದ ಬುಡಕಟ್ಟು ಜನಾಂಗ ಜೋಗ್‍ಕಾಂಗ್. ಕೈಲಾಸ ಪರ್ವತದ ಅಲೆದಾಟದಲ್ಲಿ ಸಿಕ್ಕಿದ್ದು ಈ ಕುಠಿ.. 
ಕಾರಣ 
ನಾನೇ ಅಲೆಮಾರಿ.

Sunday, March 20, 2016


ಹನಿ ಹನಿ ಪೋಣಿಸಿದರಷ್ಟೇ  ನೀರು ..!
(ಮನಸ್ಸಿಗೆ ಬಂದಂತೆ ವ್ಯವಸ್ಥೆಯನ್ನು ಬಯ್ಯುತ್ತಾ ಬದುಕುತ್ತಿರುವ ನಮಗೆ, ಕಡಿದಾದ ಅಂಚಿನಲ್ಲಿ ಪ್ರಕೃತಿಯ ರೌದ್ರತೆಯ ನಡುವೆಯೂ ಹೇಗೆ ತೆವಳುತ್ತಿರುತ್ತದೆ ಎನ್ನುವುದರರಿವಿಲ್ಲ. ನಮ್ಮದೇನಿದ್ದರೂ ನಲ್ಲಿ ತಿರುಗಿಸಿದರೆ ನೀರು ಬರಬೇಕೆನ್ನುವ ಧಾವಂತ. ನೀರೇ ಇಲ್ಲದಿದ್ದರೆ..?)
ಅದು ಸಾರಕುಂಡಿ ಚಾರಣದ ಕೊನೆಯ ಎರಡು ದಿನಗಳವು. ದಿನಕ್ಕೆ ಸರಾಸರಿ ಹದಿನೈದು ಕಿ.ಮೀ. ಇದ್ದಿದ್ದು ಕೊನೆಗೆ ಐದಾರಕ್ಕಿಳಿದಿತ್ತು. ಬೇಸ್‍ಕ್ಯಾಂಪ್‍ನ ಸಮತೋಲನ ನಿರ್ವಹಿಸಲು ಸ್ವತ: ಕ್ಯಾಪ್ಟನ್ ಆಗಿದ್ದಾಗ ನಾನೂ ಅದನ್ನೇ ಮಾಡುತ್ತಿದ್ದೆ. ಆದರೆ ಈ ಬಾರಿ ಎರಡು ದಿನ ಎನ್ನುವುದೇಕೋ ಜೀರ್ಣವಾಗಲಿಲ್ಲ. ಹತ್ತು ಕಿ.ಮೀ.ಗೆ ಎರಡು ದಿನವಾ..? ಬೇಸ್‍ಕ್ಯಾಂಪ್ ಸಂಪರ್ಕಿಸಿ ನಾನು ಸ್ವಯಂ ಜವಾಬ್ದಾರಿಯ ಮೇಲೆ ಕೆಳಗೆ ಬರುತ್ತಿದ್ದೇನೆಂದು ತಿಳಿಸಿ, ಮಧ್ಯಾನ್ಹವೇ ಹೊರಟು,ರಾತ್ರಿಗೆ ಮನಾಲಿ ತಲುಪುವ ಯೋಜನೆ ನನ್ನದಾಗಿತ್ತು. ಆದರೆ ನಾಲ್ಕು ತಾಸಿನ ದಾರಿ ಬಾಕಿ ಇರುವಾಗಲೇ ವಾತಾವರಣ ತೀವ್ರ ಹದಗೆಟ್ಟು ಮಳೆ, ವಿಪರೀತ ಮಂಜು, ಮೂಳೆ ಕೊರೆಯುವ ಚಳಿ ಎಲ್ಲಾ ಸೇರಿ, ಅಂಥಾ ಸಂದರ್ಭದಲ್ಲಿ ತತಕ್ಷಣಕ್ಕೆ ಲಭ್ಯವಿರುವ ಹತ್ತಿರದ ಮನೆಯಕಡೆ ಕಾಲು ಹರಿಸಿದ್ದೆ. ಅಲ್ಲೆಲ್ಲಾ ಹೀಗೆ ಪೆಯಿಂಗ್ ಗೆಸ್ಟ್‍ಗಳಾಗೋದು ಮಾಮೂಲಿ.
