Friday, May 19, 2017

ತಾಳ ಗಂಗಾ - ಭೂಗರ್ಭ ಭಂಗ...

ಮಹಾಭಾರತದಲ್ಲಿ ಅರ್ಜುನ ಬರೀ ಬಾಣ ಹೊಡೆದೇ ನೆಲದಿಂದ ನೀರು ಚಿಮ್ಮಿಸಿದ್ದ ಕತೆ ಎಲ್ಲರಿಗೂ ಗೊತ್ತಿದೆ. ಅಷ್ಟು ಸುಲಭವಾಗಿ ಸಾಧ್ಯವೇ ಎನ್ನುವುದಕ್ಕಿಂತ ಮೊದಲು ಭೂಮಿಯ ಮೇಲ್ಪದರದಲ್ಲೇ ಅಷ್ಟು ಹತ್ತಿರದಲ್ಲೇ ನೀರು ಸಿಗುತ್ತಿದ್ದುದ್ದಕ್ಕೆ ಆ ಕಥೆ ಅಧ್ಬುತ ಸಾಕ್ಷಿಯಾಗುತ್ತದೆ. ಅದು ಬಿಡಿ ಯಾವುದೋ ಕಾಲವಾಯಿತು. ಕೇವಲ ಅರ್ಧ ಶತಮಾನದ ಹಿಂದೆ ಬೋರ್‍ವೆಲ್ ಎನ್ನುವ ಮಾತೇ ಇರಲಿಲ್ಲ. ಹತ್ತಾರು ಅಡಿ ಸುಮ್ಮನೆ ಗುಂಡಿ ತೋಡಿದರೂ ಸಾಕು ಊರಿಗೆಲ್ಲಾ ನೀರು. ತೀರ ಮನೆ ಕಟ್ಟುವಾಗ ಪಾಯ ತೆಗೆಯುತ್ತಿದ್ದಂತೆ ನೀರು ತುಂಬಿಕೊಂಡು ಅವಸ್ಥೆ ಆಗುತ್ತಿದ್ದುದು ದೊಡ್ಡ ಕತೆಯಾಗುತ್ತಿತ್ತು ಒಂದು ಕಾಲಕ್ಕೆ. ಇಷ್ಟೆಲ್ಲಾ ಆದರೂ ಆಗಿನ ಶಾಶ್ತ್ರಜ್ಞರು ಎನೋ ಒಂದು ಉಪಾಯ ಮಾಡಿ ಪರಿಹರಿಸಿಕೊಳ್ಳುತ್ತಿದ್ದರೆ ಹೊರತಾಗಿ ನೀರು ಎನ್ನುವುದು ಯಾರಿಗೂ ಯಾವತ್ತೂ ಸಮಸ್ಯೆಯಾಗಿ ಕಾಡಿರಲೇ ಇಲ್ಲ.
ಧೋ... ಎಂದು ಸುರಿಯುತ್ತಿದ್ದ ಮಳೆ ಸರಾಗವಾಗಿ ಊರ ಹೊರವಲಯ ಸೇರಿಕೊಂಡು ಹೊಲ ಗದ್ದೆಗಳ ಬದುವಿನಾದಿಯಾಗಿ ಕೆರೆ ಕೋಡಿ ಕಟ್ಟೆಯ ಸಂದುಗಳಿಂದ ನುಸುಳಿ, ಕೊರಕಲುಗಳಲ್ಲಿ ಸೇರಿಕೊಂಡು ಸರಸರನೇ ನೆಲಕ್ಕಿಳಿದು ಒಡಲನ್ನು ಸೇರಿ ವರ್ಷಾವಧಿಯುದ್ದಕ್ಕೂ ನೀರಿನ ಸಂಗ್ರಹ ಕಾಯ್ದುಕೊಳ್ಳುತ್ತಿತ್ತು. ಹಾಗೆ ನೀರಿಗೂ ನೆಲಕ್ಕಿಳಿಯಲು  ಅದರದ್ದೇ ಅದ ಒಂದು ಸಹಜ ನೈಜ ಸ್ಥಳಾವಕಾಶ ಇದ್ದೇ ಇರುತ್ತಿತ್ತು. ಅದನ್ನಿನ್ನೂ ಆಗೆಲ್ಲಾ ಮಾನವ ತನ್ನ ದುರಾಸೆಗೆ ಅಗತ್ಯತೆಯ ನೆಪ ಹೇಳಿ ಆಕ್ರಮಿಸಿರಲಿಲ್ಲ. ಕಾಡು ಮತ್ತು ಕೊಳ್ಳ ಸೇರಿದಂತೆ ಪ್ರಮುಖ ಜಲ ಮೂಲಗಳಾದ ಕೆರೆ ಕಟ್ಟೆಗಳು ತುಂಬಿ ಕೋಡಿ ಬೀಳುತ್ತಿದ್ದವು. ಹಾಗೆ ಕೋಡಿ ಬಿದ್ದಾಗಲೇ ಎರಡನೆಯ ಹಂತದ ಇಂಗುವಿಕೆ ಆರಂಭವಾಗುತ್ತಿತ್ತು ಮತ್ತು ಅದೆಲ್ಲವೂ ಒಳಭಾಗಕ್ಕೆ ಹೋದಂತೆ ಕ್ರಮೇಣ ಒಂದು ಧಾರೆಯಾಗಿ ಜಲಮೂಲದ ಮೇಲ್ಪದರವನ್ನು ಸೇರುತ್ತಾ (ನೆಲ ಜಲವಲಯ) ಮಳೆಗಾಲ ಮುಗಿಯುವ ಹೊತ್ತಿಗೆ ಭೂ ಅಂತರಾಳದ ನೀರಿನ ಒಳ ಮಟ್ಟ ತೀರ ಕೈಗೆಟುಕುವ ಹಂತಕ್ಕೆ ಬಂದು ನಿಲ್ಲುತ್ತಿತ್ತು. ಜನರಿಗೂ ಜಾನುವಾರುಗಳಿಗೂ ಈ ಪರಿಯ ಕುಡಿಯುವ ನೀರಿನ ಹಾಹಾಕಾರ ಬಂದದ್ದೇ ಇಲ್ಲ ಯಾವತ್ತೂ. ತೀರ ಬೇಸಿಗೆಯಲ್ಲೂ ಕೆರೆಗಳು ಕೋಡಿ ಬಾಯ್ತೆರೆದು ನೀರು ಹರಿಸಿ ಬದುಕು ಹಸನುಗೊಳಿಸಲಾಗುತ್ತಿತ್ತು.
ಕಳೆದ ಮೂರು ದಶಕದಲ್ಲಿ ಆದ ಬದಲಾವಣೆ ನೋಡಿ. ಆಧುನಿಕರಣ ಮತ್ತು ಅಭಿವೃದ್ಧಿಯ ನೆಪದಲ್ಲಿ ಮೊಟ್ಟ ಮೊದಲು ಆಕ್ರಮಿತವಾಗಿದ್ದೇ ಕೆರೆ ಕಟ್ಟೆ ಕೋಡಿಯ ಭಾಗಗಳು. ಕಾರಣ ಪ್ರತಿ ಊರ ಮಧ್ಯೆ ಅಗಾಧ ಜಾಗ ಸುಲಭವಾಗಿ ಯಾರ ಮಾಲಿಕತ್ವದಲ್ಲೂ ಇರದಿದ್ದುದು ಕೈಗೆ ಸಿಕ್ಕುವುದಕ್ಕೂ ಸುಲಭವಾಗಿತ್ತಲ್ಲ. ಅವನ್ನೆಲ್ಲಾ ವಾಣಿಜ್ಯ ಸಂಕೀರ್ಣ, ಮಹಡಿ ಮಹಲು ಇತ್ಯಾದಿಯಾಗಿ ಬಳಸಲು ಆರಂಭಿಸಿದ್ದಲ್ಲದೆ, ಹೆಚ್ಚಿದ ಒತ್ತಡ ಹಾಗು ಅಗತ್ಯತೆಯನ್ನು ಗಮನಿಸುತ್ತಾ ಲಾಭದ ದುರಾಸೆಗೆ ಪ್ರತಿ ಊರೂ ಹೊರಭಾಗದತ್ತ ದೌಡಾಯಿಸತೊಡಗಿತ್ತು.