ಮೂವತ್ತು ಮನೆಗಳ ಹಳ್ಳಿ ವಾಂಗ್ಜುಲಾ ಅಕ್ಷರಶ: ಎಂಟು ಸಾವಿರ ಅಡಿ ಎತ್ತರದಲ್ಲಿದೆ. ವ್ಯವಹಾರ, ಅಹಾರ ಎಲ್ಲದಕ್ಕೂ ಕೆಳಗಿಳಿಯಬೇಕು. ಚಾರಣಿಗರು, ಮೇಲಕ್ಕೇರಲಾಗದೆ ನಿಂತುಬೀಡುವ ಹೈಕರ್ಸು ಮತ್ತು ನನ್ನಂಥವರು ಅವರ ಗೆಸ್ಟುಗಳು. ಮನೆಯೊಂದನ್ನು ಸೇರಿ ಆವತ್ತಿನ ಊಟ, ವಸತಿ, ಸ್ನಾನ ಎಲ್ಲ ಸೇರಿ ಇನ್ನೂರವತ್ತೆಂದಾದ ಮೇಲೆ, ನೆನೆದಿದ್ದ ಬಟ್ಟೆ,ಬೂಟು ಕಳಚಿ ಬೆಚ್ಚಗೆ ಕುಳಿತು ದಾಲ್ಚಿನ್ನಿ ಬೆರೆಸಿದ ಚಹ ಕುಡಿಯುತ್ತಿದ್ದರೆ ಸ್ವರ್ಗವೆನಿಸಿದ್ದು ಸುಳ್ಳಲ್ಲ. ಟಿ.ವಿ. ಪೇಪರು, ಮೊಬೈಲು, ಯಾವದೆಂದರೆ ಯಾವ ಸಂಪರ್ಕವೂ ಇಲ್ಲದಿದ್ದರೂ ಮನೆ ಜನವೆಲ್ಲ ಇದ್ದ ಚಿಕ್ಕ ಕೊಠಡಿಯೊಳಗೆ ಅವರದ್ದೇ ಭಾಷೆಯಲ್ಲಿ ಕಚಪಚ ಎನ್ನುತ್ತ ಹರಟೆಯಲ್ಲಿತೊಡಗಿದ್ದಾರೆ. ಬಾಗಿಲಿಗೆ ತೆರೆದುಕೊಂಡಿರುವ ಅಡುಗೆ ಮನೆಯ ಶಾಖ ಒಳಭಾಗ ಬೆಚ್ಚಗಿಡುತ್ತಿದೆ. ಪಕ್ಕದಲ್ಲಿಯೇ ಬೂದಿ ತುಂಬಿದ ದೊಡ್ಡ ಬುಟ್ಟಿ. ಯಾವ ಪೂರ್ವಾಗ್ರಹವಿಲ್ಲದೆ ಬದುಕು ಅನುಭವಿಸುತ್ತಿರುವವರ ಸಂತಸದ ಹಿಂದೆ ಇದ್ದಿದು ಅಗಾಧ ಪರಿಶ್ರಮದ ಬದುಕು. ರಾತ್ರಿಗೆ ಸಪ್ಪೆತೋವೆ, ಮುದ್ದೆಬಿಸಿ ಅನ್ನ, ಜೊತೆಗೆ ನನಗ್ಯಾವತ್ತೂ ಹಿಡಿಸದ ಹಿಟ್ಟುಬಡಕ ಪುಲ್ಖಾ ತಿನ್ನಲಾಗದೆ ಟೀ ಮಾಡಿಸಿಕೊಂಡು ಬಿಸ್ಕೀಟು ತೊಯಿಸಿಕೊಂಡು ತಿಂದು ಮಲಗಿದ್ದೆ. 
ತೀರ ನಾಲ್ಕೂವರೆಗೆ ಬೆಳಗಾಗುವ ತುಂಬ ಚೆಂದದ ಪರಿಸರ. ಎಲ್ಲಿ ನೋಡಿದರೂ ಕ್ಲಿಕ್ಕಿಸಲು ಪೂರಕ ಎನ್ನಿಸುವ ಹಸಿರು ಮತ್ತು ಆಕಾಶದ ಅಧ್ಬುತ ನೀಲಿ ಬಾನಿನ ಸಂವಹನ. ಪರ್ವತಗಳು ಮಾತ್ರ ಸ್ವಚ್ಚ ಸ್ವಚ್ಛ. ಹಿಮ ಬಿದ್ದು ಹಾಳಾಗುವ ಮೈಲ್ಮೈ ಅದರದ್ದು. ಸುತ್ತಲೂ ಎರಡಡಿ ಸಮತಟ್ಟು ಕೊರೆದು ನಿರ್ಮಿಸಿರುವ ಏರಿಳಿತದ ಹೊಲ ಎನ್ನುವ ಪಟ್ಟಿಗಳಲ್ಲಿ ಆಲೂ, ಹಸಿರುಕಡ್ಲೆ ಬೆಳೆ. ತಗಡಿನ ಶೀಟುಗಳ ಎರಡಂತಸ್ತಿನ ಮನೆಯ ಅಂಗಳದಲ್ಲಿ ಎಲ್ಲ ಕಡೆಯಿಂದಲೂ ಮನೆಯಕಡೆ ಮುಖಮಾಡಿದ್ದ ಪ್ಲಾಸ್ಟಿಕ್ ಪೈಪುಗಳು. ಉಳಿದ ಪರಿಸರ ಹೊಸದಲ್ಲವಾದರೂ ಈ ಪೈಪುಗಳ ವ್ಯವಸ್ಥೆ ಅರ್ಥವಾಗಲಿಲ್ಲ. ಗುಡ್ಡದ ಆ ತುದಿ ಈ ತುದಿಯಿಂದ ಸಂಪರ್ಕವೇರ್ಪಡಿಸಿದ್ದ ಪೈಪುಗಳದ್ದು ಅಪ್ಪಟ ಲೋಕಲ್ ಇಂಜಿನಿಯರಿಂಗ್. ಏನಿದು ಎಂದೆ ಮನೆಯ ಹುಡುಗನಿಗೆ. ಅವನು ಬಾಯಿಗೆ ಇಟ್ಟಿದ್ದ ಕಡ್ಡಿ ತೆಗೆಯುತ್ತಾ, ಕಾಯಿಸುತ್ತಿದ್ದ ಬಿಸಿಲನ್ನು ಬಿಟ್ಟು ಎದ್ದು ಬಂದ.