ಇದರಿಂದ ಕ್ರಮೇಣ ಭೂಮಿಯ ಪ್ರತಿ ಭಾಗದ ನೀರಿನ ಇಂಗು ಮೂಲಗಳು ಮುಚ್ಚಿ ಹೋಗತೊಡಗಿದವು. ಅದರಲ್ಲೂ ನಗರೀಕರಣವಾಗುವ ಧಾವಂತದಲ್ಲಿ ಪ್ರತೀ ಊರೂ ಮತ್ತು ಹಳ್ಳಿಗಳ ಹೊರವಲಯವನ್ನು ಕಾಂಕ್ರೀಟ್ ಹಾಕಿ ಮುಚ್ಚುತ್ತಾ ನಡೆದಂತೆ ಜಲ ಇಂಗುವ ಮೂಲಗಳು ಸೆಲೆ ಕಳೆದುಕೊಳ್ಳುತ್ತಾ ನಡೆದವು. ಪ್ರತಿ ಬಾರಿ ಮಳೆಯಾದಾಗಲೂ ಭೂಮಿಯ ಒಳಹೋಗಬೇಕಾಗಿದ್ದ ನೀರಿನ ಇಂಗುವಿಕೆಯ ಶೇಕಡವಾರು ಗಣನೀಯ ಪ್ರಮಾಣದಲ್ಲಿ ಇಳಿಯುತ್ತಾ ಸಾಗಿತು.
ಹೀಗೆ ಮರು ಭರ್ತಿಯಾಗಬೇಕಿದ್ದ ನೀರು ಕ್ರಮೇಣ ಬೇರೆಡೆಗೆ ಸರಿದು ನದಿ ತೀರವೇ ಅಲ್ಟಿಮೇಟ್ ಆಗಿ, ಅಲ್ಲಿಂದ ಸಮುದ್ರ ಸೇರುವುದೇ ಅನಿವಾರ್ಯವಾಗತೊಡಗಿದಾಗ, ನೆಲಜಲವಲಯ ಕ್ರಮೇಣ ಖಾಲಿ ಬೀಳತೊಡಗಿದವು. ಭೂಮಿಯ ಮೇಲ್ಮಟ್ಟದಲ್ಲಿದ್ದ ನೀರಿನ ಪದರಗಳು ಖಾಲಿಯಾಗತೊಡಗಿದ್ದೇ ಆವಾಗ. ಹೀಗೆ ಬಾವಿಗಳು ಕೆರೆಗಳು ಕ್ರಮೇಣ ಇಳಿಕೆಯಾಗತೊಡಗಿದಾಗ ತತಕ್ಷಣವಾಗಿ ನಮ್ಮ ಸಾಂಪ್ರದಾಯಿಕ ಶೈಲಿಯಲ್ಲೇ ನೀರಿನ ಮರುಪೂರಣಕ್ಕೇ ಆದ್ಯತೆ ನೀಡಿದ್ದರೆ ಬಹುಶ: ಇವತ್ತಿಗೆ ನಾವು ನೀರಿನ ಮೂಲ ಎಲ್ಲಿದೆ ಎಲ್ಲಿಂದ ನೀರು ತರೋಣ ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ಕೂರಬೇಕಾಗುತ್ತಲೇ ಇರಲಿಲ್ಲ.
ಆದರೆ ಆದದ್ದೇ ಬೇರೆ. ಆಧುನಿಕ ಜಲತಜ್ಞರು ಕೂಡಲೇ ಬೋರ್‍ವೆಲ್ ಎಂಬ ಸುಲಭದ ಉಪಾಯಕ್ಕೆ ಎಲ್ಲರನ್ನೂ ದೂಡಿ ಕೈ ತೊಳೆದುಕೊಂಡರು. ಸರಿ ಬೋರ್‍ವೆಲ್ ಆರಂಭದಲ್ಲಿ ಇನ್ನೂರು ಅಡಿಗೆ ನೀರು ಎತ್ತಿ ಕೊಡತೊಡಗಿದ್ದಾಗಲೂ ಯಾರಿಗೂ ಏನೂ ಅನ್ನಿಸಲಿಲ್ಲ. ಆದರೆ ಅಲ್ಲೇ ಮೊದಲ ತಪ್ಪು ನಡೆಯುತ್ತಲೇ ಇತ್ತು. ನಿಜವಾದ ಜಲತಜ್ಞರು ಅದನ್ನು ಯಾವತ್ತೂ ಬೆಂಬಲಿಸಿರಲಿಲ್ಲ. ಬದಲಿಗೆ ಕೂಡಲೇ ಜಲ ಮರುಪೂರಣ ಮತ್ತು ಭೂಮಿಯಾಳಕ್ಕೆ ನೀರು ಇಂಗಿಸುವುದೇ ಕೊಟ್ಟ ಕೊನೆಯ ಪರ್ಯಾಯ ಎಂದು ವಾದಿಸುತ್ತಲೇ ಇದ್ದರು. ಆದರೆ ಅದೆಲ್ಲಾ ಆಗಿ ನಮಗೆ ನೀರು ಸಿಗುವುದು ಯಾವಾಗ..? ಎಂಬ ಸುಲಭಕ್ಕೆ ಕಾಡುವ ಯೋಚನೆಗೆ ತಥಾಕಥೀತ ಅಧಿಕಾರಿಗಳು ಇಂಬು ನೀಡಿಬಿಟ್ಟರು.
ಅದಕ್ಕೆ ಬೋರ್‍ವೆಲ್ ಸುಲಭ ಮತ್ತು ಅದರಲ್ಲಿ ನೀರು ಖರ್ಚಾಗಲು ಅದೇನು ಚಿಕ್ಕ ಬಾವಿಯೇ ಎಂಬ ವಾದ ತಾತ್ಪೂರ್ತಿಕವಾಗಿ ಸಮಾಜದಲ್ಲಿ ಗೆದ್ದೂ ಬಿಟ್ಟೀತು. ಅದರೆ ಮರುವರ್ಷವೇ ಬೋರ್‍ವೆಲ್‍ನ ಇಳಿಕೆ ಐನೂರು ಅಡಿಗಿಳಿಯಿತು. ಉಹೂಂ.. ಆಗಲೂ ಯಾರೂ ಜಗ್ಗಲಿಲ್ಲ. ಅದಾದ ನಂತರ ಇತ್ತಿಚೆಗೆ ಬೋರ್‍ವೆಲ್ ಕನಿಷ್ಟ ಒಂದು ಸಾವಿರ ಅಡಿ ಆಳದಿಂದ ನೀರನ್ನೆತ್ತುತಿದೆ. ಇಲ್ಲಿ ನಿಮಗೊಂದು ಗೊತ್ತಿರಬೇಕು. ಇಷ್ಟು ಆಳದಲ್ಲಿ, ಅದರಲ್ಲೂ ಸಿಹಿನೀರ ಸೆಲೆಯಿದೆಯಲ್ಲ ಅದು ನಮ್ಮನ್ನು ಬದುಕಿಸಬಹುದಾದ ಕೊನೆಯ ಸೆಲೆ. ಅದರ ನಂತರದಲ್ಲಿ ಏನಿದ್ದರೂ ಭೂಗರ್ಭದಲ್ಲಿ ಎಲ್ಲಾ ರೀತಿಯ ಖನಿಜ ಮತ್ತು ಲವಣಾಂಶಗಳನ್ನು ಒಳಗೊಂಡ ನೀರೇ ಅತ್ತಿತ್ತ ಹೊಯ್ದಾಡುತ್ತಿರುತ್ತದೆ. ಅದಕ್ಕೂ ಕೆಳಗೆ ಹೋಗುವುದಕ್ಕೂ ಸಾಧ್ಯವಿಲ್ಲ ಮತ್ತು ಈಗಾಗಲೇ ಎರಡು ಸಾವಿರ ಅಡಿಯಿಂದ ಎತ್ತುತ್ತಿರುವ ನೀರೂ ಕೂಡಾ ವರ್ಷಾವಧಿಯುದ್ದಕ್ಕೂ ಬರದೇ ಅದಕ್ಕೂ ಮೊದಲೇ ನಿಂತು ಹೋಗುತ್ತಿದೆಯಂತಾದರೆ ಅಲ್ಲೂ ಮೂಲ ಒಣಗುತ್ತಿದೆ ಅಥವಾ ಖಾಲಿಯಾಗಿದೆ ಎಂದೆ ಅರ್ಥ.