`..`..ಇಲ್ಲಿ ಕರೆಂಟು, ನೀರು ಏನಿದ್ದರೂ ನಾವೇ ಮಾಡಿಕೊಳ್ಳಬೇಕಾದ ವ್ಯವಸ್ಥೆ.
ಅದಕ್ಕೆ ಅಲ್ಲಿ ಕಾಣುತ್ತಿದೆಯಲ್ಲ ಅಲ್ಲಿಯವರೆಗೆ ನೀರು ಸಹಜವಾಗಿ ಹರಿದು ಬರುತ್ತೆ.
ಅದಕ್ಕೊಂದು ದಾರಿ ಮಾಡಿ ಅದರ ಬಾಯಿಗೆ ಪೈಪು ಹಾಕಿದ್ದೇವೆ. ಬೇಸಿಗೆಯಲ್ಲಿ ಹಿಮ ಕರಗಿ ಹರಿಯುತ್ತಲೇ ಇರುತ್ತದೆ.
ಅದರೆ ಮಳೆ ಮತ್ತು ಚಳಿಗಾಲದಲ್ಲಿ ಪರಿಸ್ಥಿತಿ ಗಂಭೀರ. ಹಿಮ ಕರಗಲಾರಂಭಿಸಿದೊಡನೆ ಆ ಕಡೆಯ ಪೈಪಿನಲ್ಲಿ ಬೆಳಿಗ್ಗೆ
ಹನ್ನೊಂದರಿಂದ ಸಂಜೆ ಐದರವರಗೂ ನಿಧಾನಕ್ಕೆ ನೀರು ಹರಿಯುತ್ತದೆ. ಈ ಕಡೆಯದ್ದು ಸಹಜ ಹರಿವಿನಲ್ಲಿ ಹನಿಹನಿಯಾಗಿ ಇ
ತ್ತ ಕಡೆ ಬರುತ್ತಿರುತ್ತದೆ. ಇಲ್ಲೆಲ್ಲ ಭೂ ಕುಸಿತ ಸಾಮಾನ್ಯ. ಹಾಗಾದಾಗ ಪರ್ವತ ಹತ್ತಿ ಮತ್ತೆ ನೀರಿನ ದಾರಿ ಸರಿಮಾಡಿ ಬರುತ್ತೇವೆ.
ಆದರೆ ಮಳೆ ಚಳಿಯಲ್ಲಿ ನೀರು ಕರಗುವುದೇ ಇಲ್ವಲ್ಲ. ಪೈಪಿನಲ್ಲೂ ಹಿಮ ಗಡ್ಡೆಯಾಗಿಬಿಡುತ್ತದಲ್ಲ ಆಗ..? ನೀರು ಇಲ್ಲ.
ಏನೂ ಇಲ್ಲ. ಕಮೋಡಿಗೂ ಕೂಡಿಟ್ಟಿರುವ ಬೂದಿಯೇ ಗತಿ. ಅದಕ್ಕೆ ಹಾಗಾದಿರಲು ನೀರು ಕಾಯ್ದಿಟ್ಟು ಉಪಯೋಗಿಸುತ್ತೇವೆ.