ಇಂಥಾ ಸಂದರ್ಭದಲ್ಲಿ ಜಾಗತಿಕವಾಗಿ ನೀರಿಗೆ ಹಾಹಾಕಾರ ಮತ್ತು ಮರುಪೂರಣ ಬಗ್ಗೆ ಅಭಿಯಾನಗಳೇ ನಡೆಯುತ್ತಿವೆ. ಸ್ವತ: ರೈತರು, ಯುವಕರು, ಸ್ವಯಂ ಸೇವಾ ಸಂಸ್ಥೆಗಳು ತಾವಾಗಿಯೇ ಮುಂದೆ ಬಂದು ಕೆರೆ ಕಟ್ಟೆಗಳನ್ನು ಮರು ತುಂಬಿಸಲು ಅದರ ಹೂಳೆತ್ತುವ ಕೆಲಸಕ್ಕೆ ಯುದ್ಧೋಪಾದಿಯಲ್ಲಿ ಕೈಯಿಕ್ಕುತ್ತಿದ್ದಾರೆ. ಪ್ರತಿ ಊರಿನಲ್ಲೂ ನೀರಿನ ಮರುಪೂರಣ ಮತ್ತು ಭೂಮಿಯಿಂದ ಜಲಮೂಲ ಮೇಲ್ಪದರಕ್ಕೇರಿಸಿ ಬದುಕು ರಕ್ಷಿಸಿಕೊಳ್ಳುವ ಬಗ್ಗೆ ಇನ್ನಿಲ್ಲದ ಕಾಳಜಿ ಮತ್ತು ಅಗತ್ಯ ಕ್ರಮ ಎರಡನ್ನೂ ಪ್ರತಿಯೊಬ್ಬರೂ ಕೈಗೊಳ್ಳುತ್ತಿದ್ದಾರೆ. ಇವತ್ತಿಗೂ ಹೂಳೆತ್ತಿದರೆ, ಕೆರೆ ಕಟ್ಟೆಗಳಿಗೆ ಜಲ ಮರುಪೂರಣ ಮಾಡಿದ ಒಂದೆರಡು ವರ್ಷದೊಳಗೆ ನೀರಿನ ಸೆಲೆಗಳಿಗೆ ಜೀವಸಿಕ್ಕು ಅದರ ಅಸು ಪಾಸಿನ ಎಡ್ರ್ಮೂರು ಕಿ.ಮೀ. ಅಂತರದೊಳಗಿನ ಬಾವಿಗಳೂ, ಬೋರ್‍ವೆಲ್‍ಗಳು ಮರು ಆರಂಭವಾದ ಕತೆ ಸಾವಿರಾರಿವೆ. ಇದರ ಮಹತ್ವ ಅರಿತಿರುವ ಪ್ರತಿಯೊಬ್ಬರೂ ನೀರು ಇಂಗಿಸುವ ಮೂಲಕ ಹಲವು ಹೊಸ ಆಯಾಮಗಳಿಗೂ, ಪ್ರಾತ್ಯಕ್ಷಿಕತೆಗಳಿಗೂ, ಅದರ ಪ್ರಾಯೋಗಿಕ ಸಾಧ್ಯತೆಗಳಿಂದಾಗಬಹುದಾದ ನೈಜ ಉಪಯೋಗದ ಮಾಹಿತಿಯನ್ನೇ ತೀವ್ರವಾಗಿ ಎಲ್ಲೆಡೆಗೂ ಪಸರಿಸಿ ಜಲ ಸಂಪನ್ಮೂಲ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದಾರೆ.
ಪ್ರತಿ ಮನೆಯೂ ತನ್ನ ಮೇಲೆ ಬೀಳುವ ಕನಿಷ್ಟ ಮಳೆಯ ನೀರನ್ನೂ ಇಂಗಿಸಿದರೂ ಈ ಭೂಮಿಯ ಪರಿಸ್ಥಿತಿ ಐದೇ ವರ್ಷದಲ್ಲಿ ಮೊದಲಿನ ಸ್ಥಿತಿಗೆ ಬಂದೇ ಬರುತ್ತದೆನ್ನುವುದನ್ನು ಸಾವಿರಾರು ಪ್ರಯೋಗದ ಮೂಲಕ ಪ್ರತಿ ಭಾಗದಲ್ಲೂ ಜಲತಜ್ಞರೂ ತೋರಿಸುತ್ತಲೇ ಇದ್ದಾರೆ. ಗೋಡೆ ಬಾವಿಗಳು, ಕಟ್ಟಗಳು, ಒಡ್ಡು, ಇಂಗು ಗುಂಡಿ, ಕೊಳವೆ ಬಾವಿಗೆ ಮರುಪೂರಣ, ಅಡ್ಡಗಳು ಹೀಗೆ ಹಲವು ದಾರಿಯಲ್ಲಿ ಮಳೆ ನೀರನ್ನು ಭೂಮಿಗೆ ಮರುಣಿಸಿ ಅದನ್ನು ಸಿಹಿ ನೀರನ್ನಾಗಿ ಪಡೆಯುವ ಆ ಮೂಲಕ ಜಲ ಸಮಸ್ಯೆಗೆ ಪರಿಹಾರಕ್ಕೆ ಮುಂದಾಗಿದ್ದಾರೆ. ಇದೆಲ್ಲವೂ ನೂರರಷ್ಟು ಸಾಧ್ಯ ಎಂದು ಸಾಬೀತಾಗಿರುವ ಸತ್ಯ ಮತ್ತು ಅದೊಂದೆ ನಮಗೆ ಅಲ್ಟಿಮೇಟ್ ದಾರಿ ಕೂಡಾ.
ಆದರೆ ಜಗತ್ತೆ ಬೇಡ ಎಂದು ದೂರಸರಿಸಿಟ್ಟಿರುವ ವ್ಯವಸ್ಥೆಯನ್ನು ಕಟ್ಟಿಕೊಂಡು ಹೆಣಗಲು, ಆ ಮೂಲಕ ಜಗತ್ತಿನಲ್ಲೇ ಕರ್ನಾಟಕದ ನೆಲಜಲವಲಯದ ಮೂಲವನ್ನೇ ಪ್ರಯೋಗ ಶಾಲೆಗೆ ಒತ್ತೆ ಇಡಲು ಹೊರಟಿರುವ ನಮ್ಮಲ್ಲಿನ ಕತೆ ನೋಡಿ. ಪೂರ್ತಿ ಜಗತ್ತೆ ಇವತ್ತು ಭೂಮಿಯನ್ನೂ ಅದರ ತಾಪಮಾನ ಮತ್ತು ನೈಜ ನೈಸರ್ಗಿಕ ವ್ಯವಸ್ಥೆಯನ್ನು ಕಾಯ್ದುಕೊಂಡು ಭವಿಷ್ಯತ್ತಿಗೆ ಅಪಾಯವಾಗದಂತೆ ನೋಡಿಕೊಳ್ಳಬೇಕೆಂಬ ತಪನೆಗೆ ಇಳಿದಿದ್ದು ಪ್ರಾಮಾಣಿಕವಾಗಿ ವಿದೇಶಗಳಲ್ಲೆಲ್ಲಾ ಮತ್ತು ಪರರಾಜ್ಯದಲ್ಲೂ ಇನ್ನಿಲ್ಲದ ಪ್ರಯತ್ನಗಳೂ ಜಾರಿ ಇದ್ದರೆ ಇಲ್ಲಿ ಮಾತ್ರ ಇಷ್ಟೂ ಸಾಲದೆಂಬಂತೆ ಪಾತಾಳದಿಂದ ನೀರನ್ನು ಮೇಲೆತ್ತಿ ನಿಮಗೆ ಕುಡಿಸುತ್ತೇವೆ ಎಂದು ನಮ್ಮಲ್ಲಿ ಅವೈಜ್ಞಾನಿಕ ಯೋಜನೆ ರೂಪಿಸಲು ತುರ್ತಾಗಿ ಟೊಂಕದ ಮೇಲೆ ಕೈಯಿಟ್ಟು ಕೊಂಡುನಿಂತಿದೆ ಸರಕಾರ.