ಅಷ್ಟಕ್ಕೂ ಅಂಗಡಿ,ಗಾಡಿ,ಸಂತೆ ಏನಿಲ್ಲದಿದ್ದರೂ ನಾವ್ಯಾಕಿಲ್ಲಿದ್ದೇವೆ..? ಇಷ್ಟು ಎತ್ತರದಲ್ಲಿ ಮನೆ ಕಟ್ಟಿಕೊಳ್ಳುವುದರಿಂದ ತೆರಿಗೆ ಬೀಳುವುದಿಲ್ಲ.
ಭೂಮಿ ಕಟ್ಟಿಗೆ ಫಿû್ರೀ. ಕೆಳಗೆ ಹೋದಷ್ಟೂ ರೇಟು ಜಾಸ್ತಿ...' ಅವನು ಮಾತಾಡುತ್ತಿದ್ದರೆ ನಾನು ತೆಪ್ಪಗಾಗಿಬಿಟ್ಟಿದ್ದೆ.
ಇನ್ನುಳಿದದ್ದು ಕೇಳುವ ಮೊದಲೇ ಮನಸ್ಸು ಬಗ್ಗಡವಾಗಿತ್ತು. ಸುಮ್ಮನೆ ಕೈಕುಲುಕಿ ಹೊರಡುತ್ತ,
`..ಇನ್ನೆಂದೂ ನಲ್ಲಿ ತಿರುಗಿಸಿಟ್ಟು ಹಲ್ಲುಜ್ಜುವುದೂ, ಶೇವ್ ಮಾಡುವುದೂ ಮಾಡಲಾರೆ..' ಎಂದೆ ಪ್ರಾಮಾಣಿಕವಾಗಿ.
ಅವನು ಬರಿದೇ ನಕ್ಕ. ಪ್ರಕೃತಿ ಎಲ್ಲ ಕಲಿಸುತ್ತಿರುತ್ತದೆ. ಕಲಿಯಬೇಕಷ್ಟೆ.
ಹಾಗೊಂದು ಅನುಭವಕ್ಕೆ ಕಾರಣವಾಗಿಸಿದ್ದು ಅಲೆಮಾರಿತನ. ಕಾರಣ ನಾನೇ ಅಲೆಮಾರಿ...


Sunday, March 13, 2016

ಪ್ರವಾಸ ಎಂಬ ವಿಶ್ವವಿದ್ಯಾಲಯ ... 

ಅಲ್ಲಿ ಹುಳುಗಳನ್ನು ತಿಂದು ಬದುಕುವವರಿದ್ದಾರೆ... ಮನೆಯೇ ಕಟ್ಟಿಕೊಳ್ಳದೆ ಇನ್ಯಾರದ್ದೋ ಮನೆಯಲ್ಲಿ ಬದುಕು ತೆಗೆಯುವವರಿದ್ದಾರೆ.. ದಿನಕ್ಕೊಮ್ಮೆ ಹೊರಗಿನವರಿಗೆ ಊಟ ಹಾಕದೆ ತಾವು ಅನ್ನ ತಿನ್ನುವುದಿಲ್ಲ ಎನ್ನುವವರು ಒಂದೆಡೆಯಾದರೆ, ಅಪ್ಪಟ ಹಾವಿನ ಮರಿಗಳನ್ನು ಇನ್ನು ಜೀವಂತವಿದ್ದಾಗಲೇ ಚರ್ಮ ಸುಲಿದು ಅದನ್ನು ತೋರಣದಂತೆ ನೇತಾಡಿಸಿ, ಅಷ್ಟೆ ವೇಗವಾಗಿ ಉಪ್ಪು ಖಾರ ಸವರಿ ಮಸಾಲೆ ಚಿಪ್ಸ್ ಮಾಡಿಕೊಳ್ಳುವವರೂ ಗೇಣು ಅಳತೆ ದೂರದಲ್ಲಿದ್ದಾರೆ. ಬೆಳಿಗ್ಗೆ ಎದ್ದ ಕೂಡಲೇ ಕುಟುಂಬವೆಲ್ಲಾ ಸಾಲುಸಾಲಾಗಿ ಕೂತು ಸ್ಥಳಿಯ ತಂಬಾಕಿನ ಜುರ್ಕಿ ಎಳೆಯುವವರದ್ದೇ ಒಂದು ಕಥೆಯಾದರೆ, ಬೆಳ್‍ಬೆಳಿಗ್ಗೆ ಎದ್ದು ಗುಡ್ಡದ ಒಳಕ್ಕೆ ಓಡಿ ಮಧ್ಯಾನ್ಹದ ಹೊತ್ತಿಗೆ ಇಳಿದು ಬರುವ ಊರ ಜನಗಳದ್ದೇ ಇನ್ನೊಂದು ಕಥೆ. 