ಇನ್ನೇನಿದ್ದರೂ ಭೂಮಿಯ ಗರ್ಭಕ್ಕೆ ಬೋರ್ ರೀತಿಯಲ್ಲೇ ಅಗಾಧ ಸೈಜಿನ ಕೊಳವೆಯ ಒಳಭಾಗದಲ್ಲಿ ಡ್ರಿಲ್ಲಿಂಗು ಮಶೀನುಗಳನ್ನಿಟ್ಟು, ಇಷ್ಟಿಷ್ಟೆ ಕೊರೆಯುತ್ತಾ ಹೋಗಿ, ಇದ್ದಬದ್ದ ಬದುಕಿರುವ ನೀರಿನ ಸೆಲೆಗಳ ದಾರಿಗಳನ್ನೆಲ್ಲಾ ಛಿದ್ರ ಛಿದ್ರ ಮಾಡಿ, ಅಡ್ಡ ಬರುವ ಕಲ್ಲಿನ ಬಂಡೆಗಳನ್ನು ಪುಡಿಗಟ್ಟುವ ಮೂಲಕ ಭೂಮಿಯ ಒಂದು ಭಾಗದ ಅದರ ನೈಸರ್ಗಿಕ ನೆಲಗಟ್ಟನ್ನೇ ಅಲುಗಾಡಿಸಿ ಲೂಸು ಮಾಡಿ, ಅದರಿಂದ ಅದು ತುಸುವೇ ಮಾಮೂಲಿನ ಕಂಪನಕ್ಕೂ ತನ್ನ ಮೇಲ್ಸ್ತರ ಕುಸಿದುಕೊಳ್ಳುವ ಅಸ್ಥಿರ ಹಂತಕ್ಕೆ ಕರ್ನಾಟಕದ ಭೂಪದರವನ್ನು ದೂಡಿ, ಹಾಗೆ ಅದರ ಸುತ್ತಲಿನ ಕ್ಷೇತ್ರವನ್ನೆಲ್ಲ ಅಪಾಯಕಾರಿ ಪ್ರದೇಶ ಎಂದು ಗುರುತಿಸಿ ಭವಿಷ್ಯತ್ತಿನಲ್ಲಿ ಯಾವ ಉಪಯೋಗಕ್ಕೂ ಬಾರದಂತೆ ಮಾಡಿ, ಅದಕ್ಕೂ ಆಳಕ್ಕಿಳಿಯುತ್ತಾ ಹೋದಂತೆ ಒತ್ತೊತಾಗಿರುವ ಭೂ ಪದರಕ್ಕೆ ಅನವಶ್ಯಕವೂ ಮತ್ತು ನಿಸರ್ಗಕ್ಕೆ ವಿರುದ್ಧಕಾರಿಯೂ ಆದ ಹೊಸ ವಾತಾವರಣದ ಗಾಳಿಯನ್ನು ಸೋಕಿಸಿ ಅಲ್ಲೆಲ್ಲಾ ರಸಾಯನಿಕ ಬದಲಾವಣೆಗೆ ಆ ಪುರಾತನ (ಫಾಸಿಲ್) ವ್ಯವಸ್ಥೆಯನ್ನು ತೆರೆದಿಟ್ಟು, ಹಾಗೆ ಆಗುವ  ಬದಲಾವಣೆಯಲ್ಲಿ ಯಾವೆಲ್ಲಾ ಭೂಮಿಯ ಲವಣ, ಖನಿಜ ಮತ್ತು ರಸಾಯನಿಕಗಳು ಹೊಸ ಪ್ರಕ್ರಿಯೆಗೆ ಸಿಕ್ಕು ಹೇಗೆ ವರ್ತಿಸುತ್ತವೇಯೊ ಅದಕ್ಕೆಲ್ಲಾ ಒಂದು ಯುದ್ಧೋಪಾದಿಯಲ್ಲಿ ತಯಾರಾಗಿ, ಹಾಗೆ ಭೂಮಿಯೊಂದಿಗೆ ಯುದ್ಧಕ್ಕಿಳಿಯುವ ಮೊದಲು ಲೆಕ್ಕಕ್ಕೇ ಮೀರಿದ ಕೋಟಿಗಳನ್ನು ಖರ್ಚು ಮಾಡಿ ಕೊನೆಗೂ ಭೂಮಿಯಿಂದ ಪಾತಾಳದಿಂದ ನೀರು ತಂದರೂ ಅದು ಈಗ ಕೊಳ್ಳುವ ಬಿಸ್ಲೇರಿಗಿಂತ ನೂರಾರು ಪಟ್ಟು ದುಬಾರಿಯಾಗಿ ಕೂತಿರುತ್ತದಲ್ಲ ಅದನ್ನು ಭರಿಸುವುದಾದರೂ ಹೇಗೆ..? ದುಬಾರಿಯಾದರೂ ಅದರ ಬಳಕೆಯ ಪ್ರಾಸೆಸ್ಸಿಂಗ್‍ನ್ನು ನಮ್ಮಿಂದ ಭರಿಸಲು ಸಾಧ್ಯವಾ..?
ಖರ್ಚೆನ್ನುವುದು ಎಲ್ಲದಕ್ಕೂ ಆಗುವಂತಹದ್ದೇ ಅದೆಲ್ಲಾ ಇರಲಿ ಬಿಡಿ. ನಮ್ಮದೇ ತೆರಿಗೆ ದುಡ್ಡು ಕೊಟ್ಟು ಭೂಮಿ ಕೊರೆದು ಪಾತಾಳಗಂಗೆ ತಂದು ನಮ್ಮನ್ನು ಪಾವನ ಮಾಡುತ್ತಾರೆ ಎನ್ನುವುದೆಲ್ಲಾ ಸರಿ. ಆದರೆ ಹಾಗೆ ಸಾವಿರಾರು ಅಡಿಯಿಂದ ಎತ್ತುವ ನೀರು ಕುಡಿಯಲು ನೇರವಾಗಿ ಬಳಸಲು ಯೋಗ್ಯ ಎಂದು ರಿಪೆÇೀರ್ಟು ಕೊಟ್ಟವರಾರು..? ಹಾಗೆ ಮಾಹಿತಿ ಕೊಡಲು ಮತ್ತು ಆ ಆಳದಲ್ಲಿ ಇಂತಿಷ್ಟೆ ನೀರಿದೆ, ಅದನ್ನೆಲ್ಲ ಎತ್ತಬಹುದು ಇಂತಿಂತಹ ಜಗದಲ್ಲಿ ತೂತು ಕೊರೆಯಬೇಕು ಎಂದು ನಿರ್ಧಾರಕ್ಕೆ ಬರಲು ಅದನ್ನು ಅಪ್ರೂವ್ ಮಾಡಿದವರಾರು..? ಹಾಗೆ ಅಪ್ರೂವ್ ಮಾಡಿರುವ ವ್ಯಕ್ತಿ ಅಥವಾ ಸಂಸ್ಥೆ ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ಮತ್ತು ಹೆಸರಾಂತ ದೇಶಗಳಿಗೇಕೆ ತನ್ನ ತಂತ್ರಜ್ಞಾನ ಮಾರಿಕೊಂಡಿಲ್ಲ...? ಎಲ್ಲದಕ್ಕಿಂತ ಕುಚೋದ್ಯವೆಂದರೆ ಹೀಗೆ ನಾಲ್ಕಾರು ಸಾವಿರ ಮೀ. ಆಳದಿಂದ ಎತ್ತಲ್ಪಡುತ್ತಿರುವ ಸಿಹಿನೀರು (?) ತನ್ನಿಂತಾನೆ ಮರುಪೂರಣಗೊಳ್ಳುತ್ತದೆ ಎಂದು ಕಿವಿಗೆ ಕರಗವನ್ನೇ ಇಟ್ಟಿರುವುದನ್ನು ಎಲ್ಲರೂ ನಂಬಿ ಕೂರುತ್ತಿದ್ದಾರೆ.