ಸಹ್ಯಾದ್ರಿಯ ಮಡಿಲಲ್ಲಿ ಯಾಣಕ್ಕೆ ಹತ್ತುತ್ತಾರಾದರೂ ಪಕ್ಕದ ಒಡ್ಡಿಘಾಟು ಅಪರಿಚಿತವೇ. ಸಿಂಹಗಢ ಮೈನವಿರೇಳಿಸುತ್ತದೆಯಾದರೂ ಕಾಲೇ ಇಟ್ಟಿರುವುದಿಲ್ಲ. ಮಾಚು ಪಿಚುಗೆ ಸಡ್ಡು ಹೊಡೆಯುವ " ಮಾಂಗಿ-ತುಂಗಿ "  ಬಗ್ಗೆ ಯಾರಿಗೆ ಗೊತ್ತಿದೆ..?ಚೈನಾ ಗೋಡೆಯ ಪ್ರತಿಕೃತಿ ಪಕ್ಕದ ರಾಜ್ಯದಲ್ಲಿ ಮೈಲಿಗಟ್ಟಲೇ ಹರಡಿಕೊಂಡಿದೆ. ಸ್ವಿಸ್ ಎಂಥಾ ಎದ್ಭುತ ಎನ್ನುವವರಿಗೆ ಅದಕ್ಕಿಂತಲೂ ಸ್ವಚ್ಛ ಮತ್ತು ದಿನಕ್ಕೆ ನಾಲ್ಕಡಿ ಹಿಮ ಬಿದ್ದು ಯಾವಾಗಲೂ ಮಂಜುಸುರಿಯುವ ಹಿಮಭೂಮಿ ಖಿಲೋನ್‍ಭಾಗ್ ಗೊತ್ತೇ ಇರುವುದಿಲ್ಲ. ಸುಖಾ ಸುಮ್ಮನೆ ಲಕ್ಷಾಂತರ ಖರ್ಚು ಮಾಡಿ ಆಸ್ಟ್ರೇಲಿಯಾ ಸುತ್ತುವವರಿಗೆ ಅದಕ್ಕಿಂತಲೂ ಎತ್ತರಕ್ಕಿರುವ ಕಿಬ್ಬೇರ್ ಕನಸಲ್ಲೂ ಬಂದಿರಲಿಕ್ಕಿಲ್ಲ. ಯಾಕೆಂದರೆ ಇದು ಸ್ವದೇಶದ್ದು. ವಿದೇಶಿಯರೇ ಇರುವ ಸ್ವದೇಶಿ ಹಳ್ಳಿ ಛಾತ್ರಾ ಗೊತ್ತಾ..? ಇರಲಿಕ್ಕಿಲ್ಲ. ಕಾರಣ ಸಧ್ಯಕ್ಕೆ ಅಲ್ಲೆಲ್ಲ ಅಲೆದಿದ್ದು ನಾನೊಬ್ಬನೆ.
ಅಪರೂಪದ ಸರೋವರಗಳನ್ನು ಹಾಡಿ ಹೊಗಳುತ್ತಾ ವಿದೇಶಕ್ಕೆ ಹಾರುವವರಿಗೆ ಥ್ರೀ ಇಡಿಯಟ್ಸ್ ಬರುವವರೆಗೆ ಪಾಂಗಾಂಗ್ ಬಗ್ಗೆ ಗೊತ್ತೇ ಇರಲಿಲ್ಲ. ಇವತ್ತಿಗೂ ನೀರ ಮೇಲಿಂದ ಚೈನಾ ಬಾರ್ಡರು, ಅದಕ್ಕೂ ಮೇಲೆ ನಿಂತರೆ ಈ ಕಡೆಯ ಬಂಗ್ಲಾದೇಶದ ಅಂಗಡಿಗಳನ್ನು ಪಕ್ಕದಲ್ಲೇ ಕಾಣಿಸುವ ಅಧ್ಬುತತೆಗಳು ನಮ್ಮ ನೆಲದಲ್ಲೇ ಬೆರಳಿಗೆ ತಾಗುವಷ್ಟು ಹತ್ತಿರದಲ್ಲಿ ಹೊರಳುತ್ತಿವೆ. ಕಾಡು, ನೀರು ನೋಡಲೆಂದೇ ಅಮೇಝಾನ್‍ಗೆ ಹೋಗುವವರಿಗೆ ಇವತ್ತು ಅದರ ಅಪ್ಪನಂತಹ ಕಾಳಿ ಕೊಳ್ಳದ, ಕಾನೇರಿಯ ಒಡಲಿಗೆ ಇದುವರೆಗೂ ಯಾವನೂ ದೋಣಿ ಇಳಿಸುವ ಸಾಹಸವನ್ನೇ ಮಾಡಿಲ್ಲ ಎನ್ನುವುದು ಗೊತ್ತೇ ಇಲ್ಲ.