ನೀರು ಇಲ್ಲೇ ಇದೆ ಎಂದು ಹೇಗೆ ಗೊತ್ತಾಗುತ್ತದೆ..? ಇದರ ಗುತ್ತಿಗೆ ಪಡೆದು ಕರ್ನಾಟಕದ ಅಂತರ ವಲಯ ಹಾಳುಗೆಡವಲು ನಿಂತಿರುವ ವಾಟರ್ ಕ್ವೆಸ್ಟ್ ಎನ್ನುವ ಸಂಸ್ಥೆ ಯಾವ ಆಧಾರದ ಮೇಲೆ ನೀರಿನ ಇರುವನ್ನು ಕಂಡುಹಿಡಿಯುತ್ತಿದೆ..? ಉಪಗ್ರಹದ ನಕ್ಷೆಗಳಿವೆಯಾ..? ನಿಜಕ್ಕೂ ನೀರಿನ ಒಳಾವರಣದ ಚಿತ್ರ ಅತ್ಯಂತ ಸ್ಪಷ್ಟವಾಗಿ ಮತ್ತು ನಿಖರ ಅಂದಾಜು ಸಾಧ್ಯವಾಗೋದು ಕೇವಲ ಉಪಹ್ರಗಗಳ ಸಂಜ್ಞಾಧಾರಿತ ಮಾಹಿತಿಗೆ ಮಾತ್ರ. ಅದರ ಚಿತ್ರಗಳೇ ಬೇರೆ ತೆರನಾಗಿರುತ್ತವೆ. ಅದನ್ನು ತಜ್ಞರು ವಿಶ್ಲೇಶಿಸಿ ಇಲ್ಲಿಲ್ಲಿ ಹಿಗೀಗೆ ನೀರಿನ ಒರತೆ ಸೆಳವು ಸುಳಿ ತಿರುವು ಇತ್ಯಾದಿಗಳು ಇಷ್ಟು ಆಳದಲ್ಲಿವೆ ಎಂದು ಒಂದು ರಿಪೆÇೀರ್ಟು ಕೊಡುತ್ತಾರೆ. ಅದರ ಆಧಾರದ ಮೇಲೆ ಇಂತಲ್ಲಿ ಇಷ್ಟು ಆಳದಲ್ಲಿ ನೀರಿನ ಹರಿವು ಹೀಗಿದೆ ಎಂದು ಅಂದಾಜು ಲೆಕ್ಕಾಚಾರಕ್ಕೆ ಬರುತ್ತಾರೆ. ಹಾಗೆ ನಿಖರತೆಗೆ ವಿಶಿಷ್ಟ ತಂತ್ರಜ್ಞಾನದ ಬೆಂಬಲ ಮತ್ತು ಸಂಶೋಧಕರ ಜೊತೆ ನಿರಂತರವಾಗಿ ಬೇಕಾಗುತ್ತದೆ.
ಸ್ಥಳೀಯವಾಗಿಯೂ ಕವಲಿನ ಕೋವೆ ಕಡ್ಡಿ, ತೆಂಗಿನ ಕಾಯಿ ಇತ್ಯಾದಿಗಳನ್ನೆಲಾ ಬಳಸಿ ನೀರಿನ ಸೆಲೆಯನ್ನು ಕಂಡು ಹಿಡಿಯುವ ನಮ್ಮದೇ ಸಾಂಪ್ರದಾಯಿಕ ಶೈಲಿ ಈಗಲೂ ಹಳ್ಳಿಗಳಲ್ಲಿ ಜಾರಿ ಇದ್ದೇ ಇದೆ. ಆ ಮೂಲಕ ಹೆಚ್ಚಿನಂಶ ನೀರಿನ ಸೆಲೆಯ ಮೂಲದ ಸ್ಥಳ ಗುರುತಿಸಿಯೇ ಬೋರ್‍ವೆಲ್ ತೋಡಿಸುತ್ತಾರೆ. ಹೆಚ್ಚಿನಂಶ ಹಾಗೆ ತೋಡಿಸಿರುವಂತಹವು ಯಶಸ್ವಿಯಾಗಿವೆ. ಅದರೆ ಅದಕ್ಕಿಂತ ಜಾಸ್ತಿ ವಿಫಲವಾದ ಉದಾ. ಗಳೂ ಸಾವಿರ ಲೆಕ್ಕದಲ್ಲಿವೆ. ಹೀಗಿದ್ದಾಗ ನಾಲ್ಕೈದು ಸಾವಿರ ಅಡಿ ಆಳಕ್ಕಿಳಿಯಲಿರುವ ಈ ಯೋಜನೆ ತೂತು ಕೊರೆಯುವ ಮುನ್ನ ಬಳಸುತ್ತಿರುವ ನೀಲ ನಕ್ಷೆ ಯಾವುದು...? ಅವರದೇ ವೆಬ್ ಸೈಟಿನಲ್ಲಿ ನೀರಿನ ಹರಿವು ಮತ್ತು ಲಭ್ಯತೆಯ ತೋರಿಕೆಗಾಗಿ ಒಂದು ಪುಟವನ್ನು ಅಪೆÇ್ಲೀಡ್ ಮಾಡಿದ್ದರೆ.
ಹಾಗೊಂದು ಮಾರ್ಕ್‍ನ್ನು ನಾವೂ ಮಾಡಬಹುದು. ಸಹಜವಾದ ಮ್ಯಾಪಿನ ಮೇಲೆ ಹೈಲೈಟರ್‍ನಿಂದ ಕೊರೆಯಲಾಗಿರುವ ಗೆರೆಗಳನ್ನು ಅಡ್ಡಾದಿಡ್ಡಿ ಮಾರ್ಕ್ ಮಾಡಿ ಅದರ ಸ್ಕಾನ್ ಕಾಪಿಯನ್ನೆ ಇಲ್ಲಿ ಹಾಕಿದ್ದಾರೆ. ಅದಕ್ಕೂ ನೀರಿನ ನಕ್ಷೆಯ ಲೆಕಾಚಾರಕ್ಕೂ ಯಾವ ರೀತಿಯ ಸಂಬಂಧ...? ಆ ಗೆರೆಗಳು ಹೇಗೆ ನೀರಿನ ಒರತೆಯನ್ನು ಸೂಚಿಸುತ್ತವೆ ..? ಕರ್ನಾಟಕ, ಆಂಧ್ರಪ್ರದೇಶ ಇತ್ಯಾದಿಗಳಲ್ಲಿ ನೈಸರ್ಗಿಕ ಭೂಮಿಯ ಆಳದ ವಿನ್ಯಾಸವೇ ಬೇರೆ. ಉತ್ತರ ಭಾರತದ ಒಳಪದರಗಳ ಸ್ಪಂಜಿನ ಶಿಲೆಗಳ ಪದರುಗಳೆ ಬೇರೆ. ಹಾಗಿದ್ದಾಗ ಯಾವ ಆಧಾರದ ಮೇಲೆ ನೀರಿನ ಹರಿವಿನ ಸೆಲೆ ಪತ್ತೆ ಮಾಡಲು ಸಾಧ್ಯವಾಯಿತು...?
ಹೋಗಲಿ ಇದೊಂದು ಸಂಸ್ಥೆ ಹೊರತು ಪಡಿಸಿದರೆ ಜಾಗತಿಕವಾಗಿ ಇನ್ಯಾವುದಾದರೂ ಸಂಸ್ಥೆಗಳು ಈ ಕೆಲಸವನ್ನು ಮಾಡುತ್ತಿದ್ದಾರೆಯೇ..? ಹಾಗೆ ನೀರು ನೆಲದಿಂದ ಮೇಲೆತ್ತುವುದೇ ಆದರೆ ಇಂಥ ಆಘಾತಕಾರಿ ಯೋಜನೆ ಮತ್ತು ಭವಿಷ್ಯತ್ತಿನ ನೀರಿನ ಮೂಲವನ್ನೇ ಬರಿದುಗೊಳಿಸಲಿರುವ ಕೆಲಸಕ್ಕೆ ಯಾವ ಮಾನದಂಡದ ಆಧಾರದ ಮೇಲೆ ಒಪ್ಪಿಗೆ ಕೊಡಲಾಗುತ್ತಿದೆ..? ಇವೆಲ್ಲಾ ಪ್ರಶ್ನೆಗೆ ಉತ್ತರ ಕೊಡುವವರು ಯಾರು..?
ಕಾರಣ ಈ ಸಂಸ್ಥೆ ಭೂಮಿಯಾಳದಲ್ಲಿ 300ಮಿ. ನಿಂದ 800 ಮಿ. ಆಳದವರೆಗೆ ಸ್ವಯಂ ಮರುಪೂರಣ ವ್ಯವಸ್ಥೆ ಇದೆ ಎನ್ನುವುದನ್ನು ಅದು ದೃಢವಾಗಿ ನಂಬಿಸುತ್ತಿದೆ. ಆದರೆ ಅದರ ಕಾರ್ಯ ವಿಧಾನ ಮತ್ತು ಹಾಗೆ ಸ್ವಯಂ ಮರುಪೂರಣ ಇತ್ಯಾದಿ ಆಗುತ್ತದಾ..? ಆಗುತ್ತದೆಯಾದರೆ ಹೇಗಾಗುತ್ತದೆ..? ಅದನ್ನು ನಿಖರವಾಗಿ ಸೊಚಿಸುವ ಮಾನದಂಡವೇನು ವೈಜ್ಞಾನಿಕ ವಿಶ್ಲೇಷಣೆಗಳು ಅದಕ್ಕಿದೆಯಾ ಯಾವ ಉತ್ತರವೂ ಸಿಗುವುದಿಲ್ಲ. ಅಸಲಿಗೆ ಭೂಮ್ಯಾಂತರಳಾದಲ್ಲಿ ಮರುಪೂರಣ ಎನ್ನುವ ವ್ಯವಸ್ಥೆಯ ಬಗ್ಗೆ ಎಲ್ಲೂ ಈವರೆಗೆ ದಾಖಲಾಗೇ ಇಲ್ಲ.
ಅವರ ಪ್ರಕಾರ ಸಮುದ್ರದ ನೀರು ಇಲ್ಲೆಲ್ಲ ಆವಿಗೊಂಡು, ಶೀತಲೀಕರಣಕ್ಕೊಳಗಾಗಿ ತಗ್ಗಾದ ಜಾಗ ಇರುವ ಕಡೆ ಹರಿಯುತ್ತದಂತೆ. ಹಾಗೆ ಹರಿಯುವ ನೀರಿನ ವೇಗ ಮತ್ತು ದಿಕ್ಕನ್ನು ನಿಖರವಾಗಿ ಇವರ ಸಂಸ್ಥೆಯ ತಜ್ಞರು ಗುರುತಿಸುತ್ತಾರಂತೆ. ಹಾಗೆ ಗುರುತಿಸಿದ ನೀರಿನ ಮೂಲಕ್ಕೆ ಇವರು ಡ್ರಿಲ್ಲು ಇಳಿಸಿ ನೀರನ್ನು ಮೇಲಕ್ಕೆತ್ತುತ್ತಾರೆ. ಹಾಗೆ ಎತ್ತುವ ನೀರಿನ ಪ್ರಮಾಣ ಅಗಾಧವಾದದ್ದು. ಅಂದಾಜು ಸುಮಾರು 80 ಸಾವಿರ ದಿಂದ ಒಂದು ಲಕ್ಷ ಲಿ. ಪ್ರತಿ ಗಂಟೆಗೆ ಆಚೆಗೆ ಬರಲಿದೆ. ಸರಿಯಾಗಿ ಯೋಚನೆ ಮಾಡಿದರೆ ಈ ಕೆಲಸ ಮಾಡಲು ವಿದೇಶದ ಯಾವ ಕಂಪೆನಿಯೂ ಬೇಕೆ ಆಗಿಲ್ಲ. ನಮ್ಮಲ್ಲೇ ಸುಧಾರಿತ ತ್ರಂತ್ರಜ್ಞಾನದ ಕೊಳವೆಯ ತೂತುಕಾರಕಗಳು ಈ ಕೆಲಸವನ್ನು ಮಾಡಬಲ್ಲವು ಹೈಡ್ರಾಲಿಕ್ ವ್ಯವಸ್ಥೆ ಅತ್ತ್ಯುತ್ಯಮ ಸೇವೆ ಇದರಲ್ಲಿ.
ಆದರೆ ಒಂದು ವಿಷಯವನ್ನು ಯಾರೂ ಯಾಕೆ ಪರಿಗಣಿಸುತ್ತಿಲ್ಲ. ಯೋಚಿಸಿ. ಇವತ್ತಿಗೂ ಇಷ್ಟು ಗಂಟೆಗೆ ಇಂತಲ್ಲೇ ಮಳೆ ಬರುತ್ತದೆ, ಇಷ್ಟೆ ಮಳೆ ಬರುತ್ತದೆ, ಇಲ್ಲೆ ಚಂಡ ಮಾರುತ ಬರಲಿದೆ, ಇಂತಲ್ಲಿ ಪ್ರಕೃತಿ ವಿಕೋಪ ನಡೆಯಲಿದೆ ಎಂದು ಯಾವ ವಿಜ್ಞಾನಿಯೂ ಇವತ್ತಿಗೂ ಭಾರತದಲ್ಲಷ್ಟೆ ಅಲ್ಲ ಅಮೇರಿಕೆಯಲ್ಲೂ ನುಡಿದ ಉದಾ ಗಳಿಲ್ಲ. ಇದ್ದಿದ್ದರೆ ಪ್ರತಿ ವರ್ಷ ಆ ಮಟ್ಟಿಗಿನ ಮಳೆಯ ವಿಕೋಪಕ್ಕೆ ಉತ್ತರ ಅಮೇರಿಕೆ ಸೇರಿದಂತೆ ಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ಯಾಕೆ ಪ್ರಕೃತಿ ವಿಕೋಪಕ್ಕೆ ತುತ್ತಾಗುತ್ತಿವೆ..? ನಮ್ಮದೆ ಹವಾಮಾನ ಇಲಾಖೆ ಸರಿಯಾಗಿ ಇಂತಹದ್ದೊಂದು ಸೂಚನೆ ಕರಾರುವಾಕಾಗಿ ಲೆಕ್ಕಚಾರ ಹಾಕುವಲ್ಲಿ ಇವರೆಗೂ ಯಶಸ್ವಿಯಾಗೇ ಇಲ್ಲ. ಇದ್ದಿದ್ದರೆ ಕೇದಾರನಾಥ್ ಪ್ರಕೋಪವ್ಯಾಕೆ ನಮ್ಮ ಗಮನಕ್ಕೆ ಮೊದಲೇ ಬರಲಿಲ್ಲ. ಇವೆಲ್ಲಾ ಒಂದು ಉದಾ ಮಾತ್ರ. ಒಂದೇ ಒಂದು ಕರಾರುವಾಕ್ಕಾದ ಉದಾ. ನಮ್ಮಲ್ಲಿ ಕೊಟ್ಟು ಅವಘಢ ತಪ್ಪಿಸಿದ್ದು ಇದೆಯಾ.
ಇಂತಿಂತಹ ದಿನ ಇಂತಹದ್ದೇ ರೀತಿ ಮಳೆ ಬೀಳಲಿದೆ ಅಥವಾ ಹೀಗೆಯೇ ನೆರೆ ಬರಲಿದೆ ಚಂಡ ಮಾರುತ ಬರಲಿದೆ..ಇಂಥಾ ಪ್ರಕೋಪದ ಮುನ್ಸೂಚನೆ ಎಲ್ಲಿದೆ ಎಂದು ನಿಖರತೆಯನ್ನು ಯಾವ ಇಲಾಖೆ ಸಮರ್ಥಿಸಿಕೊಳ್ಳಲಿದೆ. ಅಂಥದರಲ್ಲಿ ಮೂರ್ನಾಲ್ಕು ಸಾವಿರ ಮೀ. ಭೂಮಿಯಾಳದಲ್ಲಿ ಸ್ವಯಂ ಮರೂಪೂರಣ ವ್ಯವಸ್ಥೆಯ ಬಗ್ಗೆ, ಅಲ್ಲಿ ಸಿಹಿ ನೀರಿನ ಹರಿವೇ ಇದೆ ಎನ್ನುವ ಬಗ್ಗೆ ಎಲ್ಲಿಂದ ಲೆಕ್ಕಾಚಾರ ಮಾಡುತ್ತಿದ್ದಾರೆ ಇವರು.
ಸ್ವಯಂ ಮರುಪೂರ್ಣ ಎನ್ನುವ ವ್ಯವಸ್ಥೆಯನ್ನು ನಿಸರ್ಗ ನಿರ್ಮಿತವಾಗಿರುವ ವ್ಯವಸ್ಥೆಯಲ್ಲಿ ಮಾತ್ರ ನಿರೀಕ್ಷಿಸಲು ಸಾಧ್ಯ. ಹಾಗೊಂದು ವ್ಯವಸ್ಥೆ ಜಾರಿ ಇದ್ದುದ್ದಕ್ಕೇ ನಮಗೆ ಇಲ್ಲಿವರೆಗೂ ಸಿಹಿನೀರಿನ ಲಭ್ಯತೆ ಸಿಕ್ಕುತ್ತಲೇ ಇದೆ. ಆದರೆ ಕಳೆದ ಎರಡು ದಶಕದಿಂದೀಚೆಗೆ ನಾವು ಈ ಪ್ರಕೃತಿಯ ಒಳಪದರದ ಸ್ವಯಂ ಮರುಪೂರಣದ ಜಲ ವಲಯದ ವ್ಯವಸ್ಥೆಯನ್ನು ಅದೆಷ್ಟು ಹಾಳು ಮಾಡಿದ್ದೇವೆಂದರೆ ಬರಲಿರುವ ಪೀಳಿಗೆಗೆ ನೀರೆ ಉಳಿಯಲಿಕ್ಕಿಲ್ಲ ಈ ಅಘಾತಕಾರಿ ಯೋಜನೆಯಿಂದ.