ಒಂಟೆಗಳಿಲ್ಲದೆ ಇಲ್ಲದೆ ಬದುಕೇ ಇಲ್ಲ ಎನ್ನುವವರು ಕೆಲವರಾದರೆ, ಎಂತದ್ದೇ ಮನೆ ಇರಲಿ ಮರದ ಕೆಳಗೆ ಅಡುಗೆ ಮಾಡಿದರೆ ಜೀವಕ್ಕೂ ಮೈಗೂ ಹಿತ ಎನ್ನುವ ಅಪ್ಪಟ ದಾರಿಹೋಕರದ್ದೇ ಹೊಸ ಲೋಕ. ನೀವೇನೆ ಮಾಡಿಕೊಳ್ಳಿ ನಾನು ಜೀವಮಾನವೀಡಿ ನಿಂತೇ ಇರುತ್ತೆನೆನ್ನುವ ಸನ್ಯಾಸಿಯೂ ಅಲ್ಲದ ಅಘೋರಿಯೂ ಅಲ್ಲದ ಅಪ್ಪಟ ಹಟಮಾರಿಯ ಲೋಕದ ಸಾಧಕರ ಊರು ಮಾಶೇಥ್ ಒಂದೆಡೆಯಾದರೆ, ಕಣ್ಣಲ್ಲೆ ಕೊಂದುಬಿಡಲೇ ಎನ್ನುವ ಮಾಟಗಾತಿಯರ ಬೆರಗಿನ ಪ್ರಪಂಚವೇ ಅಧ್ಬುತ.
ಜಗತ್ತಿನ ಬೆಳಗುಗಳು ಕಣ್ತೆರೆದುಕೊಳ್ಳುವುದೇ ಆಯಾ ಊರಿನ ಸಂಜೆಗಳಲ್ಲಿ ಎನ್ನುವುದು ತುಂಬಾ ಜನ ಪ್ರವಾಸಿ ಪುಟ ಬರೆಯುವವರಿಗೆ ಗೊತ್ತೇ ಇಲ್ಲ. ಏನಿದ್ದರೂ ಇವತ್ತು ಗೂಗಲ್ ಮಾಡುವವರು ಒಮ್ಮೆ ಅಂಥ ಸಂಜೆಯ ಹೊತ್ತಿನ ಅಯಾ ಊರಿನ ಬದಲಾಗುವ ಬೆರಗುಗಳನ್ನೂ ಅದರ ಬದುಕಿನ ಬದುಕನ್ನೂ ಹತ್ತಿರದಿಂದ ನೋಡಬೇಕು.. ಕೇವಲ ಬೆಂಗಳೂರಿನ ಮೆಜೆಸ್ಟಿಕ್ಕಿಗೆ ಕಣ್ತೆರೆದು ಆತುಕೊಂಡು ನೋಡುವ ನಮಗೆ ಇಂಥಾ ಇಳಿಸಂಜೆಗಳಲ್ಲಿ ದೊರೆಯುವ ಬದುಕಿನ ಪಾಠ ಅರಗಿಸಿಕೊಳ್ಳಲು ಮೆದುಳಿನ ಅಷ್ಟೂ ನ್ಯೂರಾನ್ಸ್‍ಗಳು ಖರ್ಚಾದಾವು. 
ತಿರುಗಾಟದ ಮೂಲಕ ಬದುಕಿನ ಪಾಠ ಮತ್ತು ಅಲ್ಲಿ ಅನುಭವಕ್ಕೀಡಾಗುವ ಸಮಸ್ಥಿತಿಯ ಪಲ್ಲಟದಲ್ಲಿ ಮೆದುಳಿನಲ್ಲಿ ಸೇರಿಹೋಗುವ ಹೊಸ ಚಿತ್ರಣಗಳು ಮರೆಯಾಗುವುದು ಈ ಜನ್ಮದಿಂದ ಮರೆಯದಾಗ ಮಾತ್ರವೇ. ಪ್ರವಾಸ ಎನ್ನುವುದು ಕ್ಲಾಸಿನಲ್ಲಿ ಕೂತು ಕೇಳಿದಂತಲ್ಲ. ನಾನು ಇವತ್ತಿಗೂ ಭಾಷೆ ಬಾರದ, ಅಪೂಟು ಇಂಗ್ಲೀಷು ಮತ್ತು ಹಿಂದಿಯೆಂದರೆ ಏನು ಎನ್ನುವಂತಹ ಸ್ಥಳದಲ್ಲೂ ಬೆನ್ನಿಗೆ ಬ್ಯಾಗೇರಿಸಿಕೊಂಡು ಅಲೆದು ಬಂದಿದೇನೆ. ಬದುಕು ಯಾವತ್ತೂ ಕೈಕೊಡಲಿಲ್ಲ. ಆದರೆ ಚೆನ್ನಾಗಿ ಭಾಷೆ ಗೊತ್ತಿರುವ ಊರುಗಳಲ್ಲಿ ಯಾಮಾರಿದ್ದೇನೆ ಕಾರಣ ಜನ ಇಲ್ಲಿ ಅಗತ್ಯಕ್ಕಿಂತ ಹೆಚ್ಚಿಗೆ ಬದುಕುತ್ತಿದ್ದಾರೆ. 
ಹಾಗಾಗೇ ಏನೂ ಅಲ್ಲದ ಊರಿನಲ್ಲೂ ಅದ್ಭುತಗಳಿವೆ ಅಂದಿದ್ದು. ಸ್ವತಂತ್ರ ಪೂರ್ವದ ಊರ ಸ್ಥಿತಿಗತಿ ಹೇಗಿತ್ತೋ ಮತ್ತು ಆಗ ಯಾವ ಮಟ್ಟದಲ್ಲಿ ಜನ ಬದುಕುತ್ತಿದ್ದರೋ ಈಗಲೂ ಅಲ್ಲಿಂದ ಒಂದಿಂಚೂ ಮುಂದೆ ತೆವಳದ ಊರುಗಳು ಲೆಕ್ಕಕ್ಕೆ ನಿಲುಕದಷ್ಟಿವೆ. ಇವತ್ತು ಹೊರಟರೆ ನಾಳೆಯೇ ವಾಪಸ್ಸು ಬರಬೇಕೆನ್ನಿಸುವಷ್ಟು ಒಳಗಿರುವ ಹಳ್ಳಿಗಳು ಕರೆಂಟು, ಕುಡಿಯುವ ನೀರು, ಶಾಲೆ ಇತ್ಯಾದಿಗಳಿಂದ ವಂಚಿತವಾಗಿ ಅಪ್ಪಟ ಭೂಮಿಯ ಮೇಲೆ ಸಂಪರ್ಕಿತ ನಡುಗಡ್ಡೆಯಂತೆ ಬದುಕುತ್ತಿರುವುದು ಕಣ್ಣಿಗೆ ರಾಚುವ ನಗ್ನಸತ್ಯ. 
ಬಹುಶ: ಹಾಗಾಗೇ ಅವೆಲ್ಲಾ ಈಗಲೂ ಹಸಿರು ಹರಿಯದ ಭೂಮಿಯ ತೊಗಲಿನಂತೆ ಢಾಳಾಗಿ ಹಾಗೆ ಉಳಿದಿವೆ. ಇಷ್ಟಕ್ಕೆಲ್ಲಾ ಕಾರಣ ಹಿತ್ತಲ ಗಿಡ ಮದ್ದಲ್ಲ ಎನ್ನುವಂತೆ ಬಹುಶ: ಈ ಜನ್ಮಕ್ಕೆ ಹೆಂಗೆ ತಿರುಗಿದರೂ ಮುಗಿಯದ ನನ್ನ ದೇಶದ ಅಧ್ಬುತ ಯಾರಿಗೂ ಬೇಕಿಲ್ಲ. ಏನಿದ್ದರೂ ಗೋವೆಯ ದಂಡೆ, ಗೋಕರ್ಣದ ಲಿಂಗ, ಮುಂಬೈ ನ ಚೌಪಾಟಿ, ಗುಜ್‍ನ ಸೋಮನಾಥ್, ಹಿಮಾಲಯದ ಶಿಮ್ಲಾ ಮತ್ತು ಕೊನೆಯಲ್ಲಿ ತೀರ ಹೆಚ್ಚೆಂದರೆ ಬುಡದ ಕನ್ಯಾಕುಮಾರಿಯಿಂದ ಮೇಲ್ಗಡೆಯ ಲೇಹ್‍ದಲ್ಲೆರಡು ದಿನ ತಿರುಗಿದರೆ ದೇಶ ಮುಗಿಯಿತು ಇನ್ನು ಬೇರೆ ದೇಶ ನೋಡೊಣ, ಇಲ್ಲೆಲ್ಲಾ ಬರೀ ಕೊಳಕು..ನಮ್ಮಲ್ಲಿ ಎನೂ ಸರಿ ಇಲ್ಲಾ ಎಂದು ದೇಶದ ಬಗ್ಗೆ ಗೊತ್ತಿಲ್ಲದೆ ಗೊಣಗುವವರ ಕಣ್ತೆರೆಸುವುದೇ ಈ ಅಲೆಮಾರಿಯ ಉದ್ದೇಶ. ನೂರು ಪ್ರವಾಸದ ಅನುಭವ ನನ್ನ ಬೆನ್ನಿಗಿದೆ.