ಇನ್ನು ನಿಜಕ್ಕೂ ಭೂಮಿಯಾಳದಲ್ಲಿ ನೀರಿನ ಸ್ವಯಂ ಮರುಪೂರಣ ಸಾಧ್ಯವಿದೇಯೆ..?
ಇದಕ್ಕೆ ನಿಖರವಾಗಿ ಇಲ್ಲ ಎನ್ನಲಾಗದಿದ್ದರೂ ಈಗ "ಪಾತಾಳ ಗಂಗೆ" ಯೋಜನೆಯ ವರದಿಯ ಲೆಕ್ಕದಲ್ಲಂತೂ ಸಾಧ್ಯವೇ ಇಲ್ಲ. ಕಾರಣ ವಸುಂಧರೆಯ ಒಡಲಲ್ಲಿ ಮರುಪೂರಣ ಆಗಲೂ ಕೂಡಾ ಸಿಹಿ ನೀರು ಮತ್ತು ನೀರಿನ ಮೇಲ್ಪದರದ ನೆಲ ಜಲವಲದಲ್ಲಿ ಸಂಚಯನವಾಗಲು ನೀರ ಹೊರ ಹೊರವಿನಿಂದಲೇ ಸಾಧ್ಯ ಹೊರತಾಗಿ ಒಳ ಭಾಗದಲ್ಲೇ ನೀರು ಸ್ವಯಂ ಉತ್ಪತ್ತಿಯ ಪ್ರಶ್ನೇಯೇ ಇಲ್ಲ.
ಹೀಗೆ ಹೊರಾವರಣದ ನೆಲಜಲವಲಯದ ಬಾಯಿಯನ್ನು ನಾವು ಈಗಾಗಲೇ ಮುಕ್ಕಾಲು ಭಾಗ ದಿಕ್ಕೆಡಿಸಿ ಎಲ್ಲಾ ರಂಧ್ರಗಳನ್ನೂ ಬಂದು ಮಾಡಿ ಪೂರ್ತಿಯಾಗಿ ನೀರಿನ ಜಲಸಂಚಯನದ ಪ್ರಕ್ರಿಯೆಯ ನೈಸರ್ಗಿಕ ವಿಧಾನವನ್ನೇ ಹಳ್ಳ ಹಿಡಿಸಿಯಾಗಿದೆ. ಅದನ್ನು ಸರಿ ಪಡಿಸಲು ಉದ್ದೇಶಿಸಿ ಆರಂಭಿಸಿರುವ ಮಹಾ ಪ್ರಕ್ರಿಯೆಯೇ ಈಗ ಜಲ ಮರುಪೂರಣ ಕೃತಕವಾಗಿ ನಡೆಯುತ್ತಿದೆ. ಅದಕ್ಕೆ ಬಳಕೆಯಾಗುತ್ತಿರುವುದೇ ಇಂಗು ಗುಂಡಿ, ಮೇಲ್ಛಾವಣಿ ನೀರು ಹಿಡಿದು ಭೂಮಿಯ ಬಾಯಿಗೆ ಸೇರಿಸುವುದು, ಒಡ್ಡು ಕಟ್ಟು ಇತ್ಯಾದಿ. ಇದರಿಂದ ನಾವು ಕೈಗೆಟುಕಿಸಿಕೊಳ್ಳುವ ಮಳೆಯ ನೀರನ್ನೂ ಸಂಪೂರ್ಣ ಭೂ ಒಡಲಿಗೆ ಸೇರಿಸಲು ಸಾಧ್ಯವಾಗುವುದಿಲ್ಲ. ಕಾರಣ ನಮಗೆ ನಿಸರ್ಗ ನಿರ್ಮಿತ ಜಲ ಹೀರುವಿಕೆಯ ದಾರಿಗಳೇ ಗೊತ್ತಿಲ್ಲ. ಆ ದಾರಿಗೆ ಹೇಗಾದರೂ ಬಸಿದುಕೊಂಡು ನೀರು ಹೋಗಿ ಸೇರಲಿ ಎಂದಷ್ಟೆ ನಾವು ಈ ಪ್ರಕ್ರಿಯೆ ಆರಂಭಿಸಿದ್ದೇವೆ.
ಆದರೆ ಕ್ವೇಸ್ಟ್ ಸಂಸ್ಥೆಯ ವರದಿ ಪ್ರಕಾರ ಸಮುದ್ರ ಒಳಾವರಣದ ನೀರು ಅಲ್ಲೆ ಭೂಮಿಯ ಶಾಖವನ್ನು ಹೀರಿಕೊಂಡು ಆವಿಯಾಗಿ ನೀರಾಗಿ ಪರಿವರ್ತನೆಯಾಗಿ ನಿರಂತರವಾಗಿ ಹರಿದಾಡುತ್ತಾ ಅಪಾರ ಪ್ರಮಾಣದಲ್ಲಿ ಜಲ ವಿಕಸನಕ್ಕೆ ಕಾರಣವಾಗುತ್ತಿದೆ ನಾವು ಆ ನೀರನ್ನು ಎತ್ತಿ ಹೊರತೆಗೆಯುತ್ತೇವೆ ಒಳಗೊಳಗೆ ಸಮುದ್ರ ನೀರು ಅದರ ಪಾಡಿಗೆ ಮರುಭರ್ತಿ ಆಗುತ್ತಲೇ ಇರುತ್ತದೆ. ಇದೊಂದು ನಿಸರ್ಗದ ಸೈಕಲ್, ಇದರಿಂದ ನಿಸರ್ಗದ ಮೇಲೆ ಯಾವುದೆ ಹಾನಿಯೇ ಇಲ್ಲ ಎನ್ನುವಂತೆ ವಿವರಿಸುತ್ತಾ ಅತ್ಯಂತ ಮಟ್ಟಸವಾಗಿ ಕಿವಿಗೆ ಹೂವಿಡುತ್ತಿದ್ದಾರೆ.
ಒಂದು ಗೊತ್ತಿರಲಿ. ಭೂಮ್ಯಾಂತರಾಳದಲ್ಲೆಲ್ಲೆಲ್ಲೂ ಸಮುದ್ರ ನೀರು ಸಿಹಿ ನೀರಾಗಿ ಪರಿವರ್ತಿತವಾಗುವ ಸಹಜ ಪ್ರಕ್ರಿಯೆಯ ಆವರ್ತನವೇ ಇಲ್ಲ. ಅದೇನಿದ್ದರೂ ಭೂ ಪದರಗಳಿಂದ ಬಸಿದ ನೀರು ಮತ್ತು ಪುರಾತನ ಕಾಲದಿಂದಲೂ (ಫಾಸಿಲ್ ವಾಟರ್)ಅಪಾರ ಪ್ರಮಾಣದ ಕಲ್ಲು ಹಾಸಿನ ಕೆಳಗೆ ಇಲ್ಲಿಂದ ಬಸಿಯುತ್ತಾ ಹೋದ ನೀರೇ ಇವರು ಎತ್ತುತ್ತಿರುವುದು ಮತ್ತದು ನಮ್ಮ ಮುಂದಿನ ಪೀಳಿಗೆಗಾಗಿ ಉಳಿಸಲೇ ಬೇಕಾದ ಕನಿಷ್ಟ ನೀರು ಎನ್ನುವುದನ್ನು ನಾವು ಮರೆಯಲೇ ಬಾರದು.
ಆದರೆ ಇಂತಹದ್ದೊಂದಕ್ಕೆ ವೈಜ್ಞಾನಿಕ ವರದಿ, ಜಾಗತಿಕ ಸಮೀಕ್ಷೆ, ನಿಷ್ಣಾತರ ಸಲಹೆ ಜೊತೆಗೆ ಇಂತಹದ್ದೊಂದು ಸಾಧ್ಯತೆ ಇದೆಯಾ..? ಎಂಬ ಪ್ರಶ್ನೆ, ಇದ್ದುದ್ದೇ ಆದರೆ ಸಮುದ್ರ ನೀರು ಹೇಗೆ ಅಲ್ಲೆಲ್ಲ ಪರಿವರ್ತಿತವಾಗುತ್ತಿದೆ ಎಷ್ಟು ಪ್ರಮಾಣದಲ್ಲಿದೆ ಎಂದು ಯಾವೆಂದರೆ ಯಾವುದೂ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ, ಜಗತ್ತಿನಲ್ಲೇ ಮಾಡಬಾರದ ಯೋಜನೆಯನ್ನು ಕರ್ನಾಟಕ ಆರಂಭಿಸಲೆತ್ನಿಸುತ್ತಿದೆ ಮತ್ತು ಅಕಸ್ಮಾತ ಮಾಡಿದ್ದೆ ಆದರೆ ಇದು  ಬಹುಶ: ನಿಸರ್ಗದ ಮೇಲೆ ನಾವು ಮಾಡುತ್ತಿರುವ ಕೊನೆಯ ಅತ್ಯಾಚಾರ.
ಸಂಶಯವೇ ಇಲ್ಲ. ಭಾರತ ಮತ್ತು ಇತರ ರಾಷ್ಟ್ರಗಳನ್ನು ಹೊತ್ತು ಅಲ್ಲಾಡುತ್ತಿರುವ ಭೂ ಫಲಕಗಳ ಭುಜಗಳೊ ನಡುವನ್ನೊ ಕೊರೆದು,  ಕೊರೆದುಹೋಗುವ, ಅಡಿಪಾಯದಂತಹ ಶಿಲಾಫಲಕಗಳನ್ನೇ ಅಲುಗಾಡಿಸುವ ಕೆಲಸದಿಂದ ಆಗುವ ಅನಾಹುತಕಾರಿ ಕಾರ್ಯವೆಂದರೆ ಬರಲಿರುವ ದಿನಗಳಲ್ಲಿ ದಕ್ಷಿಣ ಭಾರತದ ಭೂಸ್ಥಿರತೆಯನ್ನು ಶಾಸ್ವತವಾಗಿ ಕದಡುವುದರ ಜೊತೆಗೆ ಈಗಿರುವ ನೆಲ ಜಲವಲಯವನ್ನೂ ಹಾಳು ಮಾಡುವುದೇ ಆಗಿದೆ. ಕಾರಣ ಈಗ ಮೇಲ್ಪದರದಲ್ಲಿರುವ ಸೆಲೆಗಳು ಈ ಭಾರಿ ಪ್ರಮಾಣದ ಕೊರೆತದೊಂದಿಗೆ ಮೀಳಿತವಾಗಿಬಿಡುತ್ತವೆ. ಇದ್ದ ಬದ್ದ ಕೊಂಚ ಮಾತ್ರ ಬಾವಿ ಕೆರೆಗಳ ಸೆಲೆಗಳೂ ಇನ್ನಿಲ್ಲದಂತೆ ಬತ್ತಿ ಹೋಗುತ್ತವೆ.
ಇನ್ನು ಅಷ್ಟೆಲ್ಲಾ ಆಳಕ್ಕಿಳಿದಂತೆಲ್ಲಾ ಸಿಗುವ ನೀರಿನಲ್ಲಿ ಅಧಿಕ ಪೆÇ್ಲೀರೈಡ್, ರಸಾಯನಿಕಗಳ ಅಂಶಗಳು, ಲವಂಣಾಂಶ ಮತ್ತು ವಿಕಿರಣ ಕಾರಕಗಳ ಸಹಜ ಮಿಶ್ರಣ ನಮ್ಮನ್ನು ಇನ್ನಷ್ಟು ಹೈರಾಣಾಗಿಸಲಿವೆ. ಖಂಡಿತವಾಗಿಯೂ ಸುಮಾರು 30 ರಿಂದ 70 ಡಿಗ್ರಿ.ಸೆ. ವರೆಗೂ ನೀರಿನ ಉಷ್ಣಾಂಶ ಏರು ಮುಖವಾಗಿರುವ ಸಾಧ್ಯತೆ ಇದ್ದೇ ಇರುವುದರಿಂದ ಅದನ್ನು ತಂಪಾಗಿಸುವ ಮತ್ತು ಶುದ್ಧೀಕರಿಸುವ ನೀಲ ನಕ್ಷೆ ಎಲ್ಲಿದೆ..? ಇದ್ದರೂ ಅದೂ ಪುನ: ಹತ್ತಾರು ಕೋಟಿ ರೂಪಾಯಿಯ ಬಾಬತ್ತು.
ಅದರ ಬದಲಾಗಿ ಎರಡ್ಮೂರು ವರ್ಷದ ಶೇ.100 ರಷ್ಟು ಫಲ ಕೊಟ್ಟು ನಮ್ಮನ್ನು ಶಾಶ್ವತವಾಗಿ ಸಾಕುವ ಇಂಗು ಗುಂಡಿ, ಕಟ್ಟಗಳು, ಕೆರೆ ಹೊಳೆತ್ತಿ ನೀರು ನಿಲ್ಲಿಸುವುದು, ನಮ್ಮ ನೆಲದಲ್ಲೇ ಜಲ ಭರ್ತಿ ಮಾಡುವ ಕಾರ್ಯ ಇತ್ಯಾದಿಗಳನ್ನು ಸಾರ್ವಜನಿಕರು ತಾವಾಗೇ ಆಸಕ್ತಿ ತೋರಿಸಿ ಚಾರಿಟಿ ಮಾಡಿಕೊಂಡು ಮಾಡುತ್ತಿರುವಾಗ ಸರಕಾರಕ್ಯಾಕೆ ಇಂತಹ ಇದ್ದ ಪ್ರಕೃತಿಯನ್ನೂ ಹಾಳು ಮಾಡುವ ಕೆಲಸ.
ಇವತ್ತು ಒಂದು 40-60 ಲಕ್ಷ ಲೀ. ಸಾಮಥ್ರ್ಯದ ಇಂಗು ಗುಂಡಿತೋಡಲು ಕೇವಲ ಒಂದು ಲಕ್ಷ ಸಾಕಾಗುತ್ತದೆ. ಇವತ್ತು ಅವರು ಖರ್ಚು ಮಾಡುವ ಪ್ರತಿ ಬಾವಿಗೂ ಹತ್ತು ಕೋಟಿಯಲ್ಲಿ ಅದೆಷ್ಟು ಮಳೆ ನೀರು ಭರ್ತಿಯಾಗಲಿಕ್ಕಿಲ್ಲ. ಮತ್ತಿದು ಶಾಸ್ವತ ಪರಿಹಾರ. ಜೊತೆಗೆ ಒಂದು ಲಕ್ಷ ರೂಪಾಯಿಯ ಒಂದು ಇಂಗು ಗುಂಡಿ ಸುತ್ತಲಿನ ಸುಮಾರು ಮೂರು. ಕೀ.ಮೀ. ವ್ಯಾಪ್ತಿಯ ಕೆರೆ, ಬಾವಿ, ನದಿ ಜಲ ತೊರೆಗಳಿಗೆ ಜೀವ ತುಂಬಬಹುದಾದರೆ ಇದ್ಯಾಕಿದ್ದೀತು ಮೈ ಕೊರೆದು ಹೊಡೆಸಿಕೊಳ್ಳುವ ವ್ಯವಹಾರ. ..?
ಹೊಸ ಯೋಜನೆ ಎಂಬ ಈ ನೆಲ ಕೊರೆದು ಭವಿಷ್ಯ ಹಾಳು ಮಾಡಲಿರುವ ನೀರು ಮೇಲೆತ್ತುವ ಕಾಯಕದಲ್ಲಿ ನೀರು ಎಷ್ಟು ಮೇಲೆತ್ತುತ್ತಾರೋ ಗೊತ್ತಿಲ್ಲ ಆದರೆ ಶಾಶ್ವತವಾಗಿ ಕರ್ನಾಟಕದ ನೆಲ ಅಸ್ಥಿರಗೊಳ್ಳುವುದರೊಂದಿಗೆ, ಈ ನೆಲದ ಜಲ ಎನ್ನುವ ಭಂಡಾರವನ್ನು ಕೈಯ್ಯಾರೆ ಹಾಳು ಮಾಡುವುದಂತೂ ಸತ್ಯ.

- ಸಂತೋಷಕುಮಾರ ಮೆಹೆಂದಳೆ.


No comments:

Post a Comment