ಪ್ರವಾಸ ಎನ್ನುವುದು ಜಗತ್ತಿನ ಅತಿದೊಡ್ಡ ಪ್ರಾಯೋಗಿಕ ಪಾಠಶಾಲೆ. ಅದು ನಿಮ್ಮನ್ನು ಹೇಗೆ ಮಲಗಬೇಕು ಎನ್ನುವುದರಿಂದ ಹಿಡಿದು, ನೀರನ್ನು ಹೇಗೆ ಕುಡಿಯಬೇಕು ಎನ್ನುವುದರ ಜತೆಗೆ ಅಂಗೈಯನ್ನು ಮುಟಿಕೆ ಮಾಡಿಕೊಂಡು ಹೇಗೆ ಅಹಾರವನ್ನು ಕಾಯ್ದು ಸವಿಯಬೇಕು ಎನ್ನುವುದರವರೆಗೂ ಕಲಿಸುತ್ತದೆ. ಎರಡೇ ನಿಮಿಷದಲ್ಲಿ ಸ್ನಾನವನ್ನು ಹೇಗೆ ಮುಗಿಸಬೇಕೆನ್ನುವುದನ್ನು ಈ ಜನ್ಮಕ್ಕೆ ಕಲಿಯದವರೂ ಒಂದೇ ದಿನಕ್ಕೆ ಕಲಿತಿದ್ದಾರೆ. ನಿಂತೆ ತಿಂದು ತೇಗುವುದು ಹೇಗೆ, ಯಾವ ಕಮೋಡು ಇಲ್ಲದ ಜಾಗದಲ್ಲೂ ವ್ಯವಸ್ಥಿತವಾಗಿ ಶುಚಿಗೊಳಿಸಿಕೊಂಡು ಹೇಗೆ ಹೊರಬರಬೇಕೆನ್ನುವುದನ್ನು ಒಂದೇ ಪಾಠದಲ್ಲಿ ಹೇಳಿಕೊಡುವುದೇ ಪ್ರವಾಸ.
ನಮ್ಮ ಲಗೇಜು ನಮಗಿಂತ ಭಾರವಾಗಬಾರದು, ಅದರೆ ಅಗತ್ಯಬಿದ್ದರೆ ತಿಂಗಳೂ ಅದರಲ್ಲಿ ಕಳೆಯಬಹುದು ಎನ್ನುವಂತಿರಬೇಕೆಂಬ ಗುಟ್ಟನ್ನು ಕಲಿಸುವುದೇ ಪ್ರವಾಸ. ಅದೆಲ್ಲಕ್ಕಿಂತಲೂ ಮಿಗಿಲು ಎಷ್ಟು ಮಾತಾಡಬೇಕು ಎಷ್ಟು ಮಾತಾಡಬಾರದು, ಎಲ್ಲಿ ತಿನ್ನಬೇಕು, ಎಲ್ಲಿ ತಿನ್ನಬಾರದು, ಹೇಗೆ ತಿನ್ನಬೇಕು, ಹೇಗೆ ಹಸಿವು ನೀಗಿಸಿಕೊಂಡು ನಿಯಂತ್ರಿತವಾಗಿ ಬದುಕಬೇಕು ಮತ್ತದಕ್ಕಿಂತಲೂ ಮಿಗಿಲಾಗಿ ಹೇಗೆ ಮನುಷ್ಯ ತಿರುಬೋಕಿಯಾಗುತ್ತಲೇ ಚೆಂದದ ಸ್ನೇಹದ ಕಮೋಡಿನೊಳಗೆ ಗಿರಿಗಿಟ್ಲೆ ಆಡಬಹುದೆಂಬುವುದನ್ನು ಕಲಿಸುವುದು ಶುದ್ಧ ತಿರುಗಾಟ ಮಾತ್ರ.
 ಇದರ ಹೊರತಾಗಿ ಬದುಕಿಗೆ ಯಾವ ಯುನಿವರ್ಸಿಟಿಯೂ ನಿಮಗೆ ಇಷ್ಟು ಅಗಾಧ ಪಾಠಗಳನ್ನು ಅಷ್ಟು ಚಿಕ್ಕ ಅವಧಿಯಲ್ಲಿ ನೆನಪಿಡುವಂತೆ ಕಲಿಸಲಾರವು. ಪ್ರಯಾಸವನ್ನು ಮರೆತು ಬಿಡುತ್ತೇವೆ ಆದರೆ ಪ್ರವಾಸವನ್ನಲ್ಲ. ಅಂಥಾ ತಿರುಗಾಟದ ಅನುಭವಗಳನ್ನು ಬರೆಯಲಿದ್ದೇನೆ .. ಪ್ರತಿವಾರ..  
ಕಾರಣ ನಾನೇ
ಅಲೆಮಾರಿ